Tuesday, 24 November 2020

ಡಿಸೆಂಬರ್ 26, 2020 ಶನಿವಾರ

 ಡಿಸೆಂಬರ್ 26, 2020 ಶನಿವಾರ                        [ಕೆಂಪು]
ಸಂತ ಸೇಫನ, ಪ್ರಥಮ ರಕ್ತಸಾಕ್ಷಿ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6.8-10; 7.54-59
ಕೀರ್ತನೆ 31:2-3, 5-7, 15-16 ಶ್ಲೋಕ.5
ನನಗಾಧಾರ ನೀನಲ್ಲವೇ? ನನ್ನಾತ್ಮವನ್ನು ನಿನಗೊಪ್ಪಿಸಿರುವೆ
ಶುಭಸಂದೇಶ: ಮತ್ತಾಯ 10.17-22
==================
ಮೊದಲನೇ ವಾಚನ
ಪ್ರೇಷಿತರ ಕಾರ್ಯಕಲಾಪಗಳು 6.8-10; 7.54-59
8 : ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು.
9 : ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು ‘ಬಿಡುಗಡೆ ಹೊಂದಿದವರು’ ಎಂಬವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು.
10 : ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ.
54 : ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು.
55 : ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು,
56 : “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು.
57 : ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. 
58 : ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
59 : ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
===================
ಕೀರ್ತನೆ 
ಕೀರ್ತನೆ 31:2-3, 5 - 7, 15 -16 ಶ್ಲೋಕ.5
ಶ್ಲೋಕ: ನನಗಾಧಾರ ನೀನಲ್ಲವೇ?
            ನನ್ನಾತ್ಮವನ್ನು ನಿನಗೊಪ್ಪಿಸಿರುವೆ||
2 : ನನಗೆ ಕಿವಿಗೊಡು ಪ್ರಭು, 
     ನನ್ನನು ಬಿಡಿಸು ಬೇಗನೆ /
     ನನ್ನಾಶ್ರಯಗಿರಿ, 
     ದುರ್ಗಸ್ಥಾನವಾಗಿರು ನೀನೆ //
3 : ಕೈ ಹಿಡಿದು ನಡೆಸೆನ್ನನು 
     ನಿನ್ನ ನಾಮ ನಿಮಿತ್ತ /
     ನೀನೆನಗೆ ಪೊರೆಬಂಡೆ, 
     ಸ್ಥಿರ ಕೋಟೆಕೊತ್ತಲ //
5 : ನನಗಾಧಾರ ನೀನಲ್ಲವೆ?
     ನನ್ನಾತ್ಮವನು ನಿನಗೊಪ್ಪಿಸಿರುವೆ / 
     ನಂಬಿಕಸ್ತನಾದ ದೇವನೆ, ನೀಯೆನ್ನ 
     ಮುಕ್ತಗೊಳಿಸಿರುವೆ//
6 : ಇಲ್ಲಸಲ್ಲದ ದೇವರನು 
     ಅವಲಂಬಿಪರನು ನೀ ಒಲ್ಲೆ / 
     ನಾನಾದರೋ ಪ್ರಭು, 
     ಭರವಸೆಯಿಟ್ಟಿರುವುದು ನಿನ್ನಲ್ಲೆ //
7 : ಹರ್ಷಾನಂದಗೊಳ್ಳುವೆ ನೆನೆದು 
     ನಿನ್ನ ಅನಂತ ಪ್ರೀತಿಯನು / 
      ಈಕ್ಷಿಸಿದೆ ನೀ ಭಕ್ತನ ದೀನತೆಯನು,
