Wednesday, 2 December 2020

ನವೆಂಬರ್ 3, 2020 ಮಂಗಳವಾರ

 ನವೆಂಬರ್ 3, 2020 ಮಂಗಳವಾರ                        [ಹಸಿರು]
ಸಂತ ಮಾರ್ಟಿನ್ ದಿ ಪೊರ್ರೆಸ್, ಧಾರ್ಮಿಕ ವ್ಯಕ್ತಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಫಿಲಿಪ್ಪಿಯರಿಗೆ 2.5-11
ಕೀರ್ತನೆ 22: 25-26, 27-29, 30-31 ಶ್ಲೋಕ.25
ಪ್ರಭೂ, ನೀನೇ ಸ್ಪೂರ್ತಿ ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ
ಶುಭಸಂದೇಶ: ಲೂಕ 14.15-24
==================
ಫಿಲಿಪ್ಪಿಯರಿಗೆ 2.5-11

5 : ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ:
6 : ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
7 : ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ.
8 : ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ.
9 : ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು.
10 : ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
11 : ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.
===================
ಕೀರ್ತನೆ 
ಕೀರ್ತನೆ 22: 25-26, 27-29, 30-31 ಶ್ಲೋಕ.25
ಪ್ರಭೂ, ನೀನೇ ಸ್ಪೂರ್ತಿ ತುಂಬು 
ಸಭೆಯಲಿ ನಾ ಮಾಳ್ಪ ಸ್ತುತಿಗೆ

