Friday, 4 December 2020

ನವೆಂಬರ್ 21, 2020 ಶನಿವಾರ

 ನವೆಂಬರ್ 21, 2020 ಶನಿವಾರ                        [ಬಿಳಿ]
ಪೂಜ್ಯ ಕನ್ಯಾಮರಿಯಮ್ಮನವರು ದೇವಾಲಯದಲ್ಲಿ 
ಕಾಣಿಕೆಯಾಗಿ ಅರ್ಪಿತರಾದದ್ದು (ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 11.4-12
ಕೀರ್ತನೆ 144: 1-2, 9-10 ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯ ದುರ್ಗಕ್ಕೆ
ಶುಭಸಂದೇಶ: ಲೂಕ 20.27-40
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 11.4-12
4 : ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ.
5 : ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.
6 : ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮಥ್ರ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟ ಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ.
7 : ಇವರ ಸಾಕ್ಷ್ಯ ನೀಡಿಕೆ ಮುಗಿದನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿ ಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ, ಇವರನ್ನು ಕೊಂದುಹಾಕುತ್ತದೆ.
8 : ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿ ಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು.
9 : ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿ ಮಾಡಲು ಬಿಡಲೊಲ್ಲರು.
10 : ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.
11 : ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದು ನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು.
12 : ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.
===================
ಕೀರ್ತನೆ 
ಕೀರ್ತನೆ 144: 1-2, 9-10 ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯ ದುರ್ಗಕ್ಕೆ
1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ / 
ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ //
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ / 
ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ //
9 : ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು / 
ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು //
10 : ನೀನೇ ಅರಸುಗಳಿಗೆ ಜಯಪ್ರದನು / 
ದಾಸ ದಾವೀದನನು ಬಿಡಿಸಿದವನು //
===================
ಶುಭಸಂದೇಶ
ಲೂಕ 20.27-40
27 : ಅನಂತರ ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು:
28 : “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ?
29 : ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ.
30 : ಅವನ ಹೆಂಡತಿಯನ್ನು ಎರಡನೆಯವನು,
31 : ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು.
32 : ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು.
33 : ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು.
34 : ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ.
35 : ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ.
36 : ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು.
37 : ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ.
38 : “ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು.
39 : ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು.
40 : ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
===================
ಚಿಂತನೆ
ಧ.ಕಾಂಡ 25:5-10ರ ಪ್ರಕಾರ ವಿಧವೆಯಾದ ಅಣ್ಣನ ಹೆಂಡತಿಯನ್ನು ಮದುವೆ ಮಾಡಿಕೊಂಡು ಅಣ್ಣನ ಸಂತಾನವು ನಶಿಸಿಹೋಗದಂತೆ ಅಥವಾ ಕೊನೆಯಾಗದಂತೆ ನೋಡಿಕೊಳ್ಳುವುದು ತಮ್ಮನ ಹೊಣೆಗಾರಿಯಾಗಿತ್ತು. ಸದ್ದುಕಾಯರಿಗೆ ಪುನರುತ್ಥಾನದಲ್ಲಿ ಮತ್ತು ದೇವದೂತರ ಅಸ್ತಿತ್ವದಲ್ಲಿ ವಿಶ್ವಾಸವಿರಲಿಲ್ಲ. ಹಾಗಾಗಿ ಯೇಸುವನ್ನು ಪರೀಕ್ಷಿಸುವ ಸಲುವಾಗಿ ಒಂದು ಕಾಲ್ಪನಿಕ ಉದಾಹರಣೆ ಹೇಳುವುದರ ಮೂಲಕ ತಮ್ಮ ಅತಿಪಾಂಡಿತ್ಯವನ್ನು  ಪ್ರದರ್ಶಿಸುತ್ತಾರೆ. ಅವರ ಪ್ರಶ್ನೆಗೆ ಯೇಸುವು ಅವರೇ ಮನ್ನಿಸುತ್ತಿದ್ದ ಮಿ. ಕಾಂಡ 3:6. 15-16 ಉಲ್ಲೇಖಿಸುತ್ತಾ ಅಬ್ರಹಾಮ್, ಇಸಾಕ, ಯೆಕೋಬರು ದೇವರ ಸನ್ನಿಧಿಯಲ್ಲಿ ಜೀವಂತವಾಗಿದ್ದಾರೆ ಎಂದು ಸಮರ್ಥಿಸುವುದರ  ಮೂಲಕ ಪುನರುತ್ಥಾನವಿರುವುದು ನಿಜವೆಂದನ್ನು ಸ್ಪಷ್ಟ ಪಡಿಸುತ್ತಾರೆ.
===================



No comments:

Post a Comment