ಜುಲೈ 28, 2020 ಮಂಗಳವಾರ [ಹಸಿರು]
ಸಂತ ಅಲ್ಫೋನ್ಸಾ [ಸಂನ್ಯಾಸಿನಿ] (ಸ್ಮರಣೆ)
ಮೊದಲ ವಾಚನ: ಯೆರೆಮೀಯ 14.17-22
ಕೀರ್ತನೆ 79:8-9, 11, 13. ಶ್ಲೋಕ.9
ದೇವಾ, ನೆರವಾಗು ನಿನ್ನ ನಾಮ ಮಹಿಮೆಯ ನಿಮಿತ್ತ
ಶುಭಸಂದೇಶ: ಮತ್ತಾಯ 13.36-43
==================
ಯೆರೆಮೀಯ 14.17-22
17 : “ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು – ‘ರಾತ್ರಿಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ.
18 : ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.”
19 : “ಸ್ವಾವಿೂ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೊ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ.
20 : ಹೇ ಸರ್ವೇಶ್ವರಾ, ಒಪ್ಪಿಕೊಂಡಿದ್ದೇವೆ ನಮ್ಮ ದುಷ್ಟತನವನ್ನು ನಮ್ಮ ಪೂರ್ವಜರು ಎಸಗಿದ ದುರಾಚಾರವನ್ನು ನಾವು ಮಾಡಿದ ಪಾಪ ನಿಮಗೆ ವಿರುದ್ಧವೆಂಬುದನ್ನು.
21 : ನಿಮ್ಮ ನಾಮವನ್ನು ಮುಂದಿಟ್ಟು, ನಮಗೆ ಅವಮಾನ ಮಾಡಬೇಡಿ ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ ನಮ್ಮೊಡನೆ ಮಾಡಿದ ಒಡಂಬಡಿಕೆಯನ್ನು ನೆನೆಯಿರಿ. ಅದನ್ನು ಭಂಗಪಡಿಸಬೇಡಿ.
22 : ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.
==================
ಕೀರ್ತನೆ 79:8-9, 11, 13. ಶ್ಲೋಕ.9
ದೇವಾ, ನೆರವಾಗು ನಿನ್ನ ನಾಮ ಮಹಿಮೆಯ ನಿಮಿತ್ತ
8 : ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ / ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ //
9 : ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ / ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ //
11 : ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು / ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು //
12 : ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ / ಎರಗಲಿ ಏಳ್ಮಡಿ ದಂಡನೆ ಅವರೆದೆಯ ಮೇಲೆ //
13 : ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ / ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ / ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ //
====================
ಮತ್ತಾಯ 13.36-43
36 : ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, "ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ," ಎಂದು ಕೇಳಿಕೊಂಡರು.
37 : ಅದಕ್ಕೆ ಯೇಸು, "ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು;
38 : ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು.
39 : ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ, ಕೊಯ್ಲುಗಾರರೇ ದೇವದೂತರು.
40 : ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು.
41 : ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ
42 : ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು.
43 : ಸದ್ದರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!
=======================
"ಸರ್ವೇಶ್ವರ ಕರುಣಾಮಯನು, ದಯಾಳು ದೇವರು, ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿ ಪಾತ್ರನು, ನಂಬಿಗಸ್ಥನು" ಎಂದು ಮೋಶೆಗೆ ವಿಷದವಾಗುತ್ತದೆ. ಅದೇ ಸತ್ಯವನ್ನು ಇಂದಿನ ಶುಭಸಂದೇಶದಲ್ಲೂ ಕಾಣುತ್ತೇವೆ. ಬೆಳೆಯ ನಡುವೆ ಕಳೆ (ಒಳ್ಳೆಯವರ ನಡುವೆ ಕೆಟ್ಟತನ) ಇರುವಾಗ ಸರ್ವೇಶವರ ತಟ್ಟನೆ ಸಿಟ್ಟುಗೊಳ್ಳದೆ ಪ್ರೀತಿಯಿಂದ ಕಾಪಾಡುತ್ತಾರೆ. ದೇವರು ನಾಶ ಮಾಡುವವರಲ್ಲ. ನಾವು ಮೂಲತಃ ಒಳ್ಳೆಯವರು. ಕೆಲವೊಮ್ಮೆ ಕೆಟ್ಟತನಕ್ಕೆ ದಾಸರಾಗಬಹುದು, ಪಾಪ ಮಾಡಬಹುದು. ಆದರೆ ಒಳ್ಳೆಯವರಾದ ನಾವು ಅಂತಹ ಕತ್ತಲೆಯಿಂದ ಹೊರಬಂದು ವಿನಾಶವನ್ನು ದೂರ ಮಾಡಬೇಕು. ನಾವು ಬದುಕಬೇಕು, ಬಾಳಬೇಕು ಎಂಬುವುದೇ ದೇವರ ಇಚ್ಛೆ.
================
@ದನಿ ಮಾಧ್ಯಮ ಮನೆ
No comments:
Post a Comment