ಆಗಸ್ಟ್ 24, 2020 ಸೋಮವಾರ [ಕೆಂಪು]
ಸಂತ ಬಾರ್ತೊಲೊಮಾಯ [ಪ್ರೇಷಿತ]
ಮೊದಲ ವಾಚನ: ಯೊವಾನ್ನನ ಪ್ರಕಟನೆ 21.9-14
ಕೀರ್ತನೆ 145: 10-11, 12-14, 19. ಶ್ಲೋಕ.1
ಪ್ರಭೂ, ಭಕ್ತ ಸಮೂಹವು ಪ್ರಸಿದ್ಧಪಡಿಸುವುದು
ನಿನ್ನ ರಾಜ್ಯದ ಮಹತ್ವವನು
ಶುಭಸಂದೇಶ: ಯೊವಾನ್ನ 1.45-51
ಯೊವಾನ್ನನ ಪ್ರಕಟನೆ 21.9-14
9 : ಏಳು ಅಂತಿಮ ವಿಪತ್ತುಗಳಿಂದ ತುಂಬಿದ್ದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.
10 : ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;
11 : ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.
12 : ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.
13 : ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.
14 : ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.
ಕೀರ್ತನೆ 145: 10-11, 12-14, 19. ಶ್ಲೋಕ.1
ಪ್ರಭೂ, ಭಕ್ತ ಸಮೂಹವು ಪ್ರಸಿದ್ಧಪಡಿಸುವುದು
ನಿನ್ನ ರಾಜ್ಯದ ಮಹತ್ವವನು
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು / ಎಲ್ಲರ ಕೋರಿಕೆಗಳನು ಈಡೇರಿಸುವವನು
18 : ಪ್ರಭುವಿನ ಮಾರ್ಗ ಧರ್ಮಸಮ್ಮತ / ಆತನ ಕಾರ್ಯವೆಲ್ಲ ಪುನೀತ
ಯೊವಾನ್ನ 1.45-51
45 : ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು.
46 : ಅದಕ್ಕೆ ನತಾನಿಯೇಲನು, “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?” ಎಂದು ಕೇಳಲು, “ಬಂದು ನೀನೇ ನೋಡು,” ಎಂದು ಫಿಲಿಪ್ಪನು ಉತ್ತರಕೊಟ್ಟನು.
47 : ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.
48 : ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರ ಕೊಟ್ಟರು.
49 : ಅದಕ್ಕೆ ನತಾನಿಯೇಲನು “ಗುರುದೇವಾ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.
50 : ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ,” ಎಂದು ನುಡಿದರು.
51 ತಮ್ಮ ಮಾತನ್ನು ಮುಂದುವರಿಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.
ಸವಿದು ನೋಡುವುದಕ್ಕಿಂತ ಮುಂಚೆಯೇ ಹಣ್ಣು ಚೆನ್ನಾಗಿಲ್ಲವೆನ್ನುವುದು ಸರಿಯಾದ ತೀರ್ಮಾನವಲ್ಲ. ಸವಿದು ನೋಡಿದಾಗ ಮಾತ್ರ ಆ ಹಣ್ಣು ಹೇಗಿದೆ ಎಂದು ತಿಳಿಯುವುದು. ಅನೇಕ ಸಂದರ್ಬಗಳಲ್ಲಿ ಕೇಳಿ ತೀರ್ಮಾನಿಸಿದ್ದ ಅನೇಕರು ಅನುಭವಿಸಿ ತಮ್ಮ ತೀರ್ಮಾನವನ್ನು ಬದಲಿಸಿರುವ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ನತಾಲಿಯೇಲನು ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೇ? ಎಂದು ಪ್ರಶ್ನಿಸುತ್ತಾನೆ ಆದರೆ ಯೇಸುವನ್ನು ಕಂಡು ಅವರ ಅನುಭವ ಪಡೆದ ನಂತರ ಅವನು ‘ಗುರುದೇವಾ’ ಎಂದು ನುಡಿಯುವುದು ಮಾತ್ರವಲ್ಲ ಅದೇ ನಜರೇತ್ ಯೇಸುವಿನ ಶಿಶ್ಯನಾಗುತ್ತಾನೆ. ಯೇಸುವಿನ ಅನುಭವವಿಲ್ಲದೆ ನಾವು ಗುರುದೇವಾ ಎಂದು ಕರೆಯಲು ಸಾದ್ಯವಿಲ್ಲ. ಯೇಸುವನ್ನು ಅನುಭವಿಸಲು ಬಲಿಪೂಜೆಯಲ್ಲಿ ನಾವು ಭಾಗಿಯಾಗಬೇಕು, ಅವರ ಶರೀರ-ರಕ್ತ ಸ್ವೀಕರಿಸಬೇಕು. ಆಗ ಯೇಸುವಿನ ಅನುಭವ ನಮಗೂ ಸಿಗುತ್ತದೆ, ಯೇಸುವೇ ಗುರುದೇವ ಎಂದು ನಾವೆಲ್ಲರೂ ಅರಿಯಲು ಸಾಧ್ಯವಾಗುತ್ತದೆ. ಬರ್ತಲೋಮಿಯೊ ಅನ್ನು ನೋಡಿ ಯೇಸು ಕಪಟತನವಿಲ್ಲದ ವ್ಯಕ್ತಿ ಎಂದು ಗುರುತಿಸಿದಂತೆ ನಾವೂ ಕೂಡ ಕಪಟತವನ್ನು ತೊರೆದು ಯೇಸುವಿನ ಅನುಭವಕ್ಕಾಗಿ ಹಾತೊರೆಯೋಣ.
No comments:
Post a Comment