Friday, 3 July 2020

ಸೆಪ್ಟೆಂಬರ್ 4, 2020 ಶುಕ್ರವಾರ

ಸೆಪ್ಟೆಂಬರ್ 4, 2020 ಶುಕ್ರವಾರ                        [ಹಸಿರು]
ವಿಠರ್ಬೊದ ಸಂತ ರೊಸ್ಟ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ 4.1-5
ಕೀರ್ತನೆ 37:3-4, 5-6, 27-28, 39-40. ಶ್ಲೋಕ.39
ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಶುಭಸಂದೇಶ: ಲೂಕ 5.33-39


1 ಕೊರಿಂಥಿಯರಿಗೆ 4.1-5 1 : ನಾವು ಕ್ರಿಸ್ತಯೇಸುವಿನ ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಜನರು ನಮ್ಮನ್ನು ಪರಿಗಣಿಸಲಿ. 2 : ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ. 3 : ನನ್ನ ವಿಷಯದಲ್ಲಿ ಹೇಳುವುದಾದರೆ, ನಿಮ್ಮಿಂದಾಗಲಿ, ಮಾನವ ನಿಯಮಿತ ನ್ಯಾಯಾಲಯದಿಂದಾಗಲಿ, ನನ್ನ ವಿಚಾರಣೆಯಾಗುವುದರ ಬಗ್ಗೆ ನನಗೆ ಕಿಂಚಿತ್ತೂ ಚಿಂತೆಯಿಲ್ಲ. ನನಗೆ ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ. 4 : ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ. 5 : ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು; ಅಂತರಂಗದ ಯೋಜನೆಗಳನ್ನು ಬಹಿರಂಗ ಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು.


ಕೀರ್ತನೆ 37:3-4, 5-6, 27-28, 39-40. ಶ್ಲೋಕ.39 ಸಜ್ಜನರ ಜೀವೋದ್ಧಾರ ಪ್ರಭುವಿನಿಂದ 3 : ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು / ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು // 4 : ಪ್ರಭುವಿನಿಂದಲೆ ಬಯಸು ನಿನ್ನಾನಂದವನು / ನೆರವೇರಿಸುವನಾತ ನಿನ್ನ ಮನದಾಸೆಯನು // 5 : ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು / ಭರವಸೆಯಿಂದಿರು, ಆತನದನು ಸಾಗಿಸುವನು // 6 : ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ / ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ // 27 : ಕೆಟ್ಟದನು ಬಿಡು, ಒಳ್ಳೆಯದನು ಮಾಡು / ಸಿರಿನಾಡಿನಲಿ ಚಿರಕಾಲ ಬಾಳು // 28 : ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು / ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು // 39 : ಸಜ್ಜನರ ಜೀವೋದ್ಧಾರ ಪ್ರಭುವಿನಿಂದ / ಆಪತ್ಕಾಲದಲಿ ಆಶ್ರಯ ಆತನಿಂದ // 40 : ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು / ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು //


ಲೂಕ 5.33-39 33 : “ಯೊವಾನ್ನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ಅದರಂತೆಯೇ, ಫರಿಸಾಯರ ಶಿಷ್ಯರೂ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ,” ಎಂದು ಕೆಲವರು ಮೂದಲಿಸಿದರು. 34 : ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ? 35 : ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು. ಆ ದಿನಗಳು ಬಂದಾಗ ಅವರು ಉಪವಾಸಮಾಡುವರು,” ಎಂದು ಉತ್ತರಕೊಟ್ಟರು. 36 : ಮತ್ತೆ ಅವರಿಗೆ ಯೇಸು ಈ ಸಾಮತಿಯನ್ನು ಹೇಳಿದರು: “ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ. ಹಾಗೆ ಮಾಡಿದ್ದೇ ಆದರೆ ಹೊಸದೂ ಹರುಕಲಾಗಿ, ಹಳೆಯದೂ ಹೊಸ ತೇಪೆಗೆ ಹೊಂದಿಕೆಯಾಗದೆ ಹೋಗುತ್ತದೆ. 37 : ಅಂತೆಯೇ, ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಹೊಸ ಮದ್ಯವು ಬುದ್ದಲಿಗಳನ್ನು ಬಿರಿಯುತ್ತದೆ; ಮದ್ಯ ಚೆಲ್ಲಿ ಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. 38 : ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು. 39 : ಹಳೇ ಮದ್ಯ ಕುಡಿದವನಿಗೆ ಹೊಸದು ರುಚಿಸುವುದಿಲ್ಲ. ಅವನು ಹಳೆಯದೇ ಶ್ರೇಷ್ಠವೆನ್ನುತ್ತಾನೆ,” ಎಂದರು.


ಇಂದಿನ ಶುಭ ಸಂದೇಶದಲ್ಲಿ ಫರಿಸಾಯರು ಉಪವಾಸದ ಬಗ್ಗೆ ತಮ್ಮ ನಿಲುವು ಏನು ಎಂದು ಪ್ರಶ್ನಿಸಿದರು. ಅವರು ಅವರ ಶಿಷ್ಯರು ಮತ್ತು ಯೊವಾನ್ನನ ಶಿಷ್ಯರು ಮಾಡುತ್ತಿದ್ದ ಉಪವಾಸವನ್ನು ಯೇಸುವಿನ ಶಿಷ್ಯರು ಮಾಡುತ್ತಿದ್ದ ಉಪವಾಸದೊಂದಿಗೆ ಹೋಲಿಸಿದರು. ಆಗ ಯೇಸು ಅವರು ಉಪವಾಸ ಮಾಡುತಾ ಕಾಯುತ್ತಿದ್ದ ಮೆಸ್ಸಿಯ ಯೇಸುವೇ ಆಗಿದ್ದಾರೆ. ಅವರೇ ಜನರ ಮಧ್ಯದಲ್ಲಿ ಇದ್ದಾರೆ. ಅದುದರಿಂದ ಉಪವಾಸ ಮಾಡುವ ಅಗತ್ಯವಿಲ್ಲ. ಜನರು ಕಾಯುತ್ತಿದ್ದ ಮದುವಣಿಗ ಯೇಸುವೇ ಎಂದು ಫರಿಸಾಯರಿಗೆ ತಿಳಸಲು ಪ್ರಯತ್ನಿಸುತ್ತಾರೆ. ಬುದ್ದಲಿ ಮತ್ತು ಮಧ್ಯದ ಸಾಮಾತಿಯನ್ನು ಹೇಳುವುದರ ಮೂಲಕ ಹೊಸ ದೃಷ್ಟಿಕೋನವನ್ನು, ನವೀನ ಆಲೋಚನೆಗಳನ್ನು ಹೊಂದಬೇಕೆಂದು ತಿಳಿಸಿದರು. ಹೊಸ ಬೋಧನೆಯ ಹೊಸ ಮಧ್ಯವನ್ನು ನಾವು ಪವಿತ್ರಾತ್ಮರಿಂದ ನವೀಕರಿಸಲ್ಪಟ್ಟ ನಮ್ಮ ಹೊಸ ಮನಸ್ಸಿನಲ್ಲಿ ತುಂಬಿಸಬೇಕೆಂದು ಬಯಸುತ್ತಾರೆ. ಯೇಸುವಿನ ಬೋಧನೆಯನ್ನು ತಿಳಿದು ಸೃಜನಾತ್ಮಕವಾಗಿ ಅನ್ವಯಿಸಿ ಹೊಸ ಜೀವನ ಜೀವಿಸುವುದು ಕ್ರೈಸ್ತರ ಕರ್ತವ್ಯವಾಗಿದೆ.

No comments:

Post a Comment