ಜುಲೈ 21, 2020 ಮಂಗಳವಾರ [ಹಸಿರು]
ಬ್ರಿಂಡಿಸಿಯ ಸಂತ ಲಾರೆನ್ಸ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಮಿಕ 7.14-15, 18-20
ಕೀರ್ತನೆ 85: 1-3, 4-5, 6-7. ಶ್ಲೋಕ.7
ತೋರಿಸೆಮಗೆ ಪ್ರಭೂ, ಕರುಣೆಯನು
ಶುಭಸಂದೇಶ: ಮತ್ತಾಯ 12.46-50
ಮಿಕ 7.14-15, 18-20
14 : ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ.
15 : ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ.
18 : ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ.
19 : ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ.
20 : ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.
ಕೀರ್ತನೆ 85: 1-3, 4-5, 6-7. ಶ್ಲೋಕ.7
ತೋರಿಸೆಮಗೆ ಪ್ರಭೂ, ಕರುಣೆಯನು
2 : ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು / ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು //
3 : ತೊರೆದುಬಿಟ್ಟೆ ಸ್ವಾವಿೂ, ನಿನ್ನ ರೋಷವನು / ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು //
4 : ಪುನಶ್ಚೇತನಗೊಳಿಸೆಮ್ಮನು ದೇವ, ಉದ್ಧಾರಕ / ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ //
5 : ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ?/ ತಲತಲಾಂತರಗಳಿಗೂ ಕೋಪವನು ಬೆಳೆಸುವೆಯಾ?//
6 : ನವಜೀವವನು ತುಂಬಿಸಲಾರೆಯಾ ನಮ್ಮಲಿ?/ ಆಗ ನಿನ್ನ ಜನರು ಆನಂದಿಸುವರು ನಿನ್ನಲಿ//
7 : ತೋರಿಸೆಮಗೆ ಪ್ರಭು ಕರುಣೆಯನು | ಅನುಗ್ರಹಿಸೆಮಗೆ ರಕ್ಷಣೆಯನು ||
8 : ನಾ ಕೇಳುತ್ತಿರುವೆನು, ಪ್ರಭು ಹೇಳುವುದನು / ತನ್ನ ಜನರಿಗಾತ ನುಡಿವುದು ಶಾಂತಿಯನು / ಇನ್ನಾದರು ತೊರೆಯೋಣ ಮೂರ್ಖತೆಯನು //
ಮತ್ತಾಯ 12.46-50
46 : ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡಬಯಸಿ ಹೊರಗೆ ನಿಂತಿದ್ದರು.
47 : "ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ," ಎಂದು ಒಬ್ಬನು ತಿಳಿಸಿದನು.
48 : ಅದಕ್ಕೆ ಯೇಸು, "ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?" ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈ ತೋರಿಸಿ,
49 : "ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು;
50 : ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ," ಎಂದರು.
ಯೇಸು ಬೋಧನೆ ಮಾಡುವ ಸಮಯದಲ್ಲಿ ಆತನ ಕುಟುಂಬಸ್ಥರು ಬೇಟಿ ಮಾಡಲು ಬರುತ್ತಾರೆ. ಕ್ರಿಸ್ತನ ಪ್ರತಿಕ್ರಿಯೆಯು ಗಮನಾರ್ಹವಾದುದು.
- ಕುಟುಂಬಸ್ಥರ ಮಧ್ಯ ಪ್ರವೇಶ ಆತನನ್ನು ಹಿಮ್ಮೆಟ್ಟಿಸಲಿಲ್ಲ. ಬೋಧನಾ ಕಾರ್ಯಕ್ಕೆ ಅಡ್ಡಿಯಾಗದಂತೆ ನಿಬಾಯಿಸಿದರು.
- ಕುಟುಂಬಸ್ಥರು ಕ್ರಿಸ್ತನಿಗೆ ಆಪ್ತರು, ಆದ್ದರಿಂದಲೇ ಬೋಧನೆಯ ನಡುವೆಯೇ ಕ್ರಿಸ್ತರನ್ನು ಸಂಧಿಸುವ ಅರ್ಹತೆ ತೋರಿಸುತ್ತಾರೆ.
- ಇಂಥ ಮಧ್ಯಪ್ರವೇಶವನ್ನು ಕ್ರಿಸ್ತ ಹೊಸ ಪಾಠ ಕಲಿಸಲು ಅಂದರೆ ಯಾರೆಲ್ಲಾ ದೇವರ ಮಕ್ಕಳೋ ಅವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಲು ಸಾಧ್ಯವಾಗುತ್ತದೆ.
No comments:
Post a Comment