ಆಗಸ್ಟ್ 4, 2020 ಮಂಗಳವಾರ [ಬಿಳಿ]
ಸಂತ ಜಾನ್ ಮರಿಯಾ ವಿಯಾನ್ನಿ (ಸ್ಮರಣೆ) [ಯಾಜಕ]
ಮೊದಲ ವಾಚನ: ಯೆರೆಮೀಯ 30.1-2, 12-15, 18-22
ಕೀರ್ತನೆ 102:15-17, 18-20, 21-22 ಶ್ಲೋಕ.16
ಪ್ರಭು ಪುನರುದ್ಧರಿಸುವನು ಸಿಯೋನನ್ನು
ಶುಭಸಂದೇಶ ಮತ್ತಾಯ 14.22-36 [ಅಥವಾ] ಮತ್ತಾಯ 15.1-2, 10-14
ಯೆರೆಮೀಯ 30.1-2, 12-15, 18-22
1 : ಸರ್ವೇಶ್ವರಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು:
2 : “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ – ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥ ರೂಪವಾಗಿ ಬರೆ.
12 : ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು.
13 : ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ.
14 : ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.
15 : ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ.
18 : ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು.
19 : ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು.
20 : ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು.
21 : ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ.
22 : ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು.
ಕೀರ್ತನೆ 102:15-17, 18-20, 21-22 ಶ್ಲೋಕ.16
ಪ್ರಭು ಪುನರುದ್ಧರಿಸುವನು ಸಿಯೋನನ್ನು
16 : ಏಕೆನೆ ಪುನರುದ್ಧರಿಸುವನು ಸಿಯೋನನು / ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು //
17 : ತಿರಸ್ಕರಿಸನಾತ ನಿರ್ಗತಿಕರ ಮೊರೆಯನು / ನೆರವೇರಿಸದೆ ಬಿಡನು ಅವರ ಕೋರಿಕೆಯನು //
18 : ಮುಂದಣ ಸಂತತಿಗಿದು ಶಾಸನವಾಗಿರಲಿ / ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ //
19 : ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ / ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ //
20 : ಆಲಿಸಿದಾತನು ಬಂಧಿತರ ಗೋಳಾಟವನು / ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು //
21 : ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು / ಜನಾಂಗಗಳೂ ರಾಜ್ಯಗಳೂ ಕೂಡಿರಲು /
22 : ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ / ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ //
23 : ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ ಬಲವನು / ಕಡಿಮೆಮಾಡಿಬಿಟ್ಟಿಹನು ಆತ ನನ್ನ ಆಯುಷ್ಯವನು //
ಮತ್ತಾಯ 14.22-36 [ಅಥವಾ] ಮತ್ತಾಯ 15.1-2, 10-14
1 : ಬಳಿಕ ಜೆರುಸಲೇಮಿನಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯ ಬಳಿಗೆ ಬಂದು,
2 : "ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಸಂಪ್ರದಾಯಗಳನ್ನು ಮೀರುವುದೇಕೆ? ಅವರು ಊಟಕ್ಕೆ ಮುಂಚೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟ ಮಾಡುವುದೇಕೆ?" ಎಂದು ಕೇಳಿದರು.ಒಬ್ಬಂಟಿಗರಾಗಿದ್ದರು.
10 : ಅನಂತರ ಯೇಸುಸ್ವಾಮಿ ಜನರನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ಕೇಳಿ ಚೆನ್ನಾಗಿ ತಿಳಿದುಕೊಳ್ಳಿರಿ:
11 : ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ; ಬಾಯೊಳಗಿನಿಂದ ಹೊರಕ್ಕೆ ಬರುವಂಥದ್ದೇ ಮನುಷ್ಯನನ್ನು ಕಲುಷಿತಗೊಳಿಸುತ್ತದೆ," ಎಂದು ಹೇಳಿದರು.
12 : ಆಗ ಶಿಷ್ಯರು ಹತ್ತಿರಕ್ಕೆ ಬಂದು, "ನಿಮ್ಮ ಮಾತನ್ನು ಕೇಳಿ ಫರಿಸಾಯರು ಬಹಳ ಬೇಸರಗೊಂಡಿದ್ದಾರೆಂದು ನಿಮಗೆ ತಿಳಿಯಿತೇ?" ಎಂದರು.
13 : ಅದಕ್ಕೆ ಯೇಸು, "ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.
14 : ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ," ಎಂದರು.
ಶುಭ ಸಂದೇಶದಲ್ಲಿ ಪ್ರಭುವು ಎರಡು ಅಂಶಗಳನ್ನು ಮನದಟ್ಟುಮಾಡುತ್ತಾರೆ; ೧. ಯಾವುದೇ ಆಹಾರವು ನಮ್ಮನ್ನು ಕಲುಸಿತಗೊಲಿಸುವುದಿಲ್ಲ ಅಥವಾ ದೇವರಿಗೆ ಅತಿ ಪ್ರಿಯರಾಗಿಸುವುದಿಲ್ಲ. ಅಂತೆಯೇ ಕೈಕಾಲು ತೊಳೆಯುವುದು ನಮ್ಮ ದೈಹಿಕ ಶುದ್ಧತೆಗಾಗಿ, ನಮ್ಮ ದೇಹ ತೊಳೆಯುವುದರಿಂದ ಆತ್ಮ ತೊಳೆದಂತೆ ಆಗದು, ಅಥವಾ ನಮ್ಮ ನಡವಳಿಕೆ ಬದಲಾಗದು.
೨. ಮಾನವ ಹೃದಯವು ಕಲುಹಿಸಿತಗೊಳ್ಳುವ ಮೂಲವಾಗಿದೆ ಹೃದಯದಿಂದ ಹೊರಗೆ ಬರುವುದು, ಮನುಷ್ಯರನ್ನು ಕೆಟ್ಟವನಾಗಿಸುತ್ತದೆ. ದೇವರು ಈ ಕಲುಹಿಸಿತದ ಬಗ್ಗೆ ಗಮನಹರಿಸಲು ಕರೆ ನೀಡುತ್ತಾರೆ. ಏಕೆಂದರೆ ದೇವರು ನಮ್ಮ ನಡವಳಿಗೆ ಅಂದರೆ ಭಾವನೆಗಳು, ಯೋಚನೆ ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಾರೆ. ನಮ್ಮ ಅಂತರಂಗ ಶುದ್ಧವಾಗಿದ್ದರೆ ಬಹಿರಂಗವಾಗಿಯು ನಾವು ಶುದ್ಧರಿರುತ್ತೇವೆಂಬ ಸತ್ಯವನ್ನು ಕ್ರಿಸ್ತರು ನಮಗೆ ಮನವರಿಕೆ ಮಾಡುತ್ತಾರೆ. ದೇವರ ಕರುಣಾನೋಟ ಪಾಪಿಗಳಾದ ನಮ್ಮ ಮೇಲೆ ಹರಿದು, ನಮ್ಮ ಬಾಳನ್ನು ಬಂಗಾರಗೊಳಿಸಲಿ, ದೇವರಿಗೆ ಸಾಕ್ಷಿಗಳನ್ನಾಗಿ ಮಾಡಲಿ ಎಂದು ಪ್ರಾರ್ಥಿಸೋಣ.
-----------------------------
No comments:
Post a Comment