Monday, 23 November 2020

ಡಿಸೆಂಬರ್ 13, 2020 ಭಾನುವಾರ

 ಡಿಸೆಂಬರ್ 13, 2020 ಭಾನುವಾರ                        [ನೇರಳೆ]
ಆಗಮನಕಾಲದ 3ನೇ ಭಾನುವಾರ (ವರ್ಷ ಬಿ)
ಮೊದಲ ವಾಚನ: ಯೆಶಾಯ 61.1-2, 10-11
ಕೀರ್ತನೆ ಲೂಕ 1:46-50, 53-54 ಶ್ಲೋಕ.ಯೆಶಾಯ 61:10 
ಹಿರಿಹಿಗ್ಗುವುದು, ನನ್ನ ದೇವನಲಿ ನನ್ನಾತ್ಮ
ಎರಡನೇ ವಾಚನ: 1 ಥೆಸಲೋನಿಯರಿಗೆ 5.16-24
ಶುಭಸಂದೇಶ: ಯೊವಾನ್ನ 1.6-8, 19-28
--------------------------------
ಸಂತ ಲೂಸಿ, ಕನ್ಯೆ ಮತ್ತು ರಕ್ತಸಾಕ್ಷಿ
==================

ಮೊದಲನೇ ವಾಚನ
ಯೆಶಾಯ 61.1-2, 10-11
1 : ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ, ಕಳುಹಿಸಿಹನು ಆತ: ದೀನದಲಿತರಿಗೆ ಶುಭಸಂದೇಶ ಬೋಧಿಸಲೆಂದೆ ಮನನೊಂದವರನು ಸಂತೈಸಿ ಗುಣಪಡಿಸಲೆಂದೆ ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೆ; ಸೆರೆಯಾಳುಗಳಿಗೆ ಬಂಧವಿಮುಕ್ತಿಯಾಗುವುದನು,
2 : ಸರ್ವೇಶ್ವರಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ.
10 : ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು.
11 : ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.
===================
ಕೀರ್ತನೆ 
ಕೀರ್ತನೆ ಲೂಕ 1:46-50, 53-54 ಶ್ಲೋಕ.ಯೆಶಾಯ 61:10 
ಹಿರಿಹಿಗ್ಗುವುದು, ನನ್ನ ದೇವನಲಿ ನನ್ನಾತ್ಮ
46 : ಆಗ ಹೀಗೆಂದು ಮರಿಯಳು ಹೊಗಳಿದಳು:
47 : “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ /
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ //
48 : ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ /
 ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ //
49 : ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ / 
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ //
50 : ಆತನಲ್ಲಿ ಭಯಭಕ್ತಿಯುಳ್ಳವರಿಗೆ / 
ಆತನ ಪ್ರೀತಿ ತಲತಲಾಂತರದವರೆಗೆ //
53 : ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ / 
ಹೊರದೂಡಿರುವನು ಸಿರಿವಂತರನು ಬರೀಗೈಯಲಿ //
54 : ನೆರವಾದನು ತನ್ನ ದಾಸ ಇಸ್ರಯೇಲನಿಗೆ / 
ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ //
===================
ಎರಡನೇ ವಾಚನ 
1 ಥೆಸಲೋನಿಯರಿಗೆ 5.16-24
16 : ಸದಾ ಹರ್ಷಚಿತ್ತರಾಗಿರಿ.
17 : ಎಡೆಬಿಡದೆ ಪ್ರಾರ್ಥಿಸಿರಿ.
18 : ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆ ಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ.
19 : ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ.
20 : ಪ್ರವಾದನೆಗಳನ್ನು ಅಲ್ಲಗಳೆಯದಿರಿ
21 : ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ,
22 : ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ.
23 : ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭುಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ.
24 : ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.
ಶುಭಸಂದೇಶ
ಯೊವಾನ್ನ 1.6-8, 19-28
6 : ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ.
7 : ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು.
8 : ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
19 : ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, “ನೀನು ಯಾರು?” ಎಂದು ಪ್ರಶ್ನಿಸಿದರು.
