Thursday, 26 November 2020

ಅಕ್ಟೋಬರ್ 25, 2020 ಭಾನುವಾರ

 ಅಕ್ಟೋಬರ್ 25, 2020 ಭಾನುವಾರ                        [ಹಸಿರು]

ಸಾಧಾರಣ ಕಾಲದ 30ನೇ ಭಾನುವಾರ

ಮೊದಲ ವಾಚನ: ವಿಮೋಚನಾ 22.21-27

ಕೀರ್ತನೆ 18:1-3, 46, 50, 51. ಶ್ಲೋಕ.1

ಪ್ರಭುವೇ, ನನಗಿದೆ ನಿನ್ನಲ್ಲೇ ಒಲವು

ಎರಡನೇ ವಾಚನ: 1 ಥೆಸಲೋನಿಯರಿಗೆ 1.5-10

ಶುಭಸಂದೇಶ: ಮತ್ತಾಯ 22.34-40

==================

ಮೊದಲನೇ ವಾಚನ

ವಿಮೋಚನಾ 22.21-27

20 : “ಸರ್ವೇಶ್ವರನಾದವನಿಗೆ ಹೊರತಾಗಿ ಬೇರೊಬ್ಬ ದೇವರಿಗೆ ಬಲಿ ಕೊಡುವವನು ನಾಶಕ್ಕೆ ಅರ್ಹನು.

21 : “ಪರದೇಶೀಯನಿಗೆ ಅನ್ಯಾಯಮಾಡಬಾರದು, ಅವನನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರ ಅಲ್ಲವೆ?

22 : ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.

23 : ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು. ಆ ಮೊರೆಗೆ ನಾನು ಕಿವಿಗೊಡದೆ ಇರೆನೆಂಬುದು ನಿಮಗೆ ತಿಳಿದಿರಲಿ.

24 : ನಾನು ಕೋಪಗೊಂಡು ನಿಮ್ಮನ್ನು ಶತ್ರುಗಳ ಕೈಯಿಂದ ಸಂಹಾರಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಗಳಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.

25 : “ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಸಾಲಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು.

26 : “ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆಕೊಡು.

27 : ಏಕೆಂದರೆ ಅವನಿಗಿರುವ ಹೊದಿಕೆ ಅದೊಂದೇ; ಅದನ್ನೇ ಮೈಗೆ ಸುತ್ತಿಕೊಳ್ಳಬೇಕು; ಬೇರೆ ಯಾವುದನ್ನು ಹೊದ್ದುಕೊಂಡು ಮಲಗಾನು? ಅವನು ನನಗೆ ಮೊರೆ ಇಟ್ಟರೆ ಕಿವಿಗೊಡುವೆನು. ಏಕೆಂದರೆ ನಾನು ದಯಾಮಯನು !