25 : ಪ್ರಭು, ನೀನೆ ಸ್ಫೂರ್ತಿ, 
ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ / 
ಭಕ್ತಜನರ ಮುಂದೆ ನಾ ಸಲ್ಲಿಸುವೆ, 
ನಿನಗೆ ಹೊತ್ತ ಹರಕೆ //
26 : ಹರಿವುದು ಸ್ತುತಿ ಭಕ್ತರ ಬಾಯಿಂದ; 
ತುಂಬುವುದು ದಲಿತರುದರ / 
ಇರಲಿ ಚೈತನ್ಯಭರಿತ 
ನಿಮ್ಮಂತರಂಗವು ನಿರಂತರ //
27 : ಎಚ್ಚೆತ್ತು ಅಭಿಮುಖವಾಗುವುದು 
ಜಗದಾದ್ಯಂತ ಪ್ರಭುಗೆ / 
ಸಾಷ್ಟಾಂಗವೆರಗುವುವು ಧರೆಯ 
ಸರ್ವ ಜನಾಂಗಗಳು ಆತನಿಗೆ //
28 : ಪ್ರಭುವಿಗೆ ಸೇರಿದುದು 
ರಾಜ್ಯಭಾರವೆಲ್ಲವು / 
ಆತನದೆ ರಾಷ್ಟ್ರಗಳ 
ಒಡೆತನವೆಲ್ಲವು //
29 : ತಲೆಬಾಗುವರಾತನಿಗೆ 
ಧರೆಯ ಗರ್ವಿಗಳೆಲ್ಲರು / 
ಅಡ್ಡ ಬೀಳುವರವನಿಗೆ 
ಮತ್ರ್ಯ ಮಾನವರೆಲ್ಲರು //
30 : ವಂದಿಪುದು ಪ್ರಭುವನು 
ಮುಂದಿನ ಪೀಳಿಗೆ / 
ಸಾರುವುದಾತನ 
ವದಂತಿಯನು ಜನರಿಗೆ //
31 : ಸಾರುವರು ಮುಂದಿನ 
ಜನತೆಗುದ್ಧಾರವನು / 
ಅರುಹುವರು ಆತನೆಸಗಿದ 
ಮಹತ್ಕಾರ್ಯವನು //
==================
ಶುಭಸಂದೇಶ
ಲೂಕ 14.15-24
15 : ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸುಸ್ವಾಮಿ ಹೇಳಿದ್ದನ್ನು ಕೇಳಿ, “ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು!” ಎಂದನು.
16 : ಯೇಸು ಅವನಿಗೆ ಈ ಸಾಮತಿ ಹೇಳಿದರು: “ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ.
17 : ಊಟಕ್ಕೆ ವೇಳೆಯಾದಾಗ, ‘ಈಗ ಎಲ್ಲಾ ಸಿದ್ಧವಾಗಿದೆ ಬನ್ನಿ,’ ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕನನ್ನು ಕಳಿಸಿದ.
18 : ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು ‘ಕ್ಷಮಿಸಬೇಕು,’ ಎಂದು ಹೇಳಲಾರಂಭಿಸಿದರು.
19 : ಒಬ್ಬ, ‘ಕ್ಷಮಿಸಬೇಕು, ಒಂದು ಹೊಲ ಕೊಂಡು ಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ,’ ಎಂದ.
20 : ಇನ್ನೊಬ್ಬ, ‘ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು,’ ಎಂದ. ಮತ್ತೊಬ್ಬ, ‘ನನಗೆ ಈಗ ತಾನೆ ಮದುವೆ ಆಗಿದೆ, ಬರುವುದಕ್ಕಾಗುವುದಿಲ್ಲ,’ ಎಂದನು.
21 : “ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ.
22 : ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, ‘ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ,’ ಎಂದು ಆಜ್ಞೆಮಾಡಿದ.
23 : ಸೇವಕನು ಬಂದು, ‘ಸ್ವಾವಿೂ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ,’ ಎಂದು ಹೇಳಿದ. ಅದಕ್ಕೆ ಯಜಮಾನ ‘ಹಾಗಾದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯ ಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ.
24 : ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!’ ಎಂದು ಸ್ಪಷ್ಟಪಡಿಸಿದ.”
===================
ಚಿಂತನೆ
ಯೆಹೂದ್ಯರಲ್ಲಿ ನಾವು `ದೇವರ ಸ್ವಂತ ಜನರು, ದೇವರಿಂದ ಆಯ್ಕೆಯಾದವರು, ಅಬ್ರಹಾಮನ ವಂಶಸ್ಥರು, ತಮಗೆ ವಾಗ್ಧಾನ ಮಾಡಿನಾದೇ ಸ್ವರ್ಗ ಸಾಮ್ರಾಜ್ಯ ತಮ್ಮ ಆಸ್ತಿ’ ಎಂಬ ಧೋರಣೆಯಿತ್ತು. ಯೇಸು ಇಂದಿನ ಶುಭಸಂದೇಶದಲ್ಲಿ ಯೆಹೂದ್ಯರಿಗೆ ಮತ್ತು ಜೆರುಸಲೇಮ್ ನಗರಕ್ಕೆ ಬರುವ ದುರ್ಗತಿಯನ್ನು ಪ್ರವಾದಿಸುತ್ತಾರೆ.
ದೇವರು ತಮ್ಮ ಪುತ್ರ ಯೇಸುವಿನ ಮುಖಾಂತರ ಸರ್ವರಿಗೂ ಸ್ವರ್ಗ ಸಾಮ್ರಾಜ್ಯದ ಔತಣಕ್ಕೆ ಆಹ್ವಾನವನ್ನು ಕೊಟ್ಟಿರುವರು.ಸ್ವರ್ಗ ಸಾಮ್ರಾಜ್ಯಕ್ಕೆ ದೇವರು ಕೊಡುವ ಆಮಂತ್ರಣ ಒಂದು ವರದಾನ. ದೇವರು ತಮ್ಮ ಸಾಮ್ರಾಜ್ಯವನ್ನು ಸೇರಲು ಜಾತಿ, ಮತ, ಬಣ್ಣ, ಭಾಷೆಯನ್ನು ನೋಡದೆ ಸರ್ವರಿಗೂ ಆಹ್ವಾನವಿತ್ತಿದ್ದಾರೆ. ಆಮಂತ್ರಣವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಮಾನವರಿಗೆ ಬಿಟ್ಟಿದ್ದಾರೆ. ಆಮಂತ್ರಣವನ್ನು ಸ್ವೀಕರಿಸುವವರು ಆ ಸಾಮ್ರಾಜ್ಯದ ರೀತಿನೀತಿಗೆ ವಿಧೇಯರಾಗಿ ನಡೆದು ಕೊಂಡರೆ ಮಾತ್ರ ಆ ಸಾಮ್ರಾಜ್ಯಕ್ಕೆ ಪ್ರವೇಶ.
===================

No comments:

Post a Comment