ಸೆಪ್ಟೆಂಬರ್ 21, 2020 ಸೋಮವಾರ [ಕೆಂಪು]
ಸಂತ ಮತ್ತಾಯ, ಪ್ರೇಷಿತ ಮತ್ತು ಶುಭಸಂದೇಶಕರ್ತ
ಮೊದಲ ವಾಚನ: ಎಫೆಸದವರಿಗೆದವರಿಗೆ 4.1-7, 11-13
ಕೀರ್ತನೆ 19:1-4. ಶ್ಲೋಕ.4
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ
ಶುಭಸಂದೇಶ: ಮತ್ತಾಯ 9.9-13
==================
ಎಫೆಸದವರಿಗೆದವರಿಗೆ 4.1-7, 11-13
1 : ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ.
2 : ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ.
3 : ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು.
4 : ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು.
5 : ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. 6ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ.
7 : ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ.
11 : ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು.
12 : ದೇವಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ದಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು.
13 : ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.
===================
ಕೀರ್ತನೆ 19:1-4. ಶ್ಲೋಕ.4
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ
1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು /
ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು //
2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು /
ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು //
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ /
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ /
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ //
===================
ಶುಭಸಂದೇಶ
ಮತ್ತಾಯ 9.9-13
9 : ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. ""ನನ್ನನ್ನು ಹಿಂಬಾಲಿಸು,"" ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು.
10 : ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ‘ಸುಂಕದವರೂ’, ‘ಪಾಪಿಷ್ಠರೂ’ ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು.
11 : ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, ""ನಿಮ್ಮ ಗುರು ಇಂತಹ ಬಹಿಷ್ಕøತ ಜನರ ಜೊತೆಯಲ್ಲಿ ಊಟ ಮಾಡುವುದೇ?"" ಎಂದು ಆಕ್ಷೇಪಿಸಿದರು.
12 : ಇದನ್ನು ಕೇಳಿಸಿಕೊಂಡ ಯೇಸು, ""ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ.
13 : ನೀವು ಹೋಗಿ, ""ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ"" ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು"" ಎಂದರು.
===================
ಚಿಂತನೆ
ಇಂದಿನ ಶುಭಸಂದೇಶ, ಮತ್ತಾಯ ಮತ್ತು ಯೇಸುವಿನ ಮೂಲಕ ಪಾಪಿ ಮತ್ತು ಪಾವನರ ನಡುವಿರುವ ಆಕರ್ಷಣೆಯನ್ನು ತೋರಿಸುತ್ತದೆ.
ಯೇಸುವಿನ ಆ ಒಂದು ನೋಟ, ಆ ಎರಡೇ ಎರಡು ಪದ - ‘ನನ್ನ ಹಿಂಬಾಲಿಸು’ – ಮತ್ತಾಯನಿಗೆ ತನ್ನ ಜೀನವದ ದಿಕ್ಕನ್ನೇ ಬದಲಿಸುವಷ್ಟು ಆತ್ಮೀಯವೆನಿಸಿರಬೇಕು. ಹಾಗಾಗಿ, ಅವನು ತನ್ನಲ್ಲಿದ್ದುದ್ದೆಲ್ಲವನ್ನು ಬಡಬಗ್ಗರಿಗೆ ದಾನ ಮಾಡಿ ಯೇಸುವಿನ ಹಿಂದೆ ನಡೆಯುತ್ತಾನೆ.
ಇತರರಿಂದ ಕೆಟ್ಟವನು, ಪಾಪಿ, ಮೋಸಗಾರ ಎಂದು ಜನ ಜರೆಯುತ್ತಿದ್ದ ಮತ್ತಾಯನಲ್ಲಿ ಯೇಸು ಕಂಡಿದ್ದು ಅವನ ಅಂತರಂಗ ಕೇಳುತ್ತಿದ್ದ ದೇವರ ಕ್ಷಮೆಯನ್ನು. ಯೇಸುವಿನ ಕರುಣೆಯ ನೋಟ ಮತ್ತಾಯನ ಹೃದಯವನ್ನು ಶುದ್ಧಗೊಳಿಸಿ ಸ್ವತಂತ್ರವಾಗಿಸಿತ್ತು. ಇಲ್ಲಿಯವರೆಗೆ ಯಾರೂ ಕಾಣದಿದ್ದ, ಕೇಳದಿದ್ದ ತನ್ನ ಮನಸ್ಸಿನ ತಳಮಳವನ್ನು ಅರಿಯುವ ವ್ಯಕ್ತಿಗೆ ಯಾರು ತಾನೇ ಸೋಲಲಾರರು? ಕ್ರಿಸ್ತ ಮತ್ತಾಯನನ್ನು ಅರಿತಿದ್ದ ಮಾತ್ರವಲ್ಲ ಆತನನ್ನು ತನ್ನ ಜೊತೆಗಿರಲು ಕರೆದ. ಪಾಪಿ ಪಾವನನ ಜೊತೆಗಿರುವುದೆಂತು! ಮತ್ತಾಯ ಸೋತ; ಸೋತು ಶರಣಾದ, ತನ್ನ ಪಾಪ ಜೀವನ ತೊರೆದ, ತನ್ನನ್ನು ತೊಳೆದು ಶುದ್ಧಗೊಳಿಸಿದ ಆ ದೈವ ಚಿಲುಮೆಯ ಹಿಂಬಾಲಕನಾದ, ಶುಭಸಂದೇಶಕಾರನಾದ ಮತ್ತು ಇಂತೂ ಪುನರುತ್ಥಾನನಾಗಿದ್ದ ಕ್ರಿಸ್ತನಿಗೆ ಸಾಕ್ಷಿಯಾದ.
ದೇವರ ಕರುಣೆ, ಪಾಪಿಗಳನ್ನು ಕಂಡು ಮನಕರಗುವ ದೈವಗುಣ ನಮ್ಮಲ್ಲೂ ಉಧ್ಭವಿಸಲಿ, ಪ್ರೀತಿ ಮತ್ತು ಕ್ಷಮೆಯ ಮೂಲಕ ಕ್ರಿಸ್ತನ ಸಾಕ್ಷಿಗಳು ನಾವಾಗಲೆಂದು ಪ್ರಾರ್ಥಿಸ ಬೇಕು.
==================="
No comments:
Post a Comment