Thursday, 2 July 2020

ಜುಲೈ 19, 2020 ಭಾನುವಾರ

ಜುಲೈ 19, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 16ನೇ ಭಾನುವಾರ
ಮೊದಲ ವಾಚನ: ಸುಜ್ಞಾನ 12.13, 16-19
ಕೀರ್ತನೆ 86: 5-6, 9-10, 14-16. ಶ್ಲೋಕ.5
ಪ್ರಭೂ, ನೀನು ದಯವಂತನು, ಕ್ಷಮಿಸುವವನು
ಎರಡನೇ ವಾಚನ: ರೋಮನರಿಗೆ 8.26-27
ಶುಭಸಂದೇಶ: ಮತ್ತಾಯ 13.24-43
=========================
ಸುಜ್ಞಾನ 12.13, 16-19
13 : ಸರ್ವಜನರ ಸುಖ ಕೋರುವ ದೇವರು ನೀವಲ್ಲದೆ ಇನ್ನಾರೂ ಇಲ್ಲ. ನೀವು ವಿಧಿಸಿದ ದಂಡನೆ ಅನ್ಯಾಯವಲ್ಲ ಎಂದು ನೀವು ತೋರಿಸಬೇಕಾಗಿಲ್ಲ.
16 : ನಿಮ್ಮ ಶಕ್ತಿಯೇ ನ್ಯಾಯನೀತಿಗೆ ಆಧಾರ ನಿಮ್ಮ ಸಾರ್ವಭೌಮತ್ವವೇ ಎಲ್ಲ ಸಹನೆಗೆ ಮೂಲ ಕಾರಣ.
17 : ನೀವು ಸರ್ವಶಕ್ತರೆಂದು ಜನರು ನಂಬದಿರುವಾಗ ನೀವು ಶಕ್ತಿಯನ್ನು ತೋರಿಸುತ್ತೀರಿ; ಅದನು ಬಲ್ಲವರೊಂದಿಗೆ ವರ್ತಿಸುವಾಗ ಅವರ ಉದ್ಧಟತನವನ್ನು ಖಂಡಿಸುತ್ತೀರಿ.
18 : ಶಕ್ತಿಯಲ್ಲಿ ನೀವೇ ಸಾರ್ವಭೌಮ ಎಂದೇ, ತೀರ್ಪಿಡುತ್ತೀರಿ ಸಾಮ್ಯತೆಯಿಂದ ನಮ್ಮನ್ನಾಳುತ್ತೀರಿ ಬಹು ತಾಳ್ಮೆಯಿಂದ ನಿಮ್ಮ ಶಕ್ತಿ ನಿಮ್ಮಲ್ಲಿದೆ ಇಚ್ಛಿಸಿದಾಗಲೆಲ್ಲ
19 : ಇಂಥ ಕಾರ್ಯಗಳಿಂದ ಸಜ್ಜನನು ಜನಪ್ರಿಯ ನಾಗಿರಲು ಕಲಿಸಿಕೊಟ್ಟಿರುವಿರಿ ಪಾಪಗಳಿಗೆ ಪಶ್ಚಾತ್ತಾಪದ ಅವಕಾಶವಿತ್ತು ನಿಮ್ಮ ಮಕ್ಕಳನು ಭರವಸೆಯುಳ್ಳವರಾಗಿಸಿದಿರಿ.
=======================
ಕೀರ್ತನೆ 86: 5-6, 9-10, 15-16. ಶ್ಲೋಕ.5
ಪ್ರಭೂ, ನೀನು ದಯವಂತನು, ಕ್ಷಮಿಸುವವನು

