1೦/ಹಸಿರು/ಭಾನು
1ನೇ ವಾಚನ- 2ಮಕ್ಕ 7:1-2,9-14
ಕೀರ್ತನೆ - 17: 1, 5-6,8,15
2ನೇ ವಾಚನ 2ಥೆಸ 2: 16-3: 5
ಶುಭಸಂದೇಶ - ಲೂಕ 2೦:27-38
1ನೇ ವಾಚನ- 2ಮಕ್ಕ 7:1-2,9-14
ಕೀರ್ತನೆ - 17: 1, 5-6,8,15
2ನೇ ವಾಚನ 2ಥೆಸ 2: 16-3: 5
ಶುಭಸಂದೇಶ - ಲೂಕ 2೦:27-38
1ನೇ ವಾಚನ- 2ಮಕ್ಕ 7:1-2,9-14
ಆ ಕಾಲದಲ್ಲಿ ಏಳುಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು. ಅವರಲ್ಲೊಬ್ಬನು ಇತರರ ಪರವಾಗಿ ಮಾತನಾಡುತ್ತಾ, “ನಮ್ಮಿಂದ ನೀವು ಏನನ್ನು ತಿಳಿದುಕೊಳ್ಳಬಯಸುತ್ತೀರಿ? ನಮ್ಮ ಪೂರ್ವಜರ ಧರ್ಮವಿಧಿಗಳನ್ನು ಉಲ್ಲಂಘಿಸುವುದಕ್ಕೆ ಬದಲು, ನಾವು ಸಾಯುವುದಕ್ಕೆ ಸಿದ್ದ” ಎಂದನು. ಅವನು ಕೊನೆಯುಸಿರು ಎಳೆಯುತ್ತಿರುವಾಗ ಅರಸನನ್ನು ನೋಡಿ, “ಹೇ ಕಟುಕನೇ, ಇಲ್ಲಿರುವಾಗ ನಮ್ಮ ಜೀವವನ್ನು ತೆಗೆದು ಬಿಡುತ್ತೀಯಾ ಸರಿ; ಆದರೆ ವಿಶ್ವದ ಒಡೆಯರಾದ ದೇವರು, ನಮ್ಮನ್ನು ಅಮರ ಹಾಗೂ ಪುನಶ್ಚೇತನಗೊಳಿಸುವ ಜೀವಕ್ಕೆ ಎಬ್ಬಿಸುತ್ತಾರೆ; ಕಾರಣ, ನಾವು ಅವರ ಆಜ್ಞಾಪಾಲನೆಗಾಗಿ ಪ್ರಾಣಬಿಟ್ಟಿದ್ದೇವೆ,” ಎಂದನು. ಅವನ ತರುವಾಯ ಅವರು ವಿನೋದಕ್ಕಾಗಿ ಮೂರನೆಯವನನ್ನು ಹಿಡಿದುಕೊಂಡರು. ನಾಲಗೆ ಚಾಚಬೇಕೆಂದು ಹೇಳಿದಾಗ ಅವನು ತಕ್ಷಣವೇ ನಾಲಗೆಯನ್ನು ಚಾಚಿದನು; ಧೈರ್ಯದಿಂದ ತನ್ನ ಕೈಗಳನ್ನೂ ಮುಂದಕ್ಕೆ ಒಡ್ಡುತ್ತಾ, “ನಾನು ಇವುಗಳನ್ನು ಪರಲೋಕದಿಂದ ಪಡೆದೆನು. ಅವರ ನಿಯಮಕ್ಕಾಗಿ ಇವುಗಳನ್ನು ತೊರೆಯುತ್ತೇನೆ. ಆದರೆ ಪುನಃ ನಾನು ಅವುಗಳನ್ನು ಪಡೆಯುವೆನು, ಇದು ನನ್ನ ದೃಢನಂಬಿಕೆ!” ಎಂದನು. ತತ್ಪರಿಣಾಮವಾಗಿ, ರಾಜನೂ ಅವನೊಂದಿಗಿದ್ದ ಇತರರೂ ಈ ಯುವಕನ ಧೈರ್ಯವನ್ನು ನೋಡಿ ನಿಬ್ಬೆರಗಾದರು; ಅವನು ತನ್ನ ಉಪದ್ರವಗಳನ್ನು ಕಿಂಚಿತ್ತು ಲೆಕ್ಕಿಸಲಿಲ್ಲ. ಅವನು ಸತ್ತಮೇಲೆ, ನಾಲ್ಕನೆಯವನನ್ನು ಸಹ ಅದೇ ಪ್ರಕಾರ ಹಿಂಸಿಸಿ ಉಪದ್ರವಪಡಿಸಿದರು. ಅವನು ಪ್ರಾಣಬಿಡುವಾಗ, “ಮತ್ರ್ಯಮಾನವರ ಕೈಗಳಿಂದ ಸಾವನ್ನು ಅನುಭವಿಸಿ, ದೇವರಿಂದ ಮರಳಿ ಎಬ್ಬಿಸಲ್ಪಡುವೆನೆಂಬ ದೇವದತ್ತ ನಿರೀಕ್ಷೆಯನ್ನು ಎದುರುನೋಡುವುದು ಶ್ರೇಯಸ್ಕರ; ನೀವಾದರೋ ಜೀವಕ್ಕೆ ಪುನಃ ಉತ್ಥಾನವಾಗುವಂತಿಲ್ಲ,” ಎಂದನು.
