Thursday, 2 July 2020

ಜುಲೈ 14, 2020 ಮಂಗಳವಾರ

ಜುಲೈ 14, 2020 ಮಂಗಳವಾರ                        [ಹಸಿರು]
ಸಂತ ಕಮಿಲ್ಲುಸ್ ದೆ ಲೆಲ್ಲಿಸ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ 7.1-9
ಕೀರ್ತನೆ 48: 1-2, 3-4, 5, 6-7. ಶ್ಲೋಕ.8
ಸರ್ವಶಕ್ತ ಪ್ರಭುವನು ದೇವನಗರದಲ್ಲಿ ಕಂಡೆವು
ಶುಭಸಂದೇಶ: ಮತ್ತಾಯ 11.20-24

ಯೆಶಾಯ 7.1-9 1 : ಅದು ಆಹಾಜನ ಕಾಲ.ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮೆಲ್ಯನ ಮಗನೂ ಇಸ್ರಯೇಲಿನ ಅರಸನೂ ಆದ ಪೆಕಹ ಎಂಬವರು ಜೆರುಸಲೇಮಿನ ಮೇಲೆ ದಂಡೆತ್ತಿಬಂದರು. ಆದರೆ ಅದನ್ನು ಜಯಿಸಲು ಅವರಿಂದಾಗಲಿಲ್ಲ. 2 : ಸಿರಿಯರ ಸೈನಿಕರು ಈಗಾಗಲೇ ಇಸ್ರಯೇಲಿನ ಗಡಿಯೊಳಗಿದ್ದಾರೆ ಎಂಬ ಸುದ್ದಿ ಜುದೇಯದ ಅರಸನಿಗೆ ಮುಟ್ಟಿದ್ದೇ ತಡ, ಅವನೂ ಅವನ ಪ್ರಜೆಗಳೆಲ್ಲರೂ ಹೆದರಿದರು. ಬಿರುಗಾಳಿಗೆ ಸಿಕ್ಕಿದ ಗಿಡಮರಗಳಂತೆ ನಡುಗಿದರು. 3 : ಆಗ ಸರ್ವೇಶ್ವರಸ್ವಾಮಿ ಯೆಶಾಯನಿಗೆ ಹೀಗೆಂದರು: “ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಆಹಾಜಾರಸನನ್ನು ಕಾಣಲು ಹೋಗು. ಅಗಸರ ಹೊಲದ ಮೇಲೆ ಹಾದು ಹೋಗುವ ರಾಜಮಾರ್ಗದಲ್ಲಿ ಕೆರೆಯ ಕಾಲುವೆಯ ತುದಿಯ ಬಳಿ ಆತ ನಿನಗೆ ಸಿಕ್ಕುವನು. ಅವನಿಗೆ ಈ ಪ್ರಕಾರ ತಿಳಿಸು: 4 : ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಬ್ನ್ಎದೆಗುಂದಬೇಡ. 5 : ಸಿರಿಯ, ಇಸ್ರಯೇಲ್, ಅರಸನಾದ ಪೆಕಹನೊಂದಿಗೆ ಸೇರಿ ಒಳಸಂಚು ಮಾಡಿದ್ದಾರೆ. 6 : ‘ಜುದೇಯನಾಡಿಗೆ ಮುತ್ತಿಗೆ ಹಾಕಿ, ಅದನ್ನು ಬೆದರಿಸಿ ಆಕ್ರಮಿಸಿ ಕೊಳ್ಳೋಣ; ತೆಬೇಲನ ಮಗನಿಗೆ ಅಲ್ಲಿಯೇ ಪಟ್ಟಕಟ್ಟೋಣ’ ಎಂದು ದುರಾಲೋಚನೆ ಮಾಡಿಕೊಂಡಿದ್ದಾರೆ. 7 : “ಆದರೆ ಸ್ವಾಮಿ ಸರ್ವೇಶ್ವರ ಆದ ನಾನು ನಿನಗೆ ಹೇಳುತ್ತೇನೆ: ಈ ಯೋಜನೆ ಕೈಗೂಡುವುದಿಲ್ಲ, ಈ ಒಳಸಂಚು ನೆರವೇರುವುದಿಲ್ಲ. 8 : ಕಾರಣ, ರಾಜಧಾನಿಯಾದ ದಮಸ್ಕಸ್ಸಿಗಿಂತ ಸಿರಿಯ ಹೆಚ್ಚಲ್ಲ, ರಾಜನಾದ ರೆಚೀನನಿಗಿಂತ ದಮಸ್ಕಸ್ ಹೆಚ್ಚಲ್ಲ. ಇಸ್ರಯೇಲಿನ ಬಗ್ಗೆ ಹೇಳುವುದಾದರೆ, ಅದು ಅರವತ್ತೈದು ವರ್ಷದೊಳಗೆ ನುಚ್ಚುನೂರಾಗುವುದು, ಅಖಂಡ ರಾಷ್ಟ್ರವಾಗಿ ಉಳಿಯದು. 9 : ಅಂತೆಯೇ, ರಾಜಧಾನಿಯಾದ ಸಮಾರ್ಯಕ್ಕಿಂತ ಇಸ್ರಯೇಲ್ ಹೆಚ್ಚಲ್ಲ. ರಾಜನಾದ ಪೆಕಹನಿಗಿಂತ ಸಮಾರ್ಯ ಹೆಚ್ಚಲ್ಲ. ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ.”

