Sunday, 22 November 2020

ಸೆಪ್ಟೆಂಬರ್ 20, 2020 ಭಾನುವಾರ

 ಸೆಪ್ಟೆಂಬರ್ 20, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 25ನೇ ಭಾನುವಾರ
ಮೊದಲ ವಾಚನ: ಯೆಶಾಯ 55.6-9
ಕೀರ್ತನೆ 145: 1, 2, 3, 8-9, 18-19. ಶ್ಲೋಕ.19
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ
ಎರಡನೇ ವಾಚನ: ಫಿಲಿಪ್ಪಿಯರಿಗೆ 1.20-24, 27
ಶುಭಸಂದೇಶ: ಮತ್ತಾಯ 20.1-16
----------------------------
ಮೊದಲ ವಾಚನ: ಯೆಶಾಯ 55.6-9
6 : ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ.
7 : ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ. ಆಶ್ರಯಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ.
8 : “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ.
9 : “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ.
===================
ಕೀರ್ತನೆ 145: 1, 2, 3, 8-9, 18-19. ಶ್ಲೋಕ.19
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ
1 : ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ /
 ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ //
2 : ಹೊಗಳುವೆನು ನಾ ದಿನದಿನವೂ ನಿನ್ನನು / 
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು //
3 : ಪ್ರಭು ಮಹಾತ್ಮನು, ಸ್ತುತ್ಯರ್ಹನು / 
ಆತನ ಮಹಿಮೆ ಅಗಮ್ಯವಾದದು //
8 : ಪ್ರಭು ದಯಾನಿಧಿ, ಕೃಪಾಸಾಗರನು / 
ಸಹನಶೀಲನು, ಪ್ರೀತಿಪೂರ್ಣನು //
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / 
ಆತನ ಕೃಪೆಯು ಸೃಷ್ಟಿಯ ಮೇಲೆ //
18 : ಪ್ರಭುವಿನ ಮಾರ್ಗ ಧರ್ಮಸಮ್ಮತ / 
ಆತನ ಕಾರ್ಯವೆಲ್ಲ ಪುನೀತ //
19 : ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ / 
ಯಥಾರ್ಥವಾಗಿ ಆತನನು ಅರಸುವವರಿಗೆ //
===================
ಎರಡನೇ ವಾಚನ 
ಫಿಲಿಪ್ಪಿಯರಿಗೆ 1.20-24, 27
20 : ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ.
21 : ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ.
22 : ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು.
23 : ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು.
24 : ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ.
27 : ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.
==========
ಶುಭಸಂದೇಶ
ಮತ್ತಾಯ 20.1-16
1 : “ಸ್ವರ್ಗ ಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿ ತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ.
2 : ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ.
3 : ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ.
4 : ’ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು.
5 : ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ.
6 : ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ.
7 : ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ.
8 : “ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ.
9 : ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
10 : ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು.
11 : ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು.
12 : ‘ಕಡೇ ಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ; ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮ ಮಾಡಿದ್ದೀರಲ್ಲಾ!’ ಎಂದರು.
13 : ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ?
14 : ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ.
15 : ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ.
16 : ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು,” ಎಂದು ಯೇಸು ಬೋಧಿಸಿದರು.
===================
ಚಿಂತನೆ
 ಮನುಷ್ಯರ ಯೋಚನೆಗಳು ಹಾಗೂ ಯೋಜನೆಗಳು ವೈಯಕ್ತಿಕ ಹಾಗೂ ಸ್ವಂತ  ಲಾಭ ಹಾಗೂ ಸಂತೋಷಗಳನ್ನು ಆಧರಿಸಿರುತ್ತವೆ. ಆದರೆ ದೇವರ ಯೋಜನೆಗಳು, ಮನುಷ್ಯನ ಇತಿಮಿತಿಗಳನ್ನು ಮೀರಿ ಸರ್ವರಿಗೂ ಒಳಿತನ್ನು ಮಾಡುವ ಪ್ರಕ್ರಿಯೆಗಳಾಗಿವೆ. ಇವತ್ತಿನ ದೈವ ವಾಕ್ಯದ ವಿಧಿಯ ಮೂಲಕ ಧರ್ಮಸಭೆ  ನಮಗೆ ದೇವರ ಉದಾರತೆಯನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಕರೆ ನೀಡುತ್ತದೆ. ದೇವರ ನ್ಯಾಯಯುತ ಸ್ವಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳಲು ಪ್ರಭುಕ್ತಿಸ್ತರಿಂದ ಕಲಿಯೋಣ. ದೇವರ ನ್ಯಾಯದ ಇತರ ಮುಖಗಳಾದ ಕರುಣೆ, ಸಹನೆ, ದಯೆ , ಧಾರಾಳತೆ ಹಾಗೂ ಔದಾರ್ಯ ನಮ್ಮಲ್ಲಿ ದಿನಂಪ್ರತಿ ಬೆಳೆಯಲಿ ಎಂದು ಈ ಬಲಿ ಪೂಜೆಯಲ್ಲಿ ಪ್ರಾರ್ಥಿಸೋಣ.
