ಆಗಸ್ಟ್ 5, 2020 ಬುಧವಾರ [ಹಸಿರು/ಬಿಳಿ]
ಮಾತೆ ಮರಿಯಮ್ಮನವರ ಮಹಾದೇವಾಲಯದ ಅಭಿಷೇಕ
ಧನ್ಯ ಫ್ರೆಡ್ರಿಕ್ ಜಾನ್ಸೂನ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆರೆಮೀಯ 31.1-7
ಕೀರ್ತನೆ ಯೆರೆಮೀಯ 31:10, 11-12, 13. ಶ್ಲೋಕ.10
ಕುರಿಮಂದೆಯನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು
ಶುಭಸಂದೇಶಮತ್ತಾಯ 15.21-28
ಯೆರೆಮೀಯ 31.1-7
1 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
2 : ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ
3 : ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.
4 : ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳು ಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.
5 : ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾ ತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು.
6 : ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆನೀಡುವರು.”
7 : ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರ ಮಾಡಿರಿ. ‘ಸರ್ವೇಶ್ವರ ಅಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.
ಕೀರ್ತನೆ ಯೆರೆಮೀಯ 31:10, 11-12, 13. ಶ್ಲೋಕ.10
ಕುರಿಮಂದೆಯನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು
10 : ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ: ಇಸ್ರಯೇಲರನ್ನು ಚದುರಿಸಿದಾತ ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ.
11 : ಸರ್ವೇಶ್ವರ ಯಕೋಬರ ವಿಮೋಚಕ ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ.
12 : ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ.
13 : ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.
ಮತ್ತಾಯ 15.21-28
21 : ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು.
22 : ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. "ಸ್ವಾವಿೂ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ," ಎಂದು ಕೂಗಿಕೊಂಡಳು.
23 : ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, "ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ," ಎಂದು ಕೇಳಿಕೊಂಡರು.
24 : ಆಗ ಯೇಸು, "ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ," ಎಂದರು.
25 : ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, "ಸ್ವಾವಿೂ, ಸಹಾಯ ಮಾಡಿ," ಎಂದು ಯಾಚಿಸಿದಳು.
26 : ಅದಕ್ಕೆ ಯೇಸು, "ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ," ಎಂದರು.
27 : ಆಗ ಆಕೆ, "ಅದು ನಿಜ ಸ್ವಾವಿೂ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?" ಎಂದು ಮರುತ್ತರ ಕೊಟ್ಟಳು.
28 : ಆಗ ಯೇಸು, "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ," ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.
ಧಾರ್ಮಿಕ ನಿಬಂಧನೆ ಮತ್ತು ಚೌಕಟ್ಟನ್ನು ನೈಜ ಪ್ರೀತಿ ಮತ್ತು ವಿಶ್ವಾಸ ಹೇಗೆ ಗೆಲ್ಲುತ್ತದೆ ಎಂಬುದನ್ನು ಇಂದಿನ ಶುಭಸಂದೇಶದಲ್ಲಿ ನೋಡಬಹುದು. ನಾವು ಕಷ್ಟದಲ್ಲಿದ್ದಾಗ, ಕಾಯಿಲೆಯಿಂದ ನರಳುತ್ತಿದ್ದಾಗ, ತೊಂದರೆಯಲ್ಲಿ ಸಿಲುಕಿದಾಗ ನಮ್ಮಲ್ಲಿಗೆ ಬರುವವರು "ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ" ಎನ್ನುವುದು ಸಹಜ. ಇವೆಲ್ಲ ಸಮಾಧಾನಕ್ಕಾಗಿ ಬರುವ ಕಾಳಜಿಯ ಮಾತುಗಳು. ಈ ಕಾಳಜಿಯ ಮಾತುಗಳು ಬರೇ ಮಾತಾಗಿರದೆ ಕ್ರಿಯೆಯಲ್ಲೂ ವ್ಯಕ್ತವಾಗಬೇಕು. ಶಿಷ್ಯರ ಪ್ರಾರ್ಥನೆ ಇದನ್ನೂ ಮೀರಿದ್ದು, ಅವರು ಕ್ರಿಸ್ತನ ಬಳಿ ನಿಜವಾದ ಮಧ್ಯಸ್ತಿಕೆ ವಹಿಸಿದರು. ಮಹಿಳೆಯ ಬೇಡಿಕೆಗೆ ಯೇಸು ಕಿವಿಗೊಡುವಂತೆ ಮಾಡಿದರು. ಹೀಗೆ ನಾವು ಸಹ ಬಡಬಗ್ಗರಿಗೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ಮಧ್ಯಸ್ತಿಕೆ ವಹಿಸಬೇಕು. ಇತರರ ಒಳಿತಿಗಾಗಿ ನಮ್ಮ ಸ್ವಾಭಿಮಾನ ತೊರೆದು
ಮುನ್ನುಗ್ಗಲು ಪ್ರಯತ್ನಿಸೋಣ.
No comments:
Post a Comment