===================

ಕೀರ್ತನೆ 

ಕೀರ್ತನೆ 18:1-3, 46, 50, 51. ಶ್ಲೋಕ.1

ಪ್ರಭುವೇ, ನನಗಿದೆ ನಿನ್ನಲ್ಲೇ ಒಲವು


1 : ಪ್ರಭುವೇ, ನೀನೆ ನನ್ನ ಬಲವು / 

ನನಗಿದೆ ನಿನ್ನಲೇ ಒಲವು //


2 : ಪ್ರಭುವೇ ನನ್ನ ಕಲ್ಲುಕೋಟೆ, 

ನನಗೆ ವಿಮೋಚಕ / 

ಆತನೇ ನನ್ನ ದೇವ, 

ನನ್ನಾಶ್ರಯ ದುರ್ಗ / 

ಆತನೆನಗೆ ಗುರಾಣಿ, 

ಗಿರಿ, ರಕ್ಷಣಾಶೃಂಗ //


3 : ಪ್ರಭು ಸ್ತುತ್ಯಾರ್ಹನು / 

ಶತ್ರುಗಳಿಂದ ಕಾಪಾಡುವನು, 

ನಾನವಗೆ ಮೊರೆಯಿಡಲು //


46 : ಸರ್ವೇಶ್ವರನು 

ಚೈತನ್ಯ ಸ್ವರೂಪನು / 

ನನ್ನುದ್ಧಾರಕನಾದವಗೆ 

ಸ್ತುತಿಸ್ತೋತ್ರವು / 

ನನ್ನ ರಕ್ಷಿಸುವ 

ದೇವರಿಗೆ ಜಯಕಾರವು //


50 : ತಾನೇ ನೇಮಿಸಿದ 

ಅರಸನಿಗೆ / 

ಆತನೀವನು 

ವಿಶೇಷ ರಕ್ಷಣೆ //


51 : ಅನುಗ್ರಹಿಸುವನಾತ 

ಅನಂತಾನಂತ ಕೃಪೆ / 

ತಾನಭಿಷೇಕಿಸಿದ ದಾವೀದನಿಗೆ, 

ಆತನ ಸಂತತಿಗೆ //

===========
ಎರಡನೇ ವಾಚನ 

1 ಥೆಸಲೋನಿಯರಿಗೆ 1.5-10

5 : ನಮ್ಮ ಶುಭಸಂದೇಶ ಕೇವಲ ಬಾಯಿ ಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ.

6 : ನೀವು ನಮ್ಮನ್ನು ಹಾಗೂ ಪ್ರಭು ಯೇಸುವನ್ನು ಅನುಸರಿಸುವವರಾದಿರಿ. ಇದರಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದರೂ ಪವಿತ್ರಾತ್ಮ ಪ್ರೇರಿತ ಆನಂದದಿಂದ ದೇವರ ವಾಕ್ಯವನ್ನು ಅಂಗೀಕರಿಸಿದಿರಿ.

7 : ಹೀಗೆ ಮಕೆದೋನಿಯ ಹಾಗೂ ಅಖಾಯ ಪ್ರಾಂತ್ಯದ ಕ್ರೈಸ್ತವಿಶ್ವಾಸಿಗಳಿಗೆ ನೀವು ಆದರ್ಶಪ್ರಾಯರಾದಿರಿ.

8 : ಪ್ರಭುವಿನ ಶುಭಸಂದೇಶ ನಿಮ್ಮಿಂದಲೇ ಘೋಷಿತವಾಯಿತು. ದೇವರಲ್ಲಿ ನೀವಿಟ್ಟಿರುವ ವಿಶ್ವಾಸ ಮಕೆದೋನಿಯ ಮತ್ತು ಅಖಾಯದಲ್ಲಿ ಮಾತ್ರವಲ್ಲದೆ ಎಲ್ಲೆಡೆಯಲ್ಲೂ ಪ್ರಸರಿಸಿತು. ಈ ನಿಮ್ಮ ವಿಶ್ವಾಸವನ್ನು ಕುರಿತು ನಾವು ಹೇಳಬೇಕಾದುದು ಏನೂ ಇಲ್ಲ; ಅಲ್ಲಿಯ ಜನರೇ ಹೇಳುತ್ತಾರೆ.

9 : ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ;

10 : ಸಾವಿನಿಂದ ಜೀವಕ್ಕೆ ಎಬ್ಬಿಸಲಾದ ದೇವರ ಪುತ್ರ ಯೇಸು ಸ್ವರ್ಗದಿಂದ ಪುನರಾಗಮಿಸುವುದನ್ನು ನೀವು ಹೇಗೆ ಎದುರುನೋಡುತ್ತಿದ್ದೀರಿ - ಎಂಬುದನ್ನು ಆ ಜನರೇ ಹೇಳುತ್ತಾರೆ. ಈ ಯೇಸುವೇ ಮುಂದೆ ಬರಲಿರುವ ದೈವಕೋಪದಿಂದ ನಮ್ಮನ್ನು ಪಾರುಮಾಡುವವರು.

ಶುಭಸಂದೇಶ

==========

ಮತ್ತಾಯ 22.34-40

34 : ಯೇಸುಸ್ವಾಮಿ ‘ಸದ್ದುಕಾಯ’ರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.

35 : ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:

36 : “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?”

37 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’

38 : ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ.

39 : ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.

40 : ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.

