ಡಿಸೆಂಬರ್ 27, 2020 ಭಾನುವಾರ [ಬಿಳಿ]
ಯೇಸು ಮರಿಯಾ ಜೋಸೆಫರ ಪವಿತ್ರ ಕುಟುಂಬದ ಹಬ್ಬ
ಮೊದಲ ವಾಚನ: ಆದಿ 15:1-6, 21:1-3
ಕೀರ್ತನೆ 105:1-2, 3-4, 6, 5, 8-9 ಶ್ಲೋಕ.7-8
ಪ್ರಭು ನಮ್ಮ ದೇವನೆಂಬುದು ಶ್ರುತ,
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು
ಎರಡನೇ ವಾಚನ: ಹಿಬ್ರಿ 11:8, 11-12, 17-19
ಶುಭಸಂದೇಶ: ಲೂಕ 2.22-40
---------------
ಸಂತ ಯೊವಾನ್ನ, ಪ್ರೇಷಿತ ಮತ್ತು ಶುಭಸಂದೇಶಕರ್ತ
==================
ಮೊದಲನೇ ವಾಚನ
ಆದಿ 15:1-6, 21:1-3
1 : ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.”
2 : ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - ""ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ.
3 : ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು.
4 : ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು.
5 : ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು.
6 : ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು.
1 : ಸರ್ವೇಶ್ವರಸ್ವಾಮಿ ತಾವು ಹೇಳಿದ್ದಂತೆಯೇ ಸಾರಳಿಗೆ ನೆರವಾದರು. ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದರು.
2 : ಆಕೆ ಗರ್ಭಿಣಿಯಾಗಿ ಅಬ್ರಹಾಮನಿಂದ ಒಬ್ಬ ಮಗನನ್ನು ಹೆತ್ತಳು. ಅದೂ ಅಬ್ರಹಾಮನು ಮುದುಕನಾಗಿದ್ದಾಗ, ದೇವರು ಮೊದಲೇ ನಿರ್ಧರಿಸಿದ್ದ ಕಾಲಕ್ಕೆ ಹೆತ್ತಳು.
3 : ತನ್ನಿಂದ ಸಾರಳಲ್ಲಿ ಹುಟ್ಟಿದ ಆ ಮಗನಿಗೆ ಅಬ್ರಹಾಮನು ‘ಇಸಾಕ್’ ಎಂದು ಹೆಸರಿಟ್ಟನು.
===================
ಕೀರ್ತನೆ
ಕೀರ್ತನೆ 105:1-2, 3-4, 6, 5, 8-9 ಶ್ಲೋಕ.7-8
ಶ್ಲೋಕ: ಪ್ರಭು ನಮ್ಮ ದೇವನೆಂಬುದು ಶ್ರುತ,
ನೆನಪಿನಲ್ಲಿಡುವನು ಪ್ರಭು
ತನ್ನ ವಾಗ್ದಾನವನು||
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು /
ಮಾಡಿರಿ ಆತನ ನಾಮಸ್ಮರಣೆಯನು /
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು /
ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ /
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ /
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
6 : ನೆನೆಯಿರಿ ಆತನದ್ಭುತಗಳನು,
ಮಹತ್ಕಾರ್ಯಗಳನು /
ಆತನ ವದನ ವಿಧಿಸಿದಾ
ನ್ಯಾಯನಿರ್ಣಯಗಳನು //
5 : ಆತನ ದಾಸ ಅಬ್ರಹಾಮನ
ಸಂತತಿಯವರೇ /
ಆತನಾರಿಸಿಕೊಂಡ
ಯಕೋಬನ ವಂಶದವರೇ /
7 : ಪ್ರಭು ನಮ್ಮ ದೇವನೆಂಬುದು ಶ್ರುತ /
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು /
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ
ಒಡಂಬಡಿಕೆಯನು /
ಇಸಾಕನಿಗೆ ಆಣೆಯಿಟ್ಟು
ಆತ ಹೇಳಿದುದನು //
==================
ಎರಡನೇ ವಾಚನ
ಹಿಬ್ರಿ 11:8, 11-12, 17-19
8 : ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು.
