Thursday, 2 July 2020

ಜುಲೈ 17, 2020 ಶುಕ್ರವಾರ

ಜುಲೈ 17, 2020 ಶುಕ್ರವಾರ                                [ಹಸಿರು]
ಮೊದಲ ವಾಚನ: ಯೆಶಾಯ 38.1-6
ಕೀರ್ತನೆ ಯೆಶಾಯ 38:10, 11, 12, 16 ಶ್ಲೋಕ.17
ನನ್ನಾತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ
ಶುಭಸಂದೇಶ: ಮತ್ತಾಯ 12.1-8

ಯೆಶಾಯ 38.1-6 1 : ಆ ದಿನಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆ ಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು. 2 : ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು, 3 : “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆ ಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು. 4 : ಆಗ ಸರ್ವೇಶ್ವರ ಯೆಶಾಯನಿಗೆ, 5 : “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು: ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ. 6 : ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ’.” ಯೆಶಾಯನು ಹಿಜ್ಕೀಯನಿಗೆ, ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ, ‘ನಿನ್ನ ಕರುವಿನ ಮೇಲೆ ಕಟ್ಟು, ಆಗ ನೀನು ಗುಣ ಹೊಂದುವೆ,” ಎಂದು ಹೇಳಲು ಹಿಜ್ಕೀಯನು, “ನಾನು ಗುಣಹೊಂದಿ ಸರ್ವೇಶ್ವರಸ್ವಾಮಿಯ ಆಲಯವನ್ನು ಸೇರುವೆನು ಎಂಬುದಕ್ಕೆ ಗುರುತೇನು?” ಎಂದು ಕೇಳಿದನು. 7 : ಅದಕ್ಕೆ ಯೆಶಾಯನು, “ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ: 8 : ಇಗೋ, ಅಹಾಜನು ಕಟ್ಟಿಸಿದ ನೆರಳುಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.

ಕೀರ್ತನೆ ಯೆಶಾಯ 38:10, 11, 12, 16 ಶ್ಲೋಕ.17 ನನ್ನಾತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ 10 : ನನ್ನ ರೋಗದಲ್ಲಿ ನಾನು ಇಂತೆಂದುಕೊಂಡೆ: ಮಧ್ಯಪ್ರಾಯದಲ್ಲೇ ಮೃತ್ಯುಲೋಕವನ್ನು ಸಮೀಪಿಸಿರುವೆ ನನ್ನ ಆಯುಷ್ಯವನ್ನು ನಾ ಕಳೆದುಕೊಂಡಿರುವೆ. 11 : ಜೀವಲೋಕದಲ್ಲಿ ಇನ್ನು ದೇವನನ್ನು ಕಾಣೆನೆಂದುಕೊಂಡೆ ಭೂಲೋಕನಿವಾಸಿಗಳಲ್ಲಿ ಒಬ್ಬನನ್ನೂ ನೋಡಲಾರೆನೆಂದುಕೊಂಡೆ. 12 : ಕುರುಬನು ತನ್ನ ಗುಡಿಸಲನ್ನು ಕಿತ್ತುಹಾಕುವಂತೆ ನೇಯಿಗೆಯವನು ತನ್ನ ಹಾಸನ್ನು ಸುತ್ತುವಂತೆ ಮಗ್ಗದಿಂದ ಅವನು ದಾರವನ್ನು ಕತ್ತರಿಸುವಂತೆ ಬೆಳಗುಬೈಗಿನೊಳಗೆ ನನ್ನ ಆಯುಷ್ಯವನ್ನು ನೀ ಮುಗಿಸುತ್ತಿರುವೆನೆಂದು. 13 : ಸಿಂಹವು ಮೇಲೆಬಿದ್ದು ಮೂಳೆ ಮುರಿದಂತೆ ನನಗಾಗುತ್ತಿತ್ತು ಅತೀವ ಬಾಧೆ, ಆದರೂ ಇರುಳೆಲ್ಲ ಮೊರೆಯಿಡುತ್ತಿದ್ದೆ ಬೆಳಗು ಬೈಗಿನೊಳಗೆ ನೀ ನನ್ನ ಮುಗಿಸುತ್ತಿರುವೆನೆಂದೆ. 14 : ಕಿಚುಗುಟ್ಟಿದೆ ನಾ ಬಾನಕ್ಕಿ-ಬಕಗಳಂತೆ ಗುಬ್ಬಳಿಸಿದೆ ನಾ ಪಾರಿವಾಳದಂತೆ, ಕಂಗೆಟ್ಟೆ, ನಾ ಮೇಲೆ ಮೇಲಕ್ಕೆ ನೋಡುತಾ ಸರ್ವೇಶ್ವರಾ, ನಾನಿರುವೆ ಬಾಧೆಪಡುತಾ ನೀ ಎನಗೆ ನೆರವಾಗಲು ಬಾ ಎನ್ನುತಾ. 15 : ನುಡಿದಂತೆ ಪ್ರಭು ನೆರವೇರಿಸಿಹನು; ನಾನೇನು ಹೇಳಲಿ; ಮುಳುಗಿದೆ ನನ್ನಾತ್ಮ ದುಃಖಸಾಗರದಲಿ ನಿದ್ರೆಯಿಲ್ಲದೆ ಸೊರಗುತಿದೆ ನನ್ನ ಜೀವಮಾನವಿಡೀ. 16 : ಸರ್ವೇಶ್ವರಾ, ಮಾನವನ ಜೀವನ ಇಂತಿದೆ, ಇವುಗಳಿಂದಲೇ ನನ್ನ ಆತ್ಮ ಚೇತನಗೊಳ್ಳುತಿದೆ, ನೀನೀಗ ಗುಣಪಡಿಸು, ನಾ ಬಾಳುವೆ.

