ಡಿಸೆಂಬರ್ 2, 2020 ಬುಧವಾರ [ನೇರಳೆ]
ಮೊದಲ ವಾಚನ: ಯೆಶಾಯ 25.6-10
ಕೀರ್ತನೆ 23:1-2, 3-4, 5-6 ಶ್ಲೋಕ.6
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ
ಶುಭಸಂದೇಶ: ಮತ್ತಾಯ 15.29-37
==================
ಮೊದಲನೇ ವಾಚನ
ಯೆಶಾಯ 25.6-10
6 : ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಠವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು.
7 : ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು.
8 : ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರಸ್ವಾಮಿಯೇ ಇಂತೆಂದು ನುಡಿದಿದ್ದಾರೆ.
9 : ಇದು ನೆರವೇರಿದಾಗ ಜನರು: “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು. ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!” ಎಂದು ಹೇಳಿಕೊಳ್ಳುವರು. ದೇವರು ನೀಡುವ ದಂಡನೆ
10 : ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.
===================
ಕೀರ್ತನೆ
ಕೀರ್ತನೆ 23:1-2, 3-4, 5-6 ಶ್ಲೋಕ.6
ಶ್ಲೋಕ: ದೇವಮಂದಿರದಲಿ ನಾ
ವಾಸಿಸುವೆ ಚಿರಕಾಲವೆಲ್ಲ||
1 : ಪ್ರಭು ಕುರಿಗಾಹಿಯಾಗಿರಲು ನನಗೆ /
ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು /
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ /
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ //
4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ /
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ /
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ //
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು /
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು //
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ /
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
===================
ಶುಭಸಂದೇಶ
ಮತ್ತಾಯ 15.29-37
29 : ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು.
30 : ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು.
31 : ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ಥರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು.
32 : ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, ""ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು,"" ಎಂದರು.
33 : ಅದಕ್ಕೆ ಶಿಷ್ಯರು, ""ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?"" ಎಂದು ಕೇಳಿದರು.
34 : ""ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?"" ಎಂದು ಯೇಸು ಕೇಳಿದರು. ""ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,"" ಎಂದು ಶಿಷ್ಯರು ಉತ್ತರಕೊಟ್ಟರು.
35 : ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು.
36 : ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರ ಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು.
37 : ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.
===================
ಚಿಂತನೆ
ಶಾರೀರಿಕ ಬೇನೆಗಳಿಗೆ ಬಿಡುಗಡೆ ಬಯಸಿ ಗುಂಪುಗುಂಪಾಗಿ ಬಂದ ಜನಸ್ತೋಮವನ್ನು ಯೇಸು ಗುಣಪಡಿಸಿದ ಸಂದರ್ಭ, ಹಸಿದವರಿಗೆ ಅನ್ನದಾತನಾಗುವ ಸನ್ನಿವೇಶ ಇಂದಿನ ಶುಭಸಂದೇಶದಲ್ಲಿವೆ. ಸಾಮಾನ್ಯವಾಗಿ ನಾವು ನಮ್ಮ ಹತ್ತು ಹಲವು ಗುಣಪಡಿಸಲಾಗದ ಕಾಯಿಲೆಗಳಿಗೆ, ನಮ್ಮಿಂದ ದೂರವಾಗದ ನಮ್ಮ ಅಸಹಾಯಕತೆಗಳಿಗೆ, ಚಿಕಿತ್ಸೆಗಳೂ ಕೈಕೊಟ್ಟ ವ್ಯಾಧಿಗಳಿಗೆ, ಉಳಿದ ಪರಿಹಾರವಾಗಿ ಕೊನೆಗೆ ಮೊರೆಹೋಗುವುದು ದೇವರನ್ನು. ನಮ್ಮ ಕೊನೆಯ ಪ್ರಯತ್ನ ದೇವರೆನಿಸಿದರೂ ಕೊನೆಗೂ ಕೈಹಿಡಿಯುವವನು ನಮ್ಮ ಶಿಲ್ಪಿಯೇ; ನಮಗೆ ಕೊನೆಯವನಾದರೂ ನಮ್ಮನ್ನೆಂದೂ ಕಡೆಗಾಣಿಸದ ದೊಡ್ಡವನಾತ.