11 : ಇದಲ್ಲದೆ, ಪ್ರಾಯ ಮೀರಿದ ಸಾರಳು ಕೂಡ ವಿಶ್ವಾಸದ ಮೂಲಕವಾಗಿಯೇ ಗರ್ಭವತಿ ಆಗುವ ಶಕ್ತಿಯನ್ನು ಪಡೆದಳು; ವಾಗ್ದಾನಮಾಡಿದ ದೇವರು ನಂಬಿಗಸ್ಥರು ಎಂಬ ಭರವಸೆ ಆಕೆಗಿತ್ತು.
12 : ಹೀಗೆ ಮೃತಪ್ರಾಯನಾಗಿದ್ದ ಒಬ್ಬ ವ್ಯಕ್ತಿ ಆಕಾಶದ ನಕ್ಷತ್ರಗಳಂತೆಯೂ ಕಡಲ ತೀರದ ಮರಳಿನಂತೆಯೂ ಅಸಂಖ್ಯಾತವಾದ ಸಂತತಿಗೆ ತಂದೆಯಾದನು.
17 : ವಿಶ್ವಾಸವಿದ್ದುದರಿಂದಲೇ ಅಬ್ರಹಾಮನು ತಾನು ಪರಿಶೋಧಿತನಾದಾಗ ಇಸಾಕನನ್ನು ಬಲಿಯಾಗಿ ಅರ್ಪಿಸಲು ಮುಂದೆ ಬಂದನು.
18 : “ಇಸಾಕನಿಂದ ಹುಟ್ಟುವವರು ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂಬ ವಾಗ್ದಾನವನ್ನು ಪಡೆದಿದ್ದರೂ ಅಬ್ರಹಾಮನು ತನ್ನ ಆ ಏಕಮಾತ್ರ ಪುತ್ರನನ್ನು ಬಲಿಕೊಡಲು ಹಿಂಜರಿಯಲಿಲ್ಲ.
19 : ಏಕೆಂದರೆ, ಸತ್ತವರನ್ನು ದೇವರು ಜೀವಕ್ಕೆ ಎಬ್ಬಿಸಬಲ್ಲರು ಎಂಬುದನ್ನು ಅಬ್ರಹಾಮನು ತಿಳಿದಿದ್ದನು. ಅಂತೆಯೇ, ತನ್ನ ಮಗನನ್ನು ಸಾವಿನಿಂದ ಮರಳಿ ಪಡೆದನು. ಮುಂಬರಲಿರುವ ಘಟನೆಗೆ ಇದೊಂದು ಮುನ್ಸೂಚನೆಯಾಗಿತ್ತು.
==========
ಶುಭಸಂದೇಶ
ಲೂಕ 2.22-40
22 : ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು.
23 : ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು.
24 : ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25 : ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು.
26 : ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು.
27 : ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ,
28 : ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
29 : “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು.
30 : ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ
31 : ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
32 : ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ; ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
33 : ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು.
34 : ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು.
35 : (ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,)” ಎಂದು ಹೇಳಿದನು.
36 : ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು.
37 : ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು.
38 : ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಮರಳಿ ನಜರೇತಿಗೆ
39 : ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು.
40 : ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು.