===================

ಚಿಂತನೆ

ಸಾಧಾರಣ ಕಾಲದ 30ನೇ ಭಾನುವಾರ

=======================

ಪೀಠಿಕೆ

ದಿನೇ ದಿನೇ ಪ್ರೀತಿಯ ಕೊರತೆಯಿಂದ ನಮ್ಮ ಸಂಬಂಧಗಳು ಸೊರಗುತ್ತಿವೆ ಮಾತ್ರವಲ್ಲ ಈ ನಮ್ಮ ಸಮಾಜ್ಯದೊಡನೆ ಇಡೀ ವಿಶ್ವವೇ ನಲುಗುತ್ತಿದೆ. ‘ನನ್ನನ್ನು ಎಲ್ಲರೂ ಪ್ರೀತಿಸಬೇಕಿಲ್ಲ ನಾನು ಮಾತ್ರ ಯಾರನ್ನೂ ಪ್ರೀತಿಸಲಾರೆ’ ಎನ್ನುವ ಸ್ವಾರ್ಥ ಮತ್ತು ಸಂಕುಚಿತ ಮನೋಭಾವದವರೇ  ನಮ್ಮಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಎಲ್ಲರೂ ಬೇಡುವವರೇ ಆದರೆ ನೀಡುವವರು ಯಾರು? ಪ್ರೀತಿಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿದಾಗ ಮಾತ್ರ ಅದು ನೈಜ ಪ್ರೀತಿಯೆನಿಸಿಕೊಳ್ಳುತ್ತದೆ. ಕ್ರಿಸ್ತ ಯೇಸು ಅಂತಹ ನೈಜ ಪ್ರೀತಿಯ ಆಜ್ಞೆಗಳನ್ನು ಕೈಗೊಂಡು ನಡೆಯಲು ನಮಗೆ ಆಹ್ವಾನವೀಯುತ್ತಾರೆ

ಮೊದಲನೆಯ ವಾಚನ: 

ವಿಮೋಚನಾಕಾಂಡ 22:20-26

====================

ಬಲಾಢ್ಯರು ಬಲಹೀನರನ್ನು ಶೋಷಣೆಗೊಳಪಡಿಸುವುದು, ಉಳ್ಳವರು ಇಲ್ಲದವರಿಂದ ಕಿತ್ತು ತಿನ್ನುವುದು ಹಿಂದಿನಿಂದಲೂ ನಡೆದು ಬಂದಿದೆ. ಮನುಷ್ಯನ ಹೃದಯದೊಳಗೆ ಬೇರೂರಿದ ಸ್ವಾರ್ಥ, ಅಹಂಭಾವ ಆತನೊಳಗಿನ ಪರಪ್ರೀತಿ ಮತ್ತು ಕಾಳಜಿಯನ್ನು ಅಳಿಸಿಹಾಕುತ್ತದೆ. ಆದರೆ ನಮ್ಮ ದೇವರು ಎಂದಿಗೂ ಬಲಹೀನರ ಪರವಾದಿ, ಅವರನ್ನು ಸದಾಕಾಲ ಸಂರಕ್ಷಿಸುತ್ತಾರೆ ಎಂಬ ಸಂದೇಶ ಇಂದಿನ ವಾಚನದಲ್ಲಿದೆ. ಅಲ್ಲದೆ ನಮ್ಮ ಸಮಾಜದಲ್ಲಿ ಸಮನ್ವಯವನ್ನು ಸಾಧಿಸಲು ಬೇಕಿರುವ ಕೆಲವು ಪ್ರಮುಖ ಸೂತ್ರಗಳು ಇಲ್ಲಿವೆ. 

ಎರಡನೆಯ ವಾಚನ: 