ಕೀರ್ತನೆ 48: 1-2, 3-4, 5, 6-7. ಶ್ಲೋಕ.8 ಸರ್ವಶಕ್ತ ಪ್ರಭುವನು ದೇವನಗರದಲ್ಲಿ ಕಂಡೆವು 2 : ಪರಾತ್ಪರನಾದ ಪ್ರಭುವು ಘನಗಂಭೀರನು | ಪ್ರಪಂಚಕ್ಕೆಲ್ಲ ರಾಜಾಧಿರಾಜನು || 3 : ಜನಾಂಗಗಳನಾತ ನಮಗಧೀನಪಡಿಸಿಹನು | ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು || 4 : ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ | ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ || 5 : ಏರಿದನು ಪ್ರಭು ಜಯಜಯಕಾರದೊಂದಿಗೆ | ಆರೋಹಣವಾದನು ತುತೂರಿನಾದ ಜೊತೆಗೆ || 6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ | ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ || 7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು | ಕೀರ್ತನೆಯಿಂದ ಕೊಂಡಾಡಿರಿ ಆತನನು || 8 : ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು / ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು //

ಮತ್ತಾಯ 11.20-24 20 : ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ. ಆದ್ದರಿಂದ ಆ ಪಟ್ಟಣಗಳನ್ನು ಯೇಸು ಖಂಡಿಸಿದರು; 21 : "ಕೊರಾಜ್ಜಿನ್ ಪಟ್ಟಣವೇ, ನಿನಗೇ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣೀತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಬಳಿದುಕೊಂಡು, ಪಾಪಕ್ಕೆ ವಿಮುಖರಾಗುತ್ತಿದ್ದರು. 22 : ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ. 23 : ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ, ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು. 24 : ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ," ಎಂದರು. ---------------------
ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಭತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ" ಕೊರಾಜ್ಜಿನ್,ಬೆತ್ಸಾಯಿದ, ಕಫೆರ್ನಾವುಮ್ ಪಟ್ಟಣಗಳಲ್ಲಿ ಯೇಸು ಅತೀ ಹೆಚ್ಚು ಅದ್ಭುತ ಕಾರ್ಯಗಳನ್ನು ಮಾಡಿದರು. ಆದೇರೆ ಅವುಗಳನ್ನು ಲಘುವಾಗಿ ಪರಿಗಣಿಸಿ, ಅವಿಶ್ವಾಸದ ಜೀವನವನ್ನು ಜೀವಿಸುತ್ತಿದ್ದರು. ಅದರಿಂದ ಯೇಸು ಈ ಪಟ್ಟಣಗಳನ್ನು ಖಂಡಿಸುತ್ತಾರೆ. ಅವರ ಖಂಡನೆಯೋ ಅಥವಾ ಬೇರೆ ಕಾರಣದಿಂದಲೂ ಇಂದಿಗೂ ಸಹ ಈ ಪಟ್ಟಣಗಳು ಪ್ರಗತಿ ಕಾಣದೆ ದುರುಸ್ಥಿತಿಯಲಿವೆಯಂತೆ. ದೇವರು ಪ್ರತಿ ಕ್ಷಣ-ದಿನ ನಮ್ಮಲ್ಲಿ ಹಾಗೂ ನಮ್ಮ ಸುತ್ತಲೂ ಆನೇಕ ಅದ್ಭುತಗಳನ್ನು ಮಾಡುತ್ತಾಯಿದ್ದರೆ, ಆದರೇ ಅವಿಶ್ವಾಸಿಗಳಂತೆ ಅವುಗಳನ್ನು ಲಘುವಾಗಿ ಪರಿಗಣಿಸಿ, ಅವುಗಳ ಮಹತ್ವವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದೇವೆ. ಪ್ರತಿದಿನದ ಬಲಿಪೂಜೆ, ಪಾಪ ಸಂಸ್ಕಾರದ ವಿಧಿ, ಇತರ ಸಂಸ್ಕಾರಗಳು, ಪರಿಸರ, ಹೀಗೆ ಸಾವಿರಾರೂ ಅದ್ಭುಗಳನ್ನು ಯೇಸು ನಮ್ಮ ಕಣ್ಣ ಮುಂದೆ ಮಾಡುತ್ತಿದ್ದಾರೆ. ಆದರೇ ನಾವು ಸಹ ಮೇಲಿನ ಪಟ್ಟಣಗಳಂತೆ ಇವುಗಳನ್ನು ಅತೀ ಲಘುವಾಗಿ ಪರಿಗಣಿಸಿ, ಪಾಪಕ್ಕೆ ವಿಮುಖರಾಗುವಲ್ಲಿ ವಿಫಲರಾಗಿರಬಹುದು.

No comments:

Post a Comment