Friday, 4 December 2020

ನವೆಂಬರ್ 30, 2020 ಸೋಮವಾರ

 ನವೆಂಬರ್ 30, 2020 ಸೋಮವಾರ                        [ಬಿಳಿ]
ಸಂತ ಅಂದ್ರೆಯ, ಪ್ರೇಷಿತ
ಮೊದಲ ವಾಚನ: ರೋಮನರಿಗೆ 10.9-18
ಕೀರ್ತನೆ 19:1-4 ಶ್ಲೋಕ.4
ಅವುಗಳ ನುಡಿಮಾತು ವ್ಯಾಪಿಸಿದ ಜಗದಾದ್ಯಂತ
ಶುಭಸಂದೇಶ: ಮತ್ತಾಯ 4.18-22
==================
ಮೊದಲನೇ ವಾಚನ
ರೋಮನರಿಗೆ 10.9-18
9 : “ಯೇಸುಸ್ವಾಮಿಯೇ ಪ್ರಭು” ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.
10 : ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.
11 : ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.
12 : ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.
13 : “ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ.
14 : ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೋಧಿಸುವವರು ಇಲ್ಲದಿದ್ದರೆ ಅವರ ವಿಷಯವನ್ನು ಕುರಿತು ಕೇಳುವುದಾದರೂ ಹೇಗೆ?
15 : ಬೋಧಿಸುವವರನ್ನು ಕಳುಹಿಸದೆ ಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ? “ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ,” ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ.
16 : ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ.
17 : ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ.
18 : ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ: “ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು.”
===================
ಕೀರ್ತನೆ 
ಕೀರ್ತನೆ 19:1-4 ಶ್ಲೋಕ.4
ಶ್ಲೋಕ: ಅವುಗಳ ನುಡಿಮಾತು 
           ವ್ಯಾಪಿಸಿದ ಜಗದಾದ್ಯಂತ||
1 : ಆಕಾಶಮಂಡಲ ಸಾರುತಿದೆ 
     ದೇವರ ಮಹಿಮೆಯನು / 
     ತಾರಾಮಂಡಲ ತೋರುತಿದೆ 
     ದೇವರ ಕೈಕೃತಿಗಳನು //
2 : ದಿನವು ಮರುದಿನಕೆ ಮಾಡುತಿದೆ
    ಈ ಪ್ರಕಟಣೆಯನು /
    ರಾತ್ರಿ ಮರುರಾತ್ರಿಗೆ ನೀಡುತಿದೆ
    ಈ ಪ್ರಚಾರವನು //
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / 
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4 : ಆದರೂ ಅವುಗಳ ಧ್ವನಿರೇಖೆ 
     ಹರಡಿದೆ ಬುವಿಯಾದ್ಯಂತ / 
    ಅವುಗಳ ನುಡಿಮಾತು
    ವ್ಯಾಪಿಸಿದೆ ಜಗದಾದ್ಯಂತ //
===================
ಶುಭಸಂದೇಶ
ಮತ್ತಾಯ 4.18-22
18 : ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು.
19 : ""ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,"" ಎಂದು ಹೇಳಿ ಯೇಸು ಅವರನ್ನು ಕರೆದರು.
20 : ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
21 : ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು.
22 : ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
===================
ಚಿಂತನೆ
ಗ್ರೀಕ್ ಭಾಷೆಯಲ್ಲಿ ಅಂದ್ರೇಯ ಅಂದರೆ `ಧೈರ್ಯವಂತ’ ಎಂದರ್ಥ. ಅಂದ್ರೇಯ ಯೋನನ ಮಗ, ಪೇತ್ರನ ಸಹೋದರ. ಅಂದ್ರೇಯ ಕಫೆರ್ನವುಮ್ ಊರಿಗೆ ಸೇರಿದವ, ಕಸುಬಿನಲ್ಲಿ ಬೆಸ್ತ. ಬೆಸ್ತರಾದ ಅಂದ್ರೇಯ ಮತ್ತು ಪೇತ್ರ ಸರೋವರದಲ್ಲಿ ಮೀನು ಹಿಡಿಯುವಾಗ ``ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,’’ ಎಂದು ಯೇಸು ಕರೆದಾಗ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸುತ್ತಾರೆ. ಯೊವಾನ್ನ 12:20-22ರಲ್ಲಿ ಕಾಣುವಂತೆ ಕೆಲವು ಗ್ರೀಕರು ಯೇಸುವನ್ನು ನೋಡಬೇಕೆಂಬ ಬಯಕೆಯನ್ನು ಫಿಲಿಪ್ಪನಲ್ಲಿ ಹೇಳಿಕೊಂಡಾಗ ಫಿಲಿಪ್ಪನು ಅಂದ್ರೇಯನಿಗೆ ಹೇಳುತ್ತಾನೆ. ಇದು ಅಂದ್ರೇಯನ ನಾಯಕತ್ವದ ಪಾತ್ರವನ್ನು ತಿಳಿಸುತ್ತದೆ. ಐದು ಸಾವಿರ ಮಂದಿಗೆ ಭೋಜನ ನೀಡಿದ ಸಂದರ್ಭದಲ್ಲಿ ಅಂದ್ರೇಯನು 5 ಜವೆಗೋದಿಯ ರೊಟ್ಟಿಗಳಿದ್ದ ಹುಡುಗನನ್ನು ಯೇಸುವಿನ ಬಳಿ ಕರೆತರುತ್ತಾನೆ. ಅಂದ್ರೇಯನು ಯೇಸುವಿನ ಪುನರುತ್ಥಾನದ ನಂತರ ಏಷ್ಯಾ ಮೈನರಿನಲ್ಲಿ ಪ್ರಬೋಧನೆ ಮಾಡಿದರು ಎಂಬ ನಂಬಿಕೆಯಿದೆ. ನೀರೋ ಅರಸನ ಚಿತ್ರಹಿಂಸೆಯ ಕಾಲದಲ್ಲಿಆತನನ್ನು ಕೊಲ್ಲಲಾಯಿತು. ಅವರನ್ನು ಕೊಂದ ರೀತಿ ವಿಶಿಷ್ಟವಾಗಿತ್ತು. ಅವರನ್ನು ಆಕಾಶದ ಶಿಲುಬೆಗೆ ಜಡಿದರು. ಸಂತ ಅಂದ್ರೇಯರು ರಷ್ಯಾ ಮತ್ತು ಸ್ಕಾಟ್ಲೆಂಡಿನ ಪಾಲಕರು, ಮೀನುಗಾರರ ಮತ್ತು ವಿವಾಹವಾಗದ ಹೆಣ್ಣುಮಕ್ಕಳ ಪಾಲಕರೂ ಆಗಿದ್ದಾರೆ.
===================



ನವೆಂಬರ್ 29, 2020 ಭಾನುವಾರ

 ನವೆಂಬರ್ 29, 2020 ಭಾನುವಾರ                        [ನೇರಳೆ]
ಆಗಮನಕಾಲದ 1ನೇ ಭಾನುವಾರ (ವರ್ಷ ಬಿ)
ಮೊದಲ ಮೊದಲ ವಾಚನ: ಯೆಶಾಯ 63.16-17 19; 64:1, 3-8
ಕೀರ್ತನೆ 80:1-2, 14-15, 17-18 ಶ್ಲೋಕ.3
ಓ ದೇವಾ, ಪುನರುದ್ಧಾರ ಮಾಡೆಮ್ಮನು 
ಬೆಳಗಲಿ ನಿನ್ನ ಮುಖಕಾಂತಿ! ಪಡೆವೆವು ರಕ್ಷಣೆಯನು
ಎರಡನೇ ವಾಚನ: 1 ಕೊರಿಂಥಿಯರಿಗೆ 1.3-9
ಶುಭಸಂದೇಶ: ಮಾರ್ಕ 13.33-37
ಮೊದಲನೇ ವಾಚನ
ಯೆಶಾಯ 63.16-17 19; 64:1, 3-8
16 : ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ.
17 : ಸ್ವಾಮೀ, ನಾವು ನಿಮ್ಮ ಮಾರ್ಗ ತಪ್ಪಿ ಅಲೆಯುವಂತೆ ಮಾಡುತ್ತೀರಿ, ಏಕೆ? ನಿಮಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿಣ ಪಡಿಸುವುದು ಏಕೆ? ನಿಮ್ಮ ಶರಣರ ನಿಮಿತ್ತ, ನಿಮಗೆ ಬಾಧ್ಯರಾದ ಕುಲಗಳ ನಿಮಿತ್ತ, ನಮಗೆ ಪ್ರಸನ್ನಚಿತ್ತರಾಗಿರಿ.
1 : (ಸ್ವಾಮೀ) ಆಕಾಶವನ್ನು ಸೀಳಿ ಇಳಿದು ಬರಲಾರಿರಾ? ನಿಮ್ಮ ದರ್ಶನವನ್ನು ಕಂಡು ಬೆಟ್ಟಗುಡ್ಡಗಳು ಗಡಗಡನೆ ನಡುಗಬಾರದೆ?
2 : ಒಣಗಿಡಕ್ಕೆ ಹಚ್ಚುವ ಕಿಚ್ಚಿನಂತೆ, ನೀರನ್ನು ಕುದಿಸುವ ಬೆಂಕಿಯಂತೆ ನೀವು ಪ್ರತ್ಯಕ್ಷರಾಗಲಾರಿರಾ?
3 : ನಮ್ಮ ನಿರೀಕ್ಷೆಗೆ ಮೀರಿದ ಮಹತ್ಕಾರ್ಯಗಳನ್ನು ನಡೆಸಿ, ನಿಮ್ಮ ನಾಮ ಮಹಿಮೆಯನ್ನು ನಿಮ್ಮ ಶತ್ರುಗಳಿಗೆ ಪ್ರದರ್ಶಿಸಿ, ಅನ್ಯರಾಷ್ಟ್ರಗಳನ್ನು ನಡುಗಿಸಲಾರಿರಾ? ಹೌದು, ನೀವು ಇಳಿದುಬಂದು, ಬೆಟ್ಟಗುಡ್ಡಗಳು ನಡುಗಿದರೆ ಎಷ್ಟೋ ಲೇಸು.
4 : ತಮ್ಮನ್ನು ಕಾದು ಎದುರು ನೋಡುವವರ ಪರವಾಗಿ ಕಾರ್ಯಗತರಾಗುವಂಥ ದೇವರು, ನಿಮ್ಮನ್ನು ಬಿಟ್ಟರೆ, ಯಾರಿದ್ದಾರೆ? ಅಂಥಾ ದೇವರನ್ನು ಲೋಕಾದಿಯಿಂದ ಯಾರೂ ಕಂಡಿಲ್ಲ, ಅಂಥವರು ಯಾರ ಕಿವಿಗೂ ಬೀಳಲಿಲ್ಲ. ಯಾವ ಕಣ್ಣಿಗೂ ಕಾಣಿಸಲಿಲ್ಲ.
5 : ಸದಾಚಾರದಲ್ಲೇ ಸಂತೋಷಪಡುತ್ತಾ, ನಿಮ್ಮ ಮಾರ್ಗದಲ್ಲಿ ನಡೆಯುತ್ತಾ, ನಿಮ್ಮನ್ನು ಸ್ಮರಿಸುತ್ತಾ ಬಂದವರಿಗೆ ಪ್ರತ್ಯಕ್ಷರಾಗುತ್ತೀರಿ. ನಮ್ಮ ಮೇಲಾದರೋ ಕೋಪಗೊಂಡಿರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಬಹುಕಾಲದಿಂದ ಪಾಪದಲ್ಲಿ ಮುಳುಗಿಹೋದೆವು. ನಮ್ಮಂಥವರಿಗೆ ರಕ್ಷಣೆ ಇದೆಯೇ?
6 : ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿ ಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು.
7 : ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
8 : ಆದರೂ ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೆ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು.
===================
ಕೀರ್ತನೆ 
ಕೀರ್ತನೆ 80:1-2, 14-15, 17-18 ಶ್ಲೋಕ.3
ಶ್ಲೋಕ: ಓ ದೇವಾ, ಪುನರುದ್ಧಾರ ಮಾಡೆಮ್ಮನು| 
            ಬೆಳಗಲಿ ನಿನ್ನ ಮುಖಕಾಂತಿ! 
            ಪಡೆವೆವು ರಕ್ಷಣೆಯನು||
1 : ಕಿವಿಗೊಟ್ಟು ಆಲಿಸೋ, 
     ಇಸ್ರಯೇಲರ ಮೇಷಪಾಲನೇ / 
    ಜೋಸೆಫನ ವಂಶಜರನು 
    ಕುರಿಹಿಂಡಂತೆ ಕರೆತಂದವನೇ / 
    ವಿರಾಜಿಸು, ಕೆರೂಬಿಯರ 
    ಮಧ್ಯೆ ಆಸೀನನಾದವನೇ //
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, 
     ಮನಸ್ಸೆ ಕುಲಗಳ ಮುಂದೆ / 
    ತೋರ್ಪಡಿಸು ನಿನ್ನ ಶೌರ್ಯವನು, 
    ಬಂದು ಜಯಪ್ರದನಾಗು ನಮಗೆ //
14 : ಸರ್ವಶಕ್ತನಾದ ದೇವರೇ, 
       ಮರಳಿ ಮುಖತೋರಿಸು / 
       ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು
       ಪರಾಮರಿಸು //
15 : ಕಾಪಾಡು ನಿನ್ನ ಬಲಗೈ ನೆಟ್ಟು 
       ಸಾಕಿದ ಸಸಿಯನು / 
       ಕಾದಿರಿಸು ನಿನಗೆಂದೇ
       ನೀ ಬೆಳೆಸಿದಾ ಬಳ್ಳಿಯನು //
 
17 : ಕೈ ಹಿಡಿದು ಕಾಪಾಡು ನಿನ್ನ ಬಲಗೈ 
       ಉದ್ಧರಿಸಿದ ಪುರುಷನನು / 
       ನಿನಗೆಂದೇ ನೀ ಸಾಕಿ ಬೆಳೆಸಿದಾ
       ವರಪುತ್ರನನು //
18 : ಆಗ ಬಿಟ್ಟಗಲುವುದಿಲ್ಲ 
       ನಾವೆಂದೆಂದಿಗು ನಿನ್ನನು / 
       ಪುನರ್ಜೀವಗೊಳಿಸು, ಮಾಳ್ಪೆವು 
       ನಿನ್ನ ನಾಮಸ್ಮರಣೆಯನು //
===================
ಎರಡನೇ ವಾಚನ 
1 ಕೊರಿಂಥಿಯರಿಗೆ 1.3-9
3 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ
4 : ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
5 : ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ ಚತುರರು ಆಗಿದ್ದೀರಿ.
6 : ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ.
7 : ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರು ನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ.
8 : ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು.
9 : ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸ ಪಾತ್ರರು.
ಶುಭಸಂದೇಶ
ಮಾರ್ಕ 13.33-37
33 : ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ.
34 : ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆ ಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ;
35 : ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು.
36 : ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು!
37 : ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ!” ಎಂದರು.
===================
ಚಿಂತನೆ
ಆಗಮನ ಕಾಲದ ಪ್ರಥಮ ಭಾನುವಾರ
==========================
ಪೀಠಿಕೆ
=======
ಕಥೋಲಿಕ ಕ್ರೈಸ್ತ ಆರಾಧನಾ ವಿಧಿಯಲ್ಲಿ ಆಗಮನ ಕಾಲ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ ಪ್ರಭುವಿನ ಪ್ರಥಮ ಆಗಮನಕ್ಕಾಗಿ ನಮ್ಮ ಪೂರ್ವಜರು ಕಾಯುತ್ತಿದ್ದರು. ಪ್ರವಾದಿಗಳು ಅವರ ಆತುರಕ್ಕೆ ನೀರೆರೆದು ಪೋಷಿಸಿದರು. ಆದರೆ ಪ್ರಭು ಆಗಮಿಸಬೇಕಾದರೆ ಶತಮಾನಗಳೇ ಉರುಳಿದವು. ಆದರೂ ನಮ್ಮ ಪೂರ್ವಜರ ಭರವಸೆ ಮಾತ್ರ ಬತ್ತಿಹೋಗಲಿಲ್ಲ. ಭರವಸೆ ಹುಸಿಯಾಗಲಿಲ್ಲ ಕೊನೆಗೂ ಪ್ರಭು ಕ್ರಿಸ್ತ ಮಾನವನಾಗಿ ಧರೆಗೆ ಆಗಮಿಸಿದರು. ದೈವ ಪ್ರೀತಿಯನ್ನು ಸಾರಿ, ದೈವ ಯೋಜನೆಯನ್ನು ಸಂಪೂರ್ಣಗೊಳಿಸಿ, ಮರಳಿ ಬರುವುದಾಗಿ ಆಭಯವಿತ್ತು ಸ್ವರ್ಗಾರೋಹಣರಾದರು. ಅವರ ಬರುವಿಕೆಗಾಗಿ ಪವಿತ್ರ ಧರ್ಮಸಭೆ ಸದಾ ಎದುರುನೋಡುತ್ತದೆ. ಇದಕ್ಕಾಗಿ ನಾವೆಲ್ಲರೂ ಸಿದ್ಧಗೊಳ್ಳುವಂತೆ ಕರೆನೀಡುತ್ತದೆ. ಪ್ರಥಮ ಆಗಮನ ಸಿದ್ಧಿಯಾಗಿದೆ. ದ್ವಿತೀಯ ಆಗಮನಕ್ಕಾಗಿ ಕಾಯಬೇಕಿದೆ. ಅಂದರೆ ಈ ಆಗಮನ ಕಾಲ ದೇವರು ಮಾನವರಾದ ಆ ಐತಿಹಾಸಿಕ ಘಟನೆಯನ್ನು ಸ್ಮರಿಸಿ ಸಂಭ್ರಮಿಸುವುದರೊಟ್ಟಿಗೆ ದ್ವಿತೀಯ ಆಗಮನಕ್ಕೆ ಸಿದ್ಧರಾಗುವಂತೆ ಕರೆನೀಡುತ್ತದೆ.
 
