Tuesday, 24 November 2020

ಡಿಸೆಂಬರ್ 28, 2020 ಸೋಮವಾರ

 ಡಿಸೆಂಬರ್ 28, 2020 ಸೋಮವಾರ                        [ಕೆಂಪು]
ಪಾವನ ಶಿಶುಗಳು, ರಕ್ತ ಸಾಕ್ಷಿಗಳು 
ಮೊದಲ ವಾಚನ: 1 ಯೊವಾನ್ನ 1:5-2:2
ಕೀರ್ತನೆ 124:2-3, 4-5, 7-8, ಶ್ಲೋಕ.7
ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು, 
ಹರಿದು ಹೋಯಿತಿದೊ ಬಲೆಯು, ಹಾರಿಹೋದೆವು ನಾವು
ಶುಭಸಂದೇಶ: ಮತ್ತಾಯ 2.13-18
==================
ಮೊದಲನೇ ವಾಚನ
===============
1 ಯೊವಾನ್ನ 1:5-2:2
5 : ದೇವರೇ ಬೆಳಕು. ಅವರಲ್ಲಿ ಕತ್ತಲು ಎಂಬುದೇ ಇಲ್ಲ. ಅವರ ಪುತ್ರನಿಂದಲೇ ನಾವು ಕೇಳಿದ ಈ ಸಂದೇಶವನ್ನು ನಿಮಗೆ ಸಾರುತ್ತಿದ್ದೇವೆ.
6 : ನಾವು ಕತ್ತಲಲ್ಲಿ ಬಾಳುತ್ತಾ ದೇವರೊಡನೆ ಅನ್ಯೋನ್ಯವಾಗಿದ್ದೇವೆಂದು ಹೇಳಿದರೆ ನಾವು ಸುಳ್ಳುಗಾರರು, ಸತ್ಯಕ್ಕನುಸಾರ ಬಾಳದವರು.
7 : ಬದಲಿಗೆ, ದೇವರು ಬೆಳಕಿನಲ್ಲಿರುವಂತೆ ನಾವೂ ಬೆಳಕಿನಲ್ಲಿ ನಡೆದರೆ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಆಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದಲೂ ಶುದ್ಧಗೊಳಿಸುತ್ತದೆ.
8 : ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿಕೊಂಡರೆ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ ಮತ್ತು ಸತ್ಯವೆಂಬುದೇ ನಮ್ಮಲ್ಲಿ ಇರುವುದಿಲ್ಲ.
9 : ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ-ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ.
10 : ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ದೇವರನ್ನು ಸುಳ್ಳುಗಾರರನ್ನಾಗಿಸುತ್ತೇವೆ ಮತ್ತು ಅವರ ವಾಣಿ ನಮ್ಮಲ್ಲಿ ಇರುವುದಿಲ್ಲ.
ಪ್ರಿಯ ಮಕ್ಕಳೇ , ನೀವು ಪಾಪ ಮಾಡಬಾರದೆಂದೇ ನಾನಿದನ್ನು ನಿಮಗೆ ಬರೆಯುತ್ತಿದ್ದೇನೆ. ಒಂದು ವೇಳೆ ಯಾರಾದರೂ ಪಾಪ ಮಾಡಿದ್ದೇ ಆದರೆ ನಮ್ಮ ಪರವಾಗಿ ಪಿತನ ಬಳಿಯಲ್ಲಿ ಭಿನ್ನಯಿಸಲು ಒಬ್ಬರಿದ್ದಾರೆ. ಅವರೇ ಸತ್ಯರೂಪರಾದ ಯೇಸುಕ್ರಿಸ್ತರು. ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ, ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ.
===================
ಕೀರ್ತನೆ 
ಕೀರ್ತನೆ 124:2-3, 4-5, 7-8, ಶ್ಲೋಕ.7
ಶ್ಲೋಕ: ಬೇಟೆಬಲೆಯಿಂದ 
            ಪಾರಾದ ಪಕ್ಷಿಯಂತಾದೆವು, 
            ಹರಿದು ಹೋಯಿತಿದೊ ಬಲೆಯು, 
            ಹಾರಿಹೋದೆವು ನಾವು /
2 : ಪ್ರಭು ನಮ್ಮ ಪರ ಇಲ್ಲದಿದ್ದರೆ ಏನಾಗುತ್ತಿತ್ತು?/ 
ಜನರೆಮಗೆ ವಿರುದ್ಧ ಎದ್ದಾಗ ಏನಾಗುತ್ತಿತ್ತು? //
3 : ಉರಿಗೊಳ್ಳುತಿದ್ದರು ಕಡುಗೋಪದಿಂದ ಖಂಡಿತ / 
ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ // 
4 : ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ / 
ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ ಪೂರ /
5 : ಮುಳುಗಿಸಿಬಿಡುತ್ತಿತ್ತು ನಮ್ಮನ್ನು ಮಹಾಪ್ರಳಯ//
7 : ಬೇಟೆಬಲೆಯಿಂದ ಪಾರಾದ ಪಕ್ಷಿಯಂತಾದೆವು /
 ಹರಿದುಹೋಯಿತಿದೊ ಬಲೆಯು, ಹಾರಿಹೋದೆವು ನಾವು
8 : ನಮಗುದ್ಧಾರ ಪ್ರಭುವಿನ ನಾಮದಲಿ / 
ಭೂಮ್ಯಾಕಾಶವನು ಸೃಜಿಸಿದಾತನಲಿ //
===================
ಶುಭಸಂದೇಶ
ಮತ್ತಾಯ 2.13-18
13 : ಜ್ಯೋತಿಷಿಗಳು ಹೊರಟು ಹೋದಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ""ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು,"" ಎಂದನು.
14 : ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು.
15 : ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, ""ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದನು"" ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.
16 : ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದು ಹಾಕಿಸಿದನು.
17 : ""ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ, ಅಘೋರ ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು,""
18 : ಪ್ರವಾದಿ ಯೆರೆವಿೂಯನ ಈ ಪ್ರವಚನ ಅಂದು ಸತ್ಯವಾಯಿತು.
===================
ಚಿಂತನೆ
ಮತ್ತಾಯನ ಶುಭಸಂದೇಶದ ಪ್ರಕಾರ (2:16) ಕ್ರಿಸ್ತನನ್ನು ಹುಡುಕಿಕೊಂಡು ಬಂದ ಮೂರು ಜ್ಞಾನಿಗಳು `ಅರಸ ಹುಟ್ಟಿದ್ದು ಎಲ್ಲಿ?’ ಎಂದು ಅರಸುತ್ತಾ ಹೆರೋದನ ಅರಮನೆ ಮುಟ್ಟುತ್ತಾರೆ. ಮತ್ತೊಬ್ಬ ಅರಸ ಅಥವಾ ಮೆಸ್ಸೀಯ ಹುಟ್ಟಲಿದ್ದಾನೆ ಎಂಬ ಕಲ್ಪನೆಯೇ ಹೆರೋದ ಅರಗಿಸಿಕೊಳ್ಳಲಾರದ್ದು. ಜ್ಯೋತಿಷಿಗಳಿಗೆ ಆ ಸ್ಥಳವನ್ನು ತನಗೂ ತೋರಿಸುವಂತೆ ಸೂಚನೆ ನೀಡಿದ್ದರೂ ಜ್ಯೋತಿಷಿಗಳು ಹಾಗೆ ಮಾಡದೆ ಮರೆಯಾಗಿ ಹೋಗಿದ್ದರಿಂದ ಕೋಪೋದ್ರೇಕಗೊಂಡ ಹೆರೋದ ಬೆತ್ಲೆಹೇಮಿನ ಎರಡು ವರ್ಷ ಕೆಳಗಿನ ಎಲ್ಲಾ ಹಸುಗೂಸುಗಳನ್ನು ಕೊಲ್ಲಿಸುತ್ತಾನೆ. ಹೀಗೆ ಕ್ರಿಸ್ತನಿಗಾಗಿ ಪ್ರಾಣತೆತ್ತ ಮೊದಲ ಹುತಾತ್ಮರು ಈ ಮಕ್ಕಳು ಎಂದು ಧರ್ಮಸಭೆ ಇವರನ್ನು ಪ್ರಥಮ ರಕ್ತ ಸಾಕ್ಷಿಗಳು ಎಂದು ಪರಿಗಣಿಸಿ ಪಾವನ ಶಿಶುಗಳ ಹಬ್ಬ ಆಚರಿಸುತ್ತದೆ. ಈ ಮಕ್ಕಳ ಬಗ್ಗೆ ಧರ್ಮಸಭೆ ವಿಶೇಷ ಆಸಕ್ತಿ ವಹಿಸಲು ಕಾರಣವೆಂದರೆ, ಈ ಮಕ್ಕಳು ಕ್ರಿಸ್ತನಿಗಾಗಿಯಷ್ಟೇ ಸಾಯಲಿಲ್ಲ, ಕ್ರಿಸ್ತನ ಬದಲಾಗಿ ಸತ್ತರು. ಈ ಮಕ್ಕಳು ಹರಿಸಿದ ರಕ್ತ ಅವರ ದೀಕ್ಷಾಸ್ನಾನದ ಸಂಕೇತವಾಗಿತ್ತು.
===================

No comments:

Post a Comment