1 ಥೆಸಲೋನಿಕ 1:5-10

===============

ಈ ವಾಚನದಲ್ಲಿ ಸಂತ ಪೌಲರು ಥೆಸಲೋನಿಕದ ಜನರು ಮುಕ್ತಮನಸ್ಸಿನಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ, ಪ್ರಾಮಾಣಿಕವಾಗಿ ಕ್ರಿಸ್ತನ ತತ್ವಗಳಿಗೆ ಬದ್ಧರಾದದ್ದನ್ನು ಪ್ರಶಂಸಿಸುತ್ತಾರೆ. ಎಲ್ಲಾ ಕಾಲಗಳಲ್ಲು ಕ್ರಿಸ್ತನ ಮೌಲ್ಯಗಳಿಗೆ ಬದ್ಧರಾಗಿ ಜೀವಿಸುವವರಿಗೆ ಸಮಾಜ ಪ್ರತಿರೋಧವನ್ನು ಒಡ್ಡುತ್ತಲೇ ಇರುತ್ತದೆ. ನಾವು ಕ್ರಿಸ್ತಯೇಸುವಿಗೆ ಪ್ರಾಮಾಣಿಕರಾಗಿರುತ್ತೇವೋ ಅಥವಾ ಸಮಾಜದ ಆಮಿಷಗಳಿಗೆ, ಓಲೈಕೆಗಳಿಗೆ ಮಾರುಹೋಗುತ್ತೇವೋ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಳ್ಳಬೇಕು.  


ಶುಭಸಂದೇಶ: 

ಮತ್ತಾಯ 22.34-40

=============

ದೈವ ಪ್ರೀತಿ ಮತ್ತು ಪರ ಪ್ರೀತಿ ಕ್ರೈಸ್ತ ಧರ್ಮದ ತಿರುಳು. ಇದುವೇ ಕ್ರಿಸ್ತನ ಬೋಧನೆಯ ಸಾರ. ದೇವರ ಪ್ರತಿರೂಪಿಯಾದ ಕ್ರಿಸ್ತ ಯೇಸು  ದೈವಪ್ರೀತಿಯನ್ನು ಸರ್ವರಿಗೂ ತೋರಿದರು. ಅದರಲ್ಲಿಯೂ ದೀನದಲಿತರಿಗೆ, ಸಮಾಜದಲ್ಲಿ ತಿರಸ್ಕಾರಕ್ಕೊಳಗಾದವರಿಗೆ, ಪಾಪಿಗಳಿಗೆ ಅವರ ಪ್ರೀತಿಯಲ್ಲಿ ಒಂದು ಪಾಲು ಹೆಚ್ಚೇ ಎನ್ನಬಹುದು. ಕ್ರಿಸ್ತ ತನ್ನ ಬೋಧನೆಯಲ್ಲಿ ಮಾತ್ರವಲ್ಲ ತಮ್ಮ ಪ್ರೀತಿಯ ಕಾರ್ಯಗಳಲ್ಲಿಯೂ ದೇವರ ಪ್ರೀತಿಯನ್ನು ಹಂಚುತ್ತಾ ಹೋದರು. 


ಯೇಸುವನ್ನು ಪರೀಕ್ಷಿಸುವ ಸಲುವಾಗಿ “ಆಜ್ಞೆಗಳಲ್ಲಿ ಶ್ರೇಷ್ಠ ಆಜ್ಞೆ ಯಾವುದು?” ಎಂದು ಒಬ್ಬ ಧರ್ಮಬೋಧಕ ಕೇಳಿದ ಪ್ರಶ್ನೆಯ ಸಲುವಾಗಿ ಕ್ರಿಸ್ತಯೇಸುವಿನಿಂದ ಸರ್ವಕಾಲಕ್ಕೂ, ಸಮಸ್ತ ಜನಾಂಗಕ್ಕೂ ಸಲ್ಲುವ ಬೋಧನೆ ಹೊರಹೊಮ್ಮಿತು. ಆತ ಯೇಸುವಿನಿಂದ ಒಂದು ಶ್ರೇಷ್ಠ ಆಜ್ಞೆಯನ್ನು ಉತ್ತರವಾಗಿ ನಿರೀಕ್ಷಿಸಿದ್ದ, ಆದರೆ ಪ್ರಭು ಯೇಸು ಅವನಿಗೆ ಎರಡು ಆಜ್ಞೆಗಳನ್ನು ನೀಡುತ್ತಾರೆ. ಮಾತ್ರವಲ್ಲ ಇವೆರಡೂ ಒಂದಕ್ಕೊಂದು ಪೂರಕ, ಒಂದಿಲ್ಲದೆ ಮತ್ತೊಂದು ಅಪರಿಪೂರ್ಣ ಎಂಬುದನ್ನು ತೋರಿಸಿಕೊಡುತ್ತಾರೆ. 