5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು / ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು //
6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ವಿಜ್ಞಾಪನೆಗಳ ಕೋರಿಕೆಗೆ //
9 : ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು / ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು //
10 : ಪ್ರಭು, ನೀನೊಬ್ಬನೇ ದೇವನು / ಅದ್ಭುತಶಾಲಿ, ಮಹೋನ್ನತನು //
15 : ಪ್ರಭು, ನೀ ದಯಾಳು, ದೇವಾ ನೀ ಕರುಣಾಮೂರ್ತಿ / ಸಹನಶೀಲನು, ಸತ್ಯಸ್ವರೂಪಿ, ಪ್ರೇಮಮೂರ್ತಿ //
16 : ಕಟಾಕ್ಷವಿಟ್ಟು ಕರುಣಿಸೆನ್ನನು / ನೀಡು ನಿನ್ನ ದಾಸನಿಗೆ ಬಲವನು / ರಕ್ಷಿಸು ನಿನ್ನ ದಾಸಿಯ ಮಗನನು //
ಎರಡನೇ ವಾಚನ: ರೋಮನರಿಗೆ 8.26-27
26 : ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ.
27 : ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ.
===================
ಎರಡನೇ ವಾಚನ: ರೋಮನರಿಗೆ 8.26-27 
26 : ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ. 27 : ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ.
=================
ಮತ್ತಾಯ 13.24-43
24 : ಯೇಸುಸ್ವಾಮಿ ಜನರಿಗೆ ಮತ್ತೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ.
25 : ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿ ಹೋದ.
26 : ಗೋದಿ ಬೆಳೆದು ತೆನೆಬಿಟ್ಟಾಗ ಕಳೆ ಬೆಳೆದಿರುವುದೂ ಗೋಚರವಾಯಿತು.
27 : ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, "ಸ್ವಾವಿೂ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ, ಅದೆಲ್ಲಿಂದ ಬಂತು?" ಎಂದರು.
28 : ಯಜಮಾನ, ‘ಇದು ನನ್ನ ವೈರಿ ಮಾಡಿರುವ ಕೆಲಸ,’ ಎಂದ. ‘ಹಾಗಾದರೆ, ಕಳೆಯನ್ನು ಕಿತ್ತು ಹಾಕೋಣವೇ?’ ಎಂದರು ಆಳುಗಳು,
29 : ಅದಕ್ಕೆ ಯಜಮಾನ ‘ಬೇಡ, ಬೇಡ; ಕಳೆಯನ್ನು ಕೀಳುವಾಗ, ಗೋದಿಯನ್ನೂ ಕಿತ್ತು ಬಿಟ್ಟೀರಿ.
30 : ಸುಗ್ಗಿಯವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,’ ಎಂದ".
31 : ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡುಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ.
32 : ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ."
33 : ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: "ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು." ಸಾಮತಿಗಳ ಸುರಿಮಳೆಯೇಕೆ? (ಮಾರ್ಕ 4:33-34)
34 : ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ.
==============

ಚಿಂತನೆ
======

ಪೀಠಿಕೆ
=======

ಬೀಜ, ಹೊಲ, ರೈತ, ಕಳೆ, ಹೀಗೆ ಈ ಎಲ್ಲಾ ರೂಪಕಗಳನ್ನು ಆಧರಿಸಿಕೊಂಡು ಸ್ವರ್ಗರಾಜ್ಯದ ಬಗೆಗಿನ ಕೆಲವೊಂದು ಅಂಶಗಳನ್ನು ವಿವರಿಸುವ ಕ್ರಿಸ್ತನ ‘ಕಳೆಗಳ’ ಸಾಮತಿಯನ್ನು ಇಂದಿನ ಶುಭಸಂದೇಶದಲ್ಲಿ ನಾವು ಕೇಳುತ್ತೇವೆ. ಕಳೆಗಳು ಮತ್ತು ಗೋಧಿಯನ್ನು ಒಟ್ಟೊಟ್ಟಿ ಬೆಳೆಯಲು ಅವಕಾಶಕೊಡುವ ಯಜಮಾನ ಅಂದರೆ ದೇವರು ತನ್ನ ಜೌದರ್ಯ ಮತ್ತು ಕಾರುಣ್ಯವನ್ನು ವ್ಯಕ್ತಪಡಿಸುತ್ತಾರೆ. ಪಾಪಿಗಳ ಮನಃಪರಿವರ್ತನೆಗೆ ಕಾಲಾವಕಾಶ ನೀಡುವ ದೇವರು ನಮ್ಮ ಪರಿವರ್ತನೆಗೂ ಅವಕಾಶಕೊಟ್ಟು, ನಾವು ಕೂಡ ತಪ್ಪುಮಾಡಿದವರ ವಿರುದ್ಧ ನಿರ್ದಯಿಗಳಾಗದೆ, ಅವರ ಪರಿವರ್ತನೆಗೂ ಸಹಾಯ ಮಾಡಬೇಕಾದ್ದ ಅನಿವಾರ್ಯತೆಯ ಬಗ್ಗೆ ತಿಳಿಸುತ್ತಾರೆ.

=================
ಸುಜ್ಞಾನ 12:13, 16-19
==================

ಮೊದಲನೆಯ ವಾಚನವು ದೇವರು ಬುದ್ಧಿವಂತ ನ್ಯಾಯಧೀಶರು,ಅನ್ಯಾಯದ ತೀರ್ಪುಕೊಡುವವರಲ್ಲ ಎಂದು ತಿಳಿಸುತ್ತದೆ. ‘ನಿಮ್ಮ ಶಕ್ರಿಯೇ ನ್ಯಾಯನೀತಿಗೆ ಆಧಾರ ನಿಮ್ಮ ಸಾರ್ವಭೌಮತ್ವವೇ ಎಲ್ಲ ಸಹನೆಗೆ ಮೂಲ ಕಾರಣ’ ಎಂಬ ವಿಷಯವು ಈ ದಿನದ ಕೀರ್ತನೆಯಲ್ಲಿ ನಿರರ್ಗಳವಾಗಿ ಹೇಳಲಾಗಿದೆ; “ಪ್ರಭೂ ನೀನು ದಯಾವಂತನು, ಕ್ಷಮಿಸುವವನು, ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು”. ಹೌದು ದೇವರು ಕರುಣಾಮಯಿ, ಕ್ಷಮಿಸುವವನು ಎಂಬುದೇ ನಮ್ಮ ಗ್ರಹಿಕೆಯಾಗಿ ಇತರರ ಬಗ್ಗೆ ತೀರ್ಪು ಕೊಡುವುದನ್ನು ನಿಲ್ಲಿಸೋಣ.