      ಲಕ್ಷಿಸಿದೆ ಬಾಧೆಗಳನು //
15 : ನಿನ್ನ ಕೈಯಲ್ಲಿದೆ 
       ನನ್ನ ಇಡೀ ಜೀವಮಾನ / 
       ಬೆನ್ನಟ್ಟಿಬರುವ 
       ವೈರಿಯಿಂದ ರಕ್ಷಿಸೆನ್ನ //
16 : ಬೆಳಗಿಸಲಿ ದಾಸನನು 
      ನಿನ್ನ ಮುಖತೇಜವು / 
      ಕಾಪಾಡಲಿ ಎನ್ನನು 
     ನಿನ್ನನಂತ ಪ್ರೇಮವು //
===================
ಶುಭಸಂದೇಶ
ಮತ್ತಾಯ 10.17-22
17 : ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು.
18 : ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಮದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.
19 : ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು.
20 : ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು.
21 : ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿ ಬಿದ್ದು ಅವರನ್ನು ಕೊಲ್ಲಿಸುವರು.
22 : ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
===================
ಚಿಂತನೆ
ಸಂತ ಸ್ಟೀಪನ್ ಕ್ರೈಸ್ತಧರ್ಮದ ಪ್ರಪ್ರಥಮ ರಕ್ತಸಾಕ್ಷಿ, ಯೇಸು ಪುನರುತ್ಥಾನಗೊಂಡ ನಂತರ ಪ್ರೇಷಿತರ ಬೋಧನಾಕಾರ್ಯ ಭರದಿಂದ ನಡೆಯಿತು. ಒಂದೇ ವರ್ಷದಲ್ಲಿ ಜೆರುಸಲೇಮಿನಲ್ಲೇ 5000ಕ್ಕಿಂತ ಹೆಚ್ಚು ಕ್ರೈಸ್ತರಿದ್ದರು ಎನ್ನಲಾಗಿದೆ. ಭಕ್ತವಿಶ್ವಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇತ್ತು. ಹಾಗಾಗಿ ಅವರ ಸೇವೆಗಾಗಿ ಹಾಗೂ ಪ್ರೇಷಿತರ ನೆರವಿಗಾಗಿ ಏಳು ಮಂದಿ ಸಹಾಯಕರನ್ನು ಆರಿಸಿಕೊಳ್ಳಲಾಯಿತು. ಅವರಲ್ಲಿ ಸ್ಟೀಪನನ್ನು ಒಬ್ಬ . ಆತ ಸುತಾತ್ಮ ಭರಿತನೂ ಜ್ಞಾನಸಂಪನ್ನನೂ ಆಗಿದ್ದ. ಆತನಿಗೆ ಸ್ಟೀಪನ್ನಿಗೆ ಗ್ರೀಕ್ ಮಾತನಾಡಲು ತಿಳಿದಿದ್ದರಿಂದ ಅನ್ಯಮತದಿಂದ ಯೆಹೂದ್ಯ ಮತವನ್ನು ಅವಲಂಬಿಸಿದ್ದವರಿಗಾಗಿ ಬೋಧಿಸಲು ಸ್ಟೀಫನ್ ನೇಮಿತನಾಗಿರಬೇಕು. 
ಸ್ಟೀಫನ್ನನ ನಿರ್ಭಯ ಮಾತು, ಬೋಧನೆ ಅದರ ಪರಿಣಾಮವಾಗಿ ಜನ ಕ್ರೈಸ್ತಧರ್ಮವನ್ನು ಅಪ್ಪಿಕೊಳ್ಳುತ್ತಿದ್ದುದು ಯೆಹೂದ್ಯರಿಗೆ ನುಂಗಲಾರದ ತುತ್ತಾಗಿತ್ತು. ಈ ಕಾರಣ ಸ್ಟೀಫನನನ್ನು ಬಂಧಿಸಿ ಸೆನೆಡ್ರಿನ್ ಸಭೆಯ ಮುಂದೆ ನ್ಯಾಯತೀರ್ಪಿಗೆ ಒಳಪಡಿಸಿ (ಪ್ರೇ. ಕಾ. ಕ. 6:8-15) ಕಲ್ಲಿನಿಂದ ಹೊಡದು ಕೊಲ್ಲಲಾಯಿತು. ``ಪ್ರಭುಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ’’ ಎಂದು ಪ್ರಾರ್ಥಿಸಿ ಪ್ರಾಣ ಅರ್ಪಿಸಿದರು.
===================

No comments:

Post a Comment