ಮೊದಲನೇ ವಾಚನ: ಯೆಶಾ 55:6-9
=========================
ದೇವರ ಯೋಜನೆಗಳು ಮನುಷ್ಯನ ಯೋಜನೆಗಳಂತೆ ಅಲ್ಲ. ಮನುಷ್ಯನು ಸ್ವಂತ ಸುಖಕ್ಕಾಗಿ , ಸಂತೋಷಕ್ಕಾಗಿ ಬದುಕುತ್ತಾನೆ. ದೇವರು ನಮಗೆ ಪ್ರವಾದಿಗಳ ಮೂಲಕ ಇತರರ ಹಿತ ಹಾಗೂ ಸಂತೋಷಕ್ಕಾಗಿ ಬದುಕಲು ಕರೆ ನೀಡುತ್ತಾರೆ ನಮ್ಮ ಹತ್ತಿರವೇ ಇದ್ದು ನಮ್ಮನ್ನು ಸಲಹುವ ಹಾಗೂ ಪ್ರೇರಿಸುವ ದೇವರನ್ನು ಯೆಶಾಯನ ಮಾತುಗಳಲ್ಲಿ ಅರಿಯೋಣ.
ಎರಡನೇ ವಾಚನ: ಫಿಲಿಪ್ಪಿಯರಿಗೆ 1:20c-24, 27a 
=======================
`ತಾನು ಬದುಕಿರುವುದು ಕ್ರಿಸ್ತನಿಗಾಗಿಯೆ, ಸಾಯುವುದಾದರೂ ಕ್ರಿಸ್ತನಿಗಾಗಿಯೇ, ಬದುಕಿದ್ದರೂ, ಸತ್ತರೂ ಕ್ರಿಸ್ತನಂತೆ, ಕ್ರಿಸ್ತನ ನುಡಿಯಂತೆ. ಅವರ ಶುಭಸಂದೇಶದ ಪ್ರಭೆಯಲ್ಲಿ ಜೀವಿಸುವುದು ಅನಿವಾರ್ಯ’ ಎಂಬ ಕ್ರಿಸ್ತೀಯ ಜೀವನದ ಪರಿಪೂರ್ಣತೆಯ ಪಾಠವನ್ನು ಸಂತ ಪೌಲರು ಫಿಲಿಪ್ಪಿಯರಿಗೆ ಬರೆದ ಪತ್ರದ ಮೂಲಕ ನಮ್ಮೆಲ್ಲರಿಗೆ ತಿಳಿಯಪಡಿಸುತ್ತಾರೆ.
ಶುಭಸಂದೇಶ - ಮತ್ತಾಯ 20:1-16
===================
ಮದರ್ ತೆರೆಸಾರವರು ತಮಗಾಗಿ ಜೀವಿಸಿದವರಲ್ಲ. ಅವರ ಜೀವನ ಪರ ಸೇವೆಯಲ್ಲಿ ಪರ್ಯವಸಾನಗೊಂಳ್ಳುತ್ತಿತ್ತು. ನಿರಾಶ್ರಿತರು. ನಿರ್ಗತಿಕರು ಹಾಗೂ ನಿರ್ಗತಿಕರು ಮತ್ತು ಭಾಗ್ಯಹೀನರು ಇಂತಹವರ ಶ್ರೇಯಸ್ಸೇ ಅವರ ಧ್ಯೇಯವಾಗಿತ್ತು. ಒಮ್ಮೆ ಅವರು ಶ್ರೀಮಂತನೊಬ್ಬನನ್ನು ಸಂಧಿಸಿ ಅವನ ಮುಂದೆ ಕೈಚಾಚಿ ಭಿಕ್ಷೆ ಬೇಡಿದರು. ಆ ಗರ್ಭ ಧನಿಕನಾಗಿದ್ದ ಆತನು ಅಸಡ್ಡೆಯಿಂದ ನಿಂದನೆಯ ಮಾತುಗಳನ್ನಾಡುತ್ತಾ ಮದರ್ ಅವರು ಚಾಚಿದ್ದ ಅಂಗೈ ಮೇಲೆ ಉಗುಳಿದ. ಮದರ್ರವರು ಪ್ರಶಾಂತಚಿತ್ತರಾಗಿ `ಧನಿಕರೇ, ನೀವು ಈಗ ಕೊಟ್ಟಿದ್ದು ನನಗೆ, ನನ್ನ ಆಶ್ರಮದಲ್ಲಿರುವ ನಿರ್ಗತಿಕರಿಗೆ ಏನನ್ನಾದರೂ ಕೊಡುತ್ತೀರಾ?’ ಎಂದು ಹೇಳಿದಾಗ ಧನಿಕನು ಮನಕರಗಿ ತನ್ನ ಉದಾರತೆಯನ್ನು ವ್ಯಕ್ತಪಡಿಸಿದ.