ಕೀರ್ತನೆ - 17: 1, 5-6,8,15
1 : ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ / ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ //
5 : ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ / ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ //
6 : ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ / ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ //
8 : ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ / ಸುತ್ತುವರೆದಿರುವ ಪ್ರಾಣ ವೈರಿಗಳಿಂದ /
15 : ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು / ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು //
2ನೇ ವಾಚನ 2ಥೆಸ 2: 16-3: 5
ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ. ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ. ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ. ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು. ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ. ದೇವರ ಪ್ರೀತಿಯನ್ನೂ ಕ್ರಿಸ್ತಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.
ಶುಭಸಂದೇಶ - ಲೂಕ 2೦:27-38
ಅನಂತರ ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು. ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ. “ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು.
ಚಿಂತನೆ
ಚಿಂತನೆ
ಯೇಸು ಕ್ರಿಸ್ತರ ಕಾಲದಲ್ಲಿ ಚಾದೋಕನ ಯಾಜಕ ಗೋತ್ರದವರೆಂದು ಹೇಳಿಕೊಳ್ಳುತ್ತಿದ್ದ `ಸದ್ದುಕಾಯರು' ಎಂಬ ಗುಂಪು ಇತ್ತು. ಜೆರುಸಲೇಮಿನ ಯಾಜಕರಲ್ಲಿ ಅನೇಕರು ಈ ಗುಂಪಿನಲ್ಲಿದ್ದರು. ಗ್ರೀಕ್ ತತ್ವಗಳಿಂದ ಹಾಗೂ ಸಂಸ್ಕೃತಿಯಿಂದ ಇವರು ಪ್ರಭಾವಿತರಾಗಿದ್ದರು. ಪರಿಸಾಯರಷ್ಟು ಧಾರ್ಮಿಕ ನಿಷ್ಠೆ ಇವರಲ್ಲಿರಲಿಲ್ಲ. ಇವರು ಬೈಬಲಿನ ಮೊದಲ ೫ ಗ್ರಂಥಗಳನ್ನು ಮಾತ್ರ ನಂಬುತ್ತಿದ್ದರು. ಅವರ ಪ್ರಕಾರ ಈ ೫ ಗ್ರಂಥಗಳಲ್ಲಿ ಪುನರುತ್ಥಾನದ ಉಲ್ಲೇಖವಿಲ್ಲವಾದ್ದರಿಂದ ಪುನರುತ್ಥಾನದಲ್ಲಿ ವಿಶ್ವಾಸವಿರಲಿಲ್ಲ. ಅಂತೆಯೇ ದೇವದೂತರ, ಆತ್ಮಗಳ ಮೇಲೆಯು ಅವರಿಗೆ ನಂಬಿಕೆ ಇರಲಿಲ್ಲ. ಆದರೆ ಫರಿಸಾಯರು ಪುನರುತ್ಥಾನದಲ್ಲಿ ನಂಬಿಕೆಯಿಟ್ಟಿದ್ದರು.
ಧ. ಕಾಂಡ ೨೫:೫-೧೦ರ ಪ್ರಕಾರ ವಿಧವೆಯಾದ ಅಣ್ಣನ ಹೆಂಡತಿಯನ್ನು ಮದುವೆ ಮಾಡಿಕೊಂಡು, ಅಣ್ಣನ ಸಂತಾನವು ನಶಿಸಿಹೋಗದಂತೆ ಅಥವಾ ಕೊನೆಯಾಗದಂತೆ ನೋಡಿಕೊಳ್ಳುವುದು ತಮ್ಮನ ಹೊಣೆಗಾರಿಕೆಯಾಗಿದೆ. ಆದರೆ ಸದ್ದುಕಾಯರು ಯೇಸುವನ್ನು ಪರೀಕ್ಷಿಸುವ ಸಲುವಾಗಿ ಒಂದು ಕಾಲ್ಪನಿಕ ಕಥೆ ಹೇಳುವುದರ ಮೂಲಕ ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಾರೆ. ಅವರ ಪ್ರಶ್ನೆಗೆ ಯೇಸುವು ವಿ. ಕಾಂಡ ೩:೬, ೧೫-೧೬ ಉಲ್ಲೇಖಿಸುತ್ತಾ ಅಬ್ರಹಾಮ, ಇಸಾಕ, ಯಕೋಬರು ದೇವರ ಸನ್ನಿಧಿಯಲ್ಲಿ ಜೀವಂತವಾಗಿದ್ದಾರೆ ಎಂದು ಸದ್ದುಕಾಯರಿಗೆ ತಿಳಿಸುವುದರ ಮೂಲಕ ಪುನರುತ್ಥಾನವಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.