20 : ಯೊವಾನ್ನನು ಅದಕ್ಕೆ ಉತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ.
21 : ಹಾಗಾದರೆ, “ನೀನು ಎಲೀಯನೋ?” ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?” ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ,” ಎಂದು ಮರುನುಡಿದನು.
22 : “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ?” ಎಂದು ಅವರು ಮತ್ತೊಮ್ಮೆ ಕೇಳಿದರು.
23 : ಅದಕ್ಕೆ ಯೊವಾನ್ನನು, “ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,” ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.
24 : ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು,
25 : “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
26 : ಪ್ರತ್ಯುತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.
27 : ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು.
28 : ಯೊವಾನ್ನನು ಸ್ನಾನದೀಕ್ಷೆ ಕೊಡತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು. 
===================
ಚಿಂತನೆ
ಆಗಮನಕಾಲದ 3ನೇ ಭಾನುವಾರ
ಪೀಠಿಕೆ
======
ಇಂದಿನ ದೈವವಾಕ್ಯದ ವಿಧಿಯು ಕ್ರಿಸ್ತರ ಬರುವಿಕೆಯನ್ನು ಎದುರು ನೋಡುತ್ತಿರುವ ನಾವು ಹರ್ಷಿಸಿ, ಆನಂದಿಸಲು ಕರೆ ನೀಡುತ್ತದೆ. ಕ್ರಿಸ್ತರ ಆಗಮನವನ್ನು ವಿಶ್ವಾಸದಿಂದ, ಭರವಸೆಯಿಂದ ಮತ್ತು ಸಂತೋಷದಿಂದ ಬರಮಾಡಿಕೊಳ್ಳಲು ಧರ್ಮಸಭೆಯು ಅಹ್ವಾನಿಸುತ್ತದೆ. ಇಂದಿನ ಆರಾಧನಾ ವಿಧಿಯು ಕ್ರಿಸ್ತಜಯಂತಿಗೆ ನಾವು ಮಾಡುತ್ತಿರುವ ಭರದ ಸಿದ್ಧತೆಯಲ್ಲಿ ಹರ್ಷ ಮತ್ತು ಆನಂದ ಎಂದಿಗೂ ಮರೆಯಾಗದಿರಲೆಂದು ನಮ್ಮಗೆ ಸ್ನೇಹಪೂರ್ವ ಸಲಹೆಯನ್ನು ನೀಡುತ್ತದೆ.  
============================
ಮೊದಲ ವಾಚನ: ಯೆಶಾಯ 61.1-2, 10-11
============================
ಯೆಶಾಯ ಪ್ರವಾದಿಯು ತನ್ನ ಜೀವನದಲ್ಲಿ ಮತ್ತು ಸೇವಾ ಕಾರ್ಯದಲ್ಲಿ ದೇವರ ಪ್ರಸನ್ನತೆ ತುಂಬಿರುವುದನ್ನು ಅರಿತು ಹರ್ಷೋದ್ಗಾರ ಮಾಡುತ್ತಾನೆ. “ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ ಕಳುಹಿಸಿಹನು ಆತ... ...” ಸರ್ವೇಶ್ವರ ಸ್ವಾಮಿಯು ತನ್ನ ಜನರಿಗೆ ರಕ್ಷಣೆ ಮತ್ತು ಮುಕ್ತಿಯನ್ನು ತರುವ ಕಾಲ ಸನ್ನಿಹಿತವಾಗಿದೆ ಎಂದು ಆನಂದ ಗೀತೆಯನ್ನು ಹಾಡುತ್ತಾನೆ. ದೇವರ ವಾಗ್ಧಾನ ಎಂದಿಗೂ ಹುಸಿಯಾಗದು. ಅವರು ಎಂದೆಂದೂ ಪ್ರಾಮಾಣಿಕ ಮತ್ತು ನಿಷ್ಠಾವಂತ ದೇವರು ಎಂದು ದೃಢಪಡಿಸಿದ್ದಕ್ಕಾಗಿ ದೇವರ ಮಹಿಮೆಯನ್ನು ಹೊಗಳಿ ಸಾರುತ್ತಾನೆ. ಇದೇ ಭರವಸೆ, ವಿಶ್ವಾಸ ಮತ್ತು ಆನಂದದಿಂದ ನಮ್ಮ ಜೀವನವೂ ತುಂಬಿರಬೇಕು. ಮತ್ತು ಅದೇ ಆನಂದದಿಂದ ನಾವು ಬರಲಿರುವ ನಮ್ಮ ರಕ್ಷಕರನ್ನು ಎದುರುನೋಡಬೇಕು ಎಂಬ ಆಶಯವನ್ನು ಪ್ರವಾದಿ ವ್ಯಕ್ತಪಡಿಸುತ್ತಾನೆ. 