ಮದರ್ ತೆರೆಸಾ ಒಂದು ಮಾತನ್ನು ಹೇಳುತ್ತಾರೆ: `ನಾವು ದೇವರ ಕೃಪೆಯ ಮತ್ತು ದಯೆಯ ಜೀವಂತ ರೂಪಗಳಾಗಬೇಕು; ಆ ದಯೆ ನಮ್ಮ ಮುಖದಲ್ಲಿ ನಮ್ಮ ಕಣ್ಣುಗಳಲ್ಲಿ ನಮ್ಮ ನಗುವಿನಲ್ಲಿ ವ್ಯಕ್ತವಾಗಬೇಕು:
ಪ್ರಭುಕ್ರಿಸ್ತರು ಇವತ್ತಿನ ಶುಭಸಂದೇಶದಲ್ಲಿ ವಿಶೇಷವಾದ ವ್ಯಕ್ತಿತ್ವವನ್ನು ನಮ್ಮ ಮುಂದೆ ಪರಿಚಯಿಸುತ್ತಾರೆ. ಆ ಯಜಮಾನನ್ನು ಪ್ರಭುಕ್ರಿಸ್ತರು ದೊಡ್ದ ಉದ್ಯಮಿಗಳಿಗೆ ಸಾವುಕಾರರಿಗೆ ಮಾದರಿಯಾಗಿ ನೀಡಿಲ್ಲ. ಅಂತಹ ಯಜಮಾನನನ್ನು ಉದ್ಯಮಿಗಳು ಅನುಸರಿಸಿದರೆ ನಷ್ಟದ ಅಂಚಿನಲ್ಲಿ ಕುಸಿಯಬಹುದು. ಅಲ್ಲದೆ, ಕ್ರಿಸ್ತರು ಅನ್ಯಾಯದ ಹಾಗೂ ಸಾಮಾಜಿಕ ತಾರತಮ್ಯದ ಬದುಕಿಗೆ ಚಾಪೆ ಹಾಕುತ್ತಿಲ್ಲ. ಅವರ ಈ ನಿದರ್ಶನದಲ್ಲಿ ಅಳಿದು ಉಳಿದ ಕೆಲಸಕಾರ್ಯಗಳನ್ನು ಮುಗಿಸಲು ಕೆಲಸಗಾರರನ್ನು ಒಟ್ಟುಗೂಡಿಸುವ ಹಂಚಿಕೆಯೂ ಇಲ್ಲ. ಆ ಯಜಮಾನ ದಿನವಿಡೀ ಕೂಲಿ ಇಲ್ಲದೆ, ಬರಿಗೈಯಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿದ್ದ ಬಡಬಗ್ಗರಿಗೆ ತನ್ನ ಹೃದಯವಂತಿಕೆಯನ್ನು ವ್ಯಕ್ತಪಡಿಸುತ್ತಾನೆ. ಬಡಕುಟುಂಬದವರು. ನಿರುದ್ಯೋಗಿಗಳು ಒಂದೊಪ್ಪತ್ತು ಊಟಮಾಡಿ ಸಂತೋಷವಾಗಿರಲಿ ಎಂದು ಆಶಿಸುತ್ತಾನೆ. ಮಾಡಿರುವ ಕೆಲಸಕ್ಕಿಂತ ಅನಿವಾರ್ಯತೆಯನ್ನು ಗಮನಿಸಿ ದಿನಕೂಲಿಯನ್ನು ನೀಡುತ್ತಾನೆ. ಜಗತ್ತು ನೋಡುವ ಮಾಪನಗಿಂತ ಭಿನ್ನವಾಗಿ ಕೂಲಿಗಾರರನ್ನು ನೋಡುತ್ತಾನೆ. ಆ ಸೇವೆಯ ಮೂಲಕ ಕರುಣೆ, ದಯೆ, ದೈವೀಯ ಉದಾರತೆಗಳಿಗೆ ದರ್ಪಣವಾಗುತ್ತಾನೆ.
