Monday, 23 November 2020

ಡಿಸೆಂಬರ್ 1, 2020 ಮಂಗಳವಾರ

ಡಿಸೆಂಬರ್ 1, 2020 ಮಂಗಳವಾರ [ನೇರಳೆ]
ಮೊದಲ ವಾಚನ: ಯೆಶಾಯ 11.1-10
ಕೀರ್ತನೆ 72:1-2, 7-8, 12-13, 17. ಶ್ಲೋಕ.7
ಬೆಳೆಯಲಿ ಆತನ ಪಾಲನೆಯಲಿ ನ್ಯಾಯ ನೀತಿ
ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
ಶುಭಸಂದೇಶ: ಲೂಕ 10.21-24
==================
ಮೊದಲನೇ ವಾಚನ

ಯೆಶಾಯ 11.1-10

1 : ಜೆಸ್ಸೆಯನ ಬುಡದಿಂದ ಒಡೆಯುವು ದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.
2 : ನೆಲಸುವುದಾತನ ಮೇಲೆ ಜ್ಞಾನವಿವೇಕ ದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ
3 : ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ.
4 : ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.
5 : ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.
6 : ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ.
7 : ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.
8 : ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನಬಿಲದ ಒಳಗೆ.
9 : ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.
10 : ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.

================

ಕೀರ್ತನೆ 
ಕೀರ್ತನೆ 72:1-2, 7-8, 12-13, 17. ಶ್ಲೋಕ.7
ಶ್ಲೋಕ: ಬೆಳೆಯಲಿ ಆತನ 
ಪಾಲನೆಯಲಿ ನ್ಯಾಯ ನೀತಿ|
ಬೆಳಗಲಿ ಚಂದ್ರನಂತೆ ಸದಾ 
ಸಂಪೂರ್ಣ ಶಾಂತಿ||

1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ / 
ಕಲಿಸು ನಿನ್ನ ನೀತಿಯನು ರಾಜಕುವರನಿಗೆ //

2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ / 
ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ //

7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ /
ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ //

8 : ಸಾಗರದಿಂದ ಸಾಗರದವರೆಗಿರಲಿ 
ಆತನ ಆಧಿಪತ್ಯ / ಮಹಾ ನದಿಯಿಂದ ಬುವಿ 
ಎಲ್ಲೆಯವರೆಗಿರಲಿ ಆತನ ಪ್ರಭುತ್ವ //

12 : ಏಕೆನೆ ಕಾಪಾಡುವನಾತ
ಮೊರೆಯಿಡುವ ಬಡವರನು / 
ಉದ್ಧರಿಸುವನಾತ ದಿಕ್ಕಿಲ್ಲದ
ದೀನದಲಿತರನು //

13 : ದೀನದರಿದ್ರರಿಗೆ ದಯೆಯ ತೋರುವನು / 
ದಲಿತರ ಪ್ರಾಣವನು ಕಾಪಾಡುವನು //

17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ / 
ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ / 
ಆತನಾಶೀರ್ವಾದ ಕೋರಲಿ ಸರ್ವರು ತಮಗೆ / 
ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ //
===================
ಶುಭಸಂದೇಶ

ಲೂಕ 10.21-24

21 : ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.
22 : ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು.
23 : ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು.
24 : ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು. 
===================
ಚಿಂತನೆ
ಪ್ರಭುವಿನ ಶುಭಸಂದೇಶ ಮಾನವನಿಗೆ ನಿರಂತರ ಬಿಡುಗಡೆಯನ್ನು ತರುವಂತಹದ್ದು. ಅದು ಅನ್ಯಾಯ ಅಧರ್ಮವನ್ನು ಕಿತ್ತೊಗೆಯುವಂತಹದ್ದು. ಅದು ಸಮಾನತೆಯನ್ನು ಸಾರುತ್ತದೆ, ಸೌಹಾರ್ದ ಮತ್ತು ಶಾಂತಿಯ ಬದುಕನ್ನು ನೀಡುತ್ತದೆ ಎಂದು ಯೆಶಾಯ ಪ್ರವಾದಿ ಇಂದಿನ ವಾಚನದಲ್ಲಿ ಚಿತ್ರಿಸಿದ್ದಾರೆ . ಬಾಳುವುವು ತೋಳ ಕುರಿಗಳು ಒಂದಿಗೇ, ಮಲಗುವುವು ಮೇಕೆ ಚಿರತೆಗಳು ಜೊತೆಗೆ... ಎಂದು ಯೆಶಾಯ ಪ್ರವಾದಿ ದೈವ ಸಾಮ್ರಾಜ್ಯದ ಚಿತ್ರದಲ್ಲಿ ಬಣ್ಣಿಸಿದ್ದಾನೆ .

ಇತ್ತ ಪ್ರಭು ಯೇಸು ಹರ್ಷಾನಂದ ಭರಿತರಾಗಿದ್ದಾರೆ ಏಕೆಂದರೆ ಸ್ವರ್ಗ ಸಾಮ್ರಾಜ್ಯದ ಪರಮ ಸತ್ಯಗಳನ್ನು ದೀನರೆಲ್ಲರಿಗೂ ಸಾರಲಾಗುತ್ತ ದೆ. ಅದು ಸುಜ್ಞಾನಿಗಳಿಗೆ ಸೀಮಿತವಲ್ಲ. ಬದಲಾಗಿ ದೀನ ಮನಸ್ಕರಿಗೂ ಹಾಗೂ ಸರ್ವಜನತೆಗೂ ಲಭಿಸುತ್ತಿರುವುದು ಸಂತಸದ ವಿಷಯ . ಅದನ್ನು ಶ್ರು ತಪಡಿಸುತ್ತಿರುವ ತಂದೆ ದೇವರಿಗೆ ಪ್ರಭು ಯೇಸು ಆಭಾರಿಯಾಗಿ, ದೇವರಿಗೆ ತಮ್ಮ ಅಂತರಂಗದ ಸಂತೃಪ್ತಿಯನ್ನು ವ್ಯಕ್ತಪಡಿಸಿ ಪುಳಕಿತರಾಗುತ್ತಾರೆ ಹಾಗೂ ನಾವೆಲ್ಲರೂ ಶುಭಸಂದೇಶದಲ್ಲಿ ಭರವಸೆ ಇಡುವಂತೆ ಪ್ರೇರಿಸುತ್ತಾರೆ. 
===================

No comments:

Post a Comment