ಮೊದಲ ವಾಚನ: ಯೆಶಾಯ 63.16-17 19; 64:2-7
=========================
ಇಂದಿನ ಮೊದಲನೆಯ ವಾಚನದಲ್ಲಿ ಪ್ರವಾದಿ ಯೆಶಾಯನು ಅಂದು ಜನರು ನೊಂದು, ಬೆಂದು ಬಳಲಿಹೋಗಿದ್ದರೂ ತಮ್ಮ ದೇವರು ಸರ್ವಶಕ್ತರು, ಅವರು ನಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ ಎಂದು ಭರವಸೆಯಿಂದ ""ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೆ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು"" ನಮ್ಮ ತಪ್ಪುಗಳನ್ನು ಲೆಕ್ಕಿಸದೆ ಕೈಹಿಡಿದು ನಡೆಸಿರಿ ಎಂದು ವಿನಂತಿಸುತ್ತಾರೆ ಎಂದು ತಿಳಿಸುತ್ತಾ ನಾವೂ ಅವರಂತೆ ಆಗಲು ಕರೆ ನೀಡುತ್ತಾನೆ.
ಎರಡನೇ ವಾಚನ: 1 ಕೊರಿಂಥಿಯರಿಗೆ 1.3-9
==========================
ಎರಡನೆಯ ವಾಚನದಲ್ಲಿ ಸಂತ ಪೌಲನು ತನ್ನ ನೆಚ್ಚಿನ ಕೊರಿಂಥಿಯರು ಪ್ರಭುವಿನ ಆಗಮನದ ದಿನಕ್ಕೆ ಸಿದ್ಧರಾಗುವಂತೆಯೂ ತಮಗೆ ದೇವರು ನೀಡಿರುವ ಕೃಪಾಶೀರ್ವಾದಗಳನ್ನು ವ್ಯರ್ಥಮಾಡಿಕೊಳ್ಳದೆ ಅವನ್ನು ಸದುಪಯೋಗಪಡಿಕೊಂಡು ನಿದೋರ್ಷಿಗಳಾಗಿರುವಂತೆಯೂ ಕರೆ ನೀಡುತ್ತಾನೆ
ಶುಭಸಂದೇಶ: ಮಾರ್ಕ 13.33-37
=========================
ಇಂದಿನ ಶುಭಸಂದೇಶವೂ ಪ್ರಭು ಕ್ರಿಸ್ತ ನಾವು ನಿರೀಕ್ಷಿಸದ ಗಳಿಗೆಯಲ್ಲಿ ಆಗಮಿಸುವರು ಅದುದರಿಂದ ಜಾಗರೂಕರಾಗಿರಿ! ಎಂದು ಎಚ್ಚರಿಸುತ್ತದೆ. ಯಾಕೆಂದರೆ ಮಾನವರಾದ ನಾವು ಈ ಲೋಕದ ಜೀವನವನ್ನು ಸುಂದರಗೊಳಿಸುವುದರಲ್ಲಿಯೇ ಮಗ್ನರಾಗಿರುತ್ತೇವೆ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ಸಂತೃಪ್ತಿಯನ್ನು ನೀಡುವ ಪ್ರಭು ಆಗಮಿಸುವಾಗ ಅವರನ್ನು ಎದುರುಗೊಳ್ಳಲು ನಾವು ಸಿದ್ಧರಾಗದಿದ್ದಲ್ಲಿ ಅನಂತ ಆನಂದವನ್ನು ಕಳೆದುಕೊಳ್ಳುತ್ತೇವೆ ಎಂಬ ಅರಿವು ನಮಗಿರಬೇಕು.ಇದಕ್ಕಾಗಿ ನಾವೇನು ಮಾಡಬೇಕು?
 1. ಭಗವಂತನ ಆಗಮನ ನಿರಂತರವಾಗಿ ಸಾಗುತ್ತಲೇ ಇರುತ್ತದೆ ಅದನ್ನು ಗ್ರಹಿಸಿಕೊಳ್ಳುವ ಅರಿವನ್ನು ದೇವರ ವಾಕ್ಯವನ್ನು ಓದುವುದರ ಮೂಲಕ ವೃದ್ಧಿಗೊಳಿಸಿಕೊಳ್ಳಬೇಕು.
2. ಭಗವಂತನು ಆಗಮಿಸಿದಾಗ ಬರೇ ನಾವು ಇದ್ದರೆ ಸಾಲದು ದೇವಜನರೆಲ್ಲರೂ ಇರಬೇಕು. ಅಂದರೆ. ನಾನು ಮಾತ್ರವಲ್ಲ ನನ್ನ ಸಮುದಾಯವನ್ನು ಅಣುಗೊಳಿಸುವ ಹೊಣೆಗಾರಿಕೆಯೂ ನನಗಿದೆ ಎಂಬ ಜ್ಞಾನವಿರಬೇಕು.
3. ಭಗವಂತನು ಆಗಮಿಸಿದಾಗ ಆತನನ್ನು ಕಣ್ಣು ತುಂಬಿಕೊಳ್ಳಲು ಪ್ರಾರ್ಥನೆ, ಧಾನಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸಿಕೊಂಡಿರಬೇಕು ಆಗ ಆವರು ನಮಗೆ ದರುಶನವಿತ್ತು ಆತ್ಮಸಂತೃಪ್ತಿಯನ್ನು ನೀಡುವರು.    
=====================
ಚಿಂತನೆ- ಫಾ ವಿಜಯ್ ಕುಮಾರ್, 
ಬಳ್ಳಾರಿ ಧರ್ಮಾಕ್ಷೇತ್ರ
======================


ನವೆಂಬರ್ 28, 2020 ಶನಿವಾರ

 ನವೆಂಬರ್ 28, 2020 ಶನಿವಾರ                        [ಹಸಿರು]
ಮೊದಲ ವಾಚನ: ಪ್ರಕಟನಾ 22.1-7
ಕೀರ್ತನೆ 95:1-7 ಶ್ಲೋಕ.ಯೊವಾನ್ನನ ಪ್ರಕಟನೆ 22:20
ಪ್ರಭು ಯೇಸುವೇ, ಬನ್ನಿ
ಶುಭಸಂದೇಶ: ಲೂಕ 21.34-36
==================
ಮೊದಲನೇ ವಾಚನ
ಪ್ರಕಟನಾ 22.1-7
1 : ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ,
2 : ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲ ಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.
3 : ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖದರ್ಶನವಾಗುವುದು.
4 : ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.
5 : ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು. ಯೇಸುವಿನ ಪುನರಾಗಮನ
6 : ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮ ಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವುವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ.
7 : “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ.’ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.
===================
ಕೀರ್ತನೆ 
ಕೀರ್ತನೆ 95:1-7 ಶ್ಲೋಕ.ಯೊವಾನ್ನನ ಪ್ರಕಟನೆ 22:20
ಶ್ಲೋಕ: ಪ್ರಭು ಯೇಸುವೇ, ಬನ್ನಿ
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / 
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / 
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
3 : ಏಕೆಂದರೆ ಪ್ರಭು ದೇವಾಧಿದೇವನು /
ದೇವರುಗಳಲೆಲ್ಲ ರಾಜಾಧಿರಾಜನು //
4 : ಆತನ ಕೈಯಲ್ಲಿವೆ ಬುವಿಯಂತರಾಳಗಳು / 
ಆತನವೇ ಪರ್ವತಗಳಾ ತುತ್ತತುದಿಗಳು //
5 : ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ / 
ಒಣನೆಲವು ಆತನದೆ-ಅದ ರೂಪಿಸಿದವ ಆತನೆ //
6 : ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ / 
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ //
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ / 
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ //
===================
ಶುಭಸಂದೇಶ
ಲೂಕ 21.34-36
34 : “ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗರೂಕರಾಗಿರಿ!
35 : ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು.
36 : ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ,” ಎಂದರು.
===================
ಚಿಂತನೆ
ನಾವು ಸೂಕ್ಷ್ಮವಾಗಿ ಟಿವಿ ಜಾಹಿರಾತುಗಳನ್ನು ಗಮನಿಸಿದರೆ, ಅಲ್ಲಿ ಬರೀ ತಿಂಡಿ ತಿನಿಸುಗಳ ಬಗ್ಗೆ, ಕುಡಿಯುವುದರೆ ಬಗ್ಗೆ ಸೌಂದರ್ಯ ಹೆಚ್ಚಿಸುವುದರ ಬಗ್ಗೆಯೇ ಕೊಡುವ ವರ್ಣನೆಯಲ್ಲಿನಾವು ನೋಡುತ್ತೇವೆ. ಇವೆಲ್ಲವೂ ನಮ್ಮನ್ನು ಲೌಕಿಕ ಆಶಾಪಾಶಗಳಿಗೆ ಒಳಗಾಗುವಂತೆ ಮಾಡುತ್ತಿವೆ. ಆದರೆ ಕ್ರೈಸ್ತರಾದ ನಾವು ನಮ್ಮ ಲೋಕದ ಪರಿಚಯವನ್ನು ಮಾಡಿಕೊಳ್ಳಬೇಕು. ಅದು ಪರಲೋಕ ತಂದೆಯ ನಿವಾಸ, ಸ್ವಾಮಿ ಯೇಸುವಿನ ಶ್ರೀವಾಸ. ಅಲ್ಲಿಗೆ ಹೋಗಬೇಕಾದವರು ಬಹಳ ಜಾಗರೂಕರಾಗಿರಬೇಕು. ನಾವು ನಮ್ಮ ಮನೆಗಳಲ್ಲಿ ಆಫೀಸುಗಳಲ್ಲಿ ಶಾಲೆಕಾಲೇಜುಗಳಲ್ಲಿ ನೋಡುತ್ತೇವೆ: ಏನಾದರೂ ಕಾರ್ಯಕ್ರಮ ಇದ್ದರೆ ಆದರೆ ಜೊತೆ ಊಟ ಇದ್ದೇ ಇರುತ್ತದೆ. ಊಟದ ವಿಷಯ ಮಾತನಾಡದೇ ಇದ್ದರೆ ಯಾರೂ ನಮ್ಮ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಊಟ ಬಲು ಮುಖ್ಯವಾದ ವಿಷಯವಾಗಿಬಿಟ್ಟಿದೆ. ಊಟದ ವಿಷಯದಲ್ಲಿ ನಾವು ಎರಡು ಬಗೆಯ ಜನರನ್ನು ಕಾಣುತ್ತೇವೆ . ಜೀವಿಸುವುದಕ್ಕಾಗಿ ಊಟ ಮಾಡುವುದು, ಊಟ ಮಾಡುವುದಕ್ಕಾಗಿಯೇ ಜೀವಿಸುವುದು. ಯೇಸುಸ್ವಾಮಿ ಎರಡನೇ ವರ್ಗದ ಜನರಿಗೆ ಬಲು ಕಠೋರವಾಗಿ ಇಂದಿನ ಶುಭಸಂದೇಶದಲ್ಲಿ ಎಚ್ಚರಿಸುತ್ತಿದ್ದಾರೆ. ಸದಾ ಏನು ತಿನ್ನುವುದು ಏನು ಕುಡಿಯುವುದು ಎನ್ನದೆ ನಮ್ಮ ದೇಹದ ಆಸೆ ಆಕಾಂಕ್ಷೆಗಳು ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿ ಇರಬೇಕು, ಆಗ ಮಾತ್ರ ನಾವು ಯಶಸ್ಸನ್ನು ಗಳಿಸಲು ಸಾಧ್ಯ. ಆ ಯಶಸ್ಸು ನಮ್ಮದಾಗಬೇಕಾದರೆ ಯೇಸುಸ್ವಾಮಿ ಹೇಳಿದಂತೆ ಪ್ರಾರ್ಥನೆಯ ಜೀವನವನ್ನು ನಾವು ಅಪ್ಪಿಕೊಳ್ಳಬೇಕು. ಸದಾ ಜಾಗರೂಕರಾಗಿರಬಹುದು. ಲೌಕಿಕ ಆಸೆಗಳಿಗೆ ತಿಲಾಂಜಲಿ ಕೊಡಬಹುದು. ಇದೆಲ್ಲಾ ನಮ್ಮಿಂದಾದರೆ ಮಾತ್ರ ನಾವು ಪರಲೋಕ ಸೇರುವುದು ಖಚಿತ . ಅದರ ಪ್ರವೇಶ ಉಚಿತ.
ಆತ್ಮಾವಲೋಕನ
•        ನನ್ನ ಆಸೆ ಯಾವ ಬಗೆದು? ಲೌಕಿಕದ್ದೋ ಅಥವಾ ಅಧ್ಯಾತ್ಮಿಕದ್ದೋ?
•        ನನ್ನ ಯೋಚನೆ ಬರೀ ಊಟ ಮಾಡುವುದರ ಮತ್ತು ಕುಡಿಯುವುದರ ಕುರಿತೆ?
•        ಪ್ರಾರ್ಥನೆಗೆ ನನ್ನಲ್ಲಿ ಸ್ಥಳವಿದೆಯೇ?
===================


ನವೆಂಬರ್ 27, 2020 ಶುಕ್ರವಾರ

 ನವೆಂಬರ್ 27, 2020 ಶುಕ್ರವಾರ                        [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 20.1-4, 11 - 21.2
ಕೀರ್ತನೆ 84:2-5, 7. ಶ್ಲೋಕ.ಯೊವಾನ್ನನ ಪ್ರಕಟನೆ 21:3
ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ
ಶುಭಸಂದೇಶ: ಲೂಕ 21.29-33
==================
ಮೊದಲನೇ ವಾಚನ
ಪ್ರಕಟನೆ 20.1-4, 11 - 21.2
1 : ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದು ಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು.
2 : ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.
3 : ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪ ಕಾಲ ಬಿಡುಗಡೆ ದೊರೆಯುವುದು.
4 : ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪು ಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು.
11 : ಅನಂತರ ಶ್ವೇತವರ್ಣದ ಒಂದು ಮಹಾ ಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.
12 : ಇದಲ್ಲದೆ, ಮೃತರಾಗಿದ್ದ ಹಿರಿಯ ಕಿರಿಯರೆಲ್ಲರೂ ಸಿಂಹಾಸನದ ಸಾನ್ನಿಧ್ಯದಲ್ಲಿ ನಿಂತಿರುವುದನ್ನು ಕಂಡೆ. ಆಗ ಪುಸ್ತಕಗಳನ್ನು ತೆರೆಯಲಾಯಿತು. ಅನಂತರ ಮತ್ತೊಂದು ಪುಸ್ತಕವನ್ನು ತೆರೆಯಲಾಯಿತು. ಅದು ಜೀವಬಾಧ್ಯರ ಪಟ್ಟಿಯುಳ್ಳ ಪುಸ್ತಕ. ಆ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಮೃತರಿಗೆ ನ್ಯಾಯತೀರ್ಪು ಕೊಡಲಾಯಿತು.
13 : ಸಮುದ್ರವು ತನ್ನಲ್ಲಿದ್ದ ಮೃತರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಮೃತರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ಆಯಿತು.
14 : ಅನಂತರ ಮೃತ್ಯುವನ್ನೂ ಪಾತಾಳವನ್ನೂ ಅಗ್ನಿಸರೋವರಕ್ಕೆ ಎಸೆಯಲಾಯಿತು. ಆ ಅಗ್ನಿಸರೋವರವೇ ಎರಡನೆಯ ಮರಣ.
15 : ಯಾರ ಯಾರ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ ಅಂಥವರನ್ನು ಅಗ್ನಿ ಸರೋವರಕ್ಕೆ ಎಸೆಯಲಾಯಿತು.
1 : ತರುವಾಯ ನೂತನ ಆಕಾಶ ಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು.
2 : ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.
===================
ಕೀರ್ತನೆ 
ಕೀರ್ತನೆ 84:2-5, 7. ಶ್ಲೋಕ.ಯೊವಾನ್ನನ ಪ್ರಕಟನೆ 21:3
ಶ್ಲೋಕ:ಇಗೋ ಮಾನವರ 
            ಮಧ್ಯೆಯೇ ಇದೆ ದೇವಾಲಯ||
2 : ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ / 
ಕಾಣಬೇಕೆಂದು ಪ್ರಭುವಿನ ಪ್ರಾಂಗಣ //
3 : ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧೀ ಶ್ವರ / 
ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ / 
ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ //
4 : ನಿನ್ನ ಮಂದಿರದಲಿ ವಾಸಿಸುವವರು ಧನ್ಯರು / 
ನಿರಂತರವು ನಿನ್ನ ಗುಣಗಾನ ಮಾಡುವರವರು //
5 : ನಿನ್ನಿಂದ ಶಕ್ತಿಪಡೆಯುವವರು ಧನ್ಯರು / 
ಸಿಯೋನ್ ಶಿಖರಕ್ಕವರು ಪ್ರಿಯ ಯಾತ್ರಿಕರು //
7 : ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ / 
ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ //
===================
ಶುಭಸಂದೇಶ
ಲೂಕ 21.29-33
29 : ಬಳಿಕ ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; “ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ.
30 : ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ.
31 : ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ.
32 : ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ.
33 : ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.
===================
ಚಿಂತನೆ
ಅಂಜೂರದ ಮರದಿಂದ ಮುಂಜಾಗರೂಕತೆಯ ಹಾಗೂ ಯೇಸುವಿನ ಆಗಮನದ ಬಗ್ಗೆ ತಿಳಿಯಲು ಶಿಷ್ಯರಿಗೆ  ಸಾಮತಿಯನ್ನು ನೀಡಲಾಗಿದೆ . ಪ್ಯಾಲೆಸ್ತಿನ್ ದೇಶದೆಲ್ಲೆಡೆ ಕಾಣಸಿಗುವ ಅಂಜೂರದ ಮರದ ಬೆಳವಣಿಗೆಯನ್ನು ಅದು ಫಲವನ್ನು ನೀಡುವ ಮುನ್ನ ಸೂಚಿಸುವ ಸಂಕೇತಗಳ ಆಧಾರದ ಮೇರೆಗೆ ದೇವರ ರಾಜ್ಯದ ಆಗಮನದ ಬಗ್ಗೆ ಉಲ್ಲೇಖವಿದೆ. ಪ್ಯಾಲೆಸ್ತಿನ್ ದೇಶದಲ್ಲಿ ಚಳಿಗಾಲವು ಬಂದಾಗ ಎಲ್ಲಾ ಮರಗಳಲ್ಲಿ ಎಲೆಗಳಿರುತ್ತವೆ. ಆದರೆ ಅಂಜೂರದ ಮರದಲ್ಲಿ ಎಲೆಗಳೆಲ್ಲ ಉದುರಿ ಹೋಗುತ್ತವೆ. ಎಲೆ ಉದುರಿಹೋದಾಗ ಅಂಜೂರದ ಮರವು ನಿರ್ಜೀವ ಅಥವಾ ಸತ್ತು ಹೋದ ರೀತಿಯಲ್ಲಿ ಕಾಣುತ್ತದೆ. ಅಂಜೂರದ ಮರವು ಚಿಗುರೊಡೆಯಲು ಪ್ರಾರಂಭಿಸಿದ ತಕ್ಷಣ ವಸಂತಕಾಲ ಸಮೀಪಿಸಿದೆ ಎಂದು ಎಲ್ಲರೂ ಅರಿಯುತ್ತಾರೆ. ಯೇಸುವಲ್ಲಿರಿಸಿದ ವಿಶ್ವಾಸವು ಅಂಜೂರದ ಮರದಂತೆ ಇರಬೇಕು. ಭರವಸೆಯಿಲ್ಲದಿರುವ ಜನರ ಮಧ್ಯೆ ಭರವಸೆಯಿಂದ ಜೀವಿಸಬೇಕು. ಯೇಸುವಿನ ವಾಕ್ಯಗಳು ದೇವರ ವಾಕ್ಯದಂತೆ ಎಂದಿಗೂ ಎಂದೆಂದಿಗೂ ಶಾಶ್ವತ, ಜೀವ ಮತ್ತು ಭರವಸೆಯನ್ನೀಯುವ ವಾಕ್ಯಗಳಾಗಿವೆ.
===================



