Thursday, 2 July 2020

ಜುಲೈ 20, 2020 ಸೋಮವಾರ

ಜುಲೈ 20, 2020 ಸೋಮವಾರ                        [ಹಸಿರು]
ಸಂತ ಅಪೊಲಿನಾರಿಸ್ [ಧರ್ಮಾಧ್ಯಕ್ಷ / ರಕ್ತಸಾಕ್ಷಿ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಮಿÁಕ 6.1-4, 6-8
ಕೀರ್ತನೆ 50: 5-6, 8-9, 16-17, 21, 23. ಶ್ಲೋಕ.23
ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ಧಾರವನು
ಶುಭಸಂದೇಶ: ಮತ್ತಾಯ 12.38-42
==================
ಮೊದಲ ವಾಚನ: ಮಿಕ 6.1-4, 6-8 1 : ಸರ್ವೇಶ್ವರ ಹೇಳುವುದನ್ನು ಕೇಳಿರಿ: “ಎದ್ದೇಳು; ಬೆಟ್ಟಗಳ ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ ಕೇಳಿಸಲಿ. 2 : “ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ.” 3 : ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ? ಪ್ರಮಾಣವಾಗಿ ಹೇಳು. 4 : ಈಜಿಪ್ಟ್ ದೇಶದಿಂದ ನಾನು ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಾಯಕರನ್ನಾಗಿ ಕಳುಹಿಸಿದೆ. 6 : ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡು ಹೋಗಲೇ? 7 : ಸಾವಿರಾರು ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲ ಪ್ರವಾಹಗಳನ್ನು ನೋಡಿ ಸರ್ವೇಶ್ವರ ಮೆಚ್ಚುವುದುಂಟೆ? ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ? 8 : ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.
===============
ಕೀರ್ತನೆ 50: 5-6, 8-9, 16-17, 21, 23. ಶ್ಲೋಕ.23 ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ಧಾರವನು
5 : “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು / ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು // 6 : ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ / ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ // 8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ // 9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ // 16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”// 17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ // 21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?/ ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?// ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು/ ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು // 23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು // ======================
ಮತ್ತಾಯ 12.38-42 38 : ಬಳಿಕ ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, "ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ," ಎಂದರು. 39 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: "ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. 40 : ಯೋನನು ಮೂರುದಿನ ಹಗಲುರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲುರಾತ್ರಿ ಭೂಗರ್ಭದಲ್ಲಿರುವನು. 41 : ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 42 : ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
=================

ಸಂಕೇತಗಳನ್ನು ನೀಡುವುದು ವಿಶ್ವಾಸದಲ್ಲಿ ಸಾಫಲ್ಯ ಮತ್ತು ದೃಢತೆಯನ್ನು ಹೊಂದುವುದಕ್ಕಾಗಿ. ಆದರೆ ವಿಶ್ವಾಸವಿಲ್ಲದ ಜನ ಸಂಕೇತವನ್ನು ಕೇಳಿದರೆ ಅದರಲ್ಲಿ ಸದುದ್ದೇಶವಿರಲು ಸಾಧ್ಯವೇ? ಇಂತಹದೊಂದು ಪರಿಸ್ಥಿತಿಯನ್ನು ಎದುರುಗೊಂಡ ಯೇಸು ಮನನೊಂದು ಸೂಚಕ ಕಾರ್ಯಗಳನ್ನು ಸಂಕೇತವನ್ನಾಗಿ ಕೇಳಿದವರಿಗೆ ದೈವಭ್ರಷ್ಟ ಪೀಳಿಗೆ ಎಂದು ಸಂಬೋಧಿಸುತ್ತಾ ದಕ್ಷಿಣ ದೇಶದ ರಾಣಿಯ ಉಲ್ಲೇಖ ಮಾಡುತ್ತಾರೆ. ದೈವ ವಿಶ್ವಾಸದಲ್ಲಿ ಬೆಳೆದ ಪ್ರತಿಯೊಬ್ಬರೂ, ದೇವರ ಅಸ್ತಿತ್ವ ಹಾಗೂ ಅವರ ಶಕ್ತಿಯ ಬಗ್ಗೆ ಪ್ರಮಾಣಪತ್ರ ಕೇಳುವುದಿಲ್ಲ. ಬದಲಾಗಿ ವಿಶ್ವಾಸವನ್ನೇ ಪ್ರಮಾಣಿಸಿ ಬದುಕುತ್ತಾರೆ. ಧರ್ಮಶಾಸ್ತ್ರಿಗಳು ಹಾಗೂ ಪರಿಸಾಯರು ಕೇಳಿದ ಸೂಚಕಕಾರ್ಯ ಸಂಕೇತ ಬೇಡದ ಅಡೆತಡೆಗಳಾಗಿದ್ದವೇ ಹೊರತು ನೋಡಿ, ನಂಬಿ, ವಿಶ್ವಾಸಿಸುವ ಸಾಧನಗಳಾಗಿರಲಿಲ್ಲ. ಇಂದಿನ ಪ್ರಪಂಚದ ಸವಾಲುಗಳ ನಡುವೆ ಕ್ರೈಸ್ತ ವಿಶ್ವಾಸದಲ್ಲಿ ಜೀವಿಸಿದಾಗ ದೇವರು ನಮ್ಮನ್ನು ಶ್ಲಾಘಿಸಿ ತಮ್ಮ ಆಪ್ತವರ್ಗಕ್ಕೆ ಸೇರಿಸಿಕೊಳ್ಳುತ್ತಾರೆಂಬ ದೃಢ ವಿಶ್ವಾಸದಿಂದ ಬಾಳೋಣ.
=============`

@ದನಿ ಮಾಧ್ಯಮ ಮನೆ

No comments:

Post a Comment