ಸೆಪ್ಟೆಂಬರ್ 6, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 23ನೇ ಭಾನುವಾರ
ಮೊದಲ ವಾಚನ: ಯೆಜೆಕಿಯೇಲ 33.7-9
ಕೀರ್ತನೆ 95: 1-2, 6-7, 8-9. ಶ್ಲೋಕ.8
ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ
ಎರಡನೇ ವಾಚನ: ರೋಮನರಿಗೆ 13.8-10
ಶುಭಸಂದೇಶ: ಮತ್ತಾಯ 18.15-20
ಯೆಜೆಕಿಯೇಲ 33.7-9
7 : “ನರಪುತ್ರನೇ, ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಕಾವಲುಗಾರನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು.
8 : ನಾನು ದುಷ್ಟನಿಗೆ – ‘ದುಷ್ಟನೇ, ನೀನು ಸತ್ತೇಸಾಯುವೆ’ ಎಂದು ನುಡಿಯುವಾಗ ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಪಡಿಸದೆ ಹೋದರೆ ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವುದು; ಅವನ ಮರಣಕ್ಕೆ ಹೊಣೆಯಾದ ನಿನಗೆ ಮುಯ್ಯಿತೀರಿಸುವೆನು.
9 : .ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಿಸಿದರೂ ಇವನು ಅದನ್ನು ಬಿಡದೆ ಹೋದರೆ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.
ಕೀರ್ತನೆ 95: 1-2, 6-7, 8-9. ಶ್ಲೋಕ.8
ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
3 : ಏಕೆಂದರೆ ಪ್ರಭು ದೇವಾಧಿದೇವನು | ದೇವರುಗಳಲೆಲ್ಲ ರಾಜಾಧಿರಾಜನು ||
4 : ಆತನ ಕೈಯಲ್ಲಿವೆ ಬುವಿಯಂತರಾಳಗಳು | ಆತನವೇ ಪರ್ವತಗಳಾ ತುತ್ತತುದಿಗಳು ||
5 : ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ | ಒಣನೆಲವು ಆತನದೆ-ಅದ ರೂಪಿಸಿದವ ಆತನೆ ||
6 : ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ | ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ ||
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ | ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ ||
8 : ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ | ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ ||
9 : ನೋಡಿದರಾದರೂ ನನ್ನ ಮಹತ್ಕಾರ್ಯಗಳನು | ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು ||
ರೋಮನರಿಗೆ 13.8-10
8 : ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು.
9 : “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ.
10 : ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.
ಮತ್ತಾಯ 18.15-20
15 : “ನಿನ್ನ ಸೋದರನು ನಿನಗೆ ಅಪರಾಧ ಮಾಡಿದರೆ, ನೀನು ಹೋಗಿ ನೀವಿಬ್ಬರೇ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು.
16 : ಒಂದು ವೇಳೆ, ಅವನು ನಿನಗೆ ಕಿವಿಗೊಡದೆ ಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯರ್ಥವಾಗಲಿ.
17 : ಅವರಿಗೂ ಅವನು ಕಿವಿಗೊಡದೆ ಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆ ಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕøತನೆಂದು ಪರಿಗಣಿಸು.
18 : “ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು ಎಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಸಭಾಪ್ರಾರ್ಥನೆಯ ಪ್ರಭಾವ
19 : “ಇನ್ನೂ ನಾನು ನಿಮಗೆ ಹೇಳುವುದು ಏನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ.
20 : ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.” ಎಂದರು.
No comments:
Post a Comment