ನವೆಂಬರ್ 26, 2020 ಗುರುವಾರ

 ನವೆಂಬರ್ 26, 2020 ಗುರುವಾರ                        [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 18.1-2, 21-23, 19.1-3, 9
ಕೀರ್ತನೆ  100:1-5. ಶ್ಲೋಕ.19:9
ಯಜ್ಞದ ಕುರಿಮರಿಯ ವಿವಾಹದೌತಣಕ್ಕೆ ಆಹ್ವಾನಿತರು ಭಾಗ್ಯವಂತರು
ಶುಭಸಂದೇಶ: ಲೂಕ 21.20-28
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 18.1-2, 21-23, 19.1-3, 9
1 : ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಇಳಿದು ಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು.
2 : ಅವನು ಗಟ್ಟಿಯಾದ ಧ್ವನಿಯಿಂದ ಇಂತೆಂದನು: “ಪತನ ಹೊಂದಿದಳು ಪತನ ಹೊಂದಿದಳು ಬಾಬಿಲೋನ್ ಮಹಾನಗರಿ ಪತನ ಹೊಂದಿದಳು ದೆವ್ವದುರಾತ್ಮಗಳಿಗೆ ಬೀಡಾದಳು ಅಶುದ್ಧ ಪ್ರಾಣಿಪಕ್ಷಿಗಳಿಗೆ ಗೂಡಾದಳು.
21 : ಆಗ ಒಬ್ಬ ಬಲಿಷ್ಠ ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು: “ಬಾಬಿಲೋನ್ ಮಹಾನಗರವನು ಈ ಪರಿಯಾಗಿ ಎತ್ತೆಸೆಯಲಾಗುವುದು ಅವಳಿದ್ದ ಎಡೆಯು ಯಾರಿಗೂ ಕಾಣಸಿಗದಂತಾಗುವುದು.
22 : “ಎಲೈ ಬಾಬಿಲೋನೇ, ಕಿನ್ನರಿಗಾರರ, ಸಂಗೀತಗಾರರ, ಕೊಳಲ ನುಡಿಸುವವರ, ತುತೂರಿಯನೂದುವವರ ಮಧುರ ಗಾನವು ಕೇಳಿಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು ನಿನ್ನಲ್ಲಿ ಎಂದೆಂದೂ !
23 : “ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ ವರ್ತಕರು ಇಳೆಗೆ ಧನವಂತರಾಗಿ, ಬಿದ್ದವು ರಾಷ್ಟ್ರಗಳು ನಿನ್ನ ಜಾಲಕೆ ವಂಚಿತರಾಗಿ.
1 : ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ. ಅದು ದೊಡ್ಡ ಜನಸಮೂಹದ ಆರ್ಭಟದಂತಿತ್ತು. “ಅಲ್ಲೆಲೂಯ! ಜೀವೋದ್ಧಾರವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲುಂಟು.
2 : ಆತನ ನ್ಯಾಯತೀರ್ಪು ಸತ್ಯವಾದುದು ನೀತಿಬದ್ಧವಾದುದು. ಇತ್ತಿರುವನಾತ ತೀರ್ಪನು ಮಹಾ ವೇಶ್ಯೆಯ ವಿರುದ್ಧ ಪೃಥ್ವಿಯನೇ ಹೊಲಸೆಬ್ಬಿಸಿದ ವ್ಯಭಿಚಾರಿಣಿಯ ವಿರುದ್ಧ ತನ್ನ ದಾಸರ ರಕ್ತಪಾತದ ಸೇಡನು ತೀರಿಸಿಹನಾತ,” ಎಂದು ಜನಸಮೂಹವು ಘೋಷಿಸಿತು.
3 : ಅವರು ಮತ್ತೊಮ್ಮೆ, “ಅಲ್ಲೆಲೂಯ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇಸಮನೆ” ಎಂದು ಕೂಗಿದರು.
9 : ಅನಂತರ ದೇವದೂತನು “ ‘ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು’ ಎಂದು ಬರೆ,” ಎಂದು ನನಗೆ ಆಜ್ಞಾಪಿಸಿದನು. “ಇವು ದೇವರ ಸತ್ಯವಾದ ವಾಕ್ಯಗಳು,” ಎಂದು ಸಹ ತಿಳಿಸಿದನು.
===================
ಕೀರ್ತನೆ 
ಕೀರ್ತನೆ: 100:1-5. ಶ್ಲೋಕ.19:9
ಶ್ಲೋಕ: ಯಜ್ಞದ ಕುರಿಮರಿಯ ವಿವಾಹದೌತಣಕ್ಕೆ 
            ಆಹ್ವಾನಿತರು ಭಾಗ್ಯವಂತರು||
1 : ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
2 : ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ / 
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ //
3 : ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು / 
    ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು / 
    ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು //
4 : ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ / 
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ /
   ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ ||
5 : ಹೌದು, ಪ್ರಭುವೆನಿತೋ ಒಳ್ಳೆಯವನು /
 ಇರುವುದಾತನ ಪ್ರೀತಿ ಯುಗಯುಗಕು / 
 ಆತನ ಸತ್ಯತೆ ತಲತಲಾಂತರಕು //
===================
ಶುಭಸಂದೇಶ
ಲೂಕ 21.20-28
20 : “ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ.
21 : ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ.
22 : ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು.
23 : ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು.
24 : ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು.
25 : “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು.
26 : ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು.
27 : ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು.
28 : ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ದಾರವು ಸಮೀಪಿಸಿತು.”
===================
ಚಿಂತನೆ
ಯೇಸುವು ಜೆರುಸಲೇಮಿಗೆ ಬರುವ ದುರ್ಗತಿಯ ಬಗ್ಗೆ ತಿಳಿಸುತ್ತಿದ್ದಾರೆ. ದಾನಿಯೇಲನ ಪ್ರವಾದನೆಯಂತೆ ದೇವಾಲಯವನ್ನು ಅಪವಿತ್ರಗೊಳಿಸಿ ಜನರನ್ನು ಹಿಂಸಿಸಲಾಗುವುದು (ದಾನಿಯೇಲ 11:31-35). ಯೇಸು ಪ್ರವಾದಿಸಿದಂತೆ ಕ್ರಿ.ಶ. 70ರಲ್ಲಿ ರೋಮನ್ನರು ಜೆರುಸಲೇಮನ್ನು ಸಂಪೂರ್ಣವಾಗಿ ನಾಶಪಡಿಸಿ, ದೇವಾಲಯವನ್ನು ಸುಟ್ಟುಹಾಕಿದರು. ಇತಿಹಾಸಕಾರ ಫ್ಲಾವಿಯುಸ್ ಜೋಸೇಪುಸ್ ಪ್ರಕಾರ ದಂಡನಾಯಕ ಟೈಟಸ್ನ ನಾಯಕತ್ವದಲ್ಲಿ ಬಂದ ರೋಮಿನ ಸೈನಿಕರು ವೃದ್ದರು, ಮಕ್ಕಳೆನ್ನದೆ ಎಲ್ಲರನ್ನೂ ಕೊಲೆಮಾಡುತ್ತಾರೆ. ರಕ್ತವು ಹಾದಿಬೀದಿಯಲ್ಲಿ ಹರಿಯುತ್ತದೆ. ನಗರವನ್ನು ಬೆಂಕಿಯಲ್ಲಿ ಸುಡುತ್ತಾರೆ. ಆ ರಕ್ತವು ಆ ಬೆಂಕಿಯನ್ನು ನಂಧಿಸಿತು ಎನ್ನುತ್ತಾನೆ ಜೋಸೇಪುಸ್. ಆ ಯುದ್ಧದಲ್ಲಿ ಸುಮಾರು 97000 ಯೆಹೂದ್ಯರನ್ನು ಸೆರೆಯಾಳುಗಳನ್ನಾಗಿ ಕೊಂಡೊಯ್ದರು ಯೇಸು ತಿಳಿಸಿರುವ ದುರಂತವನ್ನು 
ಬರೇ ಮಾತುಗಳಿಂದ ವರ್ಣಿಸಲು ಅಸಾಧ್ಯವಾಗಿದೆ. ದೇವರು ಜೆರುಸಲೇಮನ್ನು ತ್ಯಜಿಸಿರುವುದರಿಂದ ಶಿಷ್ಯರು ಆ ನಗರವನ್ನು ಬಿಟ್ಟು ಬೇರೆ ಸ್ಥಳಗಳಿಗೆ ಹೋಗಬೇಕೆಂದೂ ಆದೇಶಿಸಲಾಯಿತು.
===================




ನವೆಂಬರ್ 25, 2020 ಬುಧವಾರ

 ನವೆಂಬರ್ 25, 2020 ಬುಧವಾರ                        [ಹಸಿರು]
ಅಲೆಕ್ಸಾಂಡ್ರಿಯ ಸಂತ ಕಥರೀನ, ಕನ್ಯೆ ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 15.1-4
ಕೀರ್ತನೆ 98:1-3, 7-9, ಶ್ಲೋಕ.ಯೊವಾನ್ನನ ಪ್ರಕಟನೆ 15:3
ಹೇ ದೇವಾ, ಹೇ ಪ್ರಭು, ನೀ ಸರ್ವಶಕ್ತ
ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ
ಶುಭಸಂದೇಶ: ಲೂಕ 21.12-19
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 15.1-4
1 : ಸ್ವರ್ಗದಲ್ಲಿ ಮತ್ತೊಂದು ಚಿಹ್ನೆಯನ್ನು ಕಂಡೆ. ಅದು ಅತ್ಯಾಶ್ಚರ್ಯಕರವಾಗಿ ಇತ್ತು. ಏಳು ದೇವದೂತರ ಕೈಯಲ್ಲಿ ಏಳು ವಿಪತ್ತುಗಳು ಇದ್ದವು. ಇವು ಅಂತಿಮವಾಗಿ ಬಂದೆರಗುವ ವಿಪತ್ತುಗಳು. ಏಕೆಂದರೆ, ಅವುಗಳೊಡನೆ ದೇವರ ಕೋಪಾಗ್ನಿ ಪೂರ್ತಿಯಾಗಿ ಬಂದೆರಗುವುದು.
2 : ಇದಲ್ಲದೆ, ಗಾಜಿನ ಸಮುದ್ರದಂತಿದ್ದ ಒಂದು ವಸ್ತು ಕಾಣಿಸಿತು; ಅದು ಬೆಂಕಿಯಿಂದ ಕೂಡಿತ್ತು. ಮೃಗದ ವಿರುದ್ಧ, ಅದರ ವಿಗ್ರಹದ ವಿರುದ್ಧ ಹಾಗೂ ಅದರ ಹೆಸರನ್ನು ಸೂಚಿಸುವ ಸಂಖ್ಯೆಯ ವಿರುದ್ಧ ಜಯಗಳಿಸಿದವರನ್ನು ಸಹ ಕಂಡೆ. ಅವರು ಗಾಜಿನ ಸಮುದ್ರದ ಬಳಿ ನಿಂತಿದ್ದರು; ಕೈಗಳಲ್ಲಿ ದೇವರಿತ್ತ ಕಿನ್ನರಿಗಳಿದ್ದವು.
3 : ಅವರು ದೇವರ ದಾಸನಾದ ಮೋಶೆಯ ಗೀತೆಯನ್ನೂ ಯಜ್ಞದ ಕುರಿಮರಿಯ ಗೀತೆಯನ್ನೂ ಹಾಡುತ್ತಿದ್ದರು. ಅದು ಯಾವುದೆಂದರೆ: “ಹೇ ದೇವಾ, ಹೇ ಪ್ರಭೂ, ನೀ ಸರ್ವಶಕ್ತ ! ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ! ರಾಷ್ಟ್ರಗಳಿಗೆಲ್ಲಾ ನೀ ರಾಜಾಧಿರಾಜ ನಿಜವಾದುದು, ಋಜುವಾದುದು ನಿನ್ನ ಸನ್ಮಾರ್ಗ
4 : ಹೇ ಪ್ರಭೂ, ನಿನಗಂಜದವರಾರು? ನಿನ್ನ ನಾಮಸ್ತುತಿ ಮಾಡದವರಾರು? ಪರಮಪವಿತ್ರ ನೀನಲ್ಲದಿನ್ನಾರು ಪ್ರಕಟವಾಗಿವೆ ನಿನ್ನ ನೀತಿಯುತ ಕಾರ್ಯಗಳು ಬಂದೆರಗಲಿವೆ ನಿನಗೆ ಸಕಲ ಜನಾಂಗಗಳು.”
===================
ಕೀರ್ತನೆ 
ಕೀರ್ತನೆ 98:1-3, 7-9, ಶ್ಲೋಕ.ಯೊವಾನ್ನನ ಪ್ರಕಟನೆ 15:3
ಶ್ಲೋಕ:ಹೇ ದೇವಾ, ಹೇ ಪ್ರಭು, ನೀ ಸರ್ವಶಕ್ತ
ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ||
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / 
ಎಸಗಿಹನಾತನು ಪವಾಡಕಾರ್ಯಗಳನು / 
ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / 
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / 
ನಮ್ಮ ದೇವ ಸಾಧಿಸಿದ ಜಯಗಳಿಕೆ // 
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / 
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು / 
ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು //
8 : ಚಪ್ಪಾಳೆ ಹೊಡೆಯಲಿ ನದಿಗಳು / 
ತಟ್ಟಾಡಲಿ ಬೆಟ್ಟಗುಡ್ಡಗಳು //
9 : ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು / 
ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು //
===================
ಶುಭಸಂದೇಶ
ಲೂಕ 21.12-19
12 : ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು.
13 : ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ.
14 : ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ.
15 : ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು.
16 : ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧು ಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು.
17 : ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು.
18 : ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ.
19 : ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ.
===================
ಚಿಂತನೆ
ಯೇಸು ತಮ್ಮ ಶಿಷ್ಯರಿಗೆ, ಹಿಂಬಾಲಕರಿಗೆ ಎದುರಾಗುವ ಹಿಂಸೆ, ವೇದನೆಯ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಕ್ರೈಸ್ತ ಸಮದಾಯದ ಮಧ್ಯೆ  ಉದ್ಭವಿಸುವ ಒಳ ಜಗಳಗಳು, ದ್ರೋಹಗಳು, ವಿಶ್ವಾಸ ಘಾತುಕ ಕೃತ್ಯಗಳ ಬಗ್ಗೆಯೂ ಮೂನ್ಸೂಚನೆ ನೀಡುತ್ತಾರೆ. ತನ್ನನ್ನು ಹಿಂಬಾಲಿಸುವವನು ಅನೇಕ ಕಷ್ಟ ಸಂಕಟಗಳನ್ನು, ಬಾಧೆ ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಜಾಗರೂಕರಾಗಿ ಕಾರ್ಯ ನಿರ್ವಹಿಸಲು ಎಚ್ಚರಿಕೆ ನೀಡುತ್ತಾ ರೆ. ಮುಂದೆ ಬರಲಿರುವ ಕಷ್ಟಗಳು ನಾನಾ ರೀತಿಯವು, ಅನೇಕರು ವಿಶ್ವಾಸ ತೊರೆಯುವರು, ಕೆಲವರು ದ್ರೋಹಮಾಡುವರು. ಆದರೆ ಶಿಷ್ಯರು ಎಲ್ಲವನ್ನು ಎದುರಿಸಿ ಅಚಲ ವಿಶ್ವಾಸವನ್ನು ಪ್ರಕಟಿಸಬೇಕೆಂದು ಯೇಸು ವಿವರಿಸುತ್ತಾರೆ . ಬರಲಿರುವ ಕಷ್ಟವನ್ನು ತಾಳ್ಮೆಯಿಂದ ಸಹಿಸಕೊಂಡರೆ ಜೀವೋದ್ಧಾರ ಪಡೆಯುವಿರೆಂದೂ ಧೈರ್ಯ ತುಂಬುತ್ತಾರೆ.
===================



