Thursday, 2 July 2020

ಜುಲೈ 16, 2020 ಗುರುವಾರ

ಜುಲೈ 16, 2020 ಗುರುವಾರ                        [ಬಿಳಿ]
ಕಾರ್ಮೆಲ್ ಮಾತೆಯ ಹಬ್ಬ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ 26.7-9, 12, 16-19
ಕೀರ್ತನೆ 102: 12-14, 15-17, 18-20 ಶ್ಲೋಕ.19
ದೃಷ್ಟಿಸಿಹನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ
ಶುಭಸಂದೇಶ: ಮತ್ತಾಯ 11.28-30

ಯೆಶಾಯ 26.7-9, 12, 16-19 7 : ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ. 8 : ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿ ಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು. 9 : ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು. 12 : ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ. 16 : ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ. 17 : ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ. 18 : ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ. 19 : ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನ ಹೊಂದುವರು ನೆಲದಿಂದ. ದೈವದಂಡನೆ

ಕೀರ್ತನೆ 102: 13-14, 15-17, 18-21 ಶ್ಲೋಕ.19 ದೃಷ್ಟಿಸಿಹನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ 13 : ಎದ್ದು ಸಿಯೋನಿಗೆ ತೋರು ಸೌಜನ್ಯತೆ / ಅದಕ್ಕೆ ದಯೆತೋರಿಸುವ ಸಮಯವಿದೇ / ನಿಯಮಿತ ಕಾಲವಿದೋ ಬಂದುಬಿಟ್ಟಿದೆ // 14 : ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ / ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ / 15 : ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು / ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು // 16 : ಏಕೆನೆ ಪುನರುದ್ಧರಿಸುವನು ಸಿಯೋನನು / ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು // 17 : ತಿರಸ್ಕರಿಸನಾತ ನಿರ್ಗತಿಕರ ಮೊರೆಯನು / ನೆರವೇರಿಸದೆ ಬಿಡನು ಅವರ ಕೋರಿಕೆಯನು // 18 : ಮುಂದಣ ಸಂತತಿಗಿದು ಶಾಸನವಾಗಿರಲಿ / ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ // 19 : ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ / ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ // 20 : ಆಲಿಸಿದಾತನು ಬಂಧಿತರ ಗೋಳಾಟವನು / ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು // 21 : ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು / ಜನಾಂಗಗಳೂ ರಾಜ್ಯಗಳೂ ಕೂಡಿರಲು /

ಮತ್ತಾಯ 11.28-30 28 : "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. 29 : ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. 30 ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.

ಜನರಿಗೆ ಬಿಡುವೇ ಇಲ್ಲ. ಎಷ್ಟೊಂದು ಜವಾಬ್ದಾರಿಗಳು; ಮನೆ, ಸಂಸಾರ, ಮಕ್ಕಳು ಅವರ ಭವಿಷ್ಯ ..... ಒಂದೇ ಎರಡೇ .....? ಬಿಡುವಿಲ್ಲದ ಯಾಂತ್ರಿಕ ಬದುಕು. ಹೀಗಿರುವಾಗ ಧಾರ್ಮಿಕ ಕರ್ತವ್ಯಗಳಿಗಂತೂ ಸಮಯವೇ ಇಲ್ಲ, ಅಭಾವಕಾಡುತ್ತಿದೆ. ಆದರೆ ಇದಾವುದೂ ವಿಶ್ರಾಂತಿ ನೀಡವು. ದಣಿವು, ಭಾರ, ಹೊರೆ, ಬೆವರು, ..... ಇವಷ್ಟೇ ನಮ್ಮ ಬಿಡುವಿಲ್ಲದ ಬದುಕಿನ ಕೊಡುಗೆಗಳು. ಕ್ರಿಸ್ತ ಹೇಳುತ್ತಾರೆ. ``ನನ್ನ ಬಳಿಗೆ ಬನ್ನಿ, ನೊಗವನ್ನು ಹೊತ್ತುಕೊಳ್ಳಿ, ನಾನು ನಿಮಗೆ ವಿಶ್ರಾಂತಿ ನೀಡುತ್ತೇನೆ.’’ ಬನ್ನಿ ಆತನ ಬಳಿಗೆ.

No comments:

Post a Comment