ಸೆಪ್ಟೆಂಬರ್ 22, 2020 ಮಂಗಳವಾರ [ಹಸಿರು]
ಮೊದಲ ವಾಚನ: ಜ್ಞಾನೋಕ್ತಿ 21.1-6, 10-13
ಕೀರ್ತನೆ 119: 1, 27, 30, 34, 35, 44. ಶ್ಲೋಕ.35
ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಾಮಾರ್ಗದಲಿ
ಶುಭಸಂದೇಶ: ಲೂಕ 8.19-21
==================
ಜ್ಞಾನೋಕ್ತಿ 21.1-6, 10-13
1 : ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.
2 : ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ.
3 : ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ.
4 : ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.
5 : ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ.
6 : ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.
10 : ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.
11 : ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಗೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ.
12 : ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ.
13 : ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ ನೀನೇ ಮೊರೆಯಿಡುವಾಗ ಉತ್ತರ ಕೊಡುವವರಾರು ನಿನಗೆ?
==================
ಕೀರ್ತನೆ 119: 1, 27, 30, 34, 35, 44. ಶ್ಲೋಕ.35
ಎನ್ನ ನಡೆಸು ಪ್ರಭೂ, ನಿನ್ನ ಆಜ್ಞಾಮಾರ್ಗದಲಿ
1 : ದೈವಾಜ್ಞೆಯಲ್ಲಿ ಅಭಿಮಾನ ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು /
ದೋಷರಹಿತ ಮಾರ್ಗದಲಿ ನಡೆವವರು ಧನ್ಯರು //
27 : ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ /
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ //
30 : ಆರಿಸಿಕೊಂಡಿರುವೆನು ನಾನು ಸತ್ಯ ಮಾರ್ಗವನು /
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ನಿಧಿಗಳನು //
34 : ನೀಡೆನಗೆ ನಿನ್ನ ಶಾಸ್ತ್ರದ ಅರಿವನು /
ಪೂರ್ಣಮನದಿಂದ ಆಚರಿಸುವೆನದನು //
35 : ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ /
ಪಡೆಯುವೆ ಹರ್ಷಾನಂದವನು ಅದರಲಿ //
44 : ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ /
ಯುಗಯುಗಾಂತರಕು ಅದನು ಪರಿಪಾಲಿ ಸುವೆ //
=================
ಶುಭಸಂದೇಶ: ಲೂಕ 8.19-21
19 : ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ.
20 : ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು.
21 : ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣ ತಮ್ಮಂದಿರು,” ಎಂದರು.
=================
ಚಿಂತನೆ
ಯೇಸು ಮರಿಯ ಪುತ್ರ ಎಂಬುವುದು ದೈಹಿಕ ಸಂಬಂಧದಿಂದ ಎಂದು ಕಾಣಿಸಿದರೆ ಅದು ನಿಜ. ಆದರೆ ಇಲ್ಲಿ ದೈಹಿಕ ಸಂಬಂಧ ಎಷ್ಟು ಮುಖ್ಯವೋ ದೈವಿಕ ಸಂಬಂಧವು ಕೂಡ ಅಷ್ಟೇ ಮುಖ್ಯ. ದೇವರ ವಾಕ್ಯವನ್ನು ಆಲಿಸಿ ಅದರಂತೆ ನಡೆದು ಇತರರಿಗೆ ಮಾದರಿಯಾದವರು ಮಾತೆ ಮರಿಯ. ಯೇಸುವನ್ನು ಗರ್ಭಧರಿಸುವ ಮುನ್ನ ಆಕೆ ದೇವರ ವಾಕ್ಯವನ್ನು ಕೇಳಿದ್ದರು, ಅದರಂತೆ ನಡೆದು ದೇವರ ವಾಕ್ಯವನ್ನು ಮೊದಲು ತನ್ನ ಹೃದಯದಲ್ಲಿ ಹೊತ್ತರು. ನಂತರವೇ ಯೇಸುವಿಗೆ ತಾಯಿಯಾದರು. ಆದ್ದರಿಂದ ಯೇಸು ಈ ದಿನದ ಶುಭಸಂದೇಶದಲ್ಲಿ ತನ್ನ ತಾಯಿಯನ್ನು ಸಹೋದರರನ್ನು ಮಾದರಿಯನ್ನಾಗಿ ನೋಡುತ್ತಾರೆಯೇ ಹೊರತು ಅವರನ್ನು ಎಂದಿಗೂ ತುಚ್ಛೀಕರಿಸುವುದಿಲ್ಲ, ಅಥವಾ ಖಂಡಿಸುವ ದೃಷ್ಟಿಯಿಂದ ನೋಡುವುದಿಲ್ಲ.
==================="
No comments:
Post a Comment