ಡಿಸೆಂಬರ್ 12, 2020 ಶನಿವಾರ [ನೇರಳೆ]
ಗ್ವಾಡಲೂಪೆಯ ಮಾತೆ (ವಿಶೇಷ ಸ್ಮರಣೆ)
ಮೊದಲ ವಾಚನ: ಜಕರ್ಯ 2:10-12
ಜೂಡಿತ: 13:18-19
ನೀನೇ ನಮ್ಮ ಜನಾಂಗದ ಹಿರಿಮೆ
ಶುಭಸಂದೇಶ: ಲೂಕ: 1: 39-47
==================
ಮೊದಲನೇ ವಾಚನ
ಜಕರ್ಯ 2:10-12
10 : ಸರ್ವೇಶ್ವರ ಇಂತೆನ್ನುತ್ತಾರೆ: “ಎಲೈ ಸಿಯೋನ್ ನಗರವೇ ಸಂತೋಷಪಡು, ಜಯಕಾರ ಮಾಡು; ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು!”
11 : ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರ ಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು.
12 ಪವಿತ್ರ ಭೂಮಿಯಲ್ಲಿ ಜುದೇಯ ನಾಡನ್ನು ಸ್ವಾಮಿ ತಮ್ಮ ಸೊತ್ತಾಗಿ ಮಾಡಿಕೊಳ್ಳುವರು. ಜೆರುಸಲೇಮನ್ನು ತಮಗಾಗಿ ಮರಳಿ ಆರಿಸಿಕೊಳ್ಳುವರು.
3: ಸರ್ವೇಶ್ವರ ತಮ್ಮ ಪರಿಶುದ್ಧಾಲಯದಿಂದ ಹೊರಬರುತ್ತಿದ್ದಾರೆ. ನರಮಾನವರೇ, ಅವರ ಶ್ರೀಸನ್ನಿಧಿಯಲ್ಲಿ ನೀವೆಲ್ಲರು ಮೌನತಾಳಿರಿ.
===================
ಕೀರ್ತನೆ
ಜೂಡಿತ: 13:18-19
ನೀನೇ ನಮ್ಮ ಜನಾಂಗದ ಹಿರಿಮೆ
18 : ಆಗ ಉಜ್ಜೀಯನು ಜೂಡಿತಳನ್ನು ಉದ್ದೇಶಿಸಿ ಹೀಗೆಂದನು:
“ಭೂಲೋಕದ ಎಲ್ಲಾ ನಾರೀಮಣಿ ಗಳಿಗಿಂತ ಮಿಗಿಲಾಗಿ, ಮಗಳೇ,
ಆಶೀರ್ವದಿಸಲಿ ದೇವನು ನಿನ್ನನ್ನು ಉನ್ನತದಿಂದಲೇ.
ಸ್ತುತಿಸಲ್ಲಲಿ ಭೂಪರಗಳ ಸೃಷ್ಟಿಕರ್ತ ಸರ್ವೇಶ್ವರನಿಗೆ
ಶತ್ರುಗಳ ಮುಂದಾಳಿನ ಶಿರಚ್ಛೇದನ ಮಾಡಲು ದಾರಿತೋರಿದಾತನಿಗೆ !
19 : ಸದಾ ಸ್ಮರಿಸಿಕೊಳ್ಳುವರು ಜನರು ದೇವರ ಶಕ್ತಿ ಸಾಮಥ್ರ್ಯವನು
ಮರೆಯವು ಮಾನವ ಹೃನ್ಮನಗಳು ನೀ ತೋರಿದ ಶ್ರದ್ಧೆಯನು.
ಲಭಿಸಲಿ ನಿನಗೆ ಕೃಪಾವರಗಳು, ಸಲ್ಲಲಿ ಘನತೆಗೌರವಗಳು
ಇದನು ದಯಪಾಲಿಸಲಿ ಆ ದೇವನು. ನನ್ನ ನಾಡು ಶತ್ರುವಿಗೆ ಶರಣಾಗಲಿದ್ದ ಕಾಲಕ್ಕೆ
ಲೆಕ್ಕಿಸಲಿಲ್ಲ ನೀನು ನಿನ್ನ ಪ್ರಾಣ ರಕ್ಷಣೆಯನೇ!