================================
ಎರಡನೇ ವಾಚನ: 1 ಥೆಸಲೋನಿಯರಿಗೆ 5.16-24
===============================
ಸಂತ ಪೌಲನು ಸಹ ಪ್ರವಾದಿ ಯೆಶಾಯನ ಭಾವನೆಗಳನ್ನು ಅನುಮೋದಿಸುತ್ತಾ, ನಾವು ಕ್ರಿಸ್ತಯೇಸುವಿನಲ್ಲಿ ನಮ್ಮ ಹರ್ಷವನ್ನು ವ್ಯಕ್ತಪಡಿಸುವಂತೆ ಕರೆನೀಡುತ್ತಾನೆ. ನಾವು ಸದಾಕಾಲವೂ ಪ್ರಾರ್ಥನೆಯಲ್ಲಿ ಮಗ್ನರಾಗಿದ್ದು, ಎಲ್ಲಾ ಸಂದರ್ಭಗಳಲ್ಲೂ ದೇವರ ಉಪಕಾರಸ್ಮರಣೆ ಮಾಡುತ್ತ ಇರಬೇಕೆಂದು ಆಹ್ವಾನಿಸುತ್ತಾನೆ. ನಮ್ಮ ಕೆಟ್ಟ ನಡತೆ, ದುಷ್ಟಜೀವನ, ಸ್ವಾರ್ಥದ ಬದುಕಿನಿಂದ ಪವಿತ್ರಾತ್ಮರನ್ನು ನಿಶ್ಕ್ರಿಯಗೊಳಿಸದೆ ಸುಕೃತ್ಯಗಳಿಂದ, ನಿರ್ಮಲ ಜೀವನ ಜೀವಿಸಿ ದೇವರಿಗೆ ಮೆಚ್ಚುವ ಬಾಳನ್ನು ಬಾಳುವಂತೆ ಉತ್ತೇಜಿಸುತ್ತಾನೆ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಾವು ಪರಿಶುದ್ಧರಾಗಿ ಅವರನ್ನು ಎದುರುಗೊಳ್ಳುವಂತಾಗಲೆಂದು ಆಶಿಸುತ್ತಾನೆ. 