===================
ಚಿಂತನೆ
ಪೀಠಿಕೆ
ಪ್ರೀತಿಯ ಕ್ರೈಸ್ತ ಬಾಂಧವರೇ, ಇಂದು ತಾಯಿ ಧರ್ಮಸಭೆ ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸುತ್ತಿದೆ. ಕುಟುಂಬವು ಧರ್ಮಸಭೆಯ ಆಧಾರ ಸ್ತಂಭ ಹಾಗೂ ಸಮಾಜದ ಅತ್ಯಂತ ಚಿಕ್ಕ ಘಟಕ. ಒಂದು ಒಳ್ಳೆಯ ಕುಟುಂಬ ಸಾಮಾನ್ಯವಾಗಿ ಒಬ್ಬ ಒಳ್ಳೆಯ ಪ್ರಜೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತದೆ. ಕುಟುಂಬವು ಮಾನವನ ಮೊದಲ ಮನೆ. ’ಯಾವ ಕುಟುಂಬ ಜೊತೆಯಾಗಿ ಪ್ರಾರ್ಥಿಸುತ್ತದೋ ಆ ಕುಟುಂಬ ಜೊತೆಯಾಗಿ ಬಾಳುತ್ತದೆ’ ಎಂಬ ಮಾತನ್ನು ಕೇಳಿದ್ದೇವೆ. ಇದೇ ರೀತಿಯಲ್ಲಿ ಸಂತ ಜೋಸಫರು, ಮಾತೆ ಮರಿಯ ಹಾಗೂ ಕಂದ ಯೇಸು ಒಂದು ಪವಿತ್ರ ಕುಟುಂಬವಾಗಿ ನಮ್ಮೆಲ್ಲರಿಗೂ ಪ್ರೀತಿ ಮತ್ತು ವಿಶ್ವಾಸದ ಕುಟುಂಬವಾಗಿ ಬೆಳೆಯಲು ಉತ್ತಮ ಆದರ್ಶವಾದರು. ಯೇಸು ದೇವಪುತ್ರನಾಗಿದ್ದರೂ ತಾಯಿಯ ಮಡಿಲು, ತಂದೆಯ ಆರೈಕೆ, ದೈವ ನಂಬಿಕೆ, ವಿಶ್ವಾಸ ಮತ್ತು ಭಕ್ತಿಯಲ್ಲಿ, ಒಂದು ಧರ್ಮದ ಚೌಕಟ್ಟಿನಲ್ಲಿ, ಅದರ ನೀತಿ ನಿಯಮಗಳಡಿಯಲ್ಲಿ, ಪೂಜೆ ಪ್ರಾರ್ಥನೆಗಳ ಮಾರ್ಗದರ್ಶನದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದರು. ಇಂದು ನಮ್ಮ ಕುಟುಂಬಗಳು ಸಹ ಆಧ್ಯಾತ್ಮಿಕ ಮತ್ತು ಲೌಕಿಕ ಬೆಳೆವಣಿಗೆಯಿಂದ ಪುನಶ್ಚೇತನಗೊಂಡು ಈ ಮಾತೃಕೆಯ ಪ್ರಕಾರ ಬಾಳುವ ಪವಿತ್ರ ಕುಟುಂಬಗಳಾಗಲು ಧರ್ಮಸಭೆ ನಮಗೆಲ್ಲರಿಗೂ ಕರೆ ನೀಡುತ್ತದೆ.
ಇಂದಿನ ಮೊದಲನೆಯ ವಾಚನದಲ್ಲಿ, ದೇವರು ಅಬ್ರಹಾಮನಿಗೆ ದಿವ್ಯದರ್ಶನವಿತ್ತು, ಕುಟುಂಬದ ಸಂಪೂರ್ಣತೆಯ ಕುರುಹಾಗಿ ತಾನಿತ್ತ ಇಸಾಕೆಂಬ ಪುತ್ರನಿಂದ ಸಂತಾನವನ್ನು ತುಂಬುತ್ತಾರೆ. ದೇವರ ಮೇಲೆ ವಿಶ್ವಾಸವಿಟ್ಟುದರಿಂದ ಆತನಿಗೆ ಬೇಕಾದಂತಹ ವರ ದೊರಕಿತು. ದೇವರೇ ಆತನ ರಕ್ಷಾಕವಚವಾಗಿದ್ದರು. ಅವರೇ ದಂಪತಿಗಳ ಇಳಿ ವಯಸ್ಸಿನಲ್ಲಿ ಉತ್ತರಾಧಿಕಾರಿಯ ಮತ್ತು ಸಂತಾನೋತ್ಪಿಯ ದುಗುಡವನ್ನು ಅಳಿಸಿ ವಿಶ್ವಾಸದ ಹೊಸ ಜೀವನವನ್ನು ಅನುಗ್ರಹಿಸುತ್ತಾರೆ. ಗಾಢವಾದ ವಿಶ್ವಾಸವು ದೇವರ ಮತ್ತು ಅಬ್ರಹಾಮನ ಸಂಬಂಧವನ್ನು ಭದ್ರಗೊಳಿಸಿ, ಪ್ರೀತಿ-ವಿಶ್ವಾಸದ ತಳಹದಿಯನ್ನು ಕಟ್ಟಿತು. ನಮ್ಮೆಲ್ಲರ ವಿಶ್ವಾಸದ ನೆಲಗಟ್ಟು ಅಬ್ರಹಾಮನ ದೈವಭಕ್ತಿಯಂತೆ ಭದ್ರವಾಗಲೆಂದು ಪ್ರಾರ್ಥಿಸೋಣ.
