ಜುಲೈ 18, 2020 ಶನಿವಾರ [ಹಸಿರು]
ಮೊದಲ ವಾಚನ: ಮಿಕ 2.1-5
ಕೀರ್ತನೆ 10:1-2, 3-4, 7-8. ಶ್ಲೋಕ.14
ಪ್ರಭೂ, ದಲಿತನನ್ನು ಮರೆದಿರಯ್ಯಾ
ಶುಭಸಂದೇಶ: ಮತ್ತಾಯ 12.14-21
ಮಿಕ 2.1-5
1 : ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮಥ್ರ್ಯ ಅವರ ಕೈಯಲ್ಲಿದೆ.
2 : ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ.
3 : ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಈ ಪೀಳಿಗೆಯ ಮೇಲೆ ನಾನೇ ವಿನಾಶವನ್ನು ಬರಮಾಡುತ್ತೇನೆ. ಆ ಕೇಡಿನಿಂದ ನೀವು ತಲೆತಪ್ಪಿಸಿಕೊಳ್ಳಲಾರಿರಿ. ತಲೆಯೆತ್ತಿ ನಡೆಯಲು ನಿಮಗೆ ಸಾಧ್ಯವಾಗದು. ಕಾಲವು ಅಷ್ಟು ಹದಗೆಟ್ಟಿರುವುದು.
4 : ಆ ದಿನದಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ, ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋದಿಸುವರು.
5 : ಹೀಗಿರಲು ನೂಲೆಳೆದು ಭೂಮಿಯನ್ನು ಹಂಚಿಕೊಡಲು ಸ್ವಾಮಿಯ ಸಭೆಯಲ್ಲಿ ಯಾರೂ ಇರುವುದಿಲ್ಲ.
ಕೀರ್ತನೆ 10:1-2, 3-4, 7-8. ಶ್ಲೋಕ.14
ಪ್ರಭೂ, ದಲಿತನನ್ನು ಮರೆದಿರಯ್ಯಾ
1 : ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? / ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? //
2 : ಸೊಕ್ಕಿನಿಂದ ಶೋಷಿಸುತಿಹರು ದಲಿತರನು ದುರುಳರು / ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು /
3 : ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು / ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು //
4 : ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ / ಅವನ ಮನದೊಳಿದೊಂದೇ ಭಾವನೆ: “ದೇವರೇ ಇಲ್ಲ”! //
7 : ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ / ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ //
8 : ಊರು ಸಂದುಗೊಂದುಗಳಲೆ ಅವಿತಿದ್ದು / ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು / ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು //
14 : ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು / ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು //
ಮತ್ತಾಯ 12.14-21
14 : ಫರಿಸಾಯರಾದರೋ ಅಲ್ಲಿಂದ ಹೊರಗೆ ಹೋಗಿ ಯೇಸುವನ್ನು ಕೊಲೆ ಮಾಡಲು ಒಳಸಂಚು ಹೂಡಿದರು. ಪ್ರವಾದನೆ ಪೂರೈಸಿತು
15 : ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು.
16 : ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆಮಾಡಿದರು.
17 : ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು:
18 : "ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು.
19 : ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ.
20 : ಮುರಿದ ಜೊಂಡಿನಂತಹ ದುರ್ಬಲರಿಗಿಂತ ದೀನಬಂಧು ನಂದಿಹೋಗುತಿಹ ದೀನದಲಿತರಿಗೆ ಕೃಪಾಸಿಂಧು ನ್ಯಾಯನೀತಿಗೆ ಜಯದೊರಕಿಸದೆ ಬಿಡನಿವನು.
21 : ನೆಮ್ಮುವರು ಅನ್ಯಜನರೆಲ್ಲರು ಇವನ ನಾಮವನು."
ಯೇಸು ಅನೇಕ ಅಸ್ವಸ್ಥರನ್ನು ಗುಣಪಡಿಸಿದ ನಂತರ ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆ ಮಾಡುತ್ತಾರೆ, ವಿನಂತಿಯಲ್ಲ ಏಕೆ ಹೀಗೆ?
- ಕ್ರಿಸ್ತರ ಸಮಯವಿನ್ನೂ ಬಂದಿರಲಿಲ್ಲ. ಅದಕ್ಕೆ ಮುಂಚೆ ಸಾಧಿಸುವುದು ಬಹಳಷ್ಟಿದೆ. ಅನಾವಶ್ಯಕ ಕಿತ್ತಾಟ, ತೊಂದರೆಯಲ್ಲಿ ಸಿಕ್ಕಿಕೊಂಡು ಬಿಡುವ ಸಾಧ್ಯತೆ ಹೆಚ್ಚು.
- ಸಾರ್ವಜನಿಕವಾದ ಮನ್ನಣೆ ಕಿರೀಟದ ಹಂಗುಬೇಡ.
- ಜನರಿಗೆ ಮೆಸ್ಸಾಯನ ನಿಜ ಅರ್ಥ ತಿಳಿಸಬೇಕಾಗಿತ್ತು. ಆತನೊಬ್ಬ ಕ್ರಾಂತಿಕಾರಿಯಲ್ಲ ಬದಲಿಗೆ ಆತ ದೀನ ಸೇವಕ, ದೀನ ಬಂಧು ಹಾಗೂ ನೋವು ಅನುಭವಿಸುವ ಸೇವಕ.
No comments:
Post a Comment