Wednesday, 2 December 2020

ನವೆಂಬರ್ 4, 2020 ಬುಧವಾರ

 ನವೆಂಬರ್ 4, 2020 ಬುಧವಾರ                        [ಬಿಳಿ]
ಸಂತ ಚಾರ್ಲ್ಸ್ ಬೊರೊಮೆಯೊ, ಧರ್ಮಾಧ್ಯಕ್ಷ [ಧರ್ಮಾಧ್ಯಕ್ಷ] 
ಮೊದಲ ವಾಚನ: ಫಿಲಿಪ್ಪಿಯರಿಗೆ 2.12-18
ಕೀರ್ತನೆ 27: 1, 4, 13-14. ಶ್ಲೋಕ.1
ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ
ಶುಭಸಂದೇಶ: ಲೂಕ 14.25-33
==================
ಮೊದಲನೇ ವಾಚನ
ಫಿಲಿಪ್ಪಿಯರಿಗೆ 2.12-18

12 : ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ.
13 : ಏಕೆಂದರೆ ದೈವಚಿತ್ತವನ್ನು ನೀವು ನೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪ್ರೇರಣೆಯನ್ನೂ ಸತ್ಫಲವನ್ನೂ ನೀಡುತ್ತಾರೆ.
14 : ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕಮನಸ್ಸಿನಿಂದ ಮಾಡಿ.
15 : ನಿರ್ದೋಷಿಗಳೂ ನಿಷ್ಕಳಂಕರೂ ಆಗಿರಿ. ವಕ್ರಬುದ್ಧಿಯ ದುಷ್ಟಜನರ ನಡುವೆ ದೇವರ ಪರಿಶುದ್ಧ ಮಕ್ಕಳಂತೆ ಬಾಳಿರಿ. ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ; ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ..
16 : ಹೀಗೆ ನೀವು ನಡೆದುಕೊಂಡರೆ ನನ್ನ ಸೇವೆ ವ್ಯರ್ಥವಾಗದೆ, ಶ್ರಮ ನಿಷ್ಫಲವಾಗದೆ ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆ ಪಡಬಹುದು.
17 : ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿ ಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ.
18 : ಅದೇ ರೀತಿ ನೀವು ಸಹ ನನ್ನೊಡನೆ ಸಂತೋಷದಿಂದ ಸಂಭ್ರಮಿಸಿರಿ
===================
ಕೀರ್ತನೆ 
ಕೀರ್ತನೆ 27: 1, 4, 13-14. ಶ್ಲೋಕ.1
ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ

1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ / ನಾನಾರಿಗೂ ಅಳುಕೆನು // 
ನನ್ನ ಬಾಳಿಗಾಧಾರ ಪ್ರಭುವೆ / ನಾನಾರಿಗೂ ಅಂಜೆನು //
4 : ನಾನೊಂದನು ಕೋರಿದೆ ಪ್ರಭುವಿನಿಂದ / ನಾನದನ್ನೇ ನಿರೀಕ್ಷಿಸಿದೆ ಆತನಿಂದ : / 
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ / 
ನಾ ತಲ್ಲೀನನಾಗಬೇಕು ಅಲ್ಲಾತನ- ಪ್ರಸನ್ನತೆಯಲಿ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು / 
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ / 
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
===================
ಲೂಕ 14.25-33

25 : ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು:
26 : “ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಸೋದರ-ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು.
27 : ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬರದವನು ನನ್ನ ಶಿಷ್ಯನಾಗಲಾರನು.
28 : ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚು ವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ?
29 : ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು,
30 : ‘ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!’ ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು.
31 : ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ?
32 : ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ.
33 : ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ. 
===================
ಚಿಂತನೆ
ತಮ್ಮ ಶಿಷ್ಯರಾಗಲು ಬಯಸುವವರು ಶಿಲುಬೆಯ ಮಾರ್ಗದಲ್ಲಿ ನಡೆಯಬೇಕೆಂದು ಯೇಸು ಸ್ಪಷ್ಟೀಕರಿಸುತ್ತಾರೆ. . ಯೇಸು ತನ್ನ ಹಿಂಬಾಲಕರಿಗೆ ಎಲ್ಲೂ ಹೂವಿನ ಹಾಸಿಗೆಯನ್ನಷ್ಟೇ ಹಾಸಲಿಲ್ಲ. ಅದರೊಂದಿಗೆ ಮುಳ್ಳಿನ ಶಿಲುಬೆಯನ್ನು ಕೊಟ್ಟರು. ಸಾಮಾನ್ಯವಾಗಿ ನಾವು ದೇವರಿಂದ ಬಯಸುವುದು ವರಪ್ರಸಾದಗಳನ್ನಷ್ಟೇ ಹೊರತು, ಕಷ್ಟದ ಶಿಲುಬೆಗಳನ್ನಲ್ಲ.
ಶ್ರಮಕ್ಕೆ, ಕಷ್ಟಗಳಿಗೆ ನಾವು ಹೆದರುತ್ತೇವೆ. ಸುಲಭವಾದ ಮಾರ್ಗಗಳಿಗಾಗಿ ಹುಡುಕಾಡುತ್ತೇವೆ. ಎಲ್ಲವೂ ನಮಗೆ ಸುಲಭವಾಗಿ ಸಿಗಬೇಕು. ಎಂದರೆ  ಬೆವರು ಸುರಿಸಲು ನಾವು ಸಿದ್ಧರಿಲ್ಲ. ಸುಲಭವಾಗಿ ಹಣ ಬರಬೇಕು, ಸುಲಭವಾಗಿ ಸುಖಸಿಗಬೇಕು. ನಾವು ಮಾತ್ರ ಹುಲ್ಲು ಕಡ್ಡಿಯನ್ನು ಅಲುಗಾಡಿಸಬಾರದು. ಇಂತಹ ಬದುಕು ನಮ್ಮದಾದರೆ ಖಂಡಿತವಾಗಿ ನಾವು ಯೇಸುವಿನ ಅನುಯಾಯಿಗಳಾಗಲು ಸಾಧ್ಯವಿಲ್ಲ, ಯೇಸು ನುಡಿದಂತೆ ನಮ್ಮನ್ನೇ ನಾವು ಪರಿತ್ಯಜಿಸಿ, ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಕ್ರಿಸ್ತನನ್ನು ಹಿಂಬಾಲಿಸಿದಾಗ ಮಾತ್ರ ಆತನ ಅನುಯಾಯಿಗಳಾಗುತ್ತೇವೆ.
===================

No comments:

Post a Comment