ಇಂದಿನ ಎರಡನೆಯ ವಾಚನದಲ್ಲಿ, ಸಂತ ಪೌಲನು ಅಬ್ರಹಾಮನ ವಿಶ್ವಾಸದಿಂದ ಏನೆಲ್ಲಾ ಸಾಧ್ಯವಾಯಿತು ಎಂಬುದನ್ನು ತಿಳಿಸುತ್ತಾನೆ. ಅಬ್ರಹಾಮನ ವಿಶ್ವಾಸವು ದೇವರ ಕರೆಗೆ ಓಗೊಟ್ಟುದಕ್ಕೆ, ತನ್ನ ಸ್ವದೇಶವನ್ನು ತೊರೆದರೂ ಹಾಲು ಜೇನು ಹರಿಯುವ ನಾಡನ್ನೂ, ಸಂತಾನೋತ್ಪತಿಯನ್ನೂ ಪಡೆಯಲು, ಇಸಾಕನನ್ನು ಬಲಿಯರ್ಪಿಸಲು, ವಿಶ್ವಾಸದ ಪಿತಾಮಹನಾಗಲು ಮತ್ತು ಇಡೀ ಇಸ್ರಯೇಲ್ ಜನಾಂಗವನ್ನು ದೇವರ ಮಾರ್ಗದಲ್ಲಿ ನಡೆಸಲು ಸಹಕಾರಿಯಾಯಿತು ಎಂದು ತಿಳಿಸುತ್ತಾನೆ. ಇಷ್ಟೆಲ್ಲಾ ವರಗಳು, ಕೊಡುಗೆಗಳು ಮತ್ತು ಸಂತೃಪ್ತಿಯ ಜೀವನ ದೊರಕಬೇಕಾದರೆ ಗಾಢವಾದ ವಿಶ್ವಾಸದಿಂದ ಮಾತ್ರ ಸಾಧ್ಯವೆಂದು ಸಾರುತ್ತಾನೆ
ಶುಭಸಂದೇಶ
ಇಂದು ತಾಯಿ ಧರ್ಮಸಭೆಯು ಕ್ರಿಸ್ಮಸ್ ಹಬ್ಬದ ಬಳಿಕ ಭಾನುವಾರವನ್ನು ’ಪವಿತ್ರ ಕುಟುಂಬದ ಹಬ್ಬ’ ವೆಂದು ಆಚರಿಸುತ್ತದೆ. ಕ್ರಿ.ಶ. ೧೭ನೇ ಶತಮಾನದಲ್ಲೇ ಜಗದ್ಗುರು ಲಿಯೋ ರವರು ಇದನ್ನು ಪ್ರೋತ್ಸಾಹಿಸಿದರೆ, ೧೯೨೧ರಲ್ಲಿ ೧೫ನೇ ಜಗದ್ಗುರು ಬೆನೆಡಿಕ್ಟರು ಈ ಹಬ್ಬವನ್ನು ಕಥೊಲಿಕ ಕ್ಯಾಲೆಂಡರ್ನಲ್ಲಿ ಅಳವಡಿಸಿ ಇಡೀ ಧರ್ಮಸಭೆ ಈ ಹಬ್ಬವನ್ನು ಆಚರಿಸುವಂತೆ ಅನುವು ಮಾಡಿಕೊಡುತ್ತಾರೆ. ಇಂದು ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸುತ್ತಿರುವ ನಮಗೆ ಸಿಗುವ ಸಂದೇಶವಾದರೂ ಯಾವುದು? ಎಂದು ನಮ್ಮನ್ನೆ ನಾವು ಪರೀಕ್ಷಿಸಿಕೊಳ್ಳಬೇಕಾಗಿದೆ. ಪವಿತ್ರ ಕುಟುಂಬವು ಧಾರ್ಮಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ಪೂರೈಸುವುದರ ಮೂಲಕ ಯೇಸುವನ್ನು ದೇವರಲ್ಲಿ ಒಪ್ಪಿಸಿಕೊಡುತ್ತಾರೆ(ವಿಮೊ.