Thursday, 26 November 2020

ಅಕ್ಟೋಬರ್ 21, 2020 ಬುಧವಾರ

 ಅಕ್ಟೋಬರ್ 21, 2020 ಬುಧವಾರ                        [ಹಸಿರು]

ಮೊದಲ ವಾಚನ: ಎಫೆಸದವರಿಗೆ 3.2-12

ಕೀರ್ತನೆ ಯೆಶಾಯ 12:2-6. ಶ್ಲೋಕ.3

ಉದ್ಧರಿಸುವ ಒರತೆಗಳಿಂದ, ಸೇದುವಿರಿ ನೀರನ್ನು ಹರುಷದಿಂದ

ಶುಭಸಂದೇಶ: ಲೂಕ 12.39-48

==================

ಮೊದಲನೇ ವಾಚನ

===============

ಎಫೆಸದವರಿಗೆ 3.2-12

2 : ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ.

3 : ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.

4 : ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರ ಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೇ ತಿಳಿಯುತ್ತದೆ.

5 : ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ.

6 : ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು; ಇದೇ ಆ ರಹಸ್ಯ.

7 : ಈ ಶುಭಸಂದೇಶಕ್ಕೆ ದಾಸನನ್ನಾಗಿ ದೇವರು ನನ್ನನ್ನು ನೇಮಿಸಿದ್ದಾರೆ. ತಮ್ಮ ಪ್ರಭಾವಮಯ ಶಕ್ತಿಯಿಂದ ಈ ವಿಶೇಷ ವರವನ್ನು ಉಚಿತವಾಗಿ ನನಗೆ ದಯಪಾಲಿಸಿದ್ದಾರೆ.

8 : ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು.

9 : ಸಮಸ್ತವನ್ನು ಸೃಷ್ಟಿಸಿದ ದೇವರ ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು.

10 : ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು.

11 : ತಮ್ಮ ಪೂರ್ವ ಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು.

12 : ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ, ದೇವರ ಸಾನ್ನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ.

===================

ಕೀರ್ತನೆ 

ಕೀರ್ತನೆ ಯೆಶಾಯ 12:2-6. ಶ್ಲೋಕ.3


ಉದ್ಧರಿಸುವ ಒರತೆಗಳಿಂದ, 

ಸೇದುವಿರಿ ನೀರನ್ನು ಹರುಷದಿಂದ


2 : ದೇವರೇ ಉದ್ಧಾರಕನೆನಗೆ

 ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. 

ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ 

ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”


3 : ಉದ್ಧರಿಸುವಾ ಒರತೆಗಳಿಂದ 

ಸೇದುವಿರಿ ನೀರನು ಹರುಷದಿಂದ.


4 : ಹೇಳುವಿರಿ ನೀವು ಆ ದಿನದಂದು 

ಈ ಪರಿ- “ಸಲ್ಲಿಸಿರಿ ಸರ್ವೇಶ್ವರನಿಗೆ 

ಕೃತಜ್ಞತೆಯನು ಸ್ಮರಿಸಿರಿ 

ಆತನ ಶ್ರೀನಾಮವನು 

ಸಾರಿರಿ ಜನತೆಗೆ 

ಆತನ ಕಾರ್ಯಗಳನು ಘೋಷಿಸಿರಿ 

ಆತನ ನಾಮ ಘನತೆಯನು.


5 : ಹಾಡಿರಿ ಸರ್ವೇಶ್ವರನಿಗೆ 

ಸ್ತುತಿಯನು ಎಸಗಿಹನಾತ 

ಮಹಿಮಾ ಕಾರ್ಯಗಳನು ತಿಳಿಸಿರಿ 

ಜಗದಾದ್ಯಂತಕೆ ಈ ವಿಷಯವನು.


6 : ಸಿಯೋನಿನ ನಿವಾಸಿಗಳೇ, 

ಹಾಡಿರಿ, ಮಾಡಿರಿ ಭಜನ 

ನಿಮ್ಮ ಮಧ್ಯೆಯಿರುವ ಆ ಘನವಂತನ 

ಇಸ್ರಯೇಲಿನಾ ಸ್ವಾಮಿ ಪರಮಪಾವನ.”

===================

ಶುಭಸಂದೇಶ

ಲೂಕ 12.39-48

39 : ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ.

40 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು. ಪ್ರಾಮಾಣಿಕನಾದ ಮೇಸ್ತ್ರಿ (ಮತ್ತಾ. 24.45-51)

41 : ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು.

42 : ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ.

43 : ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.

44 : ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

45 : “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ

46 : ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು.

47 : “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ.

48 : ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು. 

===================

ಚಿಂತನೆ

ಸ್ವರ್ಗ ಸಾಮ್ರಾಜ್ಯದ ಆಗಮನದ ಬಗ್ಗೆ ಯೇಸು ಮಾತನಾಡುವಾಗಲೆಲ್ಲಾ ಅದಕ್ಕೆ ಯಾವ ರೀತಿಯ ಬದ್ಧತೆ ಬೇಕು ಎಂದು ಹೇಳುತ್ತಲೇ, `ನಿರಂತರವಾಗಿ ಎಚ್ಚರವಾಗಿರಿ’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಈ ಸ್ವರ್ಗ ಸಾಮ್ರಾಜ್ಯಕ್ಕೆ ಯೋಗ್ಯರಾಗಬೇಕಾದರೆ ಲೌಕಿಕತೆಯ ನಶ್ವರತೆ ಅರಿಯಬೇಕು. ಲೌಕಿಕ ಜಗತ್ತಿನೊಂದಿಗೆ ನಂಟನ್ನು ಕಳೆದುಕೊಳ್ಳುವುದು ಅಷ್ಟೇನೂ ಮುಖ್ಯವಲ್ಲ, ದೇವರ ಸಾಮ್ರಾಜ್ಯಕ್ಕೆ ಹತ್ತಿರವಾಗುವುದು ಮುಖ್ಯ. ಜನನ ಮತ್ತು ಮರಣದ ನಡುವಿರುವ ಈ ಜೀನವದಲ್ಲಿ ನಿರಂತರ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಬದುಕಬೇಕು. ದೇವರ ಕರೆ ಯಾವಾಗ ಬರಬಹುದೋ ತಿಳಿದಿಲ್ಲ. ಆದ್ದರಿಂದ ನಿರಂತರ ಎಚ್ಚರಿಕೆ ಅಗತ್ಯ.

===================

No comments:

Post a Comment