ಅಕ್ಟೋಬರ್ 20, 2020 ಮಂಗಳವಾರ [ಹಸಿರು]
(ಐಚ್ಛಿಕ ಸ್ಮರಣೆ) ಸಂತ ಹೆಡ್ವಿಗ್,
ಸಂತ ಮಾರ್ಗರೆಟ್ ಮೇರಿ ಅಲಕೊಕ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಎಫೆಸದವರಿಗೆ 2.12-22
ಕೀರ್ತನೆ 85:8-13 ಶ್ಲೋಕ.8
ತೋರಿಸೆಮಗೆ ಪ್ರಭೂ, ಕರುಣೆಯನು
ಶುಭಸಂದೇಶ: ಲೂಕ 12.35-38
==================
ಮೊದಲನೇ ವಾಚನ
ಎಫೆಸದವರಿಗೆ 2.12-22
12 : ಆಗ ನೀವು ಯೇಸುಕ್ರಿಸ್ತರಿಂದ ದೂರವಿದ್ದಿರಿ; ದೇವರು ಆಯ್ದುಕೊಂಡ ಜನಾಂಗಕ್ಕೆ ಸೇರದೆ ಪರಕೀಯರಾಗಿದ್ದಿರಿ; ದೇವರು ತಮ್ಮ ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಪಾಲಿಲ್ಲದವರಾಗಿದ್ದಿರಿ; ನಂಬಿಕೆ ನಿರೀಕ್ಷೆ ಇಲ್ಲದೆ ಬಾಳಿದಿರಿ ಮತ್ತು ದೇವರಿಲ್ಲದವರಂತೆ ಲೋಕದಲ್ಲಿ ಬದುಕಿದಿರಿ.
13 : ಹೀಗೆ ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು.
14 : ಯೇಸುಕ್ರಿಸ್ತರೇ ನಮ್ಮ ಶಾಂತಿದಾತ. ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ. ನಮ್ಮೀರ್ವರನ್ನು ಪ್ರತ್ಯೇಕಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತಮ್ಮ ಶರೀರದಿಂದಲೇ ಕೆಡವಿಹಾಕಿದ್ದಾರೆ.
15 : ವಿಧಿನಿಯಮಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿದ್ದಾರೆ. ಉಭಯರನ್ನು ಒಂದುಗೂಡಿಸಿ, ಶಾಂತಿ ಸಮಾಧಾನವನ್ನೇರ್ಪಡಿಸಿ, ನೂತನ ಮಾನವನನ್ನಾಗಿ ಪರಿವರ್ತಿಸಿದ್ದಾರೆ.
16 : ತಮ್ಮ ಶಿಲುಬೆಯ ಮರಣದ ಮೂಲಕ ಹಗೆತನವನ್ನು ನಿರ್ಮೂಲಗೊಳಿಸಿ ಉಭಯತ್ರರನ್ನು ಒಂದೇ ದೇಹದಂತೆ ಮಾಡಿ ದೇವರೊಂದಿಗೆ ಸಂಧಾನಗೊಳಿಸಿದ್ದಾರೆ.
17 : ಯೇಸುಕ್ರಿಸ್ತರು ಬಂದು ದೇವರಿಂದ ದೂರವಾಗಿದ್ದ ನಿಮಗೂ ಹತ್ತಿರವಾಗಿದ್ದ ನಮಗೂ ಶಾಂತಿಯ ಸಂದೇಶವನ್ನು ಸಾರಿದರು.
18 ಇದರ ಪರಿಣಾಮವಾಗಿ ಅವರ ಮುಖಾಂತರವೇ ಉಭಯತ್ರರು ಒಂದೇ ಪವಿತ್ರಾತ್ಮ ಅವರಲ್ಲಿ ಪಿತನ ಸಾನ್ನಿಧ್ಯವನ್ನು ಸೇರಲು ಮಾ ರ್ಗವಾಯಿತು.
19 : ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ.
20 : ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು.
21 : ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ.