ನವೆಂಬರ್ 24, 2020 ಮಂಗಳವಾರ

 ನವೆಂಬರ್ 24, 2020 ಮಂಗಳವಾರ                        [ಕೆಂಪು]
ಸಂತ ಆಂಡ್ರ್ಯೂ, ದುಂಗ್ಲಾಕ್, ಯಾಜಕ ಮತ್ತು ಸಂಗಡಿಗರು, ರಕ್ತಸಾಕ್ಷಿಗಳು (ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 14.14-19
ಕೀರ್ತನೆ 96:10-11, 12-13. ಶ್ಲೋಕ.13
ಪ್ರಭು ಧರೆಗೆ ನ್ಯಾಯ ತೀರಿಸಲು ಬಂದೇ ಬರುವರು ಖರೆಯಾಗಿ
ಶುಭಸಂದೇಶ: ಲೂಕ 21.5-11
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 14.14-19
14 : ನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು.
15 : ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, “ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಭಿಸು”, ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
16 : ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು.
17 : ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು.
18 : ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, “ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ”, ಎಂದು ಕೂಗಿ ಹೇಳಿದನು.
19 : ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು.
===================
ಕೀರ್ತನೆ 
ಕೀರ್ತನೆ 96:10-11, 12-13. ಶ್ಲೋಕ.13
ಶ್ಲೋಕ: ಪ್ರಭು ಧರೆಗೆ ನ್ಯಾಯ ತೀರಿಸಲು 
           ಬಂದೇ ಬರುವರು ಖರೆಯಾಗಿ
10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ / 
ಕದಲದ ಸ್ಥಿರತೆಯನು ಇತ್ತಿಹನು ಧರೆಗೆ /
ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ //|
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು /
      ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು //
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು /
       ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು //
13 : ಪ್ರಭು ಧರೆಗೆ ನ್ಯಾಯತೀರಿಸಲು
      ಬಂದೇ ಬರುವನು ಖರೆಯಾಗಿ /
       ಜಗಕು, ಜನತೆಗು ತೀರ್ಪಿಸುವನು
      ನೀತಿನಿಯಮಾನುಸಾರವಾಗಿ //
===================
ಶುಭಸಂದೇಶ
ಲೂಕ 21.5-11
5 : “ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು.
6 : ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು.
7 : “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು.
8 : ಅದಕ್ಕೆ ಯೇಸುಸ್ವಾಮಿ, “ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು ‘ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ.
9 : ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು.
10 : ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು;
11 : ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.
===================
ಚಿಂತನೆ
ಕ್ರಿ.ಪೂ. 28-64ರ ತನಕ ಅರಸ ಹೆರೋದನು ಮಹಾದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಂಡು ದೇವಾಲಯವನ್ನು ಸುಂದರಗೊಳಿಸುತ್ತಾನೆ. ಈ ದೇವಾಲಯ ರೋಮ್ ಸಾಮ್ರಾಜ್ಯದಲ್ಲೇ ಅತಿ ದೊಡ್ಡ ಕಟ್ಟಡವಾಗಿತ್ತು. ಪ್ರಾಚೀನ ಜಗತ್ತಿನ 7 ಆದ್ಭುತಗಳಲ್ಲಿ ಇದು ಒಂದಾಗಿತ್ತು. ಯೇಸುವಿನ ಬಹಿರಂಗ ಹಾಗೂ ಪ್ರಬೋಧನ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. ಇಸ್ರೆಯೇಲರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವೂ ಅದು ಆಗಿತ್ತು. ಇಸ್ರೆಯೇಲರ ಬದುಕಲ್ಲಿ ಈ ಮಹಾದೇವಾಲಯವು ಬಹಳಷ್ಟು ಪ್ರಾಮುಖ್ಯವನ್ನುಪಡೆದಿತ್ತು. ಇಂತಹ ದೇವಾಲಯದ ಅಂತ್ಯದ ಕುರಿತು ಯೇಸು ಇಂದು ಮುಂತಿಳಿಸುತ್ತಾರೆ. ಫ್ಲಾವಿಯುಸ್ ಜೋಸೇಪುಸ್ ಪ್ರಕಾರ ರೋಮನ್ನರು ಕ್ರಿ.ಶ. 70ರಲ್ಲಿ ಈ ಮಂದಿರವನ್ನು ಸಂಪೂರ್ಣ ನಾಶಮಾಡುತ್ತಾರೆ. ದೇವಾಲಯದ ನಾಶವು ದೇವರ ನ್ಯಾಯತೀರ್ಪಿನ ಮುನ್ಸೂಚನೆಯಾಗಿದೆ.
===================




ನವೆಂಬರ್ 23, 2020 ಸೋಮವಾರ

 ನವೆಂಬರ್ 23, 2020 ಸೋಮವಾರ                        [ಹಸಿರು]
ಸಂತ ಕ್ಲೆಮೆಂಟ್ 1, ವಿಶ್ವಗುರು ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)
ಸಂತ ಕೊಲುಂಬಾನ್, ಮಠಾಧಿಪತಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 14.1-5
ಕೀರ್ತನೆ 24:1-6 ಶ್ಲೋಕ.6
ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಶುಭಸಂದೇಶ: ಲೂಕ 21.1-4
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 14.1-5
1 : ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು, ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು.
2 : ಇದಲ್ಲದೆ, ಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತು. ಅದು ಭೋರ್ಗರೆಯುವ ಜಲ ಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತು. ನಾವು ಕೇಳಿದಂಥ ಧ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತು.
3 : ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ. ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ.
4 : ಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರು; ಕನ್ಯೆಯರಂತೆ ಕಳಂಕರಹಿತರು; ಇವರು ಯಜ್ಞದ ಕುರಿಮರಿ ಹೋದೆಡೆಯಲ್ಲೆಲ್ಲಾ ಹಿಂಬಾಲಿಸುವವರು; ದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರು.
5 : ಸುಳ್ಳು ಮಾತು ಅವರ ಬಾಯಿಂದ ಬರುವುದಿಲ್ಲ; ಅವರು ನಿರ್ದೋಷಿಗಳು. 
===================
ಕೀರ್ತನೆ 
ಕೀರ್ತನೆ 24:1-6 ಶ್ಲೋಕ.6
ಶ್ಲೋಕ:ಇಂಥವರೇ ದೇವರ ದರ್ಶನಾಭ್ಯರ್ಥಿಗಳು||
1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / 
     ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ //
2 : ಕಡಲನು ತಳಪಾಯವನಾಗಿಸಿದವನು ಆತನೆ / 
ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ //
3 : ಪ್ರಭುವಿನ ಶಿಖರವನು ಏರಬಲ್ಲವನಾರು? / 
ಆ ನಿವಾಸದಲಿ ನಿಲ್ಲಲು ಯೋಗ್ಯನಾರು? //
4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / 
     ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು //
5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / 
ನೀತಿಯ ಸತ್ಫಲ ರಕ್ಷಕ ದೇವನಿಂದ //
6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / 
ಇಂಥವರೆ ಯಕೋಬ ದೇವನ ಭಕ್ತಾದಿಗಳು //
===================
ಶುಭಸಂದೇಶ
ಲೂಕ 21.1-4
1 : ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು.
2 : ಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು.
3 : ಅದನ್ನು ಕಂಡ ಯೇಸು, “ಈ ಬಡವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
4 : ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.
===================
ಚಿಂತನೆ
ಯೇಸು ತಮ್ಮ ಶಿಷ್ಯರಿಗೆ ಫರಿಸಾಯರ ಮತ್ತು ಧರ್ಮಶಾಸ್ತ್ರಿಗಳ ಕಪಟತನವನ್ನು ಮತ್ತು ಡಂಭಾಚಾರವನ್ನು ವರ್ಣಿಸಿದ ಬಳಿಕ ದೇವಾಲಯಕ್ಕೆನ ಹೋಗಿ ಕಾಣಿಕೆ ಪೆಟ್ಟಿಗೆ ಕಾಣುವಂತೆ ಕುಳಿತು ಕೊಳ್ಳುತ್ತಾರೆ. ಯೇಸು ಹಣ ಹಾಕುವವರನ್ನು ನೋಡಲು ಕೂರಲಿಲ್ಲ. ಹಲವಾರು ಜನ ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕುತ್ತಿರುವುದು ಯೇಸುವಿನ ಕಣ್ಣಿಗೆ ಬಿತ್ತು. ಬಡವಿಧವೆಯ ತನ್ನ ಬಳಿ ಇದ್ದ 2 ತಾಮ್ರದ ನಾಣ್ಯಗಳನ್ನು ಹಾಕುತ್ತಾಳೆ. ಆ `ಬಡವಿಧವೆ’ಗೆ ಈ ಎರಡು ತಾಮ್ರದ ನಾಣ್ಯಗಳು ಬಹಳ ಬೆಲೆಯುಳ್ಳವು. ಆದರೆ ಅವಳು ಅದ್ಯಾವುದನ್ನೂ ಲೆಕ್ಕಿಸದೆ ದೇವರಿಗೆ ಕಾಣಿಕೆಯಾಗಿ ಕೊಟ್ಟುಬಿಡುತ್ತಾಳೆ. ಇತರರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆ ನೀಡಿದರೆ ಬಡ ವಿಧವೆಯು ತನ್ನ ಸಮಸ್ತವನ್ನು ಅರ್ಪಿಸಿದಳು. ನಾನು ಎಷ್ಟು ನೀಡಿದೆ ಎನ್ನುವುದಕ್ಕಿಂತ ಎಷ್ಟು ಕಳೆದುಕೊಂಡೆ ಎಂಬುದು ಮುಖ್ಯ. ಆ ಬಡ ಮಹಿಳೆಯಂತೆ ನಾವು ಉದಾರಿಗಳಾಗಬೇಕು ಮತ್ತು ನಮ್ಮನ್ನೇ ಸಂಪೂರ್ಣವಾಗಿ ದೇವರಿಗೆ ಅರ್ಪಿಸಬೇಕೆಂದೇ ಆವರ ಆದೇಶ.
===================


ನವೆಂಬರ್ 22, 2020 ಭಾನುವಾರ

 ನವೆಂಬರ್ 22, 2020 ಭಾನುವಾರ                        [ಬಿಳಿ]
ಅಖಿಲ ವಿಶ್ವದ ಅರಸ, ನಮ್ಮ ಪ್ರಭು ಯೇಸು ಕ್ರಿಸ್ತರ ಮಹೋತ್ಸವ
ಮೊದಲ ವಾಚನ: ಯೆಜೆಕಿಯೇಲ 34.11-12, 15-17
ಕೀರ್ತನೆ 23:1-3, 5-6, ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ, 
ಕುಂದುಕೊರತೆಗಳೆಲ್ಲಿಯವು ಎನಗೆ?
ಎರಡನೇ ವಾಚನ: 1 ಕೊರಿಂಥಿಯರಿಗೆ 15.20-26, 28
ಶುಭಸಂದೇಶ: ಮತ್ತಾಯ 25.31-46
-----------------------------
ಸಂತ ಸಿಸಿಲೀಯ, ಕನ್ಯೆ ಮತ್ತು ರಕ್ತಸಾಕ್ಷಿ
==================
ಮೊದಲನೇ ವಾಚನ
ಯೆಜೆಕಿಯೇಲ 34.11-12, 15-17
11 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.
12 : ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು;
15 : ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
16 : “ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ಧ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”
17 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.
===================
ಕೀರ್ತನೆ 
ಕೀರ್ತನೆ 23:1-3, 5-6, ಶ್ಲೋಕ.1
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, 
            ಕುಂದುಕೊರತೆಗಳೆಲ್ಲಿಯವು ಎನಗೆ?
1 : ಪ್ರಭು ಕುರಿಗಾಹಿಯಾಗಿರಲು ನನಗೆ / 
ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು / 
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ / 
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ //
5 : ಸಜ್ಜುಗೊಳಿಸುವೆ ನೀ ಶತ್ರುಗಳ
 ಕಣ್ಮುಂದೆಯೆ ನನಗೌತಣವನು /
  ಹಚ್ಚುವೆ ತಲೆಗೆ ತೈಲವನು, 
 ತುಂಬಿತುಳುಕಿಸುವೆ ಪಾನಪಾತ್ರೆಯನು  //
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / 
     ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
==================
ಎರಡನೇ ವಾಚನ 
1 ಕೊರಿಂಥಿಯರಿಗೆ 15.20-26, 28
20 : ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.
21 : ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು.
22 : ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ.
23 : ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ.
24 : ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.
25 : ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.
26 : ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ.
28 : ಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇ, ಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆ. ಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ.
ಶುಭಸಂದೇಶ
ಮತ್ತಾಯ 25.31-46
31 : “ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು.
32 : ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು.
33 : ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು.
34 : ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ.
35 : ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ.
36 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು.
37 : ಅದಕ್ಕೆ ಆ ಸಜ್ಜನರು, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?
38 : ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು?
39 : ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು.
40 : ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.
41 : “ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ.
42 : ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ.
43 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು.
44 : ಅದಕ್ಕೆ ಅವರು ಕೂಡ, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ ಮತ್ತು ಬಂಧಿಯಾಗಿದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು.
45 : ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವನು.
46 : “ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.
===================
ಚಿಂತನೆ
ಅಖಿಲ ವಿಶ್ವದ ಅರಸ, 
ನಮ್ಮ ಪ್ರಭು ಯೇಸು ಕ್ರಿಸ್ತರ ಮಹೋತ್ಸವ
========================
ಪೀಠಿಕೆ
======
ಚಕ್ರವರ್ತಿಗಳ ಚಕ್ರವರ್ತಿ, ಅರಸರ ಅರಸ, ರಾಜರ ರಾಜ ಪ್ರಭು ಯೇಸುಕ್ರಿಸ್ತ. ಈ ವಿಶ್ವದ ಯಾವ ರಾಜ್ಯವೂ  ಶಾಶ್ವತವಲ್ಲವೆಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಭೂಪರಗಳ ಒಡೆಯನಾದ ಪ್ರಭು ಯೇಸುಕ್ರಿಸ್ತ ಮಾತ್ರ ನಿರಂತರವಾಗಿ ರಾಜ್ಯಭಾರ ಮಾಡುತ್ತಾರೆ ಏಕೆಂದರೆ ಅವರ ರಾಜ್ಯಕ್ಕೆ ಅಂತ್ಯವೇ ಇರದು. ಅದನ್ನು ಅಂತ್ಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಾಂತಿಯ ರಾಜ್ಯ, ಸಹಬಾಳ್ವೆಯ ರಾಜ್ಯ, ಅಲ್ಲಿ ಯಾವ ಭಿನ್ನ-ಭಾವವೂ  ತಲೆದೋರದು.  ಅಲ್ಲಿ ಸರ್ವರೂ ಸಮಾನರು. ಇಂತಹ ರಾಜರ ಮಹೋತ್ಸವವನ್ನು ಸಂಭ್ರಮಿಸುವುದು ನಮ್ಮಲ್ಲರ ಸೌಭಾಗ್ಯವೇ ಸರಿ.
ಮೊದಲ ವಾಚನ: 
ಎಜೆಕಿಯೇಲ 34.11-12, 15-17
====================
ಇಂದಿನ ಮೊದಲನೆಯ ವಾಚನದಲ್ಲಿ ಪ್ರವಾದಿ ಎಜೆಕಿಯೇಲ ಒಬ್ಬ ಉತ್ತಮ ರಾಜನನ್ನು ಉತ್ತಮ ಕುರಿಗಾಹಿಗೆ ಹೋಲಿಸುತ್ತಾನೆ. ಆ ಕುರಿಗಾಹಿಗೆ ತನ್ನ ಕುರಿಗಳ ಹಿತವೇ ಪ್ರಧಾನ ಹಾಗೂ ಅವನ ಅವುಗಳನ್ನು ರಕ್ಷಿಸಲು ಆತನು ತನ್ನನ್ನೇ ಸಂಪೂರ್ಣವಾಗಿ ಸಮರ್ಪಿಸುತ್ತಾನೆ . ಆತನು ಆಳುಗಳನ್ನು ನಂಬುವ ಬದಲು ತಾನೇ ಅವುಗಳ ಆರೈಕೆಗೆ ನಿಲ್ಲಲು ಪಣತೊಡುತ್ತಾನೆ.
 ಎರಡನೇ ವಾಚನ: 
1 ಕೊರಿಂಥಿಯರಿಗೆ 15.20-26, 28
======================
ಎರಡನೆಯ ವಾಚನದಲ್ಲಿ ಪ್ರಭು ಯೇಸು 'ಸರ್ವರಿಗೆ ಸರ್ವಸ್ವವೂ' ಆಗುತ್ತಾರೆ ಎಂದು ಸಂತ ಪೌಲನು ಕೊರಿಂಥಿಯದ ಭಕ್ತಾದಿಗಳಿಗೆ ಆಭಯವನ್ನು ನೀಡುತ್ತಾನೆ. ಮಾತ್ರವಲ್ಲದೆ ಇನ್ನೂ ಸಾವು ಯಾರನ್ನೂ  ಹಿಡಿದಿಟ್ಟುಕೊಳ್ಳುಲು ಸಾಧ್ಯವಿಲ್ಲ ಏಕೆಂದರೆ ಪ್ರಭು ಎಲ್ಲರಿಗಾಗಿಯೂ ಸತ್ತು ಪುನರುತ್ಥಾನರಾಗಿದ್ದಾರೆ ಅವರ ರಾಜ್ಯಕ್ಕೆ ಅಂತ್ಯವಿಲ್ಲ ಎಂದೇ ಆತನ ಹೇಳಿಕೆ.
 
ಶುಭಸಂದೇಶ: 
ಮತ್ತಾಯ 25.31-46
==============
ಇಂದಿನ ಶುಭಸಂದೇಶ ಪ್ರಭು ಕ್ರಿಸ್ತನ ರಾಜ್ಯಕ್ಕೆ ಭಾಜನರಾಗುವವರು ಯಾರು ಎಂಬುದನ್ನು ವಿವರಿಸುತ್ತದೆ. ಈ ಸಾಮ್ರಾಜ್ಯವನ್ನು ವಾಸ್ತವಿಕವಾಗಿ ಪಡೆಯಲು
 1. ಫಲಾಪೇಕ್ಷೆಯಿಲ್ಲದೆ ಪರೋಪಕಾರಿಯಾಗಿರಬೇಕು. ಅಂದರೆ ಹಸಿದವರಿಗೆ ಅಹಾರ, ಬಾಯಾರಿದವರಿಗೆ ಪಾನೀಯ, ಅಪರಿಚಿತರಿಗೆ ಆಶ್ರಯ, ಉಡಲು ಬಟ್ಟೆ, ರೋಗಿಗಳ ಆರೈಕೆ, ಬಂಧಿತರ ಭೇಟಿ ಹೀಗೆ  ಪರೋಪಕಾರಿ ಸೇವೆ ನಿರಂತರವಾಗಿ ಹಾಗೂ ನಿರಾಯಾಸವಾಗಿ ಅಡೆ ತಡೆ ಇಲ್ಲದೆ ಸಾಗುತ್ತಿರಬೇಕು.
2. ನಮ್ಮ ಬದುಕು ಶುದ್ಧೀಕರಣವಾಗುತ್ತಿರಬೇಕು. ಆಂದರೆ ಮನಶುದ್ಧಿ, ತನುಶುದ್ಧಿಯಾಗಿ ಆತ್ಮ ಶುದ್ಧಿಯಾಗುತ್ತಿರಬೇಕು. ಬಾಹ್ಯದಲ್ಲಿ ಪರೋಪಕಾರಿಯಾಗಿ ಆಂತರ್ಯದಲ್ಲಿ ಲೌಕಿಕ ವ್ಯಾಮೋಹಗಳಿಂದ ತುಂಬಿದ್ದರೆ ಪರೋಪಕಾರ ನಿಷ್ಫಲ.
3. ಇಲ್ಲಿರುವ ಎಲ್ಲಾ ರಾಜ್ಯಗಳು ಕಾಲಮಿತಿಯೊಳಗೆ ಮರೆಯಾಗುತ್ತವೆ ಆದರೆ ಪ್ರಭುವಿನ ರಾಜ್ಯ ಶಾಶ್ವತ ಎಂಬ ಆಳವಾದ ಅರಿವೂ  ನಂಬಿಕೆಯೂ ನಮ್ಮಲ್ಲಿ ನವನವೀನವಾಗಿರಬೇಕು. ಆಗ ಮಾತ್ರ ಪ್ರಭು ಕ್ರಿಸ್ತನ ರಾಜ್ಯಕ್ಕೆ ಭಾಜನರಾಗಲು ಸಾಧ್ಯ.
 ಏಕೆಂದರೆ ಪ್ರಭು ಕ್ರಿಸ್ತನ ರಾಜ್ಯ  ಪ್ರೀತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ  ನೀತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ  ಶಾಂತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ  ಸಮೃದ್ಧಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ  ನಮ್ಮೆಲ್ಲರ ರಾಜ್ಯ. ಆಲ್ಲಿ ನ್ಯಾಯನೀತಿ ರಾಜ್ಯವಾಳುತ್ತವೆ ಹಾಗೂ ಸ್ನೇಹಪ್ರೀತಿ ಪ್ರವರ್ಧಿಸುತ್ತವೆ. ಇಂತಹ ರಾಜ್ಯದ ಸ್ಥಾಪನೆಗೆ ಪ್ರಭು ನಮ್ಮೆಲ್ಲರ ಸಹಕಾರವನ್ನು ಬಯಸುತ್ತಾರೆ.ಬನ್ನಿ ಕಟ್ಟೋಣ ನಮ್ಮ ಪ್ರಭು ಕ್ರಿಸ್ತನ ರಾಜ್ಯವನು.     
==============
ಚಿಂತನೆ – ಫಾ ವಿಜಯ್ ಕುಮಾರ್, 
ಬಳ್ಳಾರಿ ಧರ್ಮಕ್ಷೇತ್ರ
==================



