Friday, 3 July 2020

ಆಗಸ್ಟ್ 25, 2020 ಮಂಗಳವಾರ

ಆಗಸ್ಟ್ 25, 2020 ಮಂಗಳವಾರ                        [ಹಸಿರು]
ಸಂತ ಲೂಯಿ (ಐಚ್ಛಿಕ ಸ್ಮರಣೆ)
ಸಂತ ಜೋಸೆಫ್ ಕಲಸಾಂಝ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 2 ಥೆಸಲೋನಿಯರಿಗೆ 2.1-3, 14-17
ಕೀರ್ತನೆ 96: 10, 11-12, 13. ಶ್ಲೋಕ.13
ಪ್ರಭು ಧರೆಗೆ ನ್ಯಾಯ ತೀರಿಸಲು 
ಬಂದೇ ಬರುವನು ಖರೆಯಾಗಿ
ಶುಭಸಂದೇಶ: ಮತ್ತಾಯ 23.23-26

2 ಥೆಸಲೋನಿಯರಿಗೆ 2.1-3, 14-17 1 : ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ; 2 : ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ. 3 : ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ಧವಾದ ‘ಅಂತಿಮ ಪ್ರತಿಭಟನೆ’ ಉಂಟಾಗುವುದು. ‘ಪಾಪ ಪುರುಷನಾದ’ ಅಧರ್ಮಿ ತಲೆ ಎತ್ತಿಕೊಳ್ಳುವನು. 14 : ಹೀಗೆ ಉದ್ಧಾರಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ. 15 : ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿ ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ಬೋಧಿಸಿರುವ ಸತ್ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ. 16 : ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ.

ಕೀರ್ತನೆ 96: 10, 11-12, 13. ಶ್ಲೋಕ.13 ಪ್ರಭು ಧರೆಗೆ ನ್ಯಾಯ ತೀರಿಸಲು ಬಂದೇ ಬರುವನು ಖರೆಯಾಗಿ 10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ | ಕದಲದ ಸ್ಥಿರತೆಯನು ಇತ್ತಿಹನು ಧರೆಗೆ | ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ || 11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು | ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು || 12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು | ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು || 13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ | ಜಗಕು, ಜನತೆಗು ತೀರ್ಪಿಸುವನು ನೀತಿನಿಯಮಾನುಸಾರವಾಗಿ ||

ಮತ್ತಾಯ 23.23-26 23 : ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆ ದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು. 24 : ಅಂಧ ನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ. ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ. 25 : ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳ್ಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿಹೋಗಿದೆ. 26 : ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.


ಧಾರ್ಮಿಕರೆಂದು ಹೇಳಿಕೊಳ್ಳುವ ಅನೇಕ ಜನರು ನಿಜವಾಗಿಯೂ ಧಾರ್ಮಿಕರಾಗಿರುವುದಿಲ್ಲ. ಅವರು, ತಾವು ಧಾರ್ಮಿಕರೆಂದು ಹೇಳಿಕೊಳ್ಳುವರಾದರೂ ಅವರು ನಿಜವಾದ ಧಾರ್ಮಿಕ ಜೀವನ ನಡೆಸಿರುವುದಿಲ್ಲ. ಧರ್ಮವು ಪ್ರೇಮದ ಕೆನೆಯಾಗಿದೆ. ಧರ್ಮವು ಧಾರ್ಮಿಕ ವಿಧಿಗಳನ್ನು ಆಚರಿಸುವುದರಲ್ಲಿ ಇಲ್ಲ, ಧರ್ಮದಂತೆ ನಡೆದುಕೊಳ್ಳುವುದರಲ್ಲಿ ಇದೇ. ಸತ್ಯ, ನ್ಯಾಯವನ್ನು ಎತ್ತಿ ಹಿಡಿಯುವುದೇ ಧರ್ಮ. ಬರಿ ವಿಧಿವಿಧಾನಗಳ ಆಚರಣೆಯು ಧರ್ಮವೆನಿಸದು. ಯಾಜಕಕಾಂಡ 27:30, ಧ.ಕಾಂಡ 14:22, ಪ್ರಕಾರ ಆದಾಯದಲ್ಲಿ ಸ್ವಲ್ಪ ಪಾಲನ್ನು ದೇವಾಲಯಕ್ಕೆ ನೀಡಬೇಕೆಂದು ಆಜ್ಞೆ ಇತ್ತು. ಯಾಜಕರ ಮತ್ತು ಬಡವರ ಪೋಷಣೆಗಾಗಿ ಆದಾಯದ ಸ್ವಲ್ಪ ಪಾಲನ್ನು ನೀಡುವ ಪದ್ಧತಿ ಇತ್ತು (ಯಾ. ಕಾಂಡ 18:20, ಧ. ಕಾಂಡ 14:28). ಧಶಾಂಮಾಂಶದ ಪದ್ಧತಿಯಿಂದ ಬಡವರ ಶೋಷಣೆ ಆಗುತ್ತಿತ್ತು. ದಯೆ, ಕನಿಕರತೆ, ಪ್ರಾಮಾಣೀಕತೆ ಧಾರ್ಮಿಕ ವಿಧಿಗಳಿಗಿಂತ ಮುಖ್ಯ ಎಂದು ಯೇಸು ತಿಳಿಸುತ್ತಾರೆ.


No comments:

Post a Comment