22 : ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
===================
ಕೀರ್ತನೆ
ಕೀರ್ತನೆ 85:8-13 ಶ್ಲೋಕ.8
ತೋರಿಸೆಮಗೆ ಪ್ರಭೂ, ಕರುಣೆಯನು
9 : ಭಯಭಕ್ತಿಯುಳ್ಳವರಿಗಾತನ
ರಕ್ಷಣೆ ಸನ್ನಿಹಿತ /
ಇದರಿಂದಾತನ ಮಹಿಮೆ
ನಾಡಿಲ್ಲಿರುವುದು ನಿರುತ //
10 : ಪ್ರೀತಿಯೂ ಸತ್ಯವೂ
ಒಂದನ್ನೊಂದು ಕೂಡಿರುವುವು /
ನೀತಿಯೂ ಶಾಂತಿಯೂ
ಒಂದನ್ನೊಂದು ಚುಂಬಿಸುವುವು //
11 : ಸತ್ಯತೆಯು ಹುಟ್ಟುವುದು
ಭೂಮಿಯಿಂದ /
ನೀತಿಯು ದೃಷ್ಟಿಸುವುದು
ಗಗನದಿಂದ //
12 : ಪ್ರಭು ಕೊಟ್ಟೇ ತೀರುವನು
ಒಳಿತನು /
ನಮ್ಮ ನಾಡು ನೀಡುವುದು
ಬೆಳೆಯನು //
13 : ನಡೆವುದು ಪ್ರಭುವಿನ
ಮುಂದೆ ನೀತಿ /
ಮಾಡುವುದು ಆತನ
ಹೆಜ್ಜೆಗೆ ಹಾದಿ //
==========
ಶುಭಸಂದೇಶ
ಲೂಕ 12.35-38
35 : “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ.
36 : ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ.
37 : ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
38 : “ಯಜಮಾನನು ಬರುವಾಗ ನಡು ರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.
===================
ಚಿಂತನೆ
ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವರ ಮುಂದೆ ನಿಲ್ಲಲೇಬೇಕು. ಆದರೆ ಆ ಸಮಯ ಯಾವಾಗ, ಯಾವ ರೀತಿ, ಬರುವುದೆಂದು ತಿಳಿಯರು. ಹಾಗಾಗಿ ಸದಾ ಜಾಗೃತರಾಗಿರಬೇಕು. ದೇವರು ಬರುವ ಸಮಯ ತಿಳಿಯದು ಎಂದು ನಾವು ಅದನ್ನು ಕಡೆಗಣಿಸುವಂತಿಲ್ಲ, ನಿರ್ಲಕ್ಷಿಸುವಂತಿಲ್ಲ. ದೇವರು ಬಂದಾಗ ಎಚ್ಚರವಾಗಿರುವವನು ಧನ್ಯ. ದೇವರು ಬರುವ ಗಳಿಗೆ ದೂತರಿಗಾಗಲಿ, ಪುತ್ರನೀಗಾಗಲಿ ತಿಳಿಯದು ಅದು ತಂದೆ ದೇವರಿಗೆ ಮಾತ್ರ ತಿಳಿದಿದೆ. ಹಾಗಾಗಿ ಜವಾಬ್ದಾರಿಯುತ ಜೀವನವನ್ನು ನಡೆಸಬೇಕಿದೆ. ಪ್ರಭುವಿನ ನಿರೀಕ್ಷೆಯಲ್ಲಿ ಮೂಡಬೇಕಾದ ಕೆಲಸಗಳನ್ನು ತೊರೆದು ಸೋಮಾರಿಗಳಾಗಿ ಕೂರುವಂತಿಲ್ಲ. ಪ್ರಭುವಿನ ನಿರೀಕ್ಷಿಸುವುದರ ಜೊತೆಗೆ ಒಳ್ಳೆಯ ಬದುಕನ್ನು ಜೀವಿಸುತ್ತಾ, ಮುನ್ನೆಚ್ಚರಿಕೆಯ ಅಗತ್ಯದ ಬಗ್ಗೆ ಶುಭಸಂದೇಶ ತಿಳಿಸುತ್ತದೆ.
===================
No comments:
Post a Comment