ನವೆಂಬರ್ 5, 2020 ಗುರುವಾರ [ಹಸಿರು]
ಮೊದಲ ವಾಚನ: ಫಿಲಿಪ್ಪಿಯರಿಗೆ 3.3-8
ಕೀರ್ತನೆ 105:2-7 ಶ್ಲೋಕ.3
ಹಿಗ್ಗಲಿ ಹೃದಯ, ಕೋರಿ ಪ್ರಭುವಿನ ದರ್ಶನ
ಶುಭಸಂದೇಶ: ಲೂಕ 15.1-10
==================
ಮೊದಲನೇ ವಾಚನ
ಫಿಲಿಪ್ಪಿಯರಿಗೆ 3.3-8
3 : ನಿಜವಾದ ಸುನ್ನತಿ ಪಡೆದವರು ನಾವು. ಏಕೆಂದರೆ, ನಾವು ಪವಿತ್ರಾತ್ಮ ಅವರ ಪ್ರೇರಣೆಯಿಂದ ದೇವರನ್ನು ಆರಾಧಿಸುತ್ತೇವೆ. ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹರ್ಷಿಸುತ್ತೇವೆ. ಬಾಹ್ಯಾಚರಣೆಗಳಲ್ಲೇ ನಂಬಿಕೆಯಿಡದೆ ಬಾಳುತ್ತೇವೆ.
4 : ಇಂಥ ಬಾಹ್ಯಾಚರಣೆಗಳಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ.
5 : ಹುಟ್ಟಿದ ಎಂಟನೆಯ ದಿನ ನನಗೆ ಸುನ್ನತಿಯಾಯಿತು; ಹುಟ್ಟಿನಿಂದ ನಾನು ಇಸ್ರಯೇಲನು, ಬೆನ್ಯವಿೂನ ಕುಲದವನು; ಅಪ್ಪಟ ಹಿಬ್ರಿಯನು,
6 : ಧರ್ಮಶಾಸ್ತ್ರದ ದೃಷ್ಟಿಯಲ್ಲಿ ನಿಷ್ಠಾವಂತ ಫರಿಸಾಯನು; ಮತಾಸಕ್ತಿಯ ದೃಷ್ಟಿಯಿಂದ ಧರ್ಮಸಭೆಯ ಹಿಂಸಕನು; ಧರ್ಮಶಾಸ್ತ್ರ ವಿಧಿನಿಯಮಗಳ ಪಾಲನೆಯಲ್ಲಿ ನಿಂದಾರಹಿತನು.
7 : ಇವನ್ನೆಲ್ಲಾ ಲಾಭವೆಂದು ಪರಿಗಣಿಸಿದ್ದ ನಾನು ಈಗ ಕ್ರಿಸ್ತಯೇಸುವಿನ ಸಲುವಾಗಿ ನಷ್ಟವೆಂದೇ ಎಣಿಸುತ್ತೇನೆ.
8 : ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕøಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.
===================
ಕೀರ್ತನೆ
ಕೀರ್ತನೆ 105:2-7 ಶ್ಲೋಕ.3
ಹಿಗ್ಗಲಿ ಹೃದಯ, ಕೋರಿ ಪ್ರಭುವಿನ ದರ್ಶನ
2 : ಹಾಡಿ ಪಾಡಿ ಹೊಗಳಿರಿ
ಪ್ರಭುವನು /
ಧ್ಯಾನಿಸಿ ನೀವು ಆತನ
ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ
ಶ್ರೀನಾಮ /
ಹಿಗ್ಗಲಿ ಹೃದಯ, ಕೋರಿ
ಆತನ ದರ್ಶನ //
4 : ಅರಸಿರಿ ಪ್ರಭುವನೂ
ಆತನ ಶಕ್ತಿಯನೂ /
ಅಪೇಕ್ಷಿಸಿ ನಿತ್ಯವೂ
ಆತನ ದರ್ಶನವನು //
5 : ಆತನ ದಾಸ ಅಬ್ರಹಾಮನ
ಸಂತತಿಯವರೇ /
ಆತನಾರಿಸಿಕೊಂಡ ಯಕೋಬನ
ವಂಶದವರೇ //
6 : ನೆನೆಯಿರಿ ಆತನದ್ಭುತಗಳನು,
ಮಹತ್ಕಾರ್ಯಗಳನು /
ಆತನ ವದನ ವಿಧಿಸಿದಾ
ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ
ದೇವನೆಂಬುದು ಶ್ರುತ /
ಆತನಿತ್ತ ತೀರ್ಪು
ಇದೋ ವಿಶ್ವವ್ಯಾಪ್ತ //
==================
ಶುಭಸಂದೇಶ
ಲೂಕ 15.1-10
1 : ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು.
2 : ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು.
3 : ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:
4 : “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ?
5 : ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ;
6 : ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ?
7 : “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಕಳೆದು ಹೋದ ನಾಣ್ಯ
8 : “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದು ಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ?
9 : ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು. ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ?
10 : “ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.
===================
ಚಿಂತನೆ
ಯೆಹೂದ್ಯ ಮುಖಂಡರು ಕಟ್ಟುನಿಟ್ಟಾಗಿ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿದ್ದರು. ಯೆಹೂದ್ಯ ಧಾರ್ಮಿಕ ಮುಖಂಡರು ದೇವಾಲಯಕ್ಕೆ ಸನಿಹವಾಗಿದ್ದರೂ ಅವರ ಹೃದಯಗಳು ಮಾತ್ರ ದೇವರಿಂದ ಬಹುದೂರವಿದ್ದವು. ಯೆಹೂದ್ಯರು, ಧಾರ್ಮಿಕ ಆಚರಣೆಗಳನ್ನು ಪಾಲಿಸದವರನ್ನು ಪಾಪಿಗಳು ಎಂದು ಪರಿಗಣಿಸಿ ಅವರನ್ನು ಬಹಿಷ್ಕøತರಂತೆ ನೋಡುತ್ತಿದ್ದರು. ಅವರೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದರು. ಆದರೆ ಯೇಸು ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು, ಅರ್ಥಹೀನ ಆಚರಣೆಗಳಿಗಿಂತ ಕ್ಷಮೆ, ಕರುಣೆ, ಪ್ರೀತಿ ಮುಖ್ಯ ಎಂದೇ ಅವರ ಬೋಧನೆಯಾಗಿತ್ತು
ನಾವು ಪರರಿಗೆ ಮೇಲೆ ಕರುಣೆತೋರಿದ ಹೊರತು ದೇವರ ಕೃಪೆಗೆ, ಕರುಣೆಗೆ ಪಾತ್ರರಾಗಲಾರೆವು. ಇನ್ನೊಬ್ಬರನ್ನು ಬೊಟ್ಟು ಮಾಡಿ ತೋರಿಸಿ `ಆತ ಪಾಪಿ, ಕೆಳವರ್ಗದವನು, ಅನ್ಯಧರ್ಮೀಯ ಆತ ನರಕಕ್ಕೆ ಮೀಸಲು’ ಎಂದು ಘೋಷಿಸಿ ಪರೋಕ್ಷವಾಗಿ ತಾನೇ ದೇವರ ಆಶೀರ್ವಾದಗಳಿಗೆ ಹಕ್ಕುದಾರನು ಸ್ವರ್ಗಕ್ಕೆ ಹೋಗುತ್ತೇನೆ ಅಂದುಕೊಂಡಿದ್ದ ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಕ್ರಿಸ್ತ ಕರುಣೆಯ ಸಾಮತಿಯ ಮೂಲಕ ಪಾಠ ಕಲಿಸುತ್ತಾ ರೆ.
===================
No comments:
Post a Comment