==============================
ಶುಭಸಂದೇಶ: ಯೊವಾನ್ನ 1.6-8, 19-28
==============================
ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯಾವುದಾದರೊಂದು ಉದ್ದೇಶವನ್ನುಪೂರೈಸುವ ನಿಯೋಜನೆ ಇರುತ್ತದೆ.. ನಾವಾದರೊ ದೈವ ಯೋಜಿತ ಉದ್ದೇಶವನ್ನು ಅರಿತು ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ತೋರ್ಪಡಿಸಬೇಕು. ಕ್ರಿಸ್ತರ ಆಗಮನವನ್ನು ಮುನ್ನವೇ ತಿಳಿಸಲು ಮತ್ತು ಅವರಿಗಾಗಿ ಮಾರ್ಗವನ್ನು ಸಿದ್ಧಪಡಿಸಲೆಂದು ದೇವರೇ ಕಳುಹಿಸಿದವನು ಸ್ನಾಪಕ ಯೊವಾನ್ನ. ಅವನೇ ಜಗಜ್ಜ್ಯೋತಿಯಾದ ಕ್ರಿಸ್ತರನ್ನು ಜಗತ್ತಿಗೆ ಪರಿಚಯಿಸಿದನು ಮತ್ತು 
ಇದಕ್ಕಾಗಿ  ಲೋಕರಕ್ಷನಿಗೆ ಸಾಕ್ಷಿನೀಡುವುದರೊಂದಿಗೆ ಆ ಜ್ಯೋತಿಯನ್ನು ಎದುರುಗೊಳ್ಳಲು ತಕ್ಕದಾದ ಸಿದ್ಧತೆಯನ್ನು ಮಾಡುವಂತೆ ಜನರಿಗೆ ಕರೆನೀಡಿದನು. ತನ್ನ ಜೀವನದ ಉದ್ದೇಶವನ್ನು ಚೆನ್ನಾಗಿ ಅರಿತುಕೊಂಡಿದ್ದ ಸ್ನಾಪಕ ಯೊವಾನ್ನ ಯೊಹೂದ್ಯ ಅಧಿಕಾರಿಗಳೇ ಕಳುಹಿಸಿದ ಯಾಜಕರು ಮತ್ತು ಲೇವಿಯರು “ನೀನು ಯಾರು?” ಎಂದು ಪ್ರಶ್ನಿಸಿದಾಗ ಅಭಿಷಿಕ್ತನಾದ “ಲೋಕೋದ್ಧಾರಕ ನಾನಲ್ಲ” ಎಂದು ಸ್ಪಷ್ಟವಾಗಿ ಹೇಳಿ, ಜಗಜ್ಜ್ಯೋತಿಗೆ ಸಾಕ್ಷಿನೀಡಿದನು. ತನಗೆ ವಹಿಸಿದ್ದ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಪೂರೈಸಿದ ಯೊವಾನ್ನನು ಬರಲಿರುವ ಕ್ರಿಸ್ತರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ತಾನು ಯೋಗ್ಯನಲ್ಲವೆಂದು ತನ್ನ ವಿನಯ ಮತ್ತು ದೀನತೆಯನ್ನು ತೋರ್ಪಡಿಸಿದನು. 
ಕ್ರಿಸ್ತರ ಹಿಂಬಾಲಕರಾದ ನಾವು, ಕೇವಲ ಹೆಸರಿಗೆ ಮಾತ್ರ ಕ್ರೈಸ್ತರೆನಿಸಿಕೊಳ್ಳದೆ, ನಮ್ಮ ನಡೆ, ನುಡಿ ಮತ್ತು ಆಚಾರ ವಿಚಾರಗಳಲ್ಲಿಯೂ ನಾವು ಕ್ರಿಸ್ತರ ನೈಜ ಅನುಯಾಯಿಗಳೆಂದು ವ್ಯಕ್ತಪಡಿಸಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಇತರ ಧರ್ಮ, ಮತ, ಪಂಥಕ್ಕೆ ಸೇರಿದವರಿಗೆ ನಮ್ಮ ನಿಃಸ್ವಾರ್ಥ, ಪ್ರಾಮಾಣಿಕ, ಮೌಲ್ಯಾಧಾರಿತ ಮತ್ತು ಸೇವಾಜೀವನದ ಮೂಲಕ ಕ್ರಿಸ್ತರನ್ನು ಪರಿಚಯಿಸಬೇಕಾಗಿದೆ. ನಮ್ಮ ದೈನಂದಿನ ಜೀವನದಲ್ಲಿ  ನಮಗೆ ಎದುರಾಗುವ ಕಷ್ಟ ತೊಂದರೆ, ನೋವು ನಿರಾಶೆ, ಸಂಶಯ ಸಂದೇಹಗಳನ್ನು ವಿಶ್ವಾಸ, ಆತ್ಮಸ್ಥೈರ್ಯ ಮತ್ತು ದೀನತೆಯಿಂದ ಎರುರಿಸುವಾಗ ನಾವು ಶುಭಸಂದೇಶವನ್ನು ಸಾರುತ್ತೇವೆ. ಕ್ರಿಸ್ತರ ಆಗಮನಕ್ಕಾಗಿ ನಮ್ಮನ್ನೇ ಸಿದ್ಧಗೊಳಿಸುವಾಗ ನಮ್ಮ ಜೀವನದಲ್ಲಿ ಇತರರಿಗಾಗಿ ಪ್ರೀತಿ, ಮಮತೆ, ದಯೆ, ಕರುಣೆ, ಕ್ಷಮೆ, ಸಹನೆ, ಸಹಕಾರ, ವಿನಯಕ್ಕೆ ನೆಲೆಯಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕಾಗಿದೆ. 