ವಿನಾಶದಿಂದ ನಮ್ಮನು ಕಾಪಾಡಿದೆ ದೇವನ ಮುಂದೆ ಸನ್ಮಾರ್ಗದಲೆ ನಡೆದೆ.”
ಆಗ ಜನರು ‘ಆಮೆನ್’, ‘ಆಮೆನ್’ ಎಂದರು.
===================
ಶುಭಸಂದೇಶ
ಲೂಕ: 1: 39-47
39 : ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು.
40 : ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು.
41 : ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
42 : ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!
43 : ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ!
44 : ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!
45 : ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಮರಿಯಳ ಸ್ತುತಿಗೀತೆ
46 : ಆಗ ಹೀಗೆಂದು ಮರಿಯಳು ಹೊಗಳಿದಳು:
47 : “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !!
===================
ಚಿಂತನೆ
ಪ್ರಧಾನ ದೇವದೂತ ಗಾಬ್ರಿಯೇಲರ ಮೂಲಕ ದೇವರ ಸಂದೇಶವನ್ನು ಪಡೆದ ಮರಿಯಳು ಜುದೇಯ ನಾಡಿನಲ್ಲಿರುವ ಆರು ತಿಂಗಳ ಗರ್ಭಿಣಿ ಎಲಿಜಬೇತಳ ಭೇಟಿಗೆ ತೆರಳುತ್ತಾಳೆ. ಗರ್ಭಿಣಿ ಎಲಿಜಬೇತಳಿಗೆ ಸೇವೆ ಮಾಡಲು ಹೊರಡುತ್ತಾಳೆಯೇ ಹೊರತು ತಾನು ದೇವರ ಪುತ್ರನಿಗೆ ಜನ್ಮಕೊಡಲಿದ್ದೇನೆಂದು ಹೇಳಲು ಆಕೆ ಹೋಗಲಿಲ್ಲ. ಇಲ್ಲಿ ಮರಿಯಳ ದೀನತೆ ಮತ್ತು ಸೇವಾಮನೋಭಾವವನ್ನು ನಾವು ಕಾಣಬಹುದು. ಮರಿಯಳು ಎಲಿಜಬೇತಳಿಗೆ ಕೊಟ್ಟ ಭೇಟಿ ಅಪೂರ್ವವಾದುದು. ಅದೂ ಕೇವಲ ಇಬ್ಬರು ಸ್ತ್ರೀಯರ ಸಾಮಾನ್ಯ ಭೇಟಿಯಾಗಿರಲಿಲ್ಲ. ಅದು ಎಂದೂ ಮರೆಯಲಾಗದ ಹಾಗೂ ಇನ್ನೂ ಅದೃಶ್ಯವಾಗಿದ್ದ ಪುರುಷರಿಬ್ಬರ ಭೇಟಿಯೂ ಹೌದು, ಯೇಸುಕ್ರಿಸ್ತ ಮತ್ತು ಸ್ನಾಪಕ ಯೊವಾನ್ನರ ಪವಿತ್ರ ಭೇಟಿಯೂ ಹೌದು. ಮರಿಯಳ ದೀನತೆ ಮತ್ತು ಪರೋಪಕಾರ ನಮಗೆ ಮಾದರಿಯಾಗಲಿ. ಮರಿಯಳು ಕ್ರಿಸ್ತನನ್ನು ಹೊತ್ತುಕೊಂಡು ಹೋದಂತೆ ನಾವು ಕೂಡ ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ, ನಡೆ ನುಡಿಯಲ್ಲಿ ಕ್ರಿಸ್ತನನ್ನು ಹೊತ್ತುಕೊಂಡೇ ತಿರುಗೋಣ.
===================
No comments:
Post a Comment