ಅಕ್ಟೋಬರ್ 24, 2020 ಶನಿವಾರ [ಹಸಿರು]
ಸಂತ ಅಂತೋಣಿ ಮೇರಿ ಕ್ಲಾರೆಟ್, ಧರ್ಮಾಧ್ಯಕ್ಷ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಎಫೆಸದವರಿಗೆ4.7-16
ಕೀರ್ತನೆ 122:1-5. ಶ್ಲೋಕ.1
ಪ್ರಭುವಿನ ಆಲಯಕ್ಕೆ ಹೋಗೋಣ ಬಾ
ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ
ಶುಭಸಂದೇಶ: ಲೂಕ 13.1-9
==================
ಮೊದಲನೇ ವಾಚನ
ಎಫೆಸದವರಿಗೆ 4.7-16
7 : ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ.
8 : ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: “ಆತನು ಉನ್ನತಿಗೇರಿದನು ಶತ್ರುಗಳನ್ನು ಸೆರೆಯಾಳಾಗಿ ಕೊಂಡೊಯ್ದನು ನರಮಾನವರಿಗಿತ್ತನು ವರದಾನಗಳನು.”
9 : ‘ಏರಿದನು’ ಎನ್ನುವುದರ ಅರ್ಥವಾದರೂ ಏನು? ಆತನು ಮೊದಲು ಭೂಗರ್ಭಕ್ಕೂ ಇಳಿದಿದ್ದನು ಎಂಬ ಅರ್ಥವನ್ನೂ ಒಳಗೊಂಡಿದೆ.
10 : ಇಳಿದು ಬಂದಿದ್ದಾತನೇ ಲೋಕಗಳಿಗೆಲ್ಲ ಮೇಲೇರಿ ಹೋಗಿದ್ದಾನೆ. ತನ್ನ ಪ್ರಸನ್ನತೆಯಿಂದ ಇಡೀ ಜಗತ್ತನ್ನೇ ಆವರಿಸಿದ್ದಾನೆ.
11 : ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು.
12 : ದೇವಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ದಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು.
13 : ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.
14 : ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ.
15 : ಬದಲಾಗಿ, ಪ್ರೀತಿಯಿಂದ ಸತ್ಯವನ್ನೇ ನುಡಿಯುತ್ತೇವೆ. ಶಿರಸ್ಸಾದ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಸರ್ವತೋಮುಖವಾಗಿ ಬೆಳೆಯುತ್ತೇವೆ.
16 : ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲು ಗಂಟುಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ.
===================
ಕೀರ್ತನೆ
ಕೀರ್ತನೆ 122:1-5. ಶ್ಲೋಕ.1
ಪ್ರಭುವಿನ ಆಲಯಕ್ಕೆ ಹೋಗೋಣ ಬಾ
ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ
1 : ಪ್ರಭುವಿನಾಲಯಕೆ
ಹೋಗೋಣ ಬಾ ಎಂದಾಗ /
ಆಯಿತೆನಗೆ ಆನಂದ,
ಜನರೆನ್ನ ಕರೆದಾಗ //
2 : ನಮ್ಮ ಕಾಲುಗಳು
ಓ ಜೆರುಸಲೇಮೇ /
ತಲುಪಿವೆ ನಿನ್ನ
ಪುರದ್ವಾರಗಳನೇ //
3 : ನೋಡು, ಜೆರುಸಲೇಮ್
ಪಟ್ಟಣವಿದು /
ಗಟ್ಟಿಯಾಗಿಯೆ
ಕಟ್ಟಲ್ಪಟ್ಟಿಹುದು //
4 : ಕುಲಗಳು ಯಾತ್ರೆಯಾಗಿ
ಬರುವುವು ಇಲ್ಲಿಗೆ /
ಮಾಡುವರಿಲ್ಲಿಯೆ
ಪ್ರಭುವಿನ ನಾಮ ಕೀರ್ತನೆ /
ಪಾಲಿಪರಿಂತು ಇಸ್ರೇಲರಿಗೆ
ವಿಧಿಸಿದಾಜ್ಞೆ //
5 : ಸ್ಥಾಪಿತವಾಗಿವೆಯಿಲ್ಲಿ
ನ್ಯಾಯಪೀಠಗಳು /
ದಾವೀದನ ಮನೆತನದವರ
ಸಿಂಹಾಸನ ಗಳು //
================
ಲೂಕ 13.1-9
1 : ಅದೇ ಸಮಯಕ್ಕೆ ಅಲ್ಲಿದ್ದವರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು.
2 : ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ?
3 : ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ.
4 : ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತೀರೋ?
5 : ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು. ಹಣ್ಣು ಬಿಡದ ಅಂಜೂರ
6 : ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ.
7 : ತೋಟಗಾರನನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?’ ಎಂದು ಹೇಳಿದ.
8 : ಅದಕ್ಕೆ ತೋಟಗಾರನು, ‘ಸ್ವಾವಿೂ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ.
9 : ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,’ ಎಂದನು.”
===================
ಚಿಂತನೆ
ಯೆಹೂದ್ಯರಲ್ಲಿ ಒಂದು ತಪ್ಪು ಗ್ರಹಿಕೆ ಇತ್ತು. ಬಡತನ, ಕಾಯಿಲೆ, ಅಪಘಾತಗಳು ಮಾನವರೇ ಮಾಡಿದ ಪಾಪಕ್ಕೆ ದೇವರ ಶಿಕ್ಷೆ ಎಂದು ಅವರು ಭಾವಿಸಿದ್ದರು. ಗಲೀಲೆಯ ಮತ್ತು ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಉತ್ತಮರೆಂದು ಪರಿಗಣಿಸಿ ಶಿಲೊವಾದಲ್ಲಿ ಮೃತಹೊಂದಿದವರು ಪಾಪಿಗಳು ಎಂದು ಪರಿಗಣಿಸಿದ್ದರು. ಹಾಗಾಗಿ ಯೇಸು ಅಂಜೂರದ ಮರದ ಉದಾಹರಣೆಯ ಮೂಲಕ ದೇವರ ಸಹನೆಗೂ ಮಿತಿಯಿದೆ ಎಂದು ತಿಳಿಸುತ್ತಾರೆ. ಫಲವನ್ನು ಕಾಣದೇ ಹೋದ ತೋಟಗಾರ ಮರವನ್ನು ಕಡಿಯಲು ಮುಂದಾಗುವಂತೆ ನಮ್ಮಲ್ಲಿ ಒಳ್ಳೆಯ ಫಲಗಳನ್ನು ನಿರೀಕ್ಷಿಸುವ ದೇವರು ಸಹನೆಯಿಂದ ಕಾದಿದ್ದಾರೆ. ಪಾಪವನ್ನು ತೊರೆದು, ದೇವರ ತತ್ವಗಳ ಪ್ರಕಾರ ಜೀವಿಸದೆ ಹೋದರೆ ಕಟ್ಟಕಡೆಗೆ ನ್ಯಾಯ ತೀರ್ಪಿನ ದಿನ ದಂಡನೆಗೆ ಗುರಿಯಾಗುವುದಾಗಿ ಎಚ್ಚರಿಸುವುದರಿಂದ ಜೊತೆಗೆ ದೇವರ ನಿರೀಕ್ಷೆಯಂತೆ ಜೀವಿಸಲು ಆದೇಶಿಸುತ್ತಾರೆ.
===================
No comments:
Post a Comment