ಯೇಸು ಕೇವಲ ಬೋಧಕನಾಗಿರಲಿಲ್ಲ, ಜನರ ಅಗತ್ಯಗಳನ್ನೂ, ಸೂಕ್ಷ್ಮತೆಗಳನ್ನೂಅರಿತು ಸ್ಪಂದಿಸುವ ಕರುಣಾಮಯಿಯಾಗಿದ್ದ. ಹಸಿದ ಹೊಟ್ಟೆಗಳ ಮುಂದೆ ಹೇಳುವುದು ಅದೆಷ್ಟೇ ಮೌಲ್ಯವುಳ್ಳದ್ದಾಗಿದ್ದರೂ, ಕೇಳುವ ಅವಧಾನವಿಲ್ಲದಿರುವುದು ಸಹಜ ಗುಣವೆಂದರಿತು, ತನ್ನನ್ನು ಹಿಂಬಾಲಿಸಿ ಬಂದವರನ್ನು ಬರಿಹೊಟ್ಟೆಯಲ್ಲಿ ಕಳುಹಿಸಲಿಚ್ಛಿಸದೆ, ಏನೂ ಇಲ್ಲದ ಸ್ಥಿತಿಯಿಂದ ಸಾವಿರಾರು ಜನರ ಹೊಟ್ಟೆ ತುಂಬಿಸಿ ಇನ್ನೂ ಮಿಗುವಷ್ಟು ಮಾಡಿದ ಆತನ ಔದಾರ್ಯ, ಎಲ್ಲವನ್ನೂ ಉಳ್ಳವರ ಜಿಪುಣತನವನ್ನು ನಾಚಿಸುತ್ತದೆ. ಪ್ರಭುವಿನಂತೆ ಬೇರೆಯವರ ಕಷ್ಟಗಳಿಗೆ ಕಿವಿಗೊಡುವಷ್ಟು ತಾಳ್ಮೆ, ಹೆಗಲಭಾರವನ್ನಿಳಿಸುವಷ್ಟು ಸಹಾನುಭೂತಿ ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರನಾವು ಪ್ರಯತ್ನಿಸಬೇಕು.
ಯೇಸು ಕರುಣಾಮಯಿ, ಜನರ ಕಷ್ಟ, ರೋಗ, ನೋವನ್ನು ಕಂಡಾಗ ಅವರ ಹೃದಯ ಮಿಡಿಯುತ್ತಿತ್ತು. ಜನರ ಮೇಲಿನ ಕರುಣೆ ಅವರಿಗೆ ಭೋಜನ ನೀಡುವುದರ ಮೂಲಕ ವ್ಯಕ್ತವಾಗುತ್ತದೆ. ಇಂದಿನ ಶುಭಸಂದೇಶದಲ್ಲಿ ಸಂಖ್ಯೆಯ ವ್ಯತ್ಯಾಸವನ್ನು ಹೊರತು ಪಡಿಸಿದರೆ ಬೇರೆ ಎಲ್ಲಾ ವಿಷಯಗಳು (ಮಾತ್ತಾಯ 14:13-21) 5000 ಜನರಿಗೆ ಭೋಜನವಿತ್ತು ತೃಪ್ತಿ ಪಡಿಸುವ ಅದ್ಭುತ್ತಕ್ಕೆ ಹೋಲಿಕೆಯಾಗಿವೆ. ಮತ್ತಾಯ 14 ರಲ್ಲಿ ಉಳಿದ ಚೊರುಗಳು 12 ಬುಟ್ಟಿಗಳಷ್ಟಾದರೆ ಇಲ್ಲಿ 7. ಯಹೊದ್ಯರಿಗೆ 7 ಪರಿಪೊರ್ಣ ಸಂಖ್ಯೆಯಾಗಿದೆ. ಅಂತೆಯೇ ಈ ವಚನದಲ್ಲಿ ಬಳಸಲಾಗಿರುವ ಸಂಖ್ಯೆ 7 ಕಾನನೀಯರ ದೇಶಗಳ ಸಂಖ್ಯೆಯಾಗಿದೆ (ಪೇ.ಕಾ. 6;5;21;8) ಇದರ ತಾತ್ಪರ್ಯ ಇಸ್ರಯೇಲರ ಪರಿಪೂರ್ಣತೆಯಲ್ಲಿ ಅನ್ಯಜನರನ್ನು ಸಹ ಸೇರಿಸಿಕೊಳ್ಳಲಾಗಿದೆ. ಹಸಿದವರನ್ನು ಯೇಸು ಸಂತುಷ್ಟರನ್ನಾಗಿಸುತ್ತಾರೆ ಹಾಗೂ ಎಲ್ಲರಿಗೂ ದಯೆತೋರುವವರು ಎಂಬುದನ್ನು ತಿಳಿಸಲಾಗಿದೆ
===================
No comments:
Post a Comment