Friday, 3 July 2020

ಸೆಪ್ಟೆಂಬರ್ 7, 2020 ಸೋಮವಾರ

ಸೆಪ್ಟೆಂಬರ್ 7, 2020 ಸೋಮವಾರ                        [ಹಸಿರು]
ಮೊದಲ ವಾಚನ: 1 ಕೊರಿಂಥಿಯರಿಗೆ 5.1-8
ಕೀರ್ತನೆ 5: 5-7 , 12, ಶ್ಲೋಕ.8
ಸತ್ಯ ಪಥದಲಿ ನಡೆಸೆನ್ನನು ದೇವಾ.
ಶುಭಸಂದೇಶ: ಲೂಕ 6.6-11


1 ಕೊರಿಂಥಿಯರಿಗೆ 5.1-8
1 : ಅನ್ಯಜನರಿಗೆ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ.
2 : ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ?
3 : ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನು ಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ.
4 : ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ.
5 : ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು.
6 : ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ.
7 : ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದು ಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ.
8 : ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸ ರೊಟ್ಟಿಯನ್ನು ತಿಂದು ಪಾಸ್ಕ ಹಬ್ಬವನ್ನು ಆಚರಿಸೋಣ.


ಕೀರ್ತನೆ 5: 5-7 , 12, ಶ್ಲೋಕ.8
ಸತ್ಯ ಪಥದಲಿ ನಡೆಸೆನ್ನನು ದೇವಾ.
5 : ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು / ನಿನಗೆ ವೈರಿಗಳಾಗುವರು ಅಧರ್ಮಿಗಳು /
6 : ಹುಸಿನುಡಿವವರನು ಪ್ರಭು, ನೀ ನಾಶಮಾಡುವೆ / ಹಿಂಸಕರನು, ವಂಚಕರನು ನೀ ಹೇಸಿಬಿಡುವೆ //
7 : ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ / ಭಕುತಿಯಿಂದ ಅಡ್ಡ ಬೀಳುವೆ ನಿನ್ನ ಪವಿತ್ರಾಲಯದತ್ತ //
8 : ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು / ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು //
9 : ಅವರ ಬಾಯಲಿ ಹುಸಿನುಡಿ, ಹೃದಯವಾದರೊ ವಿನಾಶದ ಶರಧಿ / ಅವರ ಜಿಹ್ವೆಯಲಿ ಮುಖಸ್ತುತಿ, ಕಂಠವಾದರೋ ತೆರೆದ ಸಮಾಧಿ //
10 : ಅವರಪರಾಧಿಗಳೆಂದು ಹೇ ದೇವಾ, ನಿರ್ಣಯಿಸಿಬಿಡು / ಅವರ ಮೋಸದ ಪಾಶದಲೇ ಅವರನು ಸಿಕ್ಕಿಸಿಬಿಡು / ಅವರನೇಕ ಪಾಪಗಳಿಗಾಗಿ ಅವರನು ದಬ್ಬಿಬಿಡು / ಅವರು ನಿನ್ನ ವಿರುದ್ಧ ದಂಗೆಯೆದ್ದವರು, ನೋಡು //
11 : ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ / ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ //
12 : ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು / ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು //

 ಲೂಕ 6.6-11
6 : ಮತ್ತೊಂದು ಸಬ್ಬತ್ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿ ಹೋಗಿದ್ದ ಒಬ್ಬಾತ ಇದ್ದನು.
7 : ಅವನನ್ನು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು.
8 : ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, “ಬಂದು ಇಲ್ಲಿ ನಿಲ್ಲು,” ಎಂದರು. ಅವನು ಎದ್ದು ಬಂದು ನಿಂತನು.
9 : ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು.
10 : ಅನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು.
11 : ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು. ಹನ್ನೆರಡು ಮಂದಿ ಪ್ರೇಷಿತರ ಆಯ್ಕೆ 


ಪ್ರಭುವಿನ ದಿನವನ್ನು ಪವಿತ್ರವಾಗಿಡು ಮತ್ತು ದೇವರ ದಿನವನ್ನು ಪವಿತ್ರವಾಗಿ ಆಚರಿಸು ಎಂಬ ಕಟ್ಟಳೆಯ ಹಿಂದಿನ ಉದ್ದೇಶ ಏನು? ಧಾರ್ಮಿಕ ಮುಖಂಡರು ಈ ವಿಷಯದ ಕುರಿತು ಯೇಸುವಿನೊಡನೆ ತರ್ಕಕಿಳಿಯುವುದನ್ನು ಇಂದಿನ ಶುಭಸಂದೇಶದಲ್ಲಿ ಕಾಣುತ್ತೇವೆ. ಸೃಷ್ಟಿ ಹಾಗೂ ರಕ್ಷಣೆಯಲ್ಲಿನ ದೇವರ ಮಹಾತ್ಕಾರ್ಯಗಳನ್ನು ನೆನೆದು ದೇವರನ್ನು ಆರಾಧಿಸಲೆಂದು ಸಬ್ಬತ್ ದಿನದಂದು ವಿಶ್ರಾಂತಿಯನ್ನು ಪಡೆಯಬೇಕೆಂದು ತಿಳಿಸಲಾಗಿತ್ತು. ದೇವರ ಆರಾಧನೆಗೆ ಮೀಸಲಿಟ್ಟ ದಿನವೇ ಸಬ್ಬತ್ ದಿನ ಆದ್ದರಿಂದ ಸಬ್ಬತ್ ದಿನದಲ್ಲಿ ಯಾವುದೇ ಕೆಲಸ ಮಾಡುವುದು ನಿಶೆದ್ಧ. ಆದ್ದರಿಂದ ಯೇಸು ಬತ್ತಿದ ಕೈಯುಳ್ಳವನನ್ನು ಗುಣಪಡಿಸಿದ್ದೆ ಆದರೆ ಯೇಸುವಿನ ವಿರುದ್ಧ ಅಪಾದನೆ ಮಾಡಲು ಕಾಯುತ್ತಾರೆ. ಅವರ ಆಲೋಚನೆಗಳನ್ನು ತಿಳಿದು ಯೇಸು ಸಬ್ಬತ್ ದಿನದಲ್ಲಿ ಯಾವುದು ಧರ್ಮ? ಒಬ್ಬನ ಪ್ರಾಣವನ್ನು ಉಳಿಸುವುದೋ? ಅಥವಾ ಅಳಿಸುವುದು? ಎಂದು ಕೇಳಿ ಕೈ ಬತ್ತಿದವನ ಕೈಯನ್ನು ಸ್ವಷ್ಟಪಡಿಸುತ್ತಾರೆ. ನಾವು ಪ್ರಭುವಿನ ದಿನವಾದ ಭಾನುವಾರವನ್ನು ಸಬ್ಬತ್ತ್ ದಿನವನ್ನಾಗಿ ಆಚರಿಸುತ್ತೇವೆ. ನಾವು ದೇವರನ್ನು ಪ್ರೀತಿಸಿದೇ ಆದರೆ ಪ್ರತಿದಿನವು ನೆರೆಹೊರೆಯವರನ್ನು ಪ್ರೀತಿಸಬೇಕು

No comments:

Post a Comment