================
ರೋಮ 8:26-27
=================

ಎರಡನೆಯ ವಾಚನವು ಪ್ರವಿತ್ರಾತ್ಮರ ಒತ್ತಾಸೆಯ ಬಗ್ಗೆ ಮಾತನಾಡುತ್ತದೆ. ಪವಿತ್ರಾತ್ಮರು ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ, ಹೇಗೆ ಪ್ರಾರ್ಥಿಸಬೇಕೆಂಬುದನ್ನು ತಿಳಿಸಿಕೊಡುವುದಲ್ಲದೇ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ, ಬಿನ್ನವಿಸುತ್ತಾರೆ ಎಂದು ವಾಚನವು ತಿಳಿಸುತ್ತದೆ

================
ಮತ್ತಾಯ 13:24-43
=================

ಶುಭಸಂದೇಶದ ವಾಚನವನ್ನು ಅರ್ಥಮಾಡಿಕೊಳ್ಳುವಾಗ ಗೋದಿಯು ಒಳ್ಳೆಯ ಜನರ ಪ್ರತೀಕವಾಗಿ ಕಳೆಗಳನ್ನು ಕೆಟ್ಟ ಜನರ ರೂಪಕವಾಗಿ ನಾವು ಪರಿಭಾವಿಸುತ್ತೇವೆ. ಹೆಚ್ಚಿನ ಜನರು ತಮ್ಮನ್ನೇ ಗೋದಿಗೆ ಹೋಲಿಸಿಕೊಳ್ಳುವ ಚಾಳಿಯನ್ನು ಸಹ ಕಂಡಿದ್ದೇವೆ. ತೀರ್ಪಿನ ದಿನ ನಾವೆಲ್ಲರು ಗೋದಿಗಳಂತೆ ದೇವರನ್ನು ಸೇರುತ್ತೇವೆ, ಸ್ವರ್ಗರಾಜ್ಯಕ್ಕೆ ಬಾಧ್ಯಸ್ಥರಾಗುತ್ತೇವೆ ಎಂಬ ಭ್ರಮೆಯು ಸಹ ನಮ್ಮಲಿದೆ. ಇನ್ನೊಂದು ಕಡೆ ನಮಗೆ ಸರಿ ತೋರದವರನ್ನು ಕೆಟ್ಟವರೆಂದು ಜರಿಯುತ್ತೇವೆ.

ಲೋಕಾಂತ್ಯದವರೆಗೂ ಒಳಿತು ಮತ್ತು ಕೆಟ್ಟದು ಎರಡು ಜೊತೆ ಜೊತೆಯಲಿಯೇ ಇರವುದು ದೇವರ ಚಿತ್ತವಾಗಿದೆ. ‘ಕೆಟ್ಟವರಿಗೆ’ ‘ನೀಚ’ರಿಗೆ ಶಿಕ್ಷೆಯನ್ನು ನೀಡುತ್ತಾ ಒಳ್ಳೆಯವರಿಗೆ ಸ್ವರ್ಗದ ಬಾಧ್ಯಸ್ಥೆಯನ್ನು, ದೈವಿಕೃಪೆಯನ್ನು ನ್ಯಾಯತೀರ್ಪಿನ ದಿನದಂದು ನೀಡುವರು ಎಂದು ಸಾಮತಿಯನ್ನು ಅರ್ಥೈಸುತ್ತೇವೆ. ಇನ್ನೊಂದು ಕಡೆ ದೇವರ ಸಾಮ್ರಾಜ್ಯವು ಯೇಸುವಿನಲ್ಲಿ ಪ್ರಾರಂಭವಾಗಿದೆ. ಆದರೂ ಒಳ್ಳೆಯವರು ಮತ್ತು ಕೆಟ್ಟವರು ಒಟ್ಟಿಗೆ, ಜೀವನ ನಡೆಸುತ್ತಾರೆ. ಆಧುನಿಕ ಯುಗದಲ್ಲಿ ಒಳ್ಳೆಯವರಿಗಿಂತ ಕೆಟ್ಟ ಜನರು ಎಲ್ಲಾ ರಂಗಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಇವೆಲ್ಲವು ಶಾಶ್ವತವಲ್ಲ, ಅವರ ದಿನಗಳೆಲ್ಲವೂ ಎಣಿಕೆಯಾಗಿವೆ ಎಂದು ಸಾಮತಿಯನ್ನು ಕೆಲವರು ವಾಖ್ಯಾನಿಸುತ್ತಾರೆ.