ನವೆಂಬರ್ 21, 2020 ಶನಿವಾರ

 ನವೆಂಬರ್ 21, 2020 ಶನಿವಾರ                        [ಬಿಳಿ]
ಪೂಜ್ಯ ಕನ್ಯಾಮರಿಯಮ್ಮನವರು ದೇವಾಲಯದಲ್ಲಿ 
ಕಾಣಿಕೆಯಾಗಿ ಅರ್ಪಿತರಾದದ್ದು (ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 11.4-12
ಕೀರ್ತನೆ 144: 1-2, 9-10 ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯ ದುರ್ಗಕ್ಕೆ
ಶುಭಸಂದೇಶ: ಲೂಕ 20.27-40
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 11.4-12
4 : ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ.
5 : ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.
6 : ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮಥ್ರ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟ ಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ.
7 : ಇವರ ಸಾಕ್ಷ್ಯ ನೀಡಿಕೆ ಮುಗಿದನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿ ಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ, ಇವರನ್ನು ಕೊಂದುಹಾಕುತ್ತದೆ.
8 : ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿ ಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು.
9 : ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿ ಮಾಡಲು ಬಿಡಲೊಲ್ಲರು.
10 : ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.
11 : ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದು ನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು.
12 : ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.
===================
ಕೀರ್ತನೆ 
ಕೀರ್ತನೆ 144: 1-2, 9-10 ಶ್ಲೋಕ.1
ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯ ದುರ್ಗಕ್ಕೆ
1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ / 
ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ //
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ / 
ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ //
9 : ಹಾಡುವೆ ದೇವಾ, ನಿನಗೆ ನೂತನ ಕೀರ್ತನೆಯನು / 
ಪಾಡುವೆ ನುಡಿಸುತ್ತಾ ದಶತಂತಿಯ ವೀಣೆಯನು //
10 : ನೀನೇ ಅರಸುಗಳಿಗೆ ಜಯಪ್ರದನು / 
ದಾಸ ದಾವೀದನನು ಬಿಡಿಸಿದವನು //
===================
ಶುಭಸಂದೇಶ
ಲೂಕ 20.27-40
27 : ಅನಂತರ ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು:
28 : “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ?
29 : ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ.
30 : ಅವನ ಹೆಂಡತಿಯನ್ನು ಎರಡನೆಯವನು,
31 : ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು.
32 : ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು.
33 : ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು.
34 : ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ.
35 : ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ.
36 : ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು.
37 : ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ.
38 : “ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು.
39 : ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು.
40 : ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
===================
ಚಿಂತನೆ
ಧ.ಕಾಂಡ 25:5-10ರ ಪ್ರಕಾರ ವಿಧವೆಯಾದ ಅಣ್ಣನ ಹೆಂಡತಿಯನ್ನು ಮದುವೆ ಮಾಡಿಕೊಂಡು ಅಣ್ಣನ ಸಂತಾನವು ನಶಿಸಿಹೋಗದಂತೆ ಅಥವಾ ಕೊನೆಯಾಗದಂತೆ ನೋಡಿಕೊಳ್ಳುವುದು ತಮ್ಮನ ಹೊಣೆಗಾರಿಯಾಗಿತ್ತು. ಸದ್ದುಕಾಯರಿಗೆ ಪುನರುತ್ಥಾನದಲ್ಲಿ ಮತ್ತು ದೇವದೂತರ ಅಸ್ತಿತ್ವದಲ್ಲಿ ವಿಶ್ವಾಸವಿರಲಿಲ್ಲ. ಹಾಗಾಗಿ ಯೇಸುವನ್ನು ಪರೀಕ್ಷಿಸುವ ಸಲುವಾಗಿ ಒಂದು ಕಾಲ್ಪನಿಕ ಉದಾಹರಣೆ ಹೇಳುವುದರ ಮೂಲಕ ತಮ್ಮ ಅತಿಪಾಂಡಿತ್ಯವನ್ನು  ಪ್ರದರ್ಶಿಸುತ್ತಾರೆ. ಅವರ ಪ್ರಶ್ನೆಗೆ ಯೇಸುವು ಅವರೇ ಮನ್ನಿಸುತ್ತಿದ್ದ ಮಿ. ಕಾಂಡ 3:6. 15-16 ಉಲ್ಲೇಖಿಸುತ್ತಾ ಅಬ್ರಹಾಮ್, ಇಸಾಕ, ಯೆಕೋಬರು ದೇವರ ಸನ್ನಿಧಿಯಲ್ಲಿ ಜೀವಂತವಾಗಿದ್ದಾರೆ ಎಂದು ಸಮರ್ಥಿಸುವುದರ  ಮೂಲಕ ಪುನರುತ್ಥಾನವಿರುವುದು ನಿಜವೆಂದನ್ನು ಸ್ಪಷ್ಟ ಪಡಿಸುತ್ತಾರೆ.
===================



ನವೆಂಬರ್ 20, 2020 ಶುಕ್ರವಾರ

 ನವೆಂಬರ್ 20, 2020 ಶುಕ್ರವಾರ [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 10.8-11
ಕೀರ್ತನೆ 119:14, 24, 72, 103, 111, 131, ಶ್ಲೋಕ.103
ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ
ಶುಭಸಂದೇಶ: ಲೂಕ 19.45-48
==========
ಮೊದಲನೇ ವಾಚನ
===============
ಯೊವಾನ್ನನ ಪ್ರಕಟನೆ 10.8-11
8 : ಸ್ವರ್ಗದಿಂದ ನನಗೆ ಕೇಳಿಸಿದ್ದ ಧ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, “ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು. ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ತಿಳಿಸಿತು.
9 : ನಾನು ಆ ದೇವದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು,” ಎಂದು ಕೇಳಿದೆ. ಅವನು, “ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ,” ಎಂದನು.
10 : ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು.
11 : ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.
===================
ಕೀರ್ತನೆ 
ಕೀರ್ತನೆ 119:14, 24, 72, 103, 111, 131, ಶ್ಲೋಕ.103
ಶ್ಲೋಕ: ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ||
14 : ಸಿರಿಸಂಪತ್ತಿಗಿಂತ ಮಿಗಿಲಾಗಿ / 
ಆನಂದಿಪೆ ನಿನ್ನ ಮಾರ್ಗಿಯಾಗಿ //
24 : ನಿನ್ನಾಜ್ಞೆಯು ಆನಂದದಾಯಕ / 
ಅವೇ ನನಗೆ ಮಂತ್ರಾಲೋಚಕ //
 72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / 
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ //
103 : ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ / 
ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ //
111 : ಹೃದಯಾನಂದಕರ ನಿನ್ನ ಕಟ್ಟಳೆಗಳು / 
ನನಗಮರ ಸ್ವಾಸ್ತ್ಯವಾದುವುವು ಅವು ಗಳು //
131 : ಬಾಯ್ದೆರೆದು ಹಾತೊರೆಯುತಿರುವೆ / 
ನಿನ್ನ ಆಜ್ಞೆಗಳನು ಅರಸುತಿರುವೆ //
===================
ಶುಭಸಂದೇಶ
ಲೂಕ 19.45-48
45 : ಅನಂತರ ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ,
46 : “ ‘ಪ್ರಾರ್ಥನಾಲಯವೀ ನನ್ನ ಆಲಯ!’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,” ಎಂದರು.
47 : ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು.
48 : ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು. ಯೇಸುವಿನ ಅಧಿಕಾರ ದೈವದತ್ತವೆ?
===================
ಚಿಂತನೆ
ಯೇಸು ಕೊನೆಯ ಬಾರಿ ದೇವಾಲಯವನ್ನು ಪ್ರವೇಶಿಸುತ್ತಾರೆ. ಕಡೆಯ ಬಾರಿ ಪ್ರವೇಶಿಸಿದ ಯೇಸು ದೇವಾಲಯದ ಶುದ್ದತೆಗೆ ಮುಂದಾಗುತ್ತಾರೆ. ದೇವಾಲಯ ಪ್ರಾರ್ಥನಾ ಮಂದಿರ ಅಲ್ಲಿ ಕೇವಲ ಆಧ್ಯಾತ್ಮಿಕತೆಗೆ ಪ್ರಾಧಾನ್ಯ ನೀಡಬೇಕು. ಪ್ರಾರ್ಥನಾ ಮಂದಿರ ದೇವರ ಅನುಭವವನ್ನು ನೀಡಬೇಕು. ಯೆಹೂದ್ಯರಿಗೆ ಇದ್ದದು  ಒಂದೇ ಒಂದು ದೇವಾಲಯ ಅದು ಅವರ ಪುಣ್ಯಕ್ಷೇತ್ರವೂ ಆಗಿತ್ತು.. ದೇವರೆ ಜನರ ನಡುವೆ ಜೀವಿಸುತ್ತಿದ್ದಾರೆಂದು ಯೆಹೂದ್ಯರು ನಂಬಿದ್ದರು. ಆದರೆ ಆ ಮಹಾದೇವಾಲಯದಲ್ಲಿ ದೇವರ ಮತ್ತು ಧರ್ಮದ ಹೆಸರಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿತ್ತು. ಬಡವರ ಮತ್ತು ಯಾತ್ರಿಕರ ಸುಲಿಗೆ ನಡೆಯುತ್ತಿತ್ತು. ನಾಣ್ಯ ವಿನಿಮಯದ ಹಾಗೂ ದಹನ ಬಲಿ ಪ್ರಾಣಿಗಳ ಹೆಸರಲ್ಲಿ  ಹಣ ವಸೂಲಿ ಮಾಡುತ್ತಿದ್ದರು. ಯೇಸು ಅವರ ಶೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ ಮತ್ತು ಚಾಟಿ ಬೀಸುತ್ತಾರೆ. ಇಂದಿನ ನಮ್ಮ ಪುಣ್ಯಕ್ಷೇತ್ರಗಳ ಮತ್ತು ಮಹಾದೇವಾಲಯಗಳ ಸ್ಥಿತಿಯ ಕುರಿತು ಅವಲೋಕನ ಮಾಡಬೇಕಿದೆ.
===================


ನವೆಂಬರ್ 19, 2020 ಗುರುವಾರ

 ನವೆಂಬರ್ 19, 2020 ಗುರುವಾರ                        [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 5.1-10
ಕೀರ್ತನೆ 149:1-6, 9, ಶ್ಲೋಕ.ಯೊವಾನ್ನನ ಪ್ರಕಟನೆ 5:10
ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ
ಶುಭಸಂದೇಶ: ಲೂಕ 19.41-44
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 5.1-10
1 : ನಾನು ಈ ದೃಶ್ಯವನ್ನು ಸಹ ಕಂಡೆ: ಸಿಂಹಾಸನದಲ್ಲಿ ಆಸೀನರಾಗಿರುವವರ ಬಲಗೈಯಲ್ಲಿ ಒಂದು ಸುರುಳಿ ಇತ್ತು. ಅದರ ಒಳಭಾಗದಲ್ಲೂ ಹೊರಭಾಗದಲ್ಲೂ ಬರೆಯಲಾಗಿತ್ತು. ಅದನ್ನು ಏಳು ಮುದ್ರೆಗಳಿಂದ ಮುದ್ರಿಸಲಾಗಿತ್ತು.
2 : ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, “ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?” ಎಂದು ಪ್ರಕಟಿಸಿದನು.
3 : ಸ್ವರ್ಗದಲ್ಲಾಗಲಿ, ಭೂಮಿಯಲ್ಲಾಗಲಿ, ಪಾತಾಳದಲ್ಲಾಗಲಿ, ಆ ಸುರುಳಿಯನ್ನು ಬಿಚ್ಚುವುದಕ್ಕೂ ಇಲ್ಲವೆ ಅದನ್ನು ಬಿಚ್ಚಿನೋಡುವುದಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ.
4 : ಆ ಸುರುಳಿಯನ್ನು ಬಿಚ್ಚಲೂ ನೋಡಲೂ ಯೋಗ್ಯನು ಒಬ್ಬನೂ ಇಲ್ಲವಲ್ಲ ಎಂದು ನಾನು ಬಹುವಾಗಿ ದುಃಖಿಸಿದೆ.
5 : ಆಗ ಸಭಾ ಪ್ರಮುಖರಲ್ಲಿ ಒಬ್ಬರು ನನಗೆ, “ದುಃಖಿಸಬೇಡ, ಇಗೋ, ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಯನ್ನು ಬಿಚ್ಚಬಲ್ಲರು”, ಎಂದು ಹೇಳಿದರು.
6 : ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು.
7 : ಆ ಯಜ್ಞದ ಕುರಿಮರಿಯಾದವರು ಮುಂದೆ ಬಂದು ಸಿಂಹಾಸನದಲ್ಲಿ ಆಸೀನರಾಗಿದ್ದವರ ಬಲಗೈಯಲ್ಲಿದ್ದ ಸುರುಳಿಯನ್ನು ತೆಗೆದುಕೊಂಡರು.
8 : ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ಆ ಯಜ್ಞದ ಕುರಿಮರಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಸಭಾಪ್ರಮುಖರ ಕೈಗಳಲ್ಲಿ ಕಿನ್ನರಿಯೂ ಚಿನ್ನದ ಧೂಪಾರತಿಗಳೂ ಇದ್ದವು. ಆ ಧೂಪಾರತಿಗಳಲ್ಲಿ ದೇವಜನರ ಪ್ರಾರ್ಥನೆಯೆಂಬ ಧೂಪವು ತುಂಬಿತ್ತು.
9 : ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: “ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.
10 : ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ. ಆಳುವರವರು ಸಮಸ್ತ ಭುವಿಯ ಮೇಲೆ.”
===================
ಕೀರ್ತನೆ 
ಕೀರ್ತನೆ 149:1-6, 9, ಶ್ಲೋಕ.ಯೊವಾನ್ನನ ಪ್ರಕಟನೆ 5:10
ಶ್ಲೋಕ: ಏರ್ಪಡಿಸಿದೆ ನೀ ಅವರನು  
           ನಮ್ಮ ದೇವರಿಗೋಸ್ಕರ ರಾಜವಂಶವಾಗಿ, 
           ಯಾಜಕವರ್ಗವಾಗಿ||
1 : ಅಲ್ಲೆಲೂಯ! ಹಾಡಿರಿ ಪ್ರಭುವಿಗೆ
     ನೂತನ ಕೀರ್ತನೆಯನು / 
     ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು //
2 : ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು / 
     ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು //
3 : ಆತನ ನಾಮವನು ಕೀರ್ತಿಸಲಿ ಕುಣಿತದಿಂದ / 
ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ //
4 : ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು / 
ಜಯಶೀಲರನ್ನಾಗಿಸುತ್ತಾನೆ ದೀನದಲಿತರನು //
5 : ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ /
 ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ //
6 : ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ / 
ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ //
9 : ವಿಧಿಸಲಿ ಅವರಿಗೆ ಲಿಖಿತಾಜ್ಞೆಯ ಶಿಕ್ಷೆಯನು /
 ಇದು ತರಲಿ ಭಕ್ತರೆಲ್ಲರಿಗೆ ಗೌರವವನು / ಅಲ್ಲೆಲೂಯ! //
===================
ಶುಭಸಂದೇಶ
ಲೂಕ 19.41-44
41 : ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ,
42 : “ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ.
43 : ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ,
44 : ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ,” ಎಂದು ಅದರ ಸಲುವಾಗಿ ಕಣ್ಣೀರಿಟ್ಟರು. 
===================
ಚಿಂತನೆ
ಜೆರುಸಲೇಮ್ ಪಟ್ಟಣವು ಜುದೇಯ ಪ್ರಾಂತ್ಯದ ರಾಜಧಾನಿಯಾಗಿತ್ತು. ಅಲ್ಲಿದ್ದ ಪವಿತ್ರ ದೇವಾಲಯವು ಯೆಹೂದ್ಯರನ್ನು ಧಾರ್ಮಿಕವಾಗಿ ಒಂದುಗೂಡಿಸಿತ್ತು. ಜೆರುಸಲೇಮ್ ನಗರವು ಯೆಹೂದ್ಯರ ಧಾರ್ಮಿಕ ಕೇಂದ್ರವಾಗಿತ್ತು. `ಮೆಸ್ಸೀಯ’ ಬರುವುದು ಜೆರುಸಲೇಮಿನಿಂದ ಎಂದು ಯೆಹೂದ್ಯರು ನಂಬಿದ್ದರು. ಆದರೆ ನಿಜವಾದ  `ಮೆಸ್ಸೀ ಯ’ ಬಂದಾಗ ಅವರು ಆತನನ್ನು ಗುರುತಿಸದೇ ಹೋದರು. ಆತನ ಅದ್ಬುತ ಕಾರ್ಯಗಳನ್ನು ಕಣ್ಣಾರೆ ಕಂಡರೂ ಅಪಾರ್ಥಮಾಡಿಕೊಂಡರು. . ಜೆರುಸಲೇಮಿಗೆ ಬರಲಿರುವ ದುರ್ಗತಿಯನ್ನು ಹಾಗೂ ಅದರ ಪಾಪದ ಬದುಕನ್ನೂ  ಕಂಡು ಪ್ರಭುವು ಕಣ್ಣೀರಿಡುತ್ತಾರೆ.
ಯೇಸು ಪ್ರವಾದಿಸಿದ ಪ್ರಕಾರವೇ  ಕ್ರಿ.ಶ. 70ರಲ್ಲಿ ಭವ್ಯ ಮಹಾದೇವಾಲಯವನ್ನು ಹಾಗೂ ಜೆರುಸಲೇಮ್ ನಗರವನ್ನು ಸಂಪೂರ್ಣವಾಗಿ ರೋಮನ್ನರು ನೆಲಸಮ ಮಾಡುತ್ತಾರೆ. ಇತಿಹಾಸಕಾರ ಜೋಸೆಪುಸ್ ತನ್ನ ಪುಸ್ತಕ `ಯೆಹೂದ್ಯರ ಯುದ್ಧಗಳು’(War of the Jews)ರಲ್ಲಿ ಜೆರುಸಲೇಮ್ ನಗರದ ಬಗ್ಗೆ ಸಂಕ್ಷೀಪ್ತವಾಗಿ ಬರೆದಿದ್ದಾನೆ.
===================