ಇಂದು ಕೊರೋನ ವೈರಸ್ನ ಹೆದರಿಕೆಗಿಂತ ಮಾನವನ ಅಸಹನೀಯ, ಸ್ವಾರ್ಥದ ಬದುಕಿನ ಹೆದರಿಕೆ ಹೆಚ್ಚಾಗಿದೆ. ಹಲವಾರು ಕೂಲಿ ಕಾರ್ಮಿಕರು, ವಲಸೆಗಾರರು  ಅಸಹಾಯಕರಾಗಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಸರ್ಕಾರಗಳು ಕೂಡ ನಿರ್ಗತಿಕರ ಕಾಳಜಿವಹಿಸದೆ ಲಾಕ್ಡೌನ್, ಸೀಲ್ಡೌನ್, ಕೊರೀನ ಟೆಸ್ಟ್ಗಳನ್ನು ಕೈಗೆತ್ತಿಕೊಂಡಿವೆ. ಸಾಮಾನ್ಯ ಜನರ ಅಳಲು ಮುಗಿಲು ಮುಟ್ಟಿದರೂ ಸರ್ಕಾರದ ಹೃದಯ ತೆರೆದಿಲ್ಲ. ಇಂತಹ ಸನ್ನಿವೇಶಕ್ಕೆ ತಕ್ಕ ಸಂದೇಶ ಇವತ್ತಿನ ದೈವವಾಕ್ಯದ ವಿಧಿಯಲ್ಲಿದೆ.
ಇವತ್ತಿನ ಮೊದಲನೇ, ವಾಚನದಲ್ಲಿ ಯೆಶಾಯ ಪ್ರವಾದಿ ಹೇಳುವ ಪ್ರಕಾರ, ದೇವರು ಮನುಷ್ಯನಂತೆ ಯೋಚಿಸಲಾರರು. ಇಂದಿನ ಸರ್ಕಾರಗಳು ಶ್ರೀಮಂತರ, ಉದ್ಯಮಿಗಳ ಪರ ನಿಯಮಗಳನ್ನು ಜಾರಿಗೆ ತಂದರೆ ದೇವರು ಅತಿ ಬಡವರ, ಸಮಾಜದ ತಳಹದಿಯಾಗಿರುವ ಸಾಮಾನ್ಯ ಜನರ ಪರವಾಗಿ ನಿಂತಿರುವರು ಎಂದು ಪ್ರತಿಪಾದಿಸುತ್ತಾನೆ. ಕೀರ್ತನೆಯಲ್ಲಿ ಕೇಳುವಂತೆ, ದೇವರ ಮರೆಹೊಕ್ಕವನಿಗೆ ಅವರು ಹತ್ತಿರವಾಗಿದ್ದಾರೆ.
ಹೇಗೆ ಪ್ರಭುಕ್ರಿಸ್ತರು ಬಡವರಾಗಿ, ಬಡವರ ಮಧ್ಯದಲ್ಲಿ ಸಾಮಾನ್ಯವಾಗಿ ಜೀವಿಸಿದರೊ, ಸಾಮಾನ್ಯ  ವ್ಯಕ್ತಿಗಳನ್ನು ತನ್ನ ಶಿಷ್ಯರನ್ನಾಗಿ ಆರಿಸಿಕೊಂಡು ಬಲಾಢ್ಯವಾದ ಧರ್ಮ ಸಭೆಯನ್ನು ಕಟ್ಟಿದರೊ ಅಂತೆಯೆ ನಾವು ಕೂಡ ಸಾಮಾನ್ಯ ಜನರಾಗಿ , ನಮ್ಮ ಸರಳತೆ, ಸೇವಾ ಮನೋಭಾವದಿಂದ ಕ್ರಿಸ್ತನಂತೆ ಬದುಕಬೇಕಾಗಿದೆ. ಸಂತ ಪೌಲ ಹೇಳುವಂತೆ ನಾವು ಬದುಕಿದ್ದರೂ ಸತ್ತರೂ ಕ್ರಿಸ್ತನಿಗಾಗಿಯೇ ಎಂಬ ಮೂಲ ತತ್ವವನ್ನು ನಮ್ಮ ಜೀವನದ ಮೂಲವನ್ನಾಗಿಸುತ್ತ ದೈವ ಮನೋಭಾವದಿಂದ ಉದಾರ ಯಜಮಾನನಂತಾಗಲು ಪ್ರಯತ್ನಿಸೋಣ. ನಮ್ಮ ಹೃದಯ ಮತ್ತು ಆತ್ಮದ ಬಡಿತ ಕ್ರಿಸ್ತರ ಪವಿತ್ರ ಹೃದಯದ ಪ್ರೀತಿಯ ಬಡಿತದೊಂದಿಗೆ ಸ್ಪಂದಿಸಲಿ.
==============
ಚಿಂತನೆ – ಫಾ ಮಾರ್ಸೆಲ್ ರೊಡ್ರಿಗಸ್ ಎಸ್ ಜೆ
=====================

No comments:

Post a Comment