ಅಕ್ಟೋಬರ್ 14, 2020 ಬುಧವಾರ [ಹಸಿರು]
ಸಂತ ಕಲ್ಲಿಸ್ತಸ್ I , ವಿಶ್ವಗುರು ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಗಲಾತ್ಯರಿಗೆ 5.18-25
ಕೀರ್ತನೆ 1: 1-2, 3, 4, 6. ಶ್ಲೋಕ.ಯೊವಾನ್ನ 8:12
ನಾನೇ ಜಗಜ್ಜ್ಯೋತಿಯು, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ
ಶುಭಸಂದೇಶ: ಲೂಕ 11.42-46
==================
ಮೊದಲನೇ ವಾಚನ
===============
ಗಲಾತ್ಯರಿಗೆ 5.18-25
18 : ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.
19 : ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ಧತೆ, ಕಾಮುಕತನ,
20 : ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡುಕತನ, ದುಂದೌತಣ - ಇತ್ಯಾದಿಗಳು.
21 : ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ.
22 : ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುದೆಂದರೆ: ಪ್ರೀತಿ, ಆನಂದ, ಶಾಂತಿಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಜನ್ಯ, ಸಂಯಮ - ಇಂಥವುಗಳೇ.
23 : ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ.
24 : ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು, ಅದರ ಆಶಾಪಾಶಗಳ ಹಾಗೂ ದುರಿಚ್ಛೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ
25 : ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.
===================
ಕೀರ್ತನೆ
ಕೀರ್ತನೆ 1: 1-2, 3, 4, 6. ಶ್ಲೋಕ.ಯೊವಾನ್ನ 8:12
ನಾನೇ ಜಗಜ್ಜ್ಯೋತಿಯು,
ನನ್ನನ್ನು ಹಿಂಬಾಲಿಸುವವನು
ಕತ್ತಲಲ್ಲಿ ನಡೆಯುವುದಿಲ್ಲ,
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ
1 : ದುರ್ಜನರ ಆಲೋಚನೆಯಂತೆ
ನಡೆಯದೆ /
ಪಾಪಾತ್ಮರ ಪಥದಲಿ
ಕಾಲೂರದೆ /
ಧರ್ಮನಿಂದಕರ ಕೂಟದಲಿ
ಕೂರದೆ //
2 : ಪ್ರಭುವಿನ ಧರ್ಮಶಾಸ್ತ್ರದಲಿ
ಹರ್ಷಗೊಳ್ಳುವವನಾರೋ - ಅವನೇ ಧನ್ಯನು/
ಹಗಲಿರುಳೆನ್ನದೆ ಅದನೆ
ಧ್ಯಾನಿಸು ತಿರುವವನಾರೋ -
ಅವನೇ ಧನ್ಯನು //
3 : ನದಿಯ ಬದಿಯಲೇ
ಬೆಳೆದಿಹ ಮರದಂತೆ /
ಸಕಾಲಕೆ ಫಲವೀವ
ವೃಕ್ಷದಂತೆ /
ಎಲೆಬಾಡದೆ ಪಸಿರಿರುವ
ತರುವಂತೆ /
ಸಿಗುವುದು ಅವನ
ಕಾರ್ಯಗಳಿಗೆ ಸಫಲತೆ //
4 : ದುರುಳರಾದರೊ
ತೂರಿ ಹೋಗುವರು /
ಬಿರುಗಾಳಿಗೆ
ತರಗೆಲೆಯಾಗುವರು //
6 : ಸಜ್ಜನರ ಮಾರ್ಗಕ್ಕಿದೆ
ಪ್ರಭುವಿನ ಪಾಲನ /
ದುರ್ಜನರ ಮಾರ್ಗಕ್ಕಿದೆ
ಸಂಪೂರ್ಣ ವಿನಾಶನ //
===================
ಶುಭಸಂದೇಶ
ಲೂಕ 11.42-46
42 : “ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು.
43 : “ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ.
44 : ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.
45 : ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು.
46 : ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.
===================
ಚಿಂತನೆ
======
ಯಾಜಕಕಾಂಡ 27:30, ಧ.ಕಾಂಡ 14:22, ಜಕರೀಯ 7:9, ಮೀಕ 6:8ರ ಪ್ರಕಾರ ಆದಾಯದಲ್ಲಿ ಸ್ವಲ್ಪ ಪಾಲನ್ನು ದೇವಾಲಯಕ್ಕೆ ನೀಡಬೇಕೆಂದು ಆಜ್ಞೆಯಿದೆ. ಈ ಆದಾಯದ ಸ್ವಲ್ಪ ಪಾಲನ್ನು ತೆರೆಗೆ ರೂಪದಲ್ಲಿ ಭೂಮಿಯ ಮೇಲೆ ಧಾನ್ಯ, ಎಣ್ಣೆ, ನವ ದ್ರಾಕ್ಷರಸ ಮತ್ತು ಹಣ್ಣುಗಳು ಹಾಗೂ ದನಕರುಗಳ ಮೇಲೆ ಹೇರಲಾಗಿತ್ತು. ಯಾ.ಕಾಂಡ 18:20, ಧ.ಕಾಂಡ 14:28, 26:12ರ ಪ್ರಕಾರ ಯಾಜಕರ ಮತ್ತು ಬಡವರ ಪೋಷಣೆಗಾಗಿ ಆದಾಯದ ಸ್ವಲ್ಪ ಪಾಲನ್ನು ನೀಡಬೇಕೆಂದು ಸೂಚಿಸುತ್ತದೆ. ಯೇಸು ಈ ಪದ್ಧತಿಗಳನ್ನು ಖಂಡಿಸುತ್ತಿಲ್ಲ. ಜನರಿಂದ ನಿರ್ದಾಕ್ಷಿಣ್ಯದಿಂದ ದಶಾಂಶವನ್ನು ವಸೂಲಿ ಮಾಡುವುದನ್ನು ಖಂಡಿಸುತ್ತಾರೆ. ಅತ್ಯಲ್ಪ, ಚಿಕ್ಕ ವಿಷಯ, ಕಾನೂನು, ಕಟ್ಟಳೆಗಳಿಗಿಂತ ದಯೆ, ಕನಿಕರ, ಪ್ರಾಮಾಣಿಕತೆಗೆ ಆಧ್ಯತೆ ನೀಡಬೇಕೆಂದು ಯೇಸು ಆದೇಶಿಸುತ್ತಾರೆ.
===================
No comments:
Post a Comment