ನವೆಂಬರ್ 18, 2020 ಬುಧವಾರ

 ನವೆಂಬರ್ 18, 2020 ಬುಧವಾರ                        [ಹಸಿರು]
ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ
ಮಹಾದೇವಾಲಯಗಳ ಅಭಿಷೇಕೋತ್ಸವ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 4.1-11
ಕೀರ್ತನೆ 150:1-6. ಶ್ಲೋಕ.ಯೊವಾನ್ನನ ಪ್ರಕಟನೆ 4:8
ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ದೇವರು! 
ಶುಭಸಂದೇಶ: ಲೂಕ 19.11-28
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 4.1-11
1 ಇದಾದ ಬಳಿಕ ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, “ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
2 : ಕೂಡಲೇ, ನಾನು ದೇವರಾತ್ಮ ವಶನಾದೆ. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಇರುವುದನ್ನೂ ಅದರಲ್ಲಿ ಒಬ್ಬರು ಆಸೀನರಾಗಿರುವುದನ್ನೂ ಕಂಡೆ.
3 : ಅವರ ಮುಖ ಸೂರ್ಯಕಾಂತ ಮತ್ತು ಪದ್ಮರಾಗ ಹರಳುಗಳಂತೆ ಹೊಳೆಯುತ್ತಿತ್ತು. ಸಿಂಹಾಸನದ ಸುತ್ತಲೂ ಮರಕತದಂತೆ ಹೊಳೆಯುವ ಮುಗಿಲುಬಿಲ್ಲೊಂದು ಹೊಳೆಯುತ್ತಿತ್ತು.
4 : ಈ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಪೀಠಗಳು ಇದ್ದವು. ಶ್ವೇತವಸ್ತ್ರಧಾರಿಗಳಾದ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರು ಆ ಪೀಠಗಳಲ್ಲಿ ಕುಳಿತಿದ್ದರು. ಅವರು ತಮ್ಮ ತಲೆಗಳ ಮೇಲೆ ಚಿನ್ನದ ಕಿರೀಟಗಳನ್ನು ಧರಿಸಿದ್ದರು.
5 : ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನದ ಮುಂದೆ ದೇವರ ಸಪ್ತ ಆತ್ಮಗಳನ್ನು ಸೂಚಿಸುವ ಸಪ್ತದೀಪಗಳು ಬೆಳಗುತ್ತಿದ್ದವು.
6 : ಇದಲ್ಲದೆ, ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡು ಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾಶ್ರ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು.
8 : ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ: “ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ಪ್ರಭು ದೇವರು ವರ್ತಮಾನಕಾಲದಲ್ಲಿ ಇರುವವರೂ ಭೂತಕಾಲದಲ್ಲಿ ಇದ್ದವರೂ ಭವಿಷ್ಯತ್ ಕಾಲದಲ್ಲಿ ಬರುವವರೂ ಆಗಿದ್ದಾರೆ,” ಎಂದು ಹಾಡುತ್ತಿದ್ದವು.
9 : ಯುಗಯುಗಾಂತರಕ್ಕೂ ಜೀವಿಸುವ ಹಾಗೂ ಸಿಂಹಾಸನರೂಢರಾಗಿರುವ ವ್ಯಕ್ತಿಗೆ ಆ ಜೀವಿಗಳು ಘನತೆ, ಗೌರವ ಮತ್ತು ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿದ್ದವು.
10 : ಇಪ್ಪತ್ನಾಲ್ಕು ಸಭಾ ಪ್ರಮುಖರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸರ್ವಕಾಲಕ್ಕೂ ಜೀವಿಸುವ ಹಾಗೂ ಸಿಂಹಾಸನದಲ್ಲಿ ಆಸೀನರಾಗಿದ್ದ ವ್ಯಕ್ತಿಯ ಪಾದಗಳಿಗೆ ಅಡ್ಡಬಿದ್ದು ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಾ:
11 : “ನೀನೆಮ್ಮ ಪ್ರಭು ಹೇ ದೇವಾ, ಘನಮಾನ ಶಕ್ತಿಸನ್ಮಾನಗಳಿಗರ್ಹ, ಸಮಸ್ತವನು ನೀ ಸೃಷ್ಟಿಸಿದಾತ ಇರುವುದೆಲ್ಲವು ಜೀವಿಪುದೆಲ್ಲವು ನಿನ್ನ ಚಿತ್ತದಿಂದ,” ಎಂದು ಹಾಡುತ್ತಿದ್ದರು. 
===================
ಕೀರ್ತನೆ 
ಕೀರ್ತನೆ 150:1-6. ಶ್ಲೋಕ.ಯೊವಾನ್ನನ ಪ್ರಕಟನೆ 4:8
ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ದೇವರು! 
1 : ಅಲ್ಲೆಲೂಯ! / ಸ್ತತಿಸಿರಿ ದೇವರನು ಆತನ ಪರಿಶುದ್ಧ ಆಲಯದಲಿ / 
ಆತನ ಶಕ್ತಿಯನು ಸಾರುವಾ ಆಕಾಶ ಮಂಡಲದಲಿ // 
2 : ಸ್ತುತಿಸಿರಿ ಆತನ ಮಹತ್ಕಾರ್ಯಗಳಿಗಾಗಿ / 
ಆತನ ಮಹಾಪ್ರಭಾವಕ್ಕೆ ಅನುಗುಣವಾಗಿ //
3 : ಆತನನ್ನು ಸ್ತುತಿಸಿರಿ ಕೊಂಬುಗಳನ್ನೂದುತಾ /
ಸ್ವರಮಂಡಲಗಳನು, ಕಿನ್ನರಿಗಳನು ಬಾರಿಸುತಾ //
4 : ಆತನನ್ನು ಸ್ತುತಿಸಿರಿ ತಮಟೆ ಬಡಿಯುತಾ ಕುಣಿಯುತಾ / 
ಆತನನ್ನು ಸ್ತುತಿಸಿರಿ ತಂತಿವಾದ್ಯ ನುಡಿಸುತಾ ಕೊಳಲೂದುತಾ //
5 : ಆತನನ್ನು ಸ್ತುತಿಸಿರಿ ತಾಳದಿಂದ / 
ಆತನನ್ನು ಸ್ತುತಿಸಿರಿ ಝಲ್ಲರಿಯಿಂದ //
6 : ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ / 
ಪ್ರಭುವಿಗೆ ಸ್ತೋತ್ರವಾಗಲಿ ಅಲ್ಲೆಲೂಯ! //
===================
ಶುಭಸಂದೇಶ
ಲೂಕ 19.11-28
11 : ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು.
12 : ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: “ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ.
13 : ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, “ನಾನು ಬರುವತನಕ ವ್ಯಾಪಾರ ಮಾಡಿಕೊಂಡಿರಿ,” ಎಂದು ಹೇಳಿ ಹೋದ.
14 : ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮಗೆ ರಾಜನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು.
15 : “ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ.
16 : ಮೊದಲನೆಯವನು ಮುಂದೆ ಬಂದು, ‘ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ.
17 : ಅದಕ್ಕೆ ಅವನು, “ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಾಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು’ ಎಂದ.
18 : ಎರಡನೆಯ ಸೇವಕನು ಬಂದು, ‘ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ.
19 : ಅದಕ್ಕೆ ರಾಜ, ‘ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು,’ ಎಂದ.
20 : “ಬಳಿಕ ಮತ್ತೊಬ್ಬ ಸೇವಕನು ಬಂದು, ‘ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ.
21 : ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ,’ ಎಂದ.
22 : ರಾಜ ಅವನನ್ನು ನೋಡಿ, ‘ಎಲಾ ದುಷ್ಟ ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದಿದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ?
23 : ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ,’ ಎಂದು ಹೇಳಿ
24 : ಪರಿಚಾರಕರಿಗೆ, ‘ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು ಹತ್ತು ನಾಣ್ಯಗಳುಳ್ಳವನಿಗೆ ಕೊಡಿ,’ ಎಂದ.
25 : ಅದಕ್ಕವರು, ‘ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?’ ಎಂದರು.
26 : ಆಗ ರಾಜ, ‘ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ,’ ಎಂದ.
27 : “ಅಲ್ಲದೆ, ‘ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ,’ ಎಂದ.
28 : ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಿಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.
===================
ಚಿಂತನೆ
ದೇವರು ನಮಗೆ ಹಲವಾರು ಪ್ರತಿಭೆಗಳನ್ನು ದಯಪಾಲಿಸುತ್ತಾರೆ. ತಂದೆತಾಯಿಯಿಂದ, ಶಿಕ್ಷಕರಿಂದ, ಗುರುಗಳಿಂದ ಹೀಗೆ ಹಲವಾರು ಮಂದಿಗಳ ಮೂಲಕ ನಮಗೆ ಉತ್ತಮ ಜ್ಞಾನ ಶಿಕ್ಷಣವನ್ನು ನೀಡುತ್ತಾರೆ. ನಮಗೆ ದೊರೆತ ಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ, ಮಣ್ಣಿನಲ್ಲಿ ಹುದುಗಿಡದೆ ಪರರಿಗೆ ಉಪಯೋಗವಾಗುವಂತೆ ನೀಡಬೇಕೆಂಬುದು ಪ್ರಭುಕ್ರಿಸ್ತರ ಹಿತವಚನ. ಹಾಗೆಯೇ ಪ್ರಭುಕ್ರಿಸ್ತರ ಜೀವನ್ನದ ಮೌಲ್ಯಗಳನ್ನೂ ಧೈರ್ಯದಿಂದ ಇತರರಿಗೆ ನೀಡಬೇಕೆಂಬುದು ಇದರ ಅರ್ಥ. 
===================


ನವೆಂಬರ್ 17, 2020 ಮಂಗಳವಾರ

ನವೆಂಬರ್ 17, 2020 ಮಂಗಳವಾರ                        [ಬಿಳಿ]
ಹಂಗೇರಿಯ ಸಂತ ಎಲಿಜಬೆತ್ (ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 3.1-6, 14-22
ಕೀರ್ತನೆ 15:1-5. ಶ್ಲೋಕ.ಯೊವಾನ್ನನ ಪ್ರಕಟನೆ 3:21
ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸನದಲ್ಲಿ 
ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ
ಶುಭಸಂದೇಶ: ಲೂಕ 19.1-10
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 3.1-6, 14-22
1: “ಸಾರ್ದಿಸ್ನಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ದೇವರ ಸಪ್ತ ಆತ್ಮಗಳನ್ನೂ ಸಪ್ತ ನಕ್ಷತ್ರಗಳನ್ನೂ ಹೊಂದಿರುವಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ಹೆಸರಿಗೆ ಮಾತ್ರ ನೀನು ಜೀವಂತನಾಗಿರುವೆ. ಆದರೆ ವಾಸ್ತವವಾಗಿ ನೀನು ಸತ್ತಂತೆಯೇ ಸರಿ.
2 : ಎಚ್ಚೆತ್ತು ನಿನ್ನಲ್ಲಿ ಉಳಿದಿರುವುಗಳನ್ನು ಉತ್ತೇಜನಗೊಳಿಸು; ಅವು ಸಾವಿನ ದವಡೆಯಲ್ಲಿವೆ. ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಕೃತ್ಯಗಳು ಯಾವುವೂ ಸಮಗ್ರವಾಗಿರುವುದು ನನಗೆ ಕಂಡುಬಂದಿಲ್ಲ.
3 : ನಿನಗೆ ಕೊಡಲಾದ ಬೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧಾಳಿ ಮಾಡುತ್ತೇನೆಂದೇ ನಿನಗೆ ತಿಳಿಯದು.
4 : ಆದರೂ ತಮ್ಮ ಉಡುಪನ್ನು ಮಲಿನ ಮಾಡಿಕೊಳ್ಳದ ಕೆಲವರು ಸಾರ್ದಿಸಿನಲ್ಲಿ ಇದ್ದಾರೆ. ಅಂಥವರು ಯೋಗ್ಯರಾಗಿರುವುದರಿಂದ ಶ್ವೇತಾಂಬರರಾಗಿ ನನ್ನೊಡನೆ ನಡೆದಾಡುವರು.
5 : ಜಯಹೊಂದುವವನು ಹೀಗೆ ಶ್ವೇತಾಂಬರನಾಗುವನು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಹಾಕುವುದಿಲ್ಲ. ನನ್ನ ಪಿತನ ಸಾನ್ನಿಧ್ಯದಲ್ಲಿಯೂ ಅವರ ದೂತರ ಮುಂದೆಯೂ ಅವನು ನನ್ನವನೆಂದು ನಾನು ಒಪ್ಪಿಕೊಳ್ಳುತ್ತೇನೆ.
6 : “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.” ಫಿಲದೆಲ್ಫಿಯ ಸಭೆಗೆ ಸಂದೇಶ
14 : “ಲವೊದೊಕೀಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ವಿಶ್ವಾಸಪಾತ್ರನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಮೂಲಾಧಾರನೂ ಆದ ‘ಆಮೆನ್’ ಎಂಬಾತನು ನೀಡುವ ಸಂದೇಶವಿದು:
15 : ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ನೀನು ತಣ್ಣಗೂ ಇಲ್ಲ, ಬಿಸಿಯಾಗೂ ಇಲ್ಲ. ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು.
16 : ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ.
17 : ನೀನು ನಿನ್ನ ವಿಷಯವಾಗಿ, ‘ನಾನು ಐಶ್ವರ್ಯವಂತನು, ಸಿರಿಸಂಪತ್ತುಳ್ಳವನು, ಯಾವ ಕೊರತೆಯೂ ಇಲ್ಲದವನು’ ಎಂದು ಹೇಳಿಕೊಳ್ಳುತ್ತಿರುವೆ. ಆದರೆ ನೀನು ನಿರ್ಭಾಗ್ಯನು, ದುರವಸ್ಥೆಯಲ್ಲಿರುವವನು, ದರಿದ್ರನು, ಕುರುಡನು ಮತ್ತು ಬಟ್ಟೆಬರೆಯಿಲ್ಲದೆ ಬೆತ್ತಲೆಯಾಗಿರುವವನು ಎಂಬುದು ನಿನಗೆ ತಿಳಿಯದು.
18 : ಈಗ ನನ್ನ ಬುದ್ಧಿ ಮಾತುಗಳನ್ನು ಕೇಳು. ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಲ್ಲಿ ಪುಟವಿಟ್ಟ ಚಿನ್ನವನ್ನು ನನ್ನಿಂದ ಕೊಂಡುಕೋ. ಲಜ್ಜಾಸ್ಪದವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಶ್ವೇತವಸ್ತ್ರಗಳನ್ನು ನನ್ನಿಂದ ಕ್ರಯಕ್ಕೆ ಕೊಂಡುಕೊಂಡು ಅವುಗಳನ್ನು ಧರಿಸಿಕೋ. ನಿನಗೆ ಕಣ್ಣು ಕಾಣಿಸುವಂತೆ ಲೇಪನವನ್ನು ನನ್ನಿಂದ ಬೆಲೆಗೆ ತೆಗೆದುಕೊಂಡು ನಿನ್ನ ಕಣ್ಣುಗಳಿಗೆ ಹಚ್ಚಿಕೋ.
19 : ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.
20 : ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶೀಸುತ್ತೇನೆ. ಅವನ ಸಂಗಡ ಊಟ ಮಾಡುತ್ತೇನೆ ಮತ್ತು ಅವನೂ ನನ್ನ ಸಂಗಡ ಊಟ ಮಾಡುತ್ತಾನೆ.
21 : ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯಹೊಂದಿದವನಿಗೆ ನನ್ನೊಡನೆ ನನ್ನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.
22 : “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ!”
===================
ಕೀರ್ತನೆ 
ಕೀರ್ತನೆ 15:1-5. ಶ್ಲೋಕ.ಯೊವಾನ್ನನ ಪ್ರಕಟನೆ 3:21
ಶ್ಲೋಕ::ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸನದಲ್ಲಿ 
ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ||
1 : ಯೋಗ್ಯನಾರು ಪ್ರಭು ನಿನ್ನ ಗುಡಾರದಲಿ ಬಿಡಾರಮಾಡಲು? / 
ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು? //
2 : ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ / 
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ //
3 : ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ / 
ಗುರಿಮಾಡನವನು ನೆರೆಹೊರೆಯವರನು ನಿಂದೆಗೆ //
4 : ಭ್ರಷ್ಟರನು ಧಿಕ್ಕರಿಸುವನು, ಭಕ್ತರನು ಗೌರವಿಸುವನು / 
ನಷ್ಟವಾದರೂ ಕೊಟ್ಟ ಮಾತನು ತಪ್ಪನವನು //
5 : ಕೊಡುವನು ಕಡವನು, ಬಯಸನು ಬಡ್ಡಿಯನು / 
ಎಡವರ ಕೇಡಿಗೆ ಪಡೆಯನು ಲಂಚವನು / 
ಕದಲನೆಂದಿಗೂ ಈಪರಿ ನಡೆವವನು //
===================
ಲೂಕ 19.1-10
1 : ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶೀಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು.
2 : ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ.
3 : ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ.
4 : ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು.
5 : ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, “ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,” ಎಂದರು.
6 : ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು.
7 : ಇದನ್ನು ನೋಡಿದವರೆಲ್ಲರು, “ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?” ಎಂದು ಗೊಣಗುಟ್ಟಿದರು.
8 : ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, “ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
9 : ಆಗ ಯೇಸು, “ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ?
10 : ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ,” ಎಂದು ಹೇಳಿದರು.
===================
ಚಿಂತನೆ
ಇಗೋ ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾರಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ.'' (ಪ್ರಕಟ ೩: ೨೦). ಇಂದಿನ ಶುಭ ಸಂದೇಶದಲ್ಲಿ ಇದೇ ತರನಾದ ಸನ್ನಿವೇಶವನ್ನು ಕಾಣುತ್ತೇವೆ. ``ಜಕ್ಕಾಯ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು.'' (ಲೂಕ ೧೯: ೫). ಪ್ರಭುಯೇಸುವಿನ ಆಗಮನ ನನ್ನ ಮನೆಯಲ್ಲಿ ಮನದಲ್ಲಿ  ಸೈತಾನನ ನಿರ್ಗಮನ. ಜಕ್ಕಾಯನು ತನ್ನ ಪಾಪ ಪ್ರವೃತ್ತಿಯಿಂದ ಹೊರಬಂದು, ಯೇಸುವಿನ ಮಾತುಗಳಿಗೆ ತನ್ನನ್ನೇ ಸಮರ್ಪಿಸಿ, ತನ್ನ ಆಸ್ತಿಯನ್ನು ಸಹ ಹಂಚಲು ತೀರ್ಮಾನಿಸಿದ. ಜಕ್ಕಾಯನು ತನ್ನ ಜೀವನವನ್ನು ನವೀಕರಿಸಿಕೊಂಡು ಬಾಳಿದ. ಇದು ಸಾಧ್ಯವಾಗಿದ್ದು, ಪ್ರಭುವಿನ ಆಗಮನದಿಂದ. ಹಾಗಾದರೆ ನಾನು ಸಹ ಸಿದ್ಧನಿದ್ದೇನೆಯೇ; ಪ್ರಭುವನ್ನು ಬರಮಾಡಿಕೊಂಡು ಪಾಪಗಳಿಂದ ದೂರವಾಗಲು?
===================


