Thursday, 26 November 2020

ಅಕ್ಟೋಬರ್ 22, 2020 ಗುರುವಾರ

 ಅಕ್ಟೋಬರ್ 22, 2020 ಗುರುವಾರ                        [ಹಸಿರು]

ಸಂತ ಜಾನ್ ಪೌಲರು II, ವಿಶ್ವಗುರು (ಐಚ್ಛಿಕ ಸ್ಮರಣೆ)

ಮೊದಲ ವಾಚನ: ಎಫೆಸದವರಿಗೆ 3.14-21

ಕೀರ್ತನೆ 33:1-2, 4-5, 11-12, 18-19 ಶ್ಲೋಕ.5

ಪ್ರಭು ಅಚಲ ಪ್ರೀತಿಯಿಂದ ಜಗವನು ತುಂಬಿಹನು

ಶುಭಸಂದೇಶ: ಲೂಕ 12.49-53

==================

ಮೊದಲನೇ ವಾಚನ

ಎಫೆಸದವರಿಗೆ 3.14-21

14 : ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ;

15 : ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ.

16 : ಅವರು ತಮ್ಮ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ;

17 : ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ.

18 : ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತ ಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ.

19 : ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು, ದೇವರ ಪರಿಪೂರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ.

20 : ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು.

21 : ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್!

===================

ಕೀರ್ತನೆ 

ಕೀರ್ತನೆ 33:1-2, 4-5, 11-12, 18-19 ಶ್ಲೋಕ.5

ಪ್ರಭು ಅಚಲ ಪ್ರೀತಿಯಿಂದ ಜಗವನು ತುಂಬಿಹನು


1 : ಸಜ್ಜನರೇ, ಮಾಡಿರಿ 

ಪ್ರಭುವಿನ ಗುಣಗಾನ / 

ನೀತಿವಂತರೇ, 

ಆತನ ಸ್ತುತಿ ನಿಮಗೆ ಸುಗುಣ //


2 : ಪ್ರಭುವನು ಕೊಂಡಾಡಿ 

ಕಿನ್ನರಿಯನು ನುಡಿಸುತ / 

ಕೀರ್ತಿಸಿ ದಶತಂತಿ 

ವೀಣೆಯನು ಬಾರಿಸುತ //


3 : ನೂತನ ಕೀರ್ತನೆಯನು 

ಆತನಿಗೆ ಹಾಡಿರಿ / 

ಇಂಪಾಗಿ ಬಾರಿಸಿ, 

ಸೊಂಪಾಗಿ ಭಜಿಸಿರಿ //


4 : ಸತ್ಯವಾದುದು 

ಆತನ ಪವಿತ್ರ ವಾಕ್ಯ / 

ಸ್ತುತ್ಯವಾದುದು 

ಆತನ ಪುನೀತ ಕಾರ್ಯ //


5 : ಸತ್ಯಸಂಧನು, 

ನ್ಯಾಯಪ್ರಿಯನು ಆತನು / 

ಅಚಲ ಪ್ರೀತಿಯಿಂದ 

ಜಗವನು ತುಂಬಿಹನು //


11 : ಪ್ರಭುವಿನ ಯೋಜನೆ ಶಾಶ್ವತ / 

ಅವನ ಸಂಕಲ್ಪ ಅನವರತ //


12 : ಪ್ರಭುವನು ದೇವರಾಗಿ 

ಪಡೆದ ಜನಾಂಗ ಧನ್ಯ / 

ಸ್ವಜನರಾಗಿ ಆತನಾಯ್ದುಕೊಂಡ 

ಜನತೆ ಧನ್ಯ //


18 : ಪ್ರಭುವಾದರೋ ಕಟಾಕ್ಷಿಸುವನು 

ತನಗಂಜಿ ನಡೆದವರನು / 

ಲಕ್ಷಿಸುವನು ತನ್ನ ಕೃಪೆಯನು 

ನಿರೀಕ್ಷಿಸುವವರನು //


19 : ತಪ್ಪಿಸುವನವನು 

ಪ್ರಾಣವನು ಮರಣದಿಂದ / 

ಉಳಿಸುವನು ಜೀವವನು 

ಕ್ಷಾಮಡಾಮರದಿಂದ //

===================

ಶುಭಸಂದೇಶ

ಲೂಕ 12.49-53

49 : “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.

50 : ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ.

51 : ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.

52 : ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು.

53 : ಮಗನಿಗೆ ವಿರುದ್ದವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು. 

===================

ಚಿಂತನೆ

ಪ್ರೀತಿ, ಶಾಂತಿ, ಕ್ಷಮೆ, ಕರುಣೆಯ ಪ್ರತೀಕ ಯೇಸು. `ಶಾಂತಿ ನಿಮ್ಮೊಡನೆ ಇರಲಿ’ ಪ್ರಭು ಕ್ರಿಸ್ತರು ಪುನರುತ್ಥಾನದ ನಂತರ ನೀಡಿದ ಸಂದೇಶ. ತಮ್ಮ ಜೀವನದಲ್ಲಿ ಶಾಂತಿಯನ್ನು ಪ್ರತಿಪಾದಿಸಿ ಹಿಂಸೆಯನ್ನು ವಿರೋಧಿಸಿದ ಕ್ರಿಸ್ತ, ಇಂದಿನ ಶುಭಸಂದೇಶದಲ್ಲಿ ತಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು, ಭಿನ್ನಬೇಧಗಳನ್ನು ಉಂಟುಮಾಡಲು ಎನ್ನುತ್ತಾರೆ. ಕ್ರಿಸ್ತನ ತತ್ವಗಳು, ಆದರ್ಶಗಳು, ಬೋಧನೆಯು ಯೆಹೂದ್ಯ ಸಮಾಜವನ್ನು ಗೊಂದಲಕ್ಕೀಡುಮಾಡಿತ್ತು. ಧಾರ್ಮಿಕ ನಾಯಕರ ಮತ್ತು ಜನಸಾಮಾನ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಿತು. ಯಾವುದೇ ಬದಲಾವಣೆಯನ್ನು ಶಾಂತಿಯಿಂದ ತರಲು ಕಷ್ಟ. ಶಾಂತಿಗೆ ಪ್ರಯತ್ನಪಟ್ಟಷ್ಟು ಯುದ್ಧಹಿಂಸೆಗಳು ನಡೆಯುತ್ತಲೇ ಇವೆ. ಅಂತರಂಗದ ಬದಲಾವಣೆ, ಕ್ಷಮೆ ಮತ್ತು ಪ್ರೀತಿಯಿಂದ ಮಾತ್ರ ಶಾಂತಿಯ ಸ್ಥಾಪನೆ ಸಾಧ್ಯ.

===================

No comments:

Post a Comment