Friday, 3 July 2020

ಸೆಪ್ಟೆಂಬರ್ 5, 2020 ಶನಿವಾರ

ಸೆಪ್ಟೆಂಬರ್ 5, 2020 ಶನಿವಾರ, ಶಿಕ್ಷಕರ ದಿನ                [ಹಸಿರು]
ಕೊಲ್ಕತ್ತಾದ ಸಂತ ತೆರೇಸಾ [ಸನ್ಯಾಸಿನಿ] (ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ4.6-15
ಕೀರ್ತನೆ 145: 18-19, 20-21. ಶ್ಲೋಕ.19
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ
ಶುಭಸಂದೇಶ: ಲೂಕ 6.1-5


1 ಕೊರಿಂಥಿಯರಿಗೆ 4.6-15 9 : ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ. 10 : ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ದಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು! 11 : ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ. 12 : ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ. 13 : ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು! 14 : ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು. 15 : ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ.

ಕೀರ್ತನೆ 145: 18-19, 20-21. ಶ್ಲೋಕ.19 ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ 17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು / ಎಲ್ಲರ ಕೋರಿಕೆಗಳನು ಈಡೇರಿಸುವವನು 18 : ಪ್ರಭುವಿನ ಮಾರ್ಗ ಧರ್ಮಸಮ್ಮತ / ಆತನ ಕಾರ್ಯವೆಲ್ಲ ಪುನೀತ 19 : ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ / ಯಥಾರ್ಥವಾಗಿ ಆತನನು ಅರಸುವವರಿಗೆ 20 : ಹೆದರಿ ನಡೆಯುವವರ ಇಷ್ಟವನು ಈಡೇರಿಸುವನು / ಅವರ ಮೊರೆಯನು ಕೇಳಿ ಅವರನು ರಕ್ಷಿಸುವನು 21 : ಸಲಹುವನು ತನ್ನನು ಪ್ರೀತಿಸುವವರೆಲ್ಲರನು / ನಾಶಮಾಡುವನು ದುರ್ಮಾರ್ಗಿಗಳೆಲ್ಲರನು

ಲೂಕ 6.1-5 1 : ಒಂದು ಸಬ್ಬತ್ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾರಂಭಿಸಿದರು. 2 : ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. 3 : ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? 4 : ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? 5 : ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು. ಸತ್ಕಾರ್ಯಕ್ಕೆ ಕಾಲಭೇದವಿಲ್ಲ


ಇಂದು ಶಿಕ್ಷಕರ ದಿನಾಚಾರಣೆ, ಶಿಕ್ಷಕರು ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ತನು, ಮನ, ಧನ ಎಲ್ಲವನ್ನು ಅರ್ಪಿಸಿ, ನಿಸ್ವಾರ್ಥತೆಯಿಂದ ದುಡಿಯುತ್ತಾರೆ. ಅತ್ಯಂತ ಶ್ರೇಷ್ಟ ಶಿಕ್ಷಕರಾದ ಯೇಸು ಪ್ರಭು ಅವರ ಶ್ರಮ - ಸೇವೆಯನ್ನು ಹರಸಿ, ಆರೋಗ್ಯ ಭಾಗ್ಯವನ್ನಿತ್ತು ಕಾಪಾಡಲಿ ಎಂದು ಎಲ್ಲಾ ಶಿಕ್ಷಕರಿಗಾಗಿ ಪ್ರಾರ್ಥಿಸೋಣ. ಎಲ್ಲಕ್ಕಿಂತ ಮಿಗಿಲು ಮನುಷ್ಯನ ಜೀವ. ಅದನ್ನು ಕಾಪಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಸಮಾಜದಲ್ಲಿ ಅಥವಾ ಧರ್ಮದಲ್ಲಿ ಇರುವ ಕಾನೂನು ನಿಯಮಗಳು ಮನುಷ್ಯನ ಒಳತಿಗಾಗಿ ಇರಬೇಕು ಹೊರತು, ಆತನ ಅಳಿವಿಗೆ ಕಾರಣವಾಗಬಾರದು. ಫರಿಸಾಯರು ಯೇಸುವಿನ ಶಿಷ್ಯರು ಸಬ್ಬತ್ ದಿನದಲ್ಲಿ ಗೋಧಿಯ ತೆನೆಗಳನ್ನು ತಿನ್ನುವುದನ್ನು ಖಂಡಿಸುತ್ತಾರೆ. ಏಕೆಂದರೆ ಸಬ್ಬತ್ ದಿನ ದೇವರ ದಿನ ಯಾರು ಏನ್ನನ್ನು ತಿನ್ನಬಾರದೂ ಎಂಬುವುದು ಯೆಹೂದ್ಯರ ಧಾರ್ಮಿಕ ನಿಯಮ. ಆಗ ಯೇಸು ದಾವೀದ ಅರಸ ಮತ್ತು ಆತನ ಸಂಗಡಿಗರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ತಿಂದೂ ನಿರ್ದೋಷಿಗಳಾಗಿದ್ದಾರೆ. ಪ್ರಭುಯೇಸುವೇ ಸಬ್ಬತ್ತಿಗೆ ಒಡೆಯ – ಅವರು ಕರುಣಾ ಮೂರ್ತಿ. ಅವರಿಗೆ ಬೇಕಾಗಿರುವುದು ಮನುಷ್ಯನ ಜೀವದ ಸಂರಕ್ಷಣೆ ಎಂಬುವುದನ್ನು ತಿಳಿಯಪಡಿಸುತ್ತಾರೆ.


No comments:

Post a Comment