ಜುಲೈ 22, 2020 ಬುಧವಾರ [ಬಿಳಿ]
ಸಂತ ಮರಿಯಾ ಮಗ್ದಲೇನ (ವಿಶೇಷ ಸ್ಮರಣೆ)
ಮೊದಲ ವಾಚನ: ಪರಮಗೀತೆ 3.1-4 [ಅಥವಾ]
ಮೊದಲ ವಾಚನ: 2 ಕೊರಿಂಥಿಯರಿಗೆ 5.14-17
ಕೀರ್ತನೆ 63:1-5, 7-8. ಶ್ಲೋಕ.1
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ
ಶುಭಸಂದೇಶ: ಯೊವಾನ್ನ 20.1, 11-18
ಪರಮಗೀತೆÀ 3.1-4
1 : ನಲ್ಲೆ : ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.
2 : ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.
3 : ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?” ಎಂದು ವಿಚಾರಿಸಿದೆ.
4 : ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ.
ಕೀರ್ತನೆ 63:2-6, 8-9. ಶ್ಲೋಕ.1
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ
2 : ನಿನ್ನ ಮಂದಿರದಲಿ ನನಗಾದ ದರ್ಶನದಲಿ | ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ ||
3 : ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ / ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ //
4 : ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ / ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ //
5 : ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ / ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ//
6 : ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ / ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ //
8 : ನನ್ನಾತ್ಮ ನಿನಗಾತುಕೊಂಡಿದೆ / ನಿನ್ನ ಬಲಗೈ ನನಗಿಂಬಾಗಿದೆ //
9 : ಕೇಡು ಬಗೆವವರು ನನ್ನ ಪ್ರಾಣಕೆ / ಇಳಿದು ಹೋಗುವರು ಅಧೋಲೋಕಕೆ
ಯೊವಾನ್ನ 20.1, 11-18
1 : ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು.
2 : ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು.
11 : ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು.
12 : ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು.
13 : ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು.
14 : ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ.
15 : ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?” ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು.
16 : ಆಗ ಯೇಸು, “ಮರಿಯಾ” ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ” ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ “ಗುರುದೇವಾ” ಎಂದರ್ಥ).
17 : ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು.
18 : ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.
ಪ್ರೇಷಿತರಿಗೆ ಪ್ರೇಷಿತಳಾದ ಮಗ್ದಲದ ಮರಿಯಳ ಸ್ಮರಣೆ ಮಾಡುತ್ತಿದ್ದೇವೆ. ಏಳು ದೆವ್ವಗಳಿಂದ ವಿಮುಕ್ತಿ ಹೊಂದಿ (ಲೂಕ 8:2) ಕ್ರಿಸ್ತನ ಹಿಂಬಾಲಕಳಾಗಿದ್ದಳು. ಆಕೆಯ ಧೈರ್ಯ ಮೆಚ್ಚುವಂತಾದ್ದು ಏಕೆಂದರೆ ಕ್ರಿಸ್ತನ ಶಿಷ್ಯರು ಪ್ರಾಣಭೀತಿಯಿಂದ ಓಡಿಹೋದರು ಆದರೆ ಈಕೆ ಕಲ್ವಾರಿಯ ತನಕ ಹಿಂಬಾಲಿಸಿದಳು. ಆಕೆಯ ಪ್ರೀತಿ ಅಪಾರ ಏಕೆಂದರೆ ಸಮಾಧಿಯಾದ ಕ್ರಿಸ್ತನನ್ನು ಬಿಟ್ಟಿರಲಾರದೆ ಅಲ್ಲಿಗೂ ಹೋಗಿ ಕ್ರಿಸ್ತನಿಗಾಗಿ ಮರುಗುತ್ತಾಳೆ. ಅಲ್ಲಿಯೇ ಪುನರುತ್ಥಾನರಾದ ಕ್ರಿಸ್ತ ಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡು, ಶುಭಸಂದೇಶ ತಿಳಿಸುವಂತೆ ಆಕೆಯನ್ನು ಕಳುಹಿಸುತ್ತಾರೆ. ನಾವೂ ಕ್ರಿಸ್ತರಿಂದ ಆದೇಶ ಪಡೆದಿರುವವರು, ನಾವೂ ಶುಭಸಂದೇಶ ಪ್ರಚಾರಕರು.
No comments:
Post a Comment