ನವೆಂಬರ್ 14, 2020 ಶನಿವಾರ

ನವೆಂಬರ್ 14, 2020 ಶನಿವಾರ                        [ಹಸಿರು]
ಮೊದಲ ವಾಚನ: 3 ಯೊವಾನ್ನ 1: 5-8
ಕೀರ್ತನೆ 112:1-2, 3-4, 5-6. ಶ್ಲೋಕ.1 
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
ಶುಭಸಂದೇಶ: ಲೂಕ 18.1-8
==================
ಮೊದಲನೇ ವಾಚನ
3 ಯೊವಾನ್ನ 1: 5-8
5 : ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು.
6 : ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.
7 : ವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧವರ್ಿೂಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು.
8 : ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.
===================
ಕೀರ್ತನೆ 112:1-2, 3-4, 5-6. ಶ್ಲೋಕ.1 
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
1 : ಅಲ್ಲೆಲೂಯ / ಪ್ರಭುವಿನಲಿ 
ಭಯಭಕ್ತಿ ಉಳ್ಳವನು ಧನ್ಯನು / 
ಆತನಾಜ್ಞೆಗಳಲಿ ಹಿಗ್ಗುವವನು 
ಭಾಗ್ಯನು //
2 : ಬಲಿಷ್ಠವಾಗುವುದು ಜಗದೊಳು 
ಅವನ ಸಂತಾನ / 
ಸಜ್ಜನರ ಸಂತತಿ ಪಡೆವುದು 
ಆಶೀರ್ವಚನ //
3 : ಸಿರಿಸಂಪತ್ತಿರುವುದವನ 
ಮನೆಯಲಿ ಸಮೃದ್ಧಿಯಾಗಿ / 
ನೀತಿ ಫಲಿಸುವುದು ಆತನ 
ಮನದಲಿ ಶಾಶ್ವತವಾಗಿ //
4 : ಸಜ್ಜನನಿಗೆ ಮೂಡುವುದು 
ಜ್ಯೋತಿ ಕತ್ತಲೊಳು / 
ನ್ಯಾಯಪ್ರಿಯನು ಆತ, 
ದಯಾವಂತ, ಕೃಪಾಳು //
5 : ದಯೆತೋರಿ ಧನಸಹಾಯ 
ಮಾಡುವವನು ಭಾಗ್ಯವಂತ / 
ನ್ಯಾಯದಿಂದ ವ್ಯವಹರಿಸುವಂಥಾ 
ಮನುಜನು ಭಾಗ್ಯವಂತ //
6 : ಅಚಲನಾಗಿರುವನು ನೀತಿವಂತನು / 
ಮರೆಯಲಾರರು ಎಂದಿಗೂ ಆತನನು //
===================
ಶುಭಸಂದೇಶ
ಲೂಕ 18.1-8
1 : ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು:
2 : “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
3 : ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು.
4 : ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ;
5 : ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.”
6 : ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ?
7 : ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ?
8 : ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?” ಎಂದರು. ಫರಿಸಾಯನು ಮತ್ತು ಸುಂಕದವನು
===================
ಚಿಂತನೆ
ಇಂದಿನ ಸಾಮತಿಯಲ್ಲಿ ಬರುವ  ವಿಧವೆ ಬಡವರ ಮತ್ತು ಶೋಷಿತರ ಪ್ರತಿನಿಧಿಯಂತಿದ್ದಾಳೆ. ಸಹಜವಾಗಿ ಇಂತವರಿಗೆ ನ್ಯಾಯ ಸಿಗುವುದು ದೂರದ ಮಾತೇ. ಆದರೆ ಈ ವಿಧವೆಯಲ್ಲಿ ಒಂದು ಅಸ್ತ್ರವಿತ್ತು, ಅದು ಅವಳ ಸಹನೆ ಎಂದೇ  ಕೊನೆಗೆ ಅವಳಿಗೆ ನ್ಯಾಯ ಸಿಕ್ಕಿದ್ದು ಈ ಅಸ್ತ್ರದಿಂದಲೇ. ದೇವರು ಪ್ರೀತಿಸ್ವರೂಪಿ, ಕರುಣಾಮಯಿ, ತನ್ನ ಜನರು ಹಗಲು ರಾತ್ರಿ ಮೊರೆಯಿಡುವಾಗ ಅದನ್ನು ಹೇಗೆ ನಿರ್ಲಕ್ಷಿಸಬಲ್ಲರು? ಸಹನೆ ಮತ್ತು ವಿಶ್ವಾಸದಿಂದ ಮೊರೆಯಿಡುವವರ ಕೂಗನ್ನು ದೇವರು ಎಂದಿಗೂ ತಳ್ಳಿಬಿಡುವುದಿಲ್ಲ. ತನ್ನ ಹಟಮಾರಿತನದಿಂದ ಒಂದು ವಿಧವೆಯ ನ್ಯಾಯಾಧೀಶನನ್ನೇ  ಸೋಲಿಸಿದ್ದರೆ ಕರುಣಾಮಯ ದೇವರ ಮನವನ್ನು ನಮ್ಮ ಒತ್ತಾಯದ ಪ್ರಾರ್ಥನೆಯು ಕರಗಿಸಲಾರದೆ?  
==================="


ನವೆಂಬರ್ 16, 2020 ಸೋಮವಾರ

 ನವೆಂಬರ್ 16, 2020 ಸೋಮವಾರ                        [ಹಸಿರು]
ಸ್ಟಾಟ್ಲೆಂಡಿನ ಸಂತ ಮಾರ್ಗರೆಟ್ (ಐಚ್ಛಿಕ ಸ್ಮರಣೆ)
ಸಂತ ಜೆತ್ರೂದ್, ಕನ್ಯೆ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 1.1-4; 2.1-5
ಕೀರ್ತನೆ 1:1-4, 6. ಶ್ಲೋಕ.ಯೊವಾನ್ನನ ಪ್ರಕಟನೆ 2:7
ಯಾರು ಜಯಹೊಂದುತ್ತಾನೋ ಅವನು ಸೌಭಾಗ್ಯ ಪಡೆಯುತ್ತಾನೆ
ಶುಭಸಂದೇಶ: ಲೂಕ 18.35-43
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 1.1-4; 2.1-5
1 : ದೇವರು ಯೇಸುಕ್ರಿಸ್ತರಿಗಿತ್ತ ಪ್ರಕಟನೆ ಇದು. ಅತಿ ಶೀಘ್ರದಲ್ಲಿಯೇ ಸಂಭವಿಸಲಿರುವ ಘಟನೆಗಳನ್ನು ತಮ್ಮ ದಾಸರಿಗೆ ತಿಳಿಯಪಡಿಸುವುದಕ್ಕಾಗಿ ಕ್ರಿಸ್ತಯೇಸುವಿಗೆ ಈ ಪ್ರಕಟನೆಯನ್ನು ದೇವರು ದಯಪಾಲಿಸಿದರು. ಕ್ರಿಸ್ತಯೇಸು ತಮ್ಮ ದೂತನನ್ನು ಕಳುಹಿಸಿ ತಮ್ಮ ದಾಸನಾದ ಯೊವಾನ್ನನಿಗೆ ಇವುಗಳನ್ನು ಪ್ರಕಟಿಸಿದರು.
2 : ಯೊವಾನ್ನನು ದೇವರ ಸಂದೇಶಕ್ಕೂ ಕ್ರಿಸ್ತೇಸು ತಿಳಿಸಿದ ಸತ್ಯಕ್ಕೂ ಸಾಕ್ಷಾತ್ ಸಾಕ್ಷಿಯಾಗಿದ್ದಾನೆ.
3 : ಈ ಪ್ರವಾದನಾ ಸಂದೇಶವನ್ನು ಓದುವವನು ಧನ್ಯನು; ಓದಿದ್ದನ್ನು ಕೇಳಿಸಿಕೊಳ್ಳುವವರೂ ಧನ್ಯರು ಮತ್ತು ಈ ಪ್ರವಾದನೆಯಲ್ಲಿ ಲಿಖಿತವಾಗಿರುವುದನ್ನು ಕೈಗೊಂಡು ನಡೆಯುವವರು ಸಹ ಧನ್ಯರು! ಏಕೆಂದರೆ, ಕಾಲ ಸನ್ನಿಹಿತವಾಯಿತು. ಶ್ರೀಸಭೆಗಳಿಗೆ ಶುಭಾಶಯಗಳು
4 : ಏಷ್ಯಾಸೀಮೆಯಲ್ಲಿರುವ ಏಳು ಸಭೆಗಳಿಗೆ ಯೊವಾನ್ನನೆಂಬ ನಾನು ಬರೆಯುವುದೇನೆಂದರೆ: ವರ್ತಮಾನಕಾಲದಲ್ಲಿ ‘ಇರುವಾತನೂ,’ ಭೂತಕಾಲದಲ್ಲಿ ‘ಇದ್ದಾತನೂ,’ ಭವಿಷ್ಯತ್ಕಾಲದಲ್ಲಿ ‘ಬರುವಾತನೂ’ ಆದ ದೇವರಿಂದ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! 
2:1 : “ಎಫೆಸದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡಿದಿರುವಾತನೂ ಏಳು ಚಿನ್ನದ ದೀಪಸ್ತಂಭಗಳ ನಡುವೆ ನಡೆದಾಡುವಾತನೂ ನೀಡುವ ಸಂದೇಶವಿದು:
2 : ನಾನು ನಿನ್ನ ಸುಕೃತ್ಯಗಳನ್ನು ಬಲ್ಲೆ. ನಿನ್ನ ಶ್ರಮಜೀವನವನ್ನು ಅರಿತು ಇದ್ದೇನೆ. ನಿನ್ನ ಸಹನಾಶಕ್ತಿಯನ್ನು ಮನಗಂಡಿದ್ದೇನೆ. ದುರ್ಜನರನ್ನು ನೀನು ಸಹಿಸಲಾರೆ ಎಂಬುದು ನನಗೆ ಗೊತ್ತು. ಪ್ರೇಷಿತರಲ್ಲದಿದ್ದರೂ ಪ್ರೇಷಿತರೆಂದು ಹೇಳಿಕೊಳ್ಳುವವರನ್ನು ನೀನು ಪರಿಶೋಧಿಸಿರುವೆ. ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ.
3 : ಹೌದು, ಸಹನಾಶಕ್ತಿ ನಿನಗಿದೆ. ಬೇಸರಗೊಳ್ಳದೆ ನನ್ನ ಹೆಸರಿನ ನಿಮಿತ್ತ ನೀನು ಕಷ್ಟಸಂಕಟಗಳನ್ನು ತಾಳಿಕೊಂಡೆ.
4 : ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ: ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ.
5 : ಆದುದರಿಂದ ನೀನು ಹೇಗೆ ಪತನಹೊಂದಿದೆ ಎಂಬುದನ್ನು ಜ್ಞಾಪಿಸಿಕೋ. ಪಶ್ಚಾತ್ತಾಪಪಟ್ಟ ಪಾಪಕ್ಕೆ ವಿಮುಖನಾಗು. ನೀನು ಮೊದಲು ಮಾಡಿದ ಸುಕೃತ್ಯಗಳನ್ನು ಸಾಧಿಸು. ನೀನು ಪಾಪಕ್ಕೆ ವಿಮುಖನಾಗದೆ ಹೋದರೆ, ನಾನು ನಿನ್ನ ಬಳಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದು ಹಾಕುತ್ತೇನೆ.
===================
ಕೀರ್ತನೆ 
ಕೀರ್ತನೆ 1:1-4, 6. ಶ್ಲೋಕ.ಯೊವಾನ್ನನ ಪ್ರಕಟನೆ 2:7
ಶ್ಲೋಕ:ಯಾರು ಜಯಹೊಂದುತ್ತಾನೋ 
           ಅವನು ಸೌಭಾಗ್ಯ ಪಡೆಯುತ್ತಾನೆ||
1 : ದುರ್ಜನರ ಆಲೋಚನೆಯಂತೆ ನಡೆಯದೆ / 
ಪಾಪಾತ್ಮರ ಪಥದಲಿ ಕಾಲೂರದೆ /
 ಧರ್ಮನಿಂದಕರ ಕೂಟದಲಿ ಕೂರದೆ //
2 : ಪ್ರಭುವಿನ ಧರ್ಮಶಾಸ್ತ್ರದಲಿ 
    ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ 
    ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ
    - ಅವನೇ ಧನ್ಯನು //
3 : ನದಿಯ ಬದಿಯಲೇ ಬೆಳೆದಿಹ ಮರದಂತೆ / 
ಸಕಾಲಕೆ ಫಲವೀವ ವೃಕ್ಷದಂತೆ / 
ಎಲೆಬಾಡದೆ ಪಸಿರಿರುವ ತರುವಂತೆ / 
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ //
4 : ದುರುಳರಾದರೊ ತೂರಿ ಹೋಗುವರು / 
ಬಿರುಗಾಳಿಗೆ ತರಗೆಲೆಯಾಗುವರು //
6 : ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ / 
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //
===================
ಶುಭಸಂದೇಶ
ಲೂಕ 18.35-43
35 : ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು.
36 : ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು.
37 : “ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು.
38 : ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು.
39 : ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು.
40 : ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆಮಾಡಿದರು.
41 : ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾವಿೂ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು.
42 : ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು.
43 : ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು. 
==================
ಚಿಂತನೆ
ಜೆರಿಕೊ ಪಟ್ಟಣದಲ್ಲಿ ಯೇಸು ಕುರುಡನಿಗೆ ದೃಷ್ಟಿದಾನ ಮಾಡುತ್ತಾರೆ. ಜೆರಿಕೊ ಎಂದರೆ `ಪರಿಮಳ’ ಎಂದರ್ಥ. ಈ ಕುರುಡನು ಯೇಸುವನ್ನು ದಾವೀದ ಕುಲಪುತ್ರರೇ ಎಂದು ಸಂಬೋದಿಸುತ್ತಾನೆ. ಈ ಬಿರುದು ರಕ್ಷಕನಿಕೆ ನೀಡಲಾಗಿದೆ. ರಕ್ಷಕನು ಬಂದು ನಮ್ಮನ್ನು ರೋಮನ್ನರ ಅಧೀನದಿಂದ ಬಿಡುಗಡೆ ಮಾಡುವನೆಂದು ಜನರು ನಂಬಿದ್ದರು. ಬಹುಶಃ ಯೇಸುವಿನ ಅದ್ಬುತಗಳ ಬಗ್ಗೆ ಆಲಿಸಿದ್ದ ಕುರುಡನು ಗಟ್ಟಿಯಾಗಿ ಯೇಸುವನ್ನು ಕೂಗಿ ಕರೆಯುತ್ತಾನೆ. ಯೇಸುವಿನಲ್ಲಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ. ಕಣ್ಣಿದ್ದ ಅನೇಕರು ಯೇಸುವನ್ನು ರಕ್ಷಕನೆಂದು ಗುರುತಿಸಲು ವಿಫಲರಾದರು. ಆದರೆ ಈ ಕುರುಡ ವಿಶ್ವಾಸಿಸಿ ದೇವರ ಕೃಪೆಗೆ ಪಾತ್ರನಾದ. ಆತನ ವಿಶ್ವಾಸ ಮತ್ತು ಪ್ರಾರ್ಥನೆ ಹಾದಿಯಲ್ಲಿ ಹೋಗುತ್ತಿದ್ದ ಯೇಸುವನ್ನು ತಡೆದು ನಿಲ್ಲಿಸಿತು. ನಾವು ಸಹ ಅದೇ ವಿಶ್ವಾಸದಿಂದ ಪ್ರಾರ್ಥನೆ ಮಾಡಿದರೆ ನಮ್ಮ ಪ್ರಾರ್ಥನೆಗೆ ದೇವರನ್ನು ತಡದುನಿಲ್ಲಿಸುವ ಶಕ್ತಿಯಿದೆ. ಸೌಖ್ಯದ ನಂತರ ಆ ಕುರುಡ ಯೇಸುವಿನ ಶಿಷ್ಯನಾದಂತೆ ನಾವು ಸಹ ಯೇಸುವಿನ ಹಿಂಬಾಲಕರಾಗಬೇಕಿದೆ.
===================