೧೩:೨). ಲೆಬನಾನಿನ ಕವಿ ಕಲೀಲ್ ಗಿಬ್ರಾನ್ ಹೀಗೆ ತಿಳಿಸುತ್ತಾರೆ, “ನಿಮ್ಮ ಮಕ್ಕಳು ಎಂದಿಗೂ ನಿಮ್ಮ ಮಕ್ಕಳಲ್ಲ, ಅವರು ಜೀವನಕ್ಕಾಗಿ ಹಾತೊರೆಯುವ ಮಕ್ಕಳಾಗಿದ್ದಾರೆ. ಅವರು ನಿಮ್ಮಿಂದ ಬಂದರೂ ಅವರು ನಿಮ್ಮವರಲ್ಲ. ಅವರು ನಿಮ್ಮ ಜೊತೆಯಲ್ಲಿದ್ದರೂ ಅವರು ನಿಮ್ಮವರಲ್ಲ”. ಹೀಗೆ ಸಿಮೆಯೋನ್ ಮತ್ತು ಅನ್ನಳ ಮಾತುಗಳು ಭಯ, ಆಶ್ಚರ್ಯ ಮತ್ತು ಸಂತೋಷದ ಸಂಗತಿಗಳನ್ನು ಬಿಚ್ಚಿಟ್ಟವೇ ಅಲ್ಲದೆ, ದೇವರ ದಯೆ, ಪ್ರೀತಿ, ವಿಶ್ವಾಸ ಮತ್ತು ರಕ್ಷಣಾಕಾರ್ಯದ ಸತ್ಯತೆಯ ಮನವರಿಕೆಮಾಡುತ್ತವೆ. ಇವರು ಸಹ ಕ್ರಿಸ್ತನ ಬಗ್ಗೆ ಸಂದೇಶ ಸಾರಿದ ಕುಟುಂಬದ ಪ್ರವಾದಿಗಳಾಗಿದ್ದಾರೆ. ನಮ್ಮಲ್ಲಿಯೂ ಕ್ರಿಸ್ತನ ವಿಮೋಚನೆ ಸಾರುವ ಪ್ರವಾದಿ ಇರಬಹುದೆ? ದೇವರು ಕೊಟ್ಟ ೪ನೇ ಆಜ್ಞೆಯ ಪ್ರಕಾರ ಯೇಸು ತಂದೆ ತಾಯಿಯನ್ನು ಗೌರವಿಸಿ, ವಿಧೇಯರಾಗಿದ್ದು ದೈವಾನುಗ್ರಹದಲ್ಲಿ ಮತ್ತು ಜ್ಞಾನಸಂಪೂರ್ಣತೆಯಲ್ಲಿ ಯಥೇಚ್ಛವಾಗಿ ಬೆಳೆದರು. ಹೀಗೆ ಯೇಸು ನಮ್ಮೆಲ್ಲರ ವಿಮೋಚಕರಾಗಿ, ದೀನತೆಯ ಮಗುವಾಗಿ, ಸಮಾಜದಲ್ಲಿ ದೈವ ಸಂಕೇತವಾಗಿ ಪವಿತ್ರ ಕುಟುಂಬದಲ್ಲಿ ಮಾತೆಮೇರಿ ಮತ್ತು ಜೋಸೆಫರ ಆಶ್ರಯದಲ್ಲಿ ಬೆಳೆದರೆಂದು ಇಂದಿನ ಶುಭಸಂದೇಶ ತಿಳಿಸುತ್ತದೆ.