ಕ್ರಿಸ್ತಜಯಂತಿಯಂದು ಪ್ರಭು ಕ್ರಿಸ್ತರು ತರುವ ಸಂತೋಷ ಮತ್ತು ಆನಂದ, ಕೇವಲ ಬಾಹ್ಯ, ವಸ್ತುಕೇಂದ್ರೀಕೃತ ಭಾವನೆ ಮತ್ತು ಇಂದ್ರಿಯಗಳನ್ನು ಹೊಂದಿಕೊಂಡ ವಿಷಯವಾಗದೆ, ಅದು ಅನಂತ, ಆಂತರಿಕ ಮತ್ತು ಆಧ್ಯಾತ್ಮಿಕ ಅನುಭವವಾಗಬೇಕು.. ಈ ಆನಂದವನ್ನು ನಮ್ಮದಾಗಿಸಲು, ನಿರಂತರ ಅನುಭವಿಸಲು ಮತ್ತು ಅದನ್ನು ಇತರರೊಡನೆ ಹಂಚಿಕೊಳ್ಳಲು ನಾವು ಯೊವಾನ್ನನಂತೆ ಬಾಹ್ಯ, ಲೌಕಿಕ ವಿಚಾರಗಳಿಗೆ ಸಿಲುಕಿಕೊಳ್ಳದೆ, ಇಂದ್ರಿಯ ವ್ಯಾಮೋಹದಿಂದ ಹೊರಬಂದು ನಮ್ಮ ಜೀವನದ ಉದ್ಧೇಶವನ್ನು ಪೂರೈಸುವುದರಲ್ಲಿ ನಿರತರಾಗಿರಬೇಕು. 
ನಮ್ಮ ಬದುಕಿನಲ್ಲಿರುವ ಅಜ್ಞಾನದ ಅಂಧಕಾರವನ್ನು, ಅಹಂನ ಕರಾಳತೆಯನ್ನು ಮತ್ತು ಅವಿಶ್ವಾಸದ ಕತ್ತಲೆಯನ್ನು ಕ್ರಿಸ್ತರೆಂಬ ನಿತ್ಯಜ್ಯೋತಿ ಹೊಗಲಾಡಿಸಲಿ.  ನಮ್ಮ ಜೀವನವನ್ನೇ ನಾವು ಕ್ರಿಸ್ತರ ಬೆಳಕಿನಿಂದ ನಿರಂತರವೂ ಅಲಂಕೃತಗೊಳಿಸಬೇಕಾಗಿದೆ. ಕ್ರಿಸ್ತರ ಬೆಳಕು ನಮ್ಮ ವೈಯಕ್ತಿಕ, ಕೌಟುಂಬಿಕ ಮತ್ತು ಕ್ರೈಸ್ತ ಸಮುದಾಯಕ್ಕೆ ಬೆಳಕಾಗಿದ್ದು, ನಮ್ಮ ಉತ್ತಮ ನಡತೆ, ನಿರ್ಮಲ ಮನಸ್ಸು, ದೈವಿಕ ಜ್ಞಾನ ಮತು ಭಕ್ತಿಯಿಂದ ಇತರರ ಬಾಳನ್ನು ಬೆಳಗಲೆಂದು ಪ್ರಾರ್ಥಿಸೋಣ.
=========================
ಚಿಂತನೆ – ಫಾ ಎಡ್ವರ್ಡ್ ಫಿಲಿಪ್ ಎಸ್ ಜೆ
=========================

No comments:

Post a Comment