Friday, 3 July 2020

ಸೆಪ್ಟೆಂಬರ್ 3, 2020 ಗುರುವಾರ

ಸೆಪ್ಟೆಂಬರ್ 3, 2020 ಗುರುವಾರ                        [ಹಸಿರು]
ಸಂತ ಮಹಾ ಗ್ರೆಗರಿ [ಜಗದ್ಗುರು / ಧರ್ಮಪಂಡಿತ] (ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ 3.18-23
ಕೀರ್ತನೆ 24:1-6. ಶ್ಲೋಕ.1
ಜಗವು ಅದರ ಜೀವಜಂತುಗಳೆಲ್ಲವೂ ಪ್ರಭುವಿನದೇ
ಶುಭಸಂದೇಶ: ಲೂಕ 5.1-11

1 ಕೊರಿಂಥಿಯರಿಗೆ 3.18-23 18 : ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ. 19 : ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲವುದಲ್ಲಿಯೇ ಸಿಕ್ಕಿಸುವರು” ಎಂದೂ 20 : “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ? 21 : ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ. 22 : ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ – ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ. 23 : ಆದರೆ ನೀವು ಕ್ರಿಸ್ತ ಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.


ಕೀರ್ತನೆ 24:1-6. ಶ್ಲೋಕ.1 ಜಗವು ಅದರ ಜೀವಜಂತುಗಳೆಲ್ಲವೂ ಪ್ರಭುವಿನದೇ 1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ // 2 : ಕಡಲನು ತಳಪಾಯವನಾಗಿಸಿದವನು ಆತನೆ / ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ // 3 : ಪ್ರಭುವಿನ ಶಿಖರವನು ಏರಬಲ್ಲವನಾರು? / ಆ ನಿವಾಸದಲಿ ನಿಲ್ಲಲು ಯೋಗ್ಯನಾರು? // 4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು // 5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / ನೀತಿಯ ಸತ್ಫಲ ರಕ್ಷಕ ದೇವನಿಂದ // 6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / ಇಂಥವರೆ ಯಕೋಬ ದೇವನ ಭಕ್ತಾದಿಗಳು //


ಲೂಕ 5.1-11 1 : ಒಮ್ಮೆ ಯೇಸುಸ್ವಾಮಿ ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. 2 : ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3 : ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. 4 : ಬೋಧನೆ ಮುಗಿದದ್ದೇ ಸಿಮೋನನಿಗೆ, “ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ವಿೂನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ,” ಎಂದರು, 5 : ಅದಕ್ಕೆ ಸಿಮೋನನು “ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಬಲೆಗಳನ್ನು ಹಾಕುತ್ತೇವೆ,” ಎಂದನು. 6 : ಬಲೆಗಳನ್ನು ಹಾಕಿದ್ದೇ ವಿೂನುಗಳು ರಾಶಿ ರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದುಹೋಗುವುದರಲ್ಲಿದ್ದವು. 7 : ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆ ಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ವಿೂನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. 8 : ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, “ಸ್ವಾವಿೂ, ನಾನು ಪಾಪಾತ್ಮ; ನನ್ನಿಂದ ದೂರವಿರಿ!” ಎಂದನು. 9 : ಹಿಡಿದ ವಿೂನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. 10 : ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, “ಹೆದರಬೇಡ, ಇಂದಿನಿಂದ ನೀನು ವಿೂನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,” ಎಂದರು. 11 : ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನೂ ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು

ಪ್ರಭುಯೇಸು ಎಲ್ಲಾ ಸೃಷ್ಟಿ ಸಮಸ್ತಕ್ಕೂ ಒಡೆಯರು. ಪ್ರಭುವಿನ ವಾಕ್ಯದಲ್ಲಿ ಮಾತಿನಲ್ಲಿ ವಿಶ್ವಾಸವಿಟ್ಟು ಬಾಳಿದ್ದೆಯಾದರೆ ಅದ್ಬುತಗಳನ್ನು ಕಾಣುತ್ತೇವೆ. ಇಂದಿನ ಶುಭಸಂದೇಶದಲ್ಲಿ ಹುಟ್ಟು ಬೆಸ್ತನಾಗಿದ್ದ ಪೇತ್ರ ರಾತ್ರಿಇಡೀ ಬಲೆ ಬಿಸಿದರೂ ಒಂದೂ ಮೀನೂ ಸಹ ಸಿಗಲಿಲ್ಲ ಆದರೆ ಯೇಸುವಿನ ಒಂದೇ ಮಾತಿನಿಂದ ಮೀನುಗಳು ರಾಶಿ ರಾಶಿಯಾಗಿ ಸಿಗುತ್ತವೆ. ಸಿಮೋನನಿಗೆ ಯೇಸು ಹೆದರಬೇಡ ಇಂದಿನಿಂದ ನೀನು ಮನುಷ್ಯರನ್ನೇ ಹಿಡಿಯುವವನು ಆಗುವೆ ಎಂದರು. ಹಾಗೆಯೆ ಸಂತ ಮದರ್ ತೆರೇಸಾರವರು ನಿರ್ಗತಿಕರ, ಅನಾಥರ, ವೃದ್ಧರ, ಬಡವರ, ರೋಗಿಗಳ ಸೇವೆಯನ್ನು ಮಾಡಿ ಯೇಸುವಿನ ಪ್ರೀತಿಯನ್ನು ತೋರಿದರು. ಅನೇಕರನ್ನು ದೇವರ ಮಕ್ಕಳನ್ನಾಗಿಸಿದರು ----------------- ಇಂದಿನ ಮೊದಲನೇ ವಾಚನ ಮತ್ತು ಶುಭಸಂದೇಶ ನಮಗೆ ತಿಳಿಸುದೇನೆಂದರೆ ನಮ್ಮ ಯೋಜನೆಗಳು ಮತ್ತು ಆಲೋಚನೆಗಳು ಎಂದಿಗೂ ದೇವರ ಯೋಜನೆಗಳಿಗೆ ಮತ್ತು ಆಲೋಚನೆಗಳಿಗೆ ಹೊಂದಿಕೊಂಡು ಇರುವುದಿಲ್ಲ. ಏಕೆಂದರೆ ಮನುಷ್ಯ ತನ್ನದೇ ಆದ ರೀತಿಯಲ್ಲಿ ಆಲೋಚಿಸುತ್ತಾನೆ, ಆದರೆ ದೇವರು ಮನುಷ್ಯನ ಒಳಿತಿಗಾಗಿ ಚಿಂತಿಸುತ್ತಾರೆ. ಇಂದಿನ ಶುಭಸಂದೇಶದಲ್ಲಿ ಪ್ರಭು ನೀಡುವ ಸಂದೇಶವೆನೆಂದರೆ ಮನುಷ್ಯ ದೇವರಲ್ಲಿ ಮತ್ತು ದೇವರ ವಾಕ್ಯದಲ್ಲಿ ನಂಬಿಕೆ ಇಡಬೇಕು, ನಂಬಿಕೆ ಇಟ್ಟವರು ಮಾತ್ರ ಬಲೆಯನ್ನು ಆಳವಾಗಿ ಬೀಸಬಹುದು ಆಗ ಒಳ್ಳೆಯ ಬೇಟೆ ಸಿಗುತ್ತದೆ. ಮನುಷ್ಯನ ವಿಶ್ವಾಸ ಆಳವಾಗಿ ಮತ್ತು ಧೃಡವಾಗಿ ಇದ್ದಾಗ ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಕಷ್ಟ ಸಂಕಷ್ಟಗಳು ಜೀವನದಲ್ಲಿ ಬರುತ್ತವೆ, ಆ ಕಷ್ಟ ಸಂಕಷ್ಟಗಳು ನಮ್ಮನ್ನು ತುಳಿಯಲು ಪ್ರಾರಂಭಿಸುತ್ತವೆ ಆ ಕ್ಷಣದಲ್ಲಿ ಮನುಷ್ಯ ದೇವರ ಕಡೆಗೆ ಹೆಜ್ಜೆ ಇಟ್ಟಾಗ ಅದಕ್ಕೆ ಸಲಹೆ ಸಿಗುತ್ತದೆ.

No comments:

Post a Comment