ನಮ್ಮ ಕುಟುಂಬಗಳು ಪವಿತ್ರ ಕುಟುಂಬಗಳಾಗ ಬೇಕಾದರೆ ಏನು ಮಾಡಬೇಕು? ಈ ಕುಟುಂಬದಂತೆ ಬೆಳೆಯಲು ನಮ್ಮ ಕುಟುಂಬಗಳಲ್ಲಿ ಒಳ್ಳೆಯ ಆಧ್ಯಾತ್ಮಿಕ ಜೀವನವಿರಬೇಕು. ಮೊದಲನೆಯದಾಗಿ ಕುಟುಂಬದಲ್ಲಿ ವಿಶ್ವಾಸವಿರಬೇಕು. ತಂದೆತಾಯಿ ಮಕ್ಕಳು ಪರಸ್ಪರ ನಂಬಿಕೆಯಿಂದ, ವಿಶ್ವಾಸದಿಂದ ಜೀವನ ನಡೆಸಬೇಕು. ಎರಡನೆಯದಾಗಿ ಪ್ರೀತಿವಾತ್ಸಲ್ಯದ ಕುಟುಂಬವಾಗಿರಬೇಕು. ಗಂಡಹೆಂಡತಿಯ ಪ್ರೀತಿಯ ನುಡಿಗಳ, ಒಬ್ಬರನ್ನೊಬ್ಬರು ಗೌರವಿಸುವ ಮತ್ತು ಅನ್ಯೋನ್ಯದ ಜೀವನ ಮಕ್ಕಳಿಗೆ ಮತ್ತು ಇತರ ಕುಟುಂಬಗಳಿಗೆ ಮಾದರಿಯ ಕುಟುಂಬವಾಗಿರುತ್ತದೆ. ಮೂರನೆಯದಾಗಿ ಪ್ರಾರ್ಥನೆಯ ಕುಟುಂಬವಾಗಿರಬೇಕು. ಯಾವ ಕುಟುಂಬವು ದಿನ ನಿತ್ಯ ಪ್ರಾರ್ಥನೆಯಲ್ಲಿ ತೊಡಗಿರುತ್ತದೋ ಆ ಕುಟುಂಬ ಒಟ್ಟಾಗಿರುತ್ತದೆ. ಈ ಎಲ್ಲಾ ಗುಣಗಳನ್ನು ಅಳವಡಿಸಿ ಬಾಳಿದವರು ಮಾತೆಮೇರಿ, ಜೋಸೆಫ್ ಮತ್ತು ಯೇಸುವಿನ ಕುಟುಂಬವಾಗಿದೆ. ಈ ಹಬ್ಬವನ್ನು ಸ್ಥಾಪಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಧರ್ಮಸಭೆಯ ಪ್ರಾಥಮಿಕ ಉದ್ದೇಶವೆಂದರೆ ಪವಿತ್ರ ಕುಟುಂಬವನ್ನು ಎಲ್ಲಾ ಕ್ರೈಸ್ತ ಕುಟುಂಬಗಳಿಗೆ ಮಾದರಿ ಮತ್ತು ಉದಾಹರಣೆಯಾಗಿ ಪ್ರಸ್ತುತಪಡಿಸುವುದು. ಆದ್ದರಿಂದ ಕ್ರೈಸ್ತ ಕುಟುಂಬಗಳಲ್ಲಿ ನಂಬಿಗಸ್ಥ ಪ್ರೀತಿ ಮತ್ತು ನಜರೇತಿನ ಕುಟುಂಬವನ್ನು ನಿರೂಪಿಸುವ ಶ್ರದ್ಧಾಭಕ್ತಿಯ ಬಾಂಧವ್ಯ ಬೆಳೆಯಲೆಂದು ಇಂದಿನ ಬಲಿಪೂಜೆಯಲ್ಲಿ ಪ್ರಾರ್ಥಿಸೋಣ.
========================
ಚಿಂತನೆ – ಫಾ ಕಾಣಿಕ್ಯ ರಾಜ್ ಎಸ್ ಜೆ
=========================
No comments:
Post a Comment