ಆದರೆ ಈ ಒಂದು ಸಾಮತಿಯಲ್ಲಿ ಕ್ರಿಸ್ತರು ‘ಕೆಟವರ’ ಬಗ್ಗೆ ಹೆಚ್ಚು ಕಾಳಜಿಯನ್ನು ತೋರುವುದನ್ನು ಕಾಣುತ್ತೇವೆ. ಹೌದು ಈ ಒಂದು ಅಂಶವನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವೆನ್ನಿಸಿದ್ದರೂ ಅದು ಸತ್ಯ.

ಉದಾಹರಣೆಗೆ, ದೇವರು ಒಳ್ಳೆಯ ಕುರುಬನಂತೆ ನೂರು ಕುರಿಗಳನ್ನು ಬಿಟ್ಟು ತಪ್ಪಿ ಹೋಗಿದ್ದ ಒಂದು ಕುರಿಮರಿಯನ್ನು ಹುಡುಕಿ ಸಿಕ್ಕ ನಂತರ ತನ್ನ ಹೆಗಲ ಮೇಲೆ ಹಾಕಿಕೊಂಡು ತಂದು ಸಂಭ್ರಮಿಸುತ್ತಾರೆ. ಈ ಒಂದು ಅಂಶವನ್ನು ‘ವ್ಯಭಿಚಾರಿ’ಯ ಘಟನೆಯಲ್ಲೂ ಕಾಣಬಹುದು. ತಾವು ಒಳ್ಳೆಯವರು ನೀತಿವಂತರೆಂದು ತಿಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ವ್ಯಭಿಚಾರಿಣಿಯನ್ನು ಅಂದರೆ ‘ಕೆಟ್ಟ’ ಹೆಂಗಸನ್ನು ಕ್ರಿಸ್ತನ ಮುಂದೆ ನಿಲ್ಲಿಸಿ ಕ್ರಿಸ್ತನ ತೀರ್ಪಿಗೆ ಕಾಯುತ್ತಾರೆ. ಆದರೆ ಕ್ರಿಸ್ತರು “ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ; ಎಂದು ಸವಾಲು ಎಸೆಯುತ್ತಾರೆ. ಆದರೆ ತಾವು ನೀತಿವಂತರೆಂದು ಭ್ರಮಿಸಿ ತೀರ್ಪುಕೊಡಲು ಬಂದ ಜನರು ಒಬ್ಬೊಬ್ಬರಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಕಾಲುಕೀಳುತ್ತಾರೆ. ಅವರಿಗೂ ತಮ್ಮ ಪಾಪಗಳ ಅರಿವಾಗುತ್ತದೆ.

ಹೌದು, ಈ ಸಾಮತಿಯನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಬಹುದು; ಆದರೆ ಒಂದು ವ್ಯಾಖ್ಯಾನ; ದೇವರು ಕರುಣಾಮಯಿ ನಮ್ಮ ಪಾಪಮಯ ಬದುಕನ್ನು ನಾವು ತೊರೆವಂತೆ ನಮ್ಮ ಪರಿವರ್ತನೆಗೆ ಕಾಲಾವಕಾಶವನ್ನು ಕಲ್ಪಿಸುವವ ದಯಾಮಯ ಉದಾರಿ ಎಂದು ತಿಳಿಸುತ್ತದೆ. ಆದುದರಿಂದ ನಾವು ತೀರ್ಪುಕೊಡುವವರಂತಾಗದೆ, ನಮ್ಮ ಮತ್ತು ಎಲ್ಲರ ಮನಃಪರಿವರ್ತನೆಗೆ ಪ್ರಾರ್ಥಿಸಬೇಕಾಗಿದೆ. ದೇವರು ಗೋದಿ ಮತ್ತು ಕಳೆ ಎರಡನ್ನೂ ಪ್ರೀತಿಸುತ್ತಾರೆ. ನಾವೂ ಬಿತ್ತಿದ್ದನ್ನು ಕೊಯ್ಲು ಮಾಡುವಂತೆ ಕರುಣೆಯ ಬೀಜಗಳನ್ನು ಬಿತ್ತಿ ಕರುಣೆಯನ್ನು ಪಡೆಯೋಣ.

===========================
ಚಿಂತನೆ – ಫಾ ಜೋವಿ ಎಸ್ .ಜೆ
==========================

No comments:

Post a Comment