Thursday, 2 July 2020

ಜುಲೈ 15, 2020 ಬುಧವಾರ

ಜುಲೈ 15, 2020 ಬುಧವಾರ                        [ಹಸಿರು]
ಸಂತ ಬೊನವೆಂಚುರ್ [ಧರ್ಮಾಧ್ಯಕ್ಷ / ಧರ್ಮಪಂಡಿತ] (ಸ್ಮರಣೆ)
ಮೊದಲ ವಾಚನ: ಯೆಶಾಯ 10.5-7, 13-16
ಕೀರ್ತನೆ 94:5-6, 7-8, 9-10. ಶ್ಲೋಕ.14
ಕೈಬೆಡನು ಪ್ರಭು ತನ್ನ ಸ್ವಕೀಯರನು
ಶುಭಸಂದೇಶ: ಮತ್ತಾಯ 11.25-27
------------

ಯೆಶಾಯ 10.5-7, 13-16 5 : ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ. 6 : ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದು ಬಿಡಲು ಅದಕ್ಕೆ ಆಜ್ಞೆ ಮಾಡುತ್ತೇನೆ. 7 : ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು. 13 : ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತು ಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಧಿನಿಕ್ಷೇಪಗಳನ್ನು ಸೂರೆ ಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿ ಬಿಟ್ಟಿದ್ದೇನೆ. 14 : (ಬೇಡನು) ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟು ಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟು ಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕುತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.” 15 : ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು! 16 : ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.

ಕೀರ್ತನೆ 94:5-6, 7-8, 9-10. ಶ್ಲೋಕ.14 ಕೈಬೆಡನು ಪ್ರಭು ತನ್ನ ಸ್ವಕೀಯರನು 5 : ನಸುಕಿ ಹಾಕುತಿಹರು ನಿನ್ನ ಪ್ರಜೆಯನು / ಹಿಂಸಿಸುತಿಹರು ನಿನ್ನ ಸ್ವಕೀಯರನು // 6 : ವಧಿಸುತಿಹರು ವಿಧವೆಯರನು, ಪರದೇಶಿಯರನು / ಹತ್ಯಮಾಡುತಿಹರು ಗತಿಯಿಲ್ಲದ ಅನಾಥರನು // 7 : ಅವರಾಡಿಕೊಳ್ಳುತಿಹರು ಪ್ರಭು ನೋಡನೆಂದು / ಯಕೋಬ್ಯರ ಸ್ವಾಮಿದೇವ ವಿಚಾರಿಸನೆಂದು // 8 : ಮೂರ್ಖರೇ, ನಿಮಗೆ ಜ್ಞಾನೋದಯವಾಗುವುದಾವಾಗ? / ಪಶುಪ್ರಾಯರಾದ ಪ್ರಜೆಗಳು ಗಮನಿಸುವುದಾವಾಗ? // 9 : ಕಿವಿಮಾಡಿದವನು ಕೇಳದಿರುವನೋ? / ಕಣ್ಣುಕೊಟ್ಟವನು ನೋಡದಿರುವನೋ? // 10 : ರಾಷ್ಟ್ರಗಳನು ಖಂಡಿಸುವವನು ದಂಡಿಸದಿರುವನೋ? | ಮನುಜರಿಗೆ ಬುದ್ಧಿಕಲಿಸುವವನು ಬುದ್ಧಿಹೀನನೋ? || 14 : ತಳ್ಳಿಬಿಡಲು ಪ್ರಭು ತನ್ನ ಜನರನು / ಕೈಬಿಡನವನು ತನ್ನ ಸ್ವಕೀಯರನು // 15 : ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ / ನೇರಮನಸ್ಕರೆಲ್ಲ ಮಾಡುವರು ಅದನು ಸಮರ್ಥ //

ಮತ್ತಾಯ 11.25-27 5 : ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. 26 : ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. 27 : "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು. --------------------

ಆವಿಷ್ಕಾರಗಳು, ವೈಜ್ಞಾನಿಕವಾಗಿ ದಾಪುಗಾಲು, ಅನೇಕ ಪದವಿಗಳಿಂದ ಜನರು ಬಹಳ ಬುದ್ದಿವಂತರಾಗಿದ್ದಾರೆ. ಏನೆಲ್ಲಾ ಹೊಸಹೊಸ ಸಂಶೋಧನೆ ಹಾಗೂ ಹೊಸತನಗಳನ್ನು ಜನಕಂಡು ಹಿಡಿದಿದ್ದಾರೆ. ಇವೆಲ್ಲಾ ತಾವು ಮೇಧಾವಿಗಳು, ಜ್ಞಾನಿಗಳು ಎಂದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ದೇವರಿಗೆ, ಆಧ್ಯಾತ್ಮಿಕತೆಗೆ ಕಡೆಯ ಸ್ಥಾನ. ದೇವರ ಅವಶ್ಯಕತೆಯಿಲ್ಲದಂತೆ ಬಾಳುತ್ತಿದ್ದಾರೆ. ಕೊನೆಗೊಂದು ದಿನ ಮರುಕ ಪಡುವಂತಾಗುತ್ತದೆ. ಕ್ರಿಸ್ತ ಹೇಳುತ್ತಾರೆ ಪಿತನು ಸರ್ವವನ್ನು ಅವರ ವಶಕ್ಕೆ ನೀಡಿದ್ದಾರೆ, ಪಿತನನ್ನು ಕ್ರಿಸ್ತರೊಬ್ಬರೇ ಅರಿತಿರುವುದು, ಸರ್ವವನ್ನೂ ನೀಡುವ ಅಧಿಕಾರ ಕ್ರಿಸ್ತನಲ್ಲಿದೆ. ಹೀಗಿರುವಾಗ ನಾವೇಕೆ ಇಷ್ಟೊಂದು ಅಹಂ, ಅಹಂಕಾರದಿಂದ ಬಾಳುತ್ತಿದ್ದೇವೆ? ನಮ್ಮ ಜ್ಞಾನವಿರುವುದು ಕ್ರಿಸ್ತನಲ್ಲಿ ಅಲ್ಲವೇ?

No comments:

Post a Comment