ನವೆಂಬರ್ 15, 2020 ಭಾನುವಾರ

 ನವೆಂಬರ್ 15, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 33ನೇ ಭಾನುವಾರ
ಮೊದಲ ವಾಚನ: ಜ್ಞಾನೋಕ್ತಿ 31.10-13, 19-20, 30-31
ಕೀರ್ತನೆ 128:1-5. ಶ್ಲೋಕ.1 
ಧನ್ಯನು ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು
ಎರಡನೇ ವಾಚನ: 1 ಥೆಸಲೋನಿಯರಿಗೆ 5.1-6
ಶುಭಸಂದೇಶ: ಮತ್ತಾಯ 25.14-30 (ಸಂಕ್ಷಿಪ್ತ)
ಮತ್ತಾಯ 25.14-30
--------------------------------
ಸಂತ ಮಹಾ ಆಲ್ಬರ್ಟ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆ ಪಂಡಿತ
==================
ಮೊದಲನೇ ವಾಚನ
===============
ಜ್ಞಾನೋಕ್ತಿ 31.10-13, 19-20, 30-31
10 : ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು.
11 : ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು.
12 : ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು.
13 : ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು.
19 : ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ.
20 : ಬಡವರಿಗೆ ಕೈ ಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ.
30 : ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು.
31 : ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ !
===================
ಕೀರ್ತನೆ 
ಕೀರ್ತನೆ 128:1-5. ಶ್ಲೋಕ.1 
ಶ್ಲೋಕ: ಧನ್ಯನು ಪ್ರಭುವಿನಲ್ಲಿ 
           ಭಯಭಕ್ತಿಯುಳ್ಳವನು||
1 : ಧನ್ಯನು, ಪ್ರಭುವಿನಲಿ 
ಭಯಭಕ್ತಿಯುಳ್ಳವನು / 
ಧನ್ಯನು, ಆತನ ಮಾರ್ಗಗಳಲೇ 
ನಡೆಯುವವನು //
2 : ನಿನ್ನ ಕೈಕೆಸರಾದರೆ ಬಾಯಿ 
ಮೊಸರಾಗುವುದು / 
ಧನ್ಯನಾಗುವೆ ನೀನು; 
ನಿನಗೆ ಶುಭವಾಗುವುದು //
3 : ಇರುವಳು ನಿನ್ನ ಪತ್ನಿ ಮನೆಯಲ್ಲಿ 
ಫಲಭರಿತ ದ್ರಾಕ್ಷಾಲತೆಯಂತೆ / 
ಕೂರುವರು ನಿನ್ನ 
ಮಕ್ಕಳು ಊಟದ
ಪಂಕ್ತಿಯಲಿ ಓಲಿವ್ 
ಸಸಿಗಳಂತೆ //
4 : ಹೊಂದುವನು ಅಂತಹ ಆಶೀರ್ವಾದವನು / 
ಪ್ರಭುವಿನಲಿ ಭಯಭಕ್ತಿಯುಳ್ಳವನು //
5 : ಸಿಯೋನಿನಲ್ಲಿರುವ ಪ್ರಭು
ನಿನ್ನನು ಆಶೀರ್ವದಿಸಲಿ /
ಜೆರುಸಲೇಮಿನ ಏಳ್ಗೆಯನು 
ಕಾಣು ಇಡೀ ಜೀವಮಾನದಲಿ //
===================
ಎರಡನೇ ವಾಚನ 
1 ಥೆಸಲೋನಿಯರಿಗೆ 5.1-6
1 : ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
2 : ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.
3 : ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
4 : ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.
5 : ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.
6 : ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.
ಶುಭಸಂದೇಶ
ಮತ್ತಾಯ 25.14-30
14 : “ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ.
15 : ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ.
16 : ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ.
17 : ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ.
18 : ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ.
19 : ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ.
20 : ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ.
21 : ಅದಕ್ಕೆ ಆ ಧಣಿ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ.
22 : ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ.
23 : ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ.
24 : ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು;
25 : ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ.
26 : “ಆಗ ಧಣಿ ಅವನಿಗೆ, ‘ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ?
27 : ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತಿದ್ದೆ’, ಎಂದ.
28 : ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ.
29 : ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ.
30 : ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ. ಪರರ ಸೇವೆಯೇ ಪರಮಾತ್ಮನ ಸೇವೆ
===================
ಚಿಂತನೆ
ಸಾಧಾರಣ ಕಾಲದ 33ನೇ ಭಾನುವಾರ
=====================
ಪೀಠಿಕೆ
=========
ಜೀವನವು ಒಂದು ನಿರಂತರ ಹೋರಾಟವಾಗಿದೆ. ಒಳ್ಳೆಯ ಜೀವನವನ್ನು ಬದುಕಬೇಕೆನ್ನುವವರು ಪ್ರಯತ್ನ ಮಾಡಬೇಕು, ಪರಿಶ್ರಮ ಪಡಬೇಕು. ಧೈರ್ಯ ಮತ್ತು ಹುಮ್ಮಸ್ಸಿನಿಂದ ಮುನ್ನುಗ್ಗಿದರೆ ಮಾತ್ರ ಬದಲಾವಣೆ ಬರುತ್ತದೆ. ಪ್ರಗತಿ ಸಾಧ್ಯವಾಗುತ್ತದೆ. ನಮ್ಮ ಭವಿಷ್ಯವಿರುವುದು  ನಮ್ಮ ಕೈಯಲ್ಲಿ. ಪ್ರತಿಯೊಂದು ಕ್ಷಣವು ಬದುಕಿದಾಗ ಮಾತ್ರ ಏಳಿಗೆ ಸಾಧ್ಯ. ನಮ್ಮ ದುಃಸ್ಥಿತಿಗೆ ಬೇರೆಯವರನ್ನಾಗಲಿ ದೇವರನ್ನಾಗಲಿ  ದೂರುವ ಬದಲು ನಮ್ಮಲ್ಲಿರುವ ಪ್ರತಿಭೆಗಳತ್ತ, ಸೌಲಭ್ಯಗಳತ್ತ ಕಣ್ಣು ಹಾಯಿಸುವುದು ಉತ್ತಮ. ದೇವರು ಎಲ್ಲರಿಗೂ ಒಂದೇ ಬಗೆಯ  ಕೊಡುಗೆಯನ್ನು ನೀಡುವುದಿಲ್ಲಎಂದೇ , ಅವರು ಕೊಟ್ಟಿರುವುದಕ್ಕೆ ನಾವು ನಿಷ್ಠೆ, ಪ್ರಾಮಾಣಿಕತೆ ತೋರಿಸುತ್ತೇವೆಯೇ  ಎಂಬುದು ಮುಖ್ಯ. ದೇವರು ಹೆಚ್ಚು ಪ್ರತಿಭಾವಂತರಿಂದ ಹೆಚ್ಚು ಕಡಿಮೆ ಪ್ರತಿಭಾವಂತರಿಂದ ಕಡಿಮೆ ವಿವಿಧ ಬಗೆ ಪ್ರತಿಭಾವಂತರಿಂದ ಅವರವರ ಪ್ರತಿಭೆಯ ಅನುಸಾರ ನಿರೀಕ್ಷಿಸುತ್ತಾರೆ. 
ಮೊದಲ ವಾಚನ: ಜ್ಞಾನೋಕ್ತಿ 31.10-13, 19-20, 30-31
===========================
ಜ್ಞಾನೋಕ್ತಿಗಳ ಗ್ರಂಥವು ನೀತಿಬೋಧೆಗೆ ಸೀಮಿತವಾಗಿರದೆ ದಿನನಿತ್ಯದ ಜೀವನಕ್ಕೆ ಅನ್ವಯಿಸುವ ಮುತ್ತಿನಂತಹ ಮಾತುಗಳಿಂದ ಕೂಡಿದೆ. ಒಬ್ಬ ಒಳ್ಳೆಯ ಗೃಹಿಣಿಯ ಗುಣಗಳನ್ನು ಇಂದಿನ ವಾಚನದಲ್ಲಿ ವಿವರಿಸಲಾಗಿದೆ. ಆಕೆಯು ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನು ನಾಜೂಕಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾಳೆ ಆಕೆಯು ಮುತ್ತಿನಂತೆ ಅಮೂಲ್ಯಳು.
ಎರಡನೇ ವಾಚನ: 1 ಥೆಸಲೋನಿಯರಿಗೆ 5.1-6
=============================
ಪ್ರಭುವಿನ ಎರಡನೇ ಬರುವಿಕೆಯು ತಮ್ಮ ಜೀವಿತಾವಧಿಯಲ್ಲೇ ನಡೆಯುವುದೆಂದು ಅನೇಕರು ಭಾವಿಸಿದ್ದರು. ಹಾಗಾಗಿ ಪ್ರಭುವಿನ ಬರುವಿಕೆಗೆ ಕಾಯುತ್ತ ಕೂತಿದ್ದರು. ಪ್ರಭುವಿನ ಬರುವಿಕೆಗೆ ಎದುರು ನೋಡುತ್ತಾ ಕಾಯುವ ಬದಲು ತಮ್ಮ ವಿಶ್ವಾಸದ ಬದುಕಿನತ್ತ ಗಮನ ಹರಿಸಬೇಕೆಂದು ಸಂತ ಪೌಲರು ಇಂದಿನ ವಾಚನದಲ್ಲಿ ಕರೆ ನೀಡುತ್ತಾರೆ. 
ಶುಭಸಂದೇಶ: ಮತ್ತಾಯ 25.14-30 
==========================
ಈ ಸಾಮತಿಯಲ್ಲಿ ಕಾಣುವ ಯಜಮಾನನು ಬಹಳ ಸಿರಿವಂತನಾಗಿದ್ದ.ಆತನು ತನ್ನ ವಿವೇಕದ ಸಾಮರ್ಥ್ಯವನ್ನು ಅರಿತು ಅದಕ್ಕೆ ತಕ್ಕಂತೆ ತನ್ನ ಐಶ್ವರ್ಯವನ್ನು ಅಭಿವೃದ್ಧಿಪಡಿಸಲು ಯೋಚಿಸಿದ. ಮೊದಲ ಇಬ್ಬರು ಸೇವಕರು ಯಜಮಾನನ ನಿರೀಕ್ಷೆಯಂತೆ ನಿಷ್ಠೆಯನ್ನು ತೋರ್ಪಡಿಸಿದರು. ಇಲ್ಲಿ ಯಜಮಾನನ ಸ್ಥಾನದಲ್ಲಿ ಯೇಸುವೂ ಸೇವಕರ ಸ್ಥಾನದಲ್ಲಿ ಶಿಷ್ಯರೂ ಇದ್ದಾರೆ. ಯಜಮಾನನು ಯಾವಾಗ ಹಿಂತಿರುಗಿ ಬರುತ್ತಾನೆ ಅಥವಾ ಲೋಕಾಂತ್ಯ ಯಾವಾಗ ಎಂಬುದು ಯಾರಿಗೂ ಅರಿಯದು. ಲೋಕಾಂತ್ಯದಲ್ಲಿ ನಡೆಯುವ ನ್ಯಾಯ ನಿರ್ಣಯ  ಎದುರಿಸಲು ಹೇಗೆ ನಾವೆಲ್ಲ ಸಿದ್ಧರಿರಬೇಕೆಂದು ಈ ಸಾಮತಿ ಎಚ್ಚರಿಸುತ್ತದೆ. ದೇವರು ನೀಡಿರುವ ಕೊಡುಗೆಗಳನ್ನೂ ಪ್ರತಿಭೆಗಳನ್ನೂ ಅವರ ಮಹಿಮೆಗಾಗಿಯೂ  ಇತರರ ಒಳಿತಿಗಾಗಿಯೂ ಪ್ರಾಮಾಣಿಕತೆಯಿಂದ ಉಪಯೋಗಿಸುವವನು ಪ್ರತಿಫಲ ಪಡೆಯುತ್ತಾನೆ. ದೇವರು ನಮ್ಮಿಂದ ಅಪೇಕ್ಷಿಸುವುದು ನಮ್ಮಲ್ಲಿರುವ ಪ್ರತಿಭೆಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಆ ಕಾರಣ ಈ ಪ್ರತಿಭೆ ಮತ್ತು ಕೊಡುಗೆಗಳನ್ನು ನೀಡಿದಾತ ಒಂದು ದಿನ ಅವುಗಳ ಲೆಕ್ಕ ಕೇಳುವನು. ಈ ಪ್ರತಿಭೆಗಳನ್ನು ಸರಿಯಾಗಿ ಉಪಯೋಗಿಸಿದರೆ ಯಜಮಾನನ ಸೌಭಾಗ್ಯದಲ್ಲಿ ಭಾಗಿಯಾಗುವ ಅವಕಾಶ ನಮಗೆ ಅಭಿಸುವುದು. ದೇವರು ನಮ್ಮಿಂದ ಲೆಕ್ಕ ಕೇಳುವ ಮುನ್ನ ಸಾಕಷ್ಟು ಸಮಯವನ್ನೂ ಅವಕಾಶವನ್ನು ನೀಡುತ್ತಾರೆ. ಇವುಗಳನ್ನು ಸರಿಯಾಗಿ ಉಪಯೋಗಿಸಿದರೆ ಪ್ರತಿಫಲ, ದುರುಪಯೋಗಪಡಿಸಿದರೆ ಶಿಕ್ಷೆ ಇದು ಕಟ್ಟಿಟ್ಟ ಬುತ್ತಿ. 
=====================
ಚಿಂತನೆ – ಫಾ ಸೆಬಾಸ್ಟಿನ್, 
ಬೆಂಗಳೂರು ಮಹಾಧರ್ಮಕ್ಷೇತ್ರ
======================


ನವೆಂಬರ್ 13, 2020 ಶುಕ್ರವಾರ

 ನವೆಂಬರ್ 13, 2020 ಶುಕ್ರವಾರ                        [ಹಸಿರು]
ಮೊದಲ ವಾಚನ: 2 ಯೊವಾನ್ನ 1: 4-9
ಕೀರ್ತನೆ 119:1-2, 10-11, 17-18. ಶ್ಲೋಕ.1 
ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು
ಶುಭಸಂದೇಶ: ಲೂಕ 17.26-37
==================
ಮೊದಲನೇ ವಾಚನ
2 ಯೊವಾನ್ನ 1: 4-9
4 : ಸತ್ಯ ಮತ್ತು ಪ್ರೀತಿ ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.
5 : ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.
6 : ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿ ಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತ ಮೊದಲಿನಿಂದಲೂ ಕೇಳಿರುವ ಆಜ್ಞೆ.
7 : ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿ ಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.
8 : ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.
9 : ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆವಿೂರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.
===================
ಕೀರ್ತನೆ 
ಕೀರ್ತನೆ 119:1-2, 10-11, 17-18. ಶ್ಲೋಕ.1 
ಪ್ರಭುವಿನ ಶಾಸ್ತ್ರಾನುಸಾರ 
ನಡೆವವರು ಧನ್ಯರು
1 :  ದೈವಾಜ್ಞೆಯಲ್ಲಿ ಅಭಿಮಾನ ಪ್ರಭುವಿನ 
ಶಾಸ್ತ್ರಾನುಸಾರ ನಡೆದವರು ಧನ್ಯರು / 
ದೋಷರಹಿತ ಮಾರ್ಗದಲಿ 
ನಡೆವವರು ಧನ್ಯರು //
2 : ಆತನ ಕಟ್ಟಳೆಗಳನ್ನು 
ಕೈಗೊಳ್ಳುವವರು ಧನ್ಯರು / 
ಮನಃಪೂರ್ವಕವಾಗಿ ಆತನನು 
ಅರಸುವವರು ಧನ್ಯರು //
10 : ತುಂಬುಹೃದಯದಿಂದ 
ಹಂಬಲಿಸುತ್ತಿರುವೆನಯ್ಯಾ / 
ನಿನ್ನಾಜ್ಞೆಯಿಂದ ನಾ ತಪ್ಪದಂತೆ 
ಕಾಯಯ್ಯಾ //
11 : ನಿನಗೆ ವಿರುದ್ಧ ನಾ 
ಪಾಪಮಾಡದಂತೆ / 
ನಿನ್ನಾ ನುಡಿಯನು 
ನನ್ನೆದೆಯಲ್ಲಿರಿಸಿದೆ //
17 : ನಿನ್ನ ನುಡಿಯ ಕೇಳಿ 
ಬಾಳುವಂತೆ /
ತೋರು ದಾಸನೆನಗೆ 
ಪ್ರಸನ್ನತೆ //
18 : ನಿನ್ನ ಶಾಸ್ತ್ರದ ಮಹಿಮೆಯನು 
ಅರಿಯುವಂತೆ / 
ನನ್ನ ಕಣ್ಗಳಿಂದ ನೀ ತೆಗೆದುಬಿಡು
 ಅಂಧತೆ //
===================
ಶುಭಸಂದೇಶ
ಲೂಕ 17.26-37
26 : ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು.
27 : ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು.
28 : ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು. ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು.
29 : ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು.
30 : ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು.
31 : “ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ.
32 : ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ!
33 : “ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ.
34 : ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು.
35 : ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.
36 : (ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು)” ಎಂದರು.
37 : “ಸ್ವಾವಿೂ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.
==================
ಚಿಂತನೆ
ನೋವನ ಕಾಲದಲ್ಲಿ ಜನರು ದೇವರನ್ನು ಕಡೆಗಣಿಸಿ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಮೈಮರೆತ್ತಿದ್ದರು. ಲೌಕಿಕ ಸುಖ ಭೋಗಗಳಲ್ಲಿ ತಲ್ಲೀನರಾಗಿದ್ದರು. ಕುಡಿಯುವುದು, ತಿನ್ನುವುದು, ಮದುವೆಯಾಗುವುದರಲ್ಲೇ ಮಗ್ನರಾಗಿದ್ದರು.  ಹೀಗೆ ಲೌಕಿಕತೆಯಲ್ಲಿ ಮೈಮರೆತ್ತಿದ್ದಾಗಲೇ ಜಲಪ್ರಳಯದಿಂದ ಅವರೆಲ್ಲರೂ ನಿರ್ನಾಮವಾದರು (ಆದಿಕಾಂಡ 6:11-13). ಅಂತೆಯೇ ನರಪುತ್ರನ (ಯೇಸು) ಆಗಮನದ ಕಾಲದಲ್ಲಿ ನಡೆಯುವುದಾಗಿ ಇಂದಿನ ಶುಭಸಂದೇಶ ಎಚ್ಚರಿಸುತ್ತಿದೆ. ಲೌಕಿಕ ಸುಖ ಪಡುವುದರಲ್ಲಿ ತಪ್ಪಿಲ್ಲ, ಆದರೆ ಲೌಕಿಕ ಸುಖಭೋಗಗಳೇ ನಮ್ಮ ಜೀವನವಾಗಬಾರದು. ಆಧ್ಯಾತ್ಮಿಕ ಕಡೆಗೂ ನಾವು ಗಮನವಿಟ್ಟಿರಬೇಕು. ನೋವನು ತನ್ನ ಜನರನ್ನು ಎಚ್ಚರಿಸಿದಂತೆ ಧರ್ಮಸಭೆಯು ದೇವರನ್ನು ಸ್ವೀಕರಿಸಲು ಸದಾ ಎಚ್ಚರಿಕೆ ನೀಡುತ್ತದೆ. ಎಲ್ಲಾ ಸಮಯದಲ್ಲೂ ಕ್ರಿಸ್ತನ ಬರುವಿಕೆಗೆ ಸಿದ್ದರಿರಬೇಕಾಗಿದೆ. ಇಲ್ಲವಾದ್ದಲ್ಲಿ ಸರ್ವನಾಶ ಕಟ್ಟಿಟ್ಟ ಬುತ್ತಿ.
===================