Wednesday, 1 July 2020

ಜುಲೈ 7, 2020 ಮಂಗಳವಾರ

ಜುಲೈ 7, 2020 ಮಂಗಳವಾರ                        [ಹಸಿರು]
ಮೊದಲ ವಾಚನ: ಹೊಶೇ 8.4-7, 11-13
ಕೀರ್ತನೆ 115:3-4, 5-6, 7-8, 9-10. ಶ್ಲೋಕ.9
ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ
ಶುಭಸಂದೇಶ: ಮತ್ತಾಯ 9.32-38

ಹೊಶೇ 8.4-7, 11-13
4 : “ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿ ಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ.
5 : ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?
6 : ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚು ನೂರಾಗುವನು.
7 : ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯ ಜನರು ಅದನ್ನು ಕಬಳಿಸಿಬಿಡುವರು.
11 : “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ.
12 : ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ.
13 : ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು.

ಕೀರ್ತನೆ 115:3-4, 5-6, 7-8, 9-10. ಶ್ಲೋಕ.9
ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ
3 : ಪರದಲ್ಲಿಹನು ನಮ್ಮ ದೇವನು / ಗೈವನು ತನಗಿಷ್ಟ ಬಂದುದನು //
4 : ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ / ಅವು ಮಾನವನ ಕೈ ಕೆಲಸಗಳು ಮಾತ್ರ //
5 : ಬಾಯಿದ್ದರೂ ಅವು ಮಾತಾಡುವುದಿಲ್ಲ / ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ //
6 : ಕಿವಿಯಿದ್ದರೂ ಅವು ಕೇಳುವುದಿಲ್ಲ / ಮೂಗಿದ್ದರೂ ಅವು ಮೂಸುವುದಿಲ್ಲ / ಗಂಟಲೊಳು ಅವಕೆ ಶಬ್ದವೇ ಇಲ್ಲ //
7 : ಕೈಯಿದ್ದರೂ ಅವು ಮುಟ್ಟುವುದಿಲ್ಲ / ಕಾಲಿದ್ದರೂ ಅವು ನಡೆಯುವುದಿಲ್ಲ //
8 : ಅವುಗಳಂತಾಗುವರು ಅವುಗಳನು ಮಾಡುವವರು / ಅವುಗಳಂತಾಗುವರು ಅವುಗಳನು ನಂಬುವವರು //
9 : ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
10 : ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
11 : ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತ ಜನರಿಗೆ / ಆತನೇ ಸಹಾಯಕ, ರಕ್ಷಾಕವಚ ಅವರಿಗೆ //

ಮತ್ತಾಯ 9.32-38
32 : ಕುರುಡರು ಹೊರಟುಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು.
33 : ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. "ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ!" ಎಂದುಕೊಂಡರು.
34 : ಆದರೆ ಫರಿಸಾಯರು, "ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು.
35 : ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು.
36 : ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು.
37 : ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು.
38 : ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು.

ಇಂದಿನ ಶುಭಸಂದೇಶದಲ್ಲಿ ಕೆಲವು ವಿಶ್ವಾಸಿಗಳು ದೆವ್ವಹಿಡಿದಿದ್ದ ಒಬ್ಬ ಮೂಕನನ್ನು ಕರೆತಂದು ಕ್ರಿಸ್ತನ ಅದ್ಭುತ ಕಾರ್ಯಗಳಿಗೆ ನೈಜ ಸಾಕ್ಷಿಗಳಾಗುತ್ತಾರೆ. “ಜನರು ಕುರುಬನಿಲ್ಲದ ಕುರಿಗಳಂತೆ” ತೊಳಲಿ, ಬಳಲಾಡುತ್ತಿರುವುದನ್ನು ನೋಡಿದ ಯೇಸುವಿನ ಮನ ಕರಗುತ್ತದೆ. ಯೇಸು ತನ್ನ ದೀನ ಮತ್ತು ಕರುಣೆಯ ಹೃದಯದಿಂದ ಜನರಿಂದ ಅಧ್ಯಾತ್ಮಿಕ, ದೈಹೀಕ ಮತ್ತು ಸಮಾಜಿಕ ರೋಗರುಜಿನಗಳನ್ನು ಹೋಗಲಾಡಿಸಿ ಉತ್ತಮ ಕುರಿಗಾಹಿಯಾಗಿ ಸೇವೆಸಲ್ಲಿಸುತ್ತಾರೆ. ಇಂಥಹ ಪ್ರೀತಿಮಯ ಸೇವೆ ನಮ್ಮ ಕುಟುಂಬ ಮತ್ತು ಸಮಾಜದ ಕಲ್ಯಾಣಕ್ಕೆ ಒಳ್ಳೆ ಮಾದರಿಯ ಜೀವನ ನಡೆಸಲು ಪ್ರೇರಣೆ ನೀಡಲೆಂದು ಪ್ರಾರ್ಥಿಸೋಣ


No comments:

Post a Comment