ಹಾಗೆ ನೋಡಿದರೆ ಇವು ಯೇಸುವಿನಿಂದ ಹೊಸದಾಗಿ ರೂಪಿತವಾದ ಆಜ್ಞೆಗಳಲ್ಲ. ಹಳೆಯ ಒಡಂಬಡಿಕೆಯಲ್ಲಿ ಇವೆರಡೂ  ಉಲ್ಲೇಖವಿರುವುದನ್ನು ಕಾಣಬಹುದು. ಮೊದಲನೆಯ ಆಜ್ಞೆ: “ಇಸ್ರಯೇಲ್ ಜನಾಂಗವೇ ಕೇಳು, ನಿನ್ನ ದೇವರಾದ ಸರ್ವೇಶ್ವರ ಒಬ್ಬರೇ ದೇವರು. ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು” (ಧರ್ಮೋಪದೇಶ ಕಾಂಡ 6:4-5) ಈ ಆಜ್ಞೆಯಂತೂ ಇಸ್ರಯೇಲರಲ್ಲಿ ಜನಜನಿತವಾಗಿತ್ತು. ಚಿಕ್ಕಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ನಿತ್ಯವೂ ಪಠಿಸುತ್ತಿದ್ದ ಪ್ರಾರ್ಥನೆಯಾಗಿತ್ತು, ಕೈತೋಳುಗಳಲ್ಲಿ, ಹಣೆಪಟ್ಟಿಯಾಗಿ, ಮನೆಬಾಗಿಲಿನ ನಿಲುವುಪಟ್ಟಿಗಳ ಮೇಲೆ ಬರೆಯಲಾಗುತ್ತಿದ್ದ ಘೋಷವಾಕ್ಯವಾಗಿತ್ತು.  ಅಂತೆಯೇ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು”  ಎಂಬ ಎರಡನೆಯ ಆಜ್ಞೆ ಯನ್ನು ಯಾಜಕ ಕಾಂಡ 19:18 ರಲ್ಲಿ ಕಾಣಬಹುದು. 


ದೈವಪ್ರೀತಿ ಮತ್ತು ಪರ ಪ್ರೀತಿಯ ಆಜ್ಞೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮಗೆ ದೈವ ಪ್ರೀತಿಯ ಬಗ್ಗೆ ಯಾವುದೇ ಗೊಂದಲವಿಲ್ಲ, ದೇವರನ್ನು ಪ್ರೀತಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ನಮ್ಮೊಳಗಿನ ಈ ದೈವಪ್ರೀತಿ ಹೊರ ಜಗತ್ತಿಗೆ ಕಾಣುವುದಾದರೂ ಹೇಗೆ? ಇದಕ್ಕಿರುವ ವಿಧಾನ ಒಂದೇ, ನಮ್ಮ ನೆರೆಹೊರೆಯವರಿಗೆ ನಾವು ತೋರುವ ಪ್ರೀತಿಯಲ್ಲಿ ದೈವ ಪ್ರೀತಿಯನ್ನು ವ್ಯಕ್ತಪಡಿಸುವುದು. ಇದನ್ನೇ ಕ್ರಿಸ್ತಯೇಸು. “ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು” (ಯೊವಾ 13:34-35) ಎಂದು ಒತ್ತಿ ಹೇಳಿದರು. ಸಂತಯೊವಾನ್ನನು ತನ್ನ ಪತ್ರದಲ್ಲಿ, “ತಾನು ದೇವರನ್ನು ಪ್ರೀತಿಸುತ್ತೇನೆಂದು ಒಬ್ಬನು ಹೇಳುತ್ತಾ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗುತ್ತಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಿಯಾನು? ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು, ಕ್ರಿಸ್ತಯೇಸು ನಮಗೆ ಮಾಡಿರುವ ಆಜ್ಞೆ” (1 ಯೊವಾ 4:19-21) ಪ್ರಭುವಿನ ಬೋಧನೆಯನ್ನು ಇನ್ನಷ್ಟು ವಿಸ್ತರಿಸುತ್ತಾನೆ. 


