ನವೆಂಬರ್ 7, 2020 ಶನಿವಾರ [ಹಸಿರು]
ಮೊದಲ ವಾಚನ: ಫಿಲಿಪ್ಪಿಯರಿಗೆ 4.10-19
ಕೀರ್ತನೆ 112:1-2, 5-6, 8, 9. ಶ್ಲೋಕ.1
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
ಶುಭಸಂದೇಶ: ಲೂಕ 16.9-15
==================
ಮೊದಲನೇ ವಾಚನ
ಫಿಲಿಪ್ಪಿಯರಿಗೆ 4.10-19
10 : ನನ್ನ ಬಗ್ಗೆ ನಿಮಗಿರುವ ಮಮತೆಯು ಇಷ್ಟು ದಿನಗಳಾದ ಮೇಲೆ ಪುನಃ ಅರಳಿದ್ದಕ್ಕೆ ಪ್ರಭುವಿನಲ್ಲಿ ನಾನು ಬಹಳ ಸಂತೋಷ ಪಡುತ್ತೇನೆ. ಇಂಥ ಮಮತೆ ನಿಮಗೆ ಮೊದಲಿನಿಂದ ಇತ್ತಾದರೂ ಅದನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಂದರ್ಭ ಒದಗಿರಲಿಲ್ಲ.
11 : ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ.
12 : ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ.
13 : ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮಥ್ರ್ಯ ನನಗಿದೆ.
14 : ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ.
15 : ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟು ಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ.
16 : ನಾನು ಥೆಸಲೋನಿಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲು ಒಂದೆರಡು ಬಾರಿ ಧನಸಹಾಯವನ್ನು ಕಳುಹಿಸಿದಿರಿ.
17 : ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ.
18 : ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ.
19 : ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು.
===================
ಕೀರ್ತನೆ
ಕೀರ್ತನೆ 112:1-2, 5-6, 8, 9. ಶ್ಲೋಕ.1
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
1 : ಪ್ರಭುವಿನಲಿ ಭಯಭಕ್ತಿ
ಉಳ್ಳವನು ಧನ್ಯನು /
ಆತನಾಜ್ಞೆಗಳಲಿ
ಹಿಗ್ಗುವವನು ಭಾಗ್ಯನು //
2 : ಬಲಿಷ್ಠವಾಗುವುದು ಜಗದೊಳು
ಅವನ ಸಂತಾನ /
ಸಜ್ಜನರ ಸಂತತಿ ಪಡೆವುದು
ಆಶೀರ್ವಚನ //
5 : ದಯೆತೋರಿ ಧನಸಹಾಯ
ಮಾಡುವವನು ಭಾಗ್ಯವಂತ /
ನ್ಯಾಯದಿಂದ ವ್ಯವಹರಿಸುವಂಥಾ
ಮನುಜನು ಭಾಗ್ಯವಂತ //
6 : ಅಚಲನಾಗಿರುವನು
ನೀತಿವಂತನು /
ಮರೆಯಲಾರರು
ಎಂದಿಗೂ ಆತನನು //
8 : ದೃಢವಿದೆ ಅವನ ಮನ,
ಎದೆಗುಂದನವನು /
ಕಾಣುವನು ದುರುಳರಿಗಾಗುವ
ದಂಡನೆಯನು //
9 : ಉದಾರತೆಯಿಂದ
ಕೊಡುವನು ಬಡವರಿಗೆ /
ಫಲಿಸುವುದು ಅವನಾ
ನೀತಿ ಸದಾಕಾಲಕೆ /
ಮಹಿಮೆತರುವ
ಕೋಡುಮೂಡುವುದು ಅವನಿಗೆ //
===================
ಶುಭಸಂದೇಶ
ಲೂಕ 16.9-15
9 : ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು.
10 : ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ.
11 : ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು?
12 : ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು?
13 : “ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾಗದು; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,” ಎಂದರು.
14 : ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು.
15 : ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು,” ಎಂದರು.
===================
ಚಿಂತನೆ
ನ್ಯಾಯಯುತವಾಗಿ ಬಾಳ್ವೆ ನಡೆಸಲು ಕರೆಯನ್ನು ಪಡೆದವರೇ ನಾವು.. ಅನ್ಯಾಯದ ಹಾದಿಯೇನೊ ತುಂಬಾ ಸುಲಭ. ಇಂದಿನ ಸಾಮತಿಯಂತೆ ನಾವೂ ಕೆಲವೊಮ್ಮೆ ಅನೇಕ ಸಲ ಈ ರೋಗಕ್ಕೆ ತುತ್ತಾಗಬಹುದು. ಆದರೆ, ಯೇಸುಕ್ರಿಸ್ತರ ಹೆಸರಿನಲ್ಲಿ ಲಭಿಸಿದ ನಮಗೆ ಇದೇ ಆಹ್ವಾನ. ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ನಮ್ಮ ಕೈಲಾದಷ್ಟು ಒಳಿತು ಮಾಡುತ್ತಾ ಇತರರಿಗೆ ನಾವು ಮಾದರಿಯಾಗಬೇಕು ಹೊರತು, ನಾವು ವಿರುದ್ಧ ಸಾಕ್ಷಿಗಳಾಗಬಾರದು. ಡಾನ್ ಬಾಸ್ಕೊರವರ ತಾಯಿ ಯಾವಾಗಲೂ ಅವರಿಗೆ ಹೇಳುತ್ತಿದ್ದರು, ದೇವರು ನಮ್ಮನ್ನು ನೋಡುತ್ತಿರುತ್ತಾರೆ. ನಮ್ಮ ಅಂತರಂಗಗಳು ದೇವರಿಗೆ ತೆರೆದ ಪುಸ್ತಕ. ಎಲ್ಲವನ್ನೂ ಬಲ್ಲ ಅವರು ನಮಗೆ ನೆರವಾಗುವುದು ಖಚಿತ. ಮಾತ್ರವಲ್ಲ, ಅವರಲ್ಲಿ ನಾವು ನೆಲೆಗೊಂಡರೆ ಎಂತಹ ವಿಷಮ ಪರಿಸ್ಥಿತಿಯನ್ನು ಎದುರಿಸಲೂ ನಮಗೆ ಸಹಾಯ ಮಾಡುವ ಅವರು ನಾವು ಲೋಕಕ್ಕೆ ಬೆಳಕಾಗಿ, ನಮ್ಮ ಕೈಲಾದಷ್ಟು ಸೇವೆ ಮಾಡುತ್ತಾ ಧರ್ಮಸಭೆಯ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು..
===================
No comments:
Post a Comment