ಮತ್ತಾಯ 12.1-8 1 : ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದು ಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. 2 : ಇದನ್ನು ಕಂಡ ಫರಿಸಾಯರು, "ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು. 3 : ಅದಕ್ಕೆ ಯೇಸು, "ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ? 4 : ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ? 5 : ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ? 6 : ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ. 7 : ‘ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. 8 : ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ," ಎಂದರು.

ಆಂಟನಿ ಡಿಮೆಲ್ಲೊ ಎಂಬ ಪ್ರಖ್ಯಾತ ಲೇಖಕರು ತಮ್ಮ `ಟೇಕಿಂಗ್ ಫ್ಲೈಟ್' ಎಂಬ ಪುಸ್ತಕದಲ್ಲಿ ಈ ದೃಷ್ಟಾಂತವನ್ನು ಕೊಡುತ್ತಾರೆ: ಒಂದಾನೊಂದು ಕಾಲದಲ್ಲಿ ಅರಣ್ಯವೊಂದರಲ್ಲಿ ಹಗಲೊತ್ತು ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಡುತ್ತಿದ್ದವು. ರಾತ್ರಿಯ ಹೊತ್ತು ಹುಟುಹುಪ್ಪಟೆಗಳು, ಕ್ರಿಮಿಕೀಟಗಳು ಝೇಂಗುಡುತ್ತಿದ್ದವು. ಮರಗಿಡಬಳ್ಳಿಗಳು ಆ ಅರಣ್ಯದಲ್ಲಿ ನಳನಳಿಸುತ್ತಿದ್ದವು. ಹೂಗಳು ಅರಳುತ್ತಿದ್ದವು. ಮತ್ತು ಪ್ರಾಣಿಗಳೆಲ್ಲವೂ ಸ್ವತಂತ್ರವಾಗಿ ಓಡಾಡಿ ಜೀವಿಸುತ್ತಿದ್ದವು. ಅರಣ್ಯವನ್ನು ಪ್ರವೇಶಿಸಿದವರೆಲ್ಲರಿಗೂ ಆ ಪ್ರಶಾಂತ ವಾತಾವರಣದಲ್ಲಿ ಹುದುಗಿರುವ ದೇವರ ಅನುಭವವಾಗುತ್ತಿತ್ತು. ಆ ಸ್ವಾಭಾವಿಕ ಸೌಂದರ್ಯದ ಸ್ಥಾನ ದೇವರ ವಾಸಸ್ಥಾನವಾಗಿತ್ತು. ಆದರೆ ಆಧುನಿಕ ಯುಗದ ಆಗಮನವಾದಾಗ ಜನರಿಗೆ ಕ್ಷಣ ಮಾತ್ರದಲ್ಲಿ ಮರಗಳನ್ನು ಕಡಿದು, ಹರಿಯುತ್ತಿದ್ದ ಹಳ್ಳಕೊಳ್ಳ ತೊರೆಗಳಿಗೆ ಅಣೆಕಟ್ಟು ಕಟ್ಟಿ ಸಾವಿರಾರು ಅಡಿಗಳಷ್ಟೆತ್ತರದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಯಿತು. ಕಡಿದ ಮರಗಳಿಂದಲೂ, ಅರಣ್ಯದ ಮಣ್ಣಿನಡಿಯಲ್ಲಿದ್ದ ಕಲ್ಲುಗಳಿಂದಲೂ ದೇವಾಲಯಗಳನ್ನು ಕಟ್ಟಲಾಯಿತು. ದೇವಾಲಯದ ಗೋಪುರಗಳು ಆಕಾಶದೆಡೆಗೆ ಚಾಚಿದವು. ಗಾಳಿಯಲ್ಲೆಲ್ಲಾ ದೇವಾಲಯದ ಘಂಟೆಗಳ , ಪಠಿಸಿದ ಮಂತ್ರಗಳ, ಪ್ರಾರ್ಥನೆಯ ಹಾಡಿನ ಸ್ವರಗಳ ಸುಂದರ ನೀನಾದ. ಪರಿಣಾಮ? ದೇವರೊಂದು ಮನೆಯಿಲ್ಲದೆ ನಿರಾಶ್ರಿತರಾದರು!!! ಇಂದಿನ ಶುಭಸಂದೇಶದಲ್ಲಿ ಯೇಸು ನುಡಿಯುತ್ತಾರೆ, ನನಗೆ ಬೇಕಾಗಿರುವುದು ದಯೆ; ಯಜ್ಞ ಬಲಿಯಲ್ಲ. ಧರ್ಮಶಾಸ್ತ್ರದ ಸಂಕೋಲೆಯಲ್ಲಿ ಬಂಧಿತರಾಗಿದ್ದ ಫರಿಸಾಯರು ದಯೆ, ಕರುಣೆ, ಮಾನವೀಯತೆಗಳನ್ನು ಮರೆತುಬಿಟ್ಟಿದ್ದರು. ತಮ್ಮ ಸಂಕುಚಿತ ಮನೋಭಾವದಿಂದ ಹಳೇ ನಿಯಮದ ಮೌಲ್ಯವನ್ನೇ ಮುಸುಕುಗೊಳಿಸಿದ್ದರು. ಆದುದರಿಂದ ಯೆಹೂದ್ಯ ಧರ್ಮ ರುಚಿರಹಿತ ಉಪ್ಪಾಗಿತ್ತು. ಯೇಸು ಸಬ್ಬತ್ ದಿನದ ಆಚರಣೆಗೆ ಹೊಸ ಅರ್ಥ ಕೊಡುತ್ತಾರೆ. ಮನುಷ್ಯನಿರುವುದು ಸಬ್ಬತ್ಗೋಸ್ಕರವಲ್ಲ. ಕಟ್ಟಳೆಗಳು ಅಗತ್ಯ ನಿಜ. ಆದರೆ ಈ ಕಟ್ಟಳೆಗಳು ನಮ್ಮನ್ನು ಹೆಚ್ಚು ಹೆಚ್ಚು ಮಾನವೀಯರಾಗಿ ಮಾಡಬೇಕು. ಇಲ್ಲವಾದಲ್ಲಿ ಈ ಕಟ್ಟಳೆಗಳು ತಮ್ಮ ಉದ್ದೇಶವನ್ನೇ ಕಳೆದುಕೊಳ್ಳುತ್ತವೆ. ದಯೆ, ಮಾನವೀಯತೆಯೇ ಧರ್ಮದ ತಿರುಳು. ಫರಿಸಾಯರು ಇದನ್ನೇ ಮರೆತಿದ್ದರು. ನಾವು? ಪ್ರೀತಿ ಪ್ರೇಮ ಇಲ್ಲದಿದ್ದರೆ ಈ ಭೂಲೋಕ ಒಂದು ಗೋರಿಯಾಗುತ್ತದೆ. -ರಾಬರ್ಟ್ ಬ್ರೌನಿಂಗ್

No comments:

Post a Comment