ಪ್ರಸ್ತುತ ಕೊರೋನಾ ದಿನಗಳಲ್ಲಿ ಮಾನವ ಸಮಾಜ ಮತ್ತೊಮ್ಮೆ ಬೆತ್ತಲಾಗಿದೆ. ನಾವು ತಲೆತಗ್ಗಿಸಬೇಕಾಂದ ಅದೆಷ್ಟೋ ದೃಶ್ಯಗಳು ನಮ್ಮ ಕಣ್ಣುಗಳ ಮುಂದೆಯೇ ನಡೆದು ಹೋದವು. ನಮ್ಮ ವಾಸಕ್ಕೆ ಐಷಾರಾಮಿ ಬಂಗಲೆಗಳನ್ನು ಕಟ್ಟಿಕೊಟ್ಟವರೇ ಬೀದಿಪಾಲಾದರು. ನಮ್ಮ ನಗರಗಳನ್ನು ಕಟ್ಟಲು ನೆರವಾದವರೇ ನಮ್ಮ ನಗರಗಳಿಂದ ಹೊರಹಾಕಲ್ಪಟ್ಟರು. ಸಾವಿರಾರು ಕಿಲೋಮೀಟರುಗಳಟ್ಟಲೆ ನಡೆದೂ ನಡೆದೂ ಬಸವಳಿದು ತೀರಿಕೊಂಡವರೆಷ್ಟೋ? ರೈಲು ಹಳಿಗಳ ಮೇಲೆ, ರಸ್ತೆಬದಿಗಳಲ್ಲಿ, ಹೊಟ್ಟೆಗೆ ಊಟವಿಲ್ಲದೆ ಅಸುನೀಗಿದವರ ಲೆಕ್ಕವಿಟ್ಟವರಾರು? ಕೊರೋನಾ ಸೋಂಕಿನಿಂದ ಸತ್ತವರಿಗಿಂತಲೂ ಇವರ ಸಂಖ್ಯೆ ಹೆಚ್ಚೆಂದು ಹೇಳಲಾಗುತ್ತದೆ.

 

ಹಾಗೆಂದು ಶ್ರೀಮಂತರೆಲ್ಲರೂ ಸುಖವಾಗಿದ್ದಾರೆಂದಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಮನೆಗಳ ಒಳಗೆ ಲಾಕ್‍ಡೌನ್ ಆಗಿರುವವರೆಷ್ಟೋ ಮಂದಿ ಒಲ್ಲದ ಮನಸ್ಸಿನಿಂದ ತಮ್ಮವರೆನಿಸಿಕೊಂಡವರ ಜೊತೆ ದಿನಗಳನ್ನು ದೂಡುತ್ತಿದ್ದಾರೆ. ಕೌಟುಂಬಿಕ ಕಲಹಗಳ, ದೌರ್ಜನ್ಯಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವುದನ್ನು ಗಮನಿಸಬಹುದು. ಇವೆಲ್ಲಕ್ಕೂ ಕಾರಣ ‘ಪ್ರೀತಿಯ ಕೊರತೆ’, ಈ ಎಲ್ಲ ಸಮಸ್ಯೆಗಳಿಗೆ ಇರುವ ಪರಿಹಾರವೂ ಒಂದೇ : ಪ್ರೀತಿಸುವುದು. “ಪ್ರೀತಿಸು, ತದನಂತರ ನಿನಗಿಷ್ಟ ಬಂದದ್ದನ್ನು ಮಾಡು” ಎನ್ನುತ್ತಾರೆ ಸಂತ ಅಗಸ್ಟಿನರು. ಕ್ರಿಸ್ತನಂತೆ ನಾವು ದೈವಪ್ರೀತಿಯನ್ನು ಮತ್ತು ಪರಪ್ರೀತಿಯನ್ನು ರೂಢಿಸಿಕೊಳ್ಳಲೆತ್ನಿಸೋಣ.  

=====================

ಚಿಂತನೆ – ಫಾ ಪೀಟರ್ ಸಿ, 

ಬೆಂಗಳೂರು ಮಹಾ ಧರ್ಮಕ್ಷೇತ್